ಮುಕ್ತಕಗಳು: ಕಾರಿರುಳ ಕರಡಿಗೆಯೊಳಗೆ

Upayuktha
0


ಕಾರಿರುಳು ನಭದೊಳಗೆ ಅಗಣಿತದ ತಾರೆಗಳು  

ಬೀರುವವು ತನಿಬೆಳಕ ಮಿಂಚುಹುಳದಂತೆ | 

ಸಾರುವವು ಲೋಕಕ್ಕೆ ಕಿರುಹಣತೆ ಮಿಗಿಲೆಂಬ 

ನೇರ ಸಂದೇಶವನು - ಪುಟ್ಟಕಂದ || ೧ ||   


ಕಾರಿರುಳು ಹಾದಿಯಲಿ ಸಿಲುಕಿರುವ ಪಥಿಕರಿಗೆ 

ಹೋರುವುದು ಅನಿವಾರ್ಯ ಕರಿದು ತಮದೊಡನೆ | 

ಯಾರೆಷ್ಟು ಜಪಿಸಿದರು ರವಿಯುದಿಸಿ ಬರದಿರಲು 

ನೇರನಡೆ ಬಲುಕಷ್ಟ - ಪುಟ್ಟಕಂದ || ೨ ||  


ಕಾರಿರುಳು ಪಸರಿಸಿದ ಗಾಢಾಂಧಕಾರದಲಿ 

ಬೀರಿದರೆ ಕಿರುಹಣತೆ ತಮವ ಸರಿಸುವುದೆ |  

ನಾರಿಯರು ಬೆಳಗುತಿಹ ಸೌಂದರ್ಯ ಕಾಲ್ದೀಪ  

ಊರಮಂದಿಗೆ ಮುದವು - ಪುಟ್ಟಕಂದ || ೩ ||  


ಕಾರಿರುಳು ಲೋಕದಲಿ ಗಾಢತಮವಾವರಿಸೆ  

ಭೂರುಹದಿ ಬಾವಲಿಗಳಾಡ ತೊಡಗುವವು | 

ಭೇರಿಗಳ ಸದ್ದಿಹುದು ಜಾತ್ರೆಗಳ ಗದ್ದಲದಿ 

ಮಾರುತಿರೆ ಮಣಿಸರಕ - ಪುಟ್ಟಕಂದ || ೪ ||   


ಕಾರಿರುಳು ಕಳ್ಳರಿಗೆ ಕಲ್ಯಾಣಕಾರಕವು  

ಜೋರಾಗಿ ಕೊರೆಯಲಿಕೆ ಗೋಡೆ ಕನ್ನವನು | 

ಕೇರಿ ಬೀದಿಯ ಜನರು ನಿದ್ರಿಸಿಹ ಸಮಯದಲಿ  

ಭೂರಿಧನ ದೋಚಲಿಕೆ - ಪುಟ್ಟಕಂದ || ೫ ||   


ಕಾರಿರುಳು ಜನಿಸಿದನು ಜಗದಗುರು ಭಗವಂತ   

ಭಾರಿ ಮಳೆಸುರಿದ ಪ್ರವಾಹದಿರುಳಲ್ಲಿ | 

ಊರುಕೇರಿಗಳೆಲ್ಲ ಸಿಂಗರದಿ ಶೋಭಿಸಲು   

ನಾರಿಯರು ಹಾಡಿದರು - ಪುಟ್ಟಕಂದ || ೬ ||


ಕಾರಿರುಳು ಕಾಡಿನಲಿ ಕಾಡುಮೃಗಗಳ ಬೇಟೆ  

ಭಾರಿ ಹೋರಾಟದಲಿ ನಡೆಯುವುದು ಸಹಜ | 

ವಾರಣಾವತದರಣ್ಯದಲಿ ಲಾಕ್ಷಾಗೃಹವ   

ಸೂರೆಗೊಂಡಿಹನಗ್ನಿ - ಪುಟ್ಟಕಂದ || ೭ ||  


ಕಾರಿರುಳು ಘಟಿಸುವವು ಅಘಟಿತದ ಘಟನೆಗಳು  

ಮಾರಿಬಿಳಿಯರು ತೊಲಗಿದರು ದೇಶತೊರೆದು | 

ಯಾರೇನು ನೀಡಿದರು ಸಿದ್ಧಾರ್ಥನುಳಿದಿಹನೆ  

ನೇರ ನಡೆದನು ಗಯೆಗೆ - ಪುಟ್ಟಕಂದ || ೮ ||  


ಕಾರಿರುಳು ಕಳೆಯುವವು ದಿನ ಮಾಸ ವರ್ಷಗಳು   

ವಾರಿಯಲಿ ತೇಲುತಿರೆ ಹುಣ್ಣಿಮೆಯ ಬಿಂಬ | 

ನೂರಾರು ಸಂಭ್ರಮದ ಶುಭಗಳಿಗೆ ಸಾಕ್ಷಿಯಿದು 

ಮಾರಸುಂದರ ರಾತ್ರಿ - ಪುಟ್ಟಕಂದ || ೯ ||   

(ಗಜಪ್ರಾಸವಿರುವ ಛಂದೋಬದ್ಧ ಆಶು ಮುಕ್ತಕಗಳು)

ವಿ.ಬಿ.ಕುಳಮರ್ವ, ಕುಂಬ್ಳೆ ✍️

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




Tags

إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top