|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಯಗ್ರೀವ ಜಯಂತಿ: ಜ್ಞಾನಮೂರ್ತಿ ಶ್ರೀಹಯಗ್ರೀವ

ಹಯಗ್ರೀವ ಜಯಂತಿ: ಜ್ಞಾನಮೂರ್ತಿ ಶ್ರೀಹಯಗ್ರೀವ



ಭಾರತೀಯ ಪುರಾಣಗಳಲ್ಲಿ ವಿಷ್ಣುವಿನ ಅವತಾರಗಳು ಎಷ್ಟು ಪ್ರಸಿದ್ಧವೋ ಅಷ್ಟೇ ವಿಭಿನ್ನ ವಿಶಿಷ್ಟವೂ ಹೌದು. ಇದಕ್ಕೆ ಮತ್ಸ್ಯ ಕೂರ್ಮ ವರಾಹ ನರಸಿಂಹ ಅವತಾರಗಳನ್ನು ಉಲ್ಲೇಖಿಸಬಹುದು. ಅಂಥದ್ದೇ ಇನ್ನೆಂದು ಅವತಾರ ಹಯಗ್ರೀವರದ್ದು. ಶ್ರಾವಣ ಮಾಸದ ಹುಣ್ಣಿಮೆಯಂದು ಹಯಗ್ರೀವ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಹಯಗ್ರೀವ ಅವತಾರದ ಪರಿಚಯಾತ್ಮಕ ಬರಹವಿದು. 


ಹಯಗ್ರೀವ ದೇವರು ವೇದ ವಿದ್ಯಾಭಿಮಾನಿ ದೇವತೆ, ಭಗವಂತನ ಜ್ಞಾನಾವತಾರವಿದು. ತಮೋ-ರಜೋಗುಣಗಳನ್ನು ನಿಗ್ರಹಿಸಿ, ಸಾತ್ವಿಕ ಗುಣಗಳನ್ನು, ನಿಷ್ಕಾಮ ಕರ್ಮಪರ ಪ್ರವೃತ್ತಿ ಧರ್ಮವನ್ನು ಅನುಗ್ರಹಿಸುವುದೇ ಶ್ರೀ ಹಯಗ್ರೀವ ದೇವರ ಮಹತ್ವ.  


ಭಗವಂತನು ಪ್ರಳಯ ಮುಗಿದ ಮೇಲೆ ಸೃಷ್ಟಿಕಾರ್ಯವನ್ನು ಪ್ರಾರಂಭಿಸಿದನು. ಆಗ ಮಹತ್ತತ್ತ್ವದಿಂದ ಅಹಂಕಾರತತ್ವ ಉದಿಸಿದವು. ಅಹಂಕಾರತತ್ತ್ವವೇ ಕಮಲ ದಳದಲ್ಲಿ ಜನಿಸಿದ ಚತುಮುಖ ಬ್ರಹ್ಮ. ಸಹಸ್ರದಳ ಕಮಲದಲ್ಲಿ ಮಂಡಿಸಿದ್ದ ಬ್ರಹ್ಮನು ಸೃಷ್ಟಿಗಿ ತೊಡಗಿದಾಗ ಇಡೀ ಜಗತ್ತೇ ಜಲಮಯವಾಗಿ ತೋರಿತು. ಹೊಂಬಣ್ಣದ ಸೂರ್ಯ ರಶ್ಮಿಯಂತೆ ಹೊಳೆಯುತ್ತಿದ್ದ ಆ ಕಮಲದ ಒಂದು ದಳದ ತುದಿಯಲ್ಲಿ ರಜೋ-ತಮೋಗುಣ ಪ್ರತೀಕಗಳಿಂದ ಎರಡು ಜಲಬಿಂದುಗಳು ಕಾಣಿಸಿದವು. ತಮೋಬಿಂದುವು ಜೇನುತುಪ್ಪದ ಹೊಂಬಣ್ಣದಿಂದ ಕಂಗೊಳಿಸುತ್ತಿತ್ತು. ಪರಮಾತ್ಮನ ಆಜ್ಞೆಯಂತೆ ಅದರಿಂದ ಮಧು ಎಂಬ ರಾಕ್ಷಸ ಜನಿಸಿದನು. ಕಮಲದಳದಿಂದ ಗದಾಧಾರಿಗಳಾಗಿ ಕೆಳಗಿಳಿದು ಬಂದ. ಆ ರಾಕ್ಷಸರಿಗೆ ಬ್ರಹ್ಮದೇವರು ಹೊಂದಿದ್ದ ನಾಲ್ಕು ವೇದಗಳು, ನಾಲ್ಕು ಸುಂದರಮೂರ್ತಿಗಳಂತೆ ಕಂಡವು. ಬ್ರಹ್ಮನನ್ನು ಲೆಕ್ಕಿಸದೆ ಅವರು ಆ ನಾಲ್ಕು ವೇದಗಳನ್ನು ಎತ್ತಿಕೊಂಡು ಸಮುದ್ರದ ಈಶಾನ್ಯ ದಿಕ್ಕಿನತ್ತ ಹಾರಿ ಮರೆಯಾದಾಗ ಸೃಷ್ಠಿ ಕಾರ್ಯ ಕುಂಠಿತವಾಯಿತು. ಬ್ರಹ್ಮ ಕಳವಳದಿಂದ ಪರಮಾತ್ಮನನ್ನು ಸ್ತುತಿಸಿ ವೇದಗಳನ್ನು ಪಡೆದುಕೊಡಬೇಕೆಂದು ಪ್ರಾರ್ಥಿಸಿದನು.  


