|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತೆಂಕುತಿಟ್ಟಿನ ಪ್ರಸಿದ್ಧ ಮಹಿಳಾ ಭಾಗವತರು ಭವ್ಯಶ್ರೀ ಕುಲ್ಕುಂದ

ತೆಂಕುತಿಟ್ಟಿನ ಪ್ರಸಿದ್ಧ ಮಹಿಳಾ ಭಾಗವತರು ಭವ್ಯಶ್ರೀ ಕುಲ್ಕುಂದ

 



ಯಕ್ಷಗಾನ ಕ್ಷೇತ್ರದಲ್ಲಿ ಅನೇಕ ಮಹಿಳಾ ಕಲಾವಿದರು ಇತ್ತೀಚಿನ ದಿನಗಳಲ್ಲಿ ನಮಗೆ ಕಾಣಲು ಸಿಗುತ್ತಾರೆ. ಅಂತಹ ಕಲಾವಿದರ ಸಾಲಿನಲ್ಲಿ ನಾವು ಇವತ್ತು ಪರಿಚಯ ಮಾಡುವ ಮಹಿಳಾ ಭಾಗವತರು ಶ್ರೀಮತಿ ಭವ್ಯಶ್ರೀ ಕುಲ್ಕುಂದ.


ಸುಳ್ಯ ತಾಲೂಕಿನ ಮಂಡೆಕೋಲು ಎಂಬ ಪುಟ್ಟ ಗ್ರಾಮದಲ್ಲಿ ಶ್ರೀಮತಿ ರುಕ್ಮಿಣಿ ಮತ್ತು ವಿಶ್ವನಾಥ ಇವರ ಪ್ರೀತಿಯ ಮಗಳಾಗಿ 03.12.1987 ರಲ್ಲಿ ಇವರ ಜನನ. B.Ed, MA ಇವರ ವಿದ್ಯಾಭ್ಯಾಸ. ಮನೆಯಲ್ಲಿ ಯಕ್ಷಗಾನದ ವಾತಾವರಣ ಇದ್ದ ಕಾರಣ ಯಕ್ಷಗಾನ ಇವರನ್ನು ತುಂಬಾನೇ ಆಕರ್ಷಿಸಿತು.


ತಂದೆ ಶ್ರೀಯುತ ವಿಶ್ವನಾಥ ಇವರು ಯಕ್ಷಗಾನ ವೇಷಧಾರಿ ಹಾಗೂ ಅಜ್ಜ ರಾಮಪ್ಪ ಗೌಡರು ಯಕ್ಷಗಾನ ಅಭಿಮಾನಿ ಪ್ರೇಕ್ಷಕ ಆದ ಕಾರಣ ಯಕ್ಷಗಾನ ಕಲಿಯಲು ತುಂಬಾನೇ ಸಹಾಯ ಆಯಿತು. ಯಕ್ಷಗಾನ ಭಾಗವತಿಕೆಯ ಬಗ್ಗೆ ತುಂಬಾನೇ ಆಸಕ್ತಿ ಇದ್ದ ಕಾರಣ ಮೊದಲಿಗೆ ನರ್ಮದಾ ಶಿಬರೂರಾಯ ಇವರ ಬಳಿ ಭಾಗವತಿಕೆಯ ಅಭ್ಯಾಸವನ್ನು, ಅನಂತರ ಶ್ರೀ ವಿಶ್ವ ವಿನೋದ ಬನಾರಿ ಹಾಗೂ ಭಾಗವತಿಕೆಯ ಹೆಚ್ಚಿನ ಅಭ್ಯಾಸ, ಛಂದಸ್ಸಿನ ಕುರಿತು ಶ್ರೀಯುತ ಗಣೇಶ್ ಕೊಲೆಕಾಡಿಯವರಲ್ಲಿ ಆಭ್ಯಸಿಸುತ್ತಿದ್ದಾರೆ. ಸೂಡ ಮೇಳದಲ್ಲಿ ಒಂದು ವರ್ಷದ ತಿರುಗಾಟ ಮಾಡಿದ ಅನುಭವ ಹಾಗೂ ಯಕ್ಷಗಾನ ರಂಗದಲ್ಲಿ 15 ವರ್ಷಗಳಿಂದ ಸೇವೆಯನ್ನು ಮಾಡುತ್ತಿದ್ದಾರೆ. ಯಕ್ಷಗಾನದ ಎಲ್ಲಾ ಪೌರಾಣಿಕ ಪ್ರಸಂಗಗಳು ಅಂದರೆ ