ಹನ್ನೆರಡನೆಯ ಹುಡುಗ
ಹುಡುಗಿ ನೋಡಲುಬಂದ
ಶಾನುಭೋಗರ ಮನೆಗೆ ಸೋಮವಾರ
ಒಪ್ಪಬಾರದು ಇವನು
ಎಂದೆಂದು ನನ್ನನ್ನು
ವಧುವು ಮಾಡಿದಳಡಿಗೆ ಉಪ್ಪುಖಾರ
ಕಪ್ಪೆ ಮಲಗಿದ ರೀತಿ
ಮಲಗಿತ್ತು ಪ್ಲೇಟಿನಲಿ
ಉಪ್ಪು ಖಾರದಿ ಬೆಂದ ಹಾಗ್ಲ ಕಾಯಿ
ಬೆಪ್ಪ ಹುಡುಗನು ಬಂದು
ಮನವನರಿಯಲಿ ಎಂದು
ಬೆಲ್ಲವಿಲ್ಲದ ಸ್ವೀಟು ಹಾಲುಬಾಯಿ
ಕಿಟಕಿಮರೆಯಲಿ ನಿಂತು
ವರನ ನೋಡಿದಳವಳು
ಅಗ್ರ ಸಾಲಲಿ ಕುಳಿತ ಹುಡುಗನೆಡೆಗೆ
ಪದವಿ ಓದುವ ಕಾಲ
ಮನಸಿನಲಿ ಮೆಚ್ಚಿದ್ದ
ಹುಡುಗನೇ ಬಂದಿದ್ದ ಮಾತುಕತೆಗೆ!!
ಸಕ್ಕರೆಯ ಸಿಹಿಮೊಗದ
ಲಕ್ಷಣದ ಸ್ನೇಹಿತನು
ಕನಸೆಲ್ಲ ನಿಜವಾಗೊ ಕಾಲಬಂತೆ?
ಚಪ್ಪೆ ಸ್ವೀಟನು ಮಾಡಿ
ಕಹಿಯ ಖಾರವ ಮಾಡಿ
ಬೆಪ್ಪಳಾದಳು ಹುಡುಗಿ ತುಂಬಿ ಚಿಂತೆ
ಸಿಹಿಯ ತಿನ್ನದ ಹುಡುಗ
ಹಾಗ್ಲಕಾಯಿಯ ಸವಿದು
ಹುಡುಗಿ ಒಪ್ಪಿಗೆ ಎಂದು ಮಾತು ಕೊಟ್ಟ
ಸರಳ ಮದುವೆಯೆ ಸಾಕು
ಮನೆಯಲ್ಲೆ ನಡೆಯಲೀ
ಮಾತು ಮುಗಿಸುತ ಮದುವೆಗೊಪ್ಪಿಬಿಟ್ಟ!!
-ಅರವಿಂದ ಸಿಗದಾಳ್, ಮೇಲುಕೊಪ್ಪ