ಯೋಗನಿದ್ರೆಯಲ್ಲಿದ್ದ ಅನಿರುದ್ಧರೂಪಿ ಪರಮಾತ್ಮನು ಬ್ರಹ್ಮನ ಪ್ರಾರ್ಥನೆಯಿಂದ ಎದ್ದು ಕಳೆದುಹೋಗಿದ್ದ ವೇದಗಳನ್ನು ಹಿಂದಿರುಗಿ ತರಲು ಹೊರಟನು. ಅದಕ್ಕಾಗಿ ಭಗವಂತ ತನ್ನ ಯೋಗಬಲದಿಂದ ಬೇರೊಂದು ಅಲೌಕಿಕ ಶರೀರವನ್ನು ಧರಿಸಿದನು. ವೇದಗಳಿಗೆ ಆಧಾರದಂತಿದ್ದ ಆ ಶರೀರಕ್ಕೆ ಶುಭವರ್ಣದ ಕುದುರೆಯ ಮುಖವಿದ್ದಿತು. ಅದರ ಮೂಗು ಮತ್ತು ಮೂಗಿನ ಹೊಳ್ಳೆಗಳು ಚಂದ್ರಕಿರಣಗಳಂತೆ ಹೊಳೆಯುತ್ತಿದ್ದವು. ನಕ್ಷತ್ರ ಸಹಿತ ಆಕಾಶವೇ ತಲೆ, ಊಧ್ರ್ವಲೋಕ – ಅಧೋಲೋಕಗಳೇ ಕಿವಿಗಳು, ಪೃಥಿಯೇ ಹಣೆ, ಎಡ ಬಲದ ಮಹಾಸಾಗರವೇ ಹುಬ್ಬುಗಳು, ಚಂದ್ರ-ಸೂರ್ಯರೇ ಕಣ್ಣುಗಳೂ, ಗಂಗಾ-ಸರಸ್ವತೀ ನದಿಗಳೇ ಅವರ ಹಿಂಭಾಗ, ಸಂಧ್ಯೆಯೇ ಮೂಗು, ಓಂಕಾರವೇ ಸ್ಮøತಿ, ವಿದ್ವತ್ತೇ ನಾಲಿಗೆ, ಸೋಮಪಾನ ಮಾಡುವ ಪಿತೃಗಳೇ ಎರಡು ಕೈಗಳು, ಭೂಲೋಕ ಬ್ರಹ್ಮ ಲೋಕಗಳೇ ತುಟಿಗಳು, ದಿನ-ರಾತ್ರಿಗಳೇ ಕುತ್ತಿಗೆ - ಹೀಗೆ ಇಡೀ ವಿಶ್ವವನ್ನೇ ಧಾರಣೆ ಮಾಡಿದ ಮಹಾಮಹಿಮ ಮೂರ್ತಿ ಹಯಗ್ರೀವ ದೇವರು ಬ್ರಹ್ಮನಿಗೆ ದರ್ಶನವಿತ್ತು ಪಾತಾಳಕ್ಕೆ ಹೋಗಿ ಯೋಗಾಸನದಲ್ಲಿ ಕುಳಿತು ಶಾಸ್ತ್ರರೀತಿಯಂತೆ ಸಾಮಗಾನವನ್ನು ಪ್ರಾರಂಭಿಸಿದನು.  


ಪರಮಾತ್ಮನ ಮೃದು ಮಧುರ ಕಂಠದಲ್ಲಿ ಬಂದ ನಾದಲಹರಿ ಮಧುಕೈಟಭರನ್ನು ಹುಚ್ಚು ಹಿಡಿದಂತೆ ಆಕರ್ಷಿಸಿತು. ಅವರು ವೇದಗಳನ್ನಿಟ್ಟಿದ್ದ ಸ್ಥಳ ಬಿಟ್ಟು ಆಕರ್ಷಣೆಯ ಜಾಡುಹಿಡಿದು ಗಾನದ ಮೂಲಕ ನೆಲೆಯತ್ತ ಧಾವಿಸಿ ಬಂದರು. ಅವರು ತಮ್ಮ ಸ್ಥಳ ಬಿಟ್ಟೊಡನೆಯೇ ಹಯಗ್ರೀವಮೂರ್ತಿ ಗಾನ ನಿಲ್ಲಿಸಿ, ಕ್ಷಣ ಮಾತ್ರದಲ್ಲಿ ನಾಲ್ಕೂ ವೇದಗಳನ್ನು ಎತ್ತಿಕೊಂಡು ಬಂದು ಬ್ರಹ್ಮನಿಗೆ ಒಪ್ಪಿಸಿದನು. ಗಾನವು ಕೇಳಿಸದೇ ದಿಗ್ಭ್ರಾಂತರಾದ ಮಧುಕೈಟಭರನ್ನು ಸಂಹಾರ ಮಾಡಿ ಬ್ರಹ್ಮನನ್ನು ಅನುಗ್ರಹಿಸಿ ಅವನನ್ನು ನಿರ್ಭಯನನ್ನಾಗಿಸಿದನು ಎಂದು ಮಹಾಭಾರತವು ವಿಶ್ಲೇಷಿಸುವುದು. ಮಹಾಭಾರತದ ಶಾಂತಿಪರ್ವದಲ್ಲಿ ಮತ್ತೊಂದೆಡೆ ತಾನು ದೇವತೆಗಳಿಗೂ, ಪಿತೃಗಳಿಗೂ ಆದಿಪಿತನೆಂದೂ, ಚೇತನರು (ಮನುಷ್ಯರು) ಶ್ರದ್ಧೆಯಿಂದ ಕೊಡುವ ಹವಿರ್ಭಾಗವನ್ನು ಹಯಗ್ರೀವರೂಪಿಯಾಗಿದ್ದು ಸ್ವೀಕರಿಸುತ್ತೇನೆಂದು ಭಗವಂತನೇ ಘೋಷಿಸಿರುವುದಾಗಿ ಉಲ್ಲೇಖವಿದೆ.  


“ನಿರ್ಣಯಸಿಂಧು”ವಿನಲ್ಲಿ ಶ್ರಾವಣಮಾಸದಲ್ಲಿ ಮಾಡಬೇಕಾದ ಕರ್ಮಗಳನ್ನು ವಿವರಿಸುವಾಗ –  ಶ್ರಾವಣ ಮಾಸದ ಶ್ರವಣ ನಕ್ಷತ್ರದಲ್ಲಿ ಭಗವಂತನು ಹಯಗ್ರೀವನಾಗಿ ಅವತರಿಸಿ ಸಮಸ್ತವಾದ ಪಾಪಗಳನ್ನು ಹೋಗಲಾಡಿಸುವಂತಹ ಸಾಮವೇದವನ್ನು ಉಪದೇಶಿಸಿದನು. ಆದ್ದರಿಂದ ಸ್ನಾನಾದಿ ನಿತ್ಯಕರ್ಮಾನುಷ್ಠಾನವನ್ನು ಮಾಡಿಕೊಂಡು ಶಂಖ-ಚಕ್ರ-ಗದಾಪಾಣಿಯಾದ ಆ ಮೂರ್ತಿಯನ್ನು ಆರಾಧಿಸಬೇಕು ಎಂದು ವಿವರಿಸಿದೆ. ಬ್ರಹ್ಮಚರ್ಯಾಶ್ರಮದಲ್ಲಿ  ಪುಸ್ತಕಾಧ್ಯಾಯನದಲ್ಲಿ ತೊಡಗಬೇಕು , ಗೃಹಸ್ಥಾಶ್ರಮದಲ್ಲಿ ಸಂಪತ್ತನ್ನು ಗಳಿಸಿ ಸದ್ ವಿನಿಯೋಗ ಮಾಡಬೇಕು , ವಾನಪ್ರಸ್ಥಾಶ್ರಮದಲ್ಲಿ ದೇವರ ಬಗ್ಗೆ ಮನನ ಮಾಡುತ್ತಾ  ಜ್ಞಾನದ ಸಾಕ್ಷಾತ್ಕಾರ ಮಾಡಿಕೊಳ್ಳಬೇಕು , ಸನ್ಯಾಸಾಶ್ರಮದಲ್ಲಿ ಜಪಮಾಲೆ ಹಿಡಿದು ದೇವರ ಸಾಕ್ಷಾತ್ಕಾರ ಮಾಡಿಕೊಂಡು ಧನ್ಯರಾಗಬೇಕು ಎಂದು ತಿಳಿಸುತ್ತದೆ.


ಭಕ್ತರ ಪೊರೆಯುವ ಭಗವಂತ:

ಹಯವದನ ಸ್ಮರಣೆಯಿಂದ ಜ್ಞಾನ ಭಂಡಾರದ ಬಾಗಿಲು ತೆರೆಯುತ್ತದೆ. ಆ ಜ್ಞಾನ, ಭಕ್ತಿಗೆ ಸಾಧನವಾಗುತ್ತದೆ. ಜ್ಞಾನ - ಭಕ್ತಿಗಳೆರಡೂ ವೈರಾಗ್ಯ ಭಾಗ್ಯವನ್ನು ನೀಡುತ್ತವೆ. ಜ್ಞಾನ-ಭಕ್ತಿ – ವೈರಾಗ್ಯಗಳು ಮುಕ್ತಿಗೆ ಸಾಧನೆ, ತದ್ವಾರಾ ಕುಲಕೋಟಿ ಉದ್ಧರಣೆ. 


ಹಯಗ್ರೀವಸ್ವಾಮಿಯ ಸ್ಮರಣೆಯಾದೊಡನೆಯೇ ಕಣ್ಮುಂದೆ ಬಂದು ನಿಲ್ಲುವ ಚಿತ್ರ ಶ್ರೀವಾದಿರಾಜಸ್ವಾಮಿಗಳದು. ಏಕೆಂದರೆ, ವಾದಿರಾಜರ ಅಂಕಿತವೇ ಹಯವದನ. ಶ್ರೀವಾದಿರಾಜರ ಆಶ್ರಮ ಜೀವನ ಪ್ರಾರಂಭವಾದದ್ದೇ ಅವರು ತಮ್ಮ ಗುರುಗಳಾದ ಶ್ರೀವಾಗೀಶರಿಂದ ಪಡೆದ ಹಯಗ್ರೀವ ಮಂತ್ರೋಪದೇಶದಿಂದ, ಶ್ರೀವಾದಿರಾಜರ ಬದುಕಿನುದ್ದಕ್ಕೂ ಹಯವದನನದೇ ಲೀಲೆ, ಅವನದೇ ಚಮತ್ಕಾರ. 


ಅತ್ಯಂತ ಶ್ರೇಷ್ಠ ಹಯಗ್ರೀವೋಪಾಸಕಾರದ ಶ್ರೀವಾದಿರಾಜರು ಅಪ್ರತಿಮ ಪವಾಡ ಪುರುಷರು. ಒಂದು ದಿನ, ಅವರ ಕನಸಿನಲ್ಲಿ ಸ್ವಾಮಿ ಹಯಗ್ರೀವನು ಬಂದು, ತನ್ನ ಹಸಿವೆಯನ್ನು ತೋಡಿಕೊಳ್ಳಲಾಗಿ, ಪರವಶರಾದ ಶ್ರೀವಾದಿರಾಜಯತಿವರ್ಯರು ಪ್ರತಿನಿತ್ಯವೂ ಒಂದು ಹರಿವಾಣದ ತುಂಬ ಕಡಲೆಯ ಹೂರಣವನ್ನು ಮಾಡಿಸಿ, ಅದನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡು ಏಕಾಂತ ಸ್ಥಳದಲ್ಲಿ ಕುಳಿತು ಶ್ರೀಶನನ್ನು ಧ್ಯಾನಮಾಡಲು ಆರಂಭಿಸಿದರು. ಪರಮಾತ್ಮನು ದಿವ್ಯ ಶ್ವೇತಾಶ್ವರೂಪಿಯಾಗಿ ದರ್ಶನವಿತ್ತು. ತನ್ನೆರಡು ಖುರಗಳನ್ನು ವಾದಿರಾಜರ ಹೆಗಲ ಮೇಲಿಟ್ಟುಕೊಂಡು ಆ ಹೂರಣವನ್ನು ಸ್ವೀಕರಿಸುತ್ತಿದ್ದನು. ಇದು ನಿಯಮಿತದಂತೆ ಪ್ರತಿದಿನ ನಡೆಯಲುಪಕ್ರಮಿಸಿತು. ಆ ಪಾತ್ರೆಯಲ್ಲಿ ಮಿಕ್ಕ ಶೇಷಪ್ರಸಾದವೇ ಶ್ರೀವಾದಿರಾಜರ ನಿತ್ಯಾಹಾರವಾಗುತ್ತಾ ಬಂದಿತು.  


ದಕ್ಷಿಣ-ಉತ್ತರ ಕನ್ನಡ ಜಿಲ್ಲೆಯ ವಿವಿಧ ಕುಶಲಕಲಾಕಾರರಾದ ಸ್ವರ್ಣಕಾರರಲ್ಲಿ ಒಬ್ಬನು (ದೈವಜ್ಞ) ಗಣಪತಿ ವಿಗ್ರಹಕ್ಕಾಗಿ ಪ್ರಯತ್ನಿಸಿ, ಅದು ಹಯಗ್ರೀವ ವಿಗ್ರಹವಾಗಿ ಮಾರ್ಪಡುತ್ತಿರಲು, ಇದರಿಂದ ದಿಗ್ಭ್ರಾಂತನಾದ ಸ್ವರ್ಣಕಾರನಿಗೆ ಸ್ವಪ್ನವಾಗಲ್ಪಟ್ಟು, ಆ ವಿಗ್ರಹವನ್ನು ಶ್ರೀವಾದಿರಾಜರಿಗೆ ಸಮರ್ಪಿಸುವುದರ ಮೂಲಕ ಆ ಕುಲಭಾಂಧವರೆಲ್ಲರೂ ರಾಜರ ಶಿಷ್ಯಪರಂಪರೆಗೆ ಸೇರಿದರು. ಆ ದಿವ್ಯಮಂಗಳ ಮೂರ್ತಿಯನ್ನು ಇಂದಿಗೂ ಸೋದೆಮಠದಲ್ಲಿ ದರ್ಶಿಸಬಹುದಾಗಿದೆ. 


ವಿದ್ಯೆಯ ಅಧಿದೈವ:

ಇತ್ತೀಚಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಬಾಲರಿಂದ ಹಿಡಿದು ಯುವಕರವರೆಗೆ ತಮ್ಮ ಸ್ವಪ್ರತಿಭೆಯಿಂದ ಅತಿಹೆಚ್ಚಿನ ಅಂಕಪಡೆದು ಈ ನಾಡಿನಲ್ಲೂ ಮತ್ತು ಹೊರನಾಡಿನಲ್ಲೂ ಅತ್ಯುನ್ನತವಾದ ವ್ಯಾಸಂಗ (ವಿದ್ಯೆ) ನಂತರ ಉನ್ನತ ಸ್ಥಾನದ ಉದ್ಯೋಗಕ್ಕಾಗಿ ಅಹೋರಾತ್ರಿ ಹೋರಾಡುತ್ತಿರುವ ಸಕಲ ವಿದ್ಯಾಭಿಲಾಷಿಗಳು– 


ಜ್ಞಾನಾನಂದ ಮಯಂ ದೇವಂ | ನಿರ್ಮಲ ಸ್ಪಟಿಕಾಕೃತಿಮ್ | 

ಆಧಾರಂ ಸರ್ವವಿದ್ಯಾನಾಂ | ಹಯಗ್ರೀವ ಮುಪಾಸ್ಮಹೇ || 

ಎಂಬ ಈ ಮಂತ್ರವನ್ನು ದಿನಂಪ್ರತಿ ಪ್ರಾತಃ ಸಂಧ್ಯಾ ಕಾಲಗಳಲ್ಲಿ ಆರು ಸಲವಾದರೂ ಜಪಿಸಿದರೆ ಮರೆವೆಂಬುದೇ ಇಲ್ಲವಾಗಿ, ವಿಶೇಷ ಬುದ್ಧಿ ಸೂಕ್ಷ್ಮತೆ, ಪ್ರತಿಭೆ, ಫಲ, ಸಾಮರ್ಥ್ಯಗಳನ್ನು ಹೊಂದಿ ಮನೋವಾಂಛಿತ ಫಲವನ್ನು ಪಡೆಯುವರೆಂಬುದರಲ್ಲಿ ಸಂದೇಹವೇ ಇಲ್ಲ.  


ಮಂತ್ರಾಲಯ ಮಹಾಪ್ರಭು ಶ್ರೀ ರಾಘವೇಂದ್ರ ಸ್ವಾಮಿಗಳು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಗುರುರಾಜರು. ಶ್ರೀವಾದಿರಾಜರ ನಂತರದ ಇತಿಹಾಸದಲ್ಲಿ ಸಜೀವರಾಗಿ ಬೃಂದಾವನಸ್ಥರಾದ ಯತಿಕುಲ ಶ್ರೇಷ್ಠರು. ಅವರು ಸಶರೀರ ಬೃಂದಾವನಸ್ಥರಾದಾಗ ಅವರ ಆತ್ಮೀಯ ಶಿಷ್ಯ ಅಪ್ಪಣ್ಣಾಚಾರ್ಯರು ಗುರುಗಳ ದರ್ಶನಾಕಾಂಕ್ಷಿಯಾಗಿ ದೂರದ ತುಂಗಭದ್ರಾ ತೀರದ ಬಿಚ್ಚಾಲೆ ಗ್ರಾಮದಿಂದ ತೀವ್ರ ಕಾತುರ-ಕಳವಳದಿಂದ ಬರುತ್ತಿದ್ದ ಅವರ ಬಾಯಿಂದ ಬಂದ ನುಡುಮುತ್ತುಗಳೇ ಶ್ರೀ ರಾಘವೇಂದ್ರ ಸ್ತೋತ್ರವಾಯಿತು. 


“ಶ್ರೀಪೂರ್ಣಬೋಧಗುರುತೀರ್ಥ ಪಯೋಬ್ಧಿಪಾರಾ” ಎಂದು ಪ್ರಾರಂಭವಾಗುವ ಈ ಸ್ತೋತ್ರ ಅಪ್ಪಣ್ಣಾಚಾರ್ಯರು ಮಂಚಾಲೆಗೆ ಬರುವ ವೇಳೆಗೆ ಮುಗಿಯ ಬಂದಿತ್ತು. ಶ್ರೀ ರಾಘವೇಂದ್ರಸ್ವಾಮಿಗಳು ಬೃಂದಾವನಸ್ಥರಾಗಿದ್ದರು. ಸುತ್ತಲೂ ಕಣ್ಣೀರು ತುಂಬಿ ಭಕ್ತಿಭಾವ ಹರಿಸುತ್ತಿರುವ ಸಹಸ್ರ ಭಕ್ತವೃಂದ. ಅಪ್ಪಣ್ಣಾಚಾರ್ಯರು ತಮಗರಿವಿಲ್ಲದಂತೆಯೇ” ಕೀರ್ತಿರ್ದಿಗ್ವಿದಿತಾವಿಭೂತಿರತುಲಾ” ಎಂದು ಹೇಳುವಷ್ಟರಲ್ಲಿ ಕಂಠ ಬಿಗಿದುಬಂತು. ಮಾತು ಮೂಕವಾಯಿತು, ಕಣ್ಣೀರು ಧಾರಾಕಾರ ಹರಿಯಿತು. ಎಲ್ಲರೂ ನೋಡುತ್ತಿದ್ದಂತೆಯೇ ಬೃಂದಾವನದಿಂದ ‘ಸಾಕ್ಷೀ ಹಯಾಸ್ಯೋತ್ರಹಿ’ ಎಂಬ ರಾಯರ ಅಮರವಾಣಿ ಕೇಳಿಬಂದಿತು. ಅಪ್ಪಣ್ಣಾಚಾರ್ಯರು ಸ್ತುತಿಸಿದ ಎಲ್ಲ ಮಾತುಗಳಿಗೂ ಹಯಗ್ರೀವದೇವರೇ ಸಾಕ್ಷಿ ಎಂದು ನುಡಿದ ಅವರು ಈ ಸ್ತೋತ್ರವನ್ನು ಹಯಾsಸ್ಯೋತ್ರಹಿ ಮೂಲಕವೇ ಪೂರ್ಣಗೊಳಿಸಿದರು. ಆ ಸಂದರ್ಭದಲ್ಲಿ ಬೃಂದಾವನದ ಒಳಗೆ ಶ್ರೀ ರಾಘವೇಂದ್ರ-ಸ್ವಾಮಿಗಳು ಹಯಗ್ರೀವಮಂತ್ರ ಜಪಿಸುತ್ತಿದ್ದರು ಎಂಬ ಆಪ್ತ ವಾಕ್ಯಗಳಿವೆ ಎಂದು ಅನೇಕ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.


ಜ್ಞಾನ ಹಾಗೂ ಬುದ್ಧಿಯ ಆಧಿದೇವನನ್ನಾಗಿ ಹಯಗ್ರೀವನು ಪೂಜಿಸಲ್ಪಡುವನು, ವಿದ್ಯಾರಂಭದ ಮೊದಲು ಹಯಗ್ರೀವನ ಸನ್ನಿಧಿಗೆ ತೆರಳಿ ಪ್ರಾರ್ಥಿಸಲಾಗುವುದು. ವೇದಾಂತದೇಶಿಕ ಸ್ವಾಮಿ ಶಿಷ್ಯರಾಗಿದ್ದ ಶ್ರೀ ಬ್ರಹ್ಮತಂತ್ರ ಸ್ವತಂತ್ರ ಜೀಯರ್ ಸ್ವಾಮಿಗಳಿಂದ ಮೈಸೂರಿನಲ್ಲಿ ಸ್ಥಾಪಿಸಲ್ಪಟ್ಟಿರುವ ಪರಕಾಲಮಠದಲ್ಲಿನ ಲಕ್ಷ್ಮೀಹಯಗ್ರೀವ ಸನ್ನಿಧಿ ಅತ್ಯಂತ ಪ್ರಸಿದ್ಧವಾದವು.

(ವಿವಿಧ ಮೂಲಗಳಿಂದ)


-ಡಾ. ಗುರುರಾಜ ಪೋಶೆಟ್ಟಿಹಳ್ಳಿ,

ಸಂಸ್ಕೃತಿ ಚಿಂತಕರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post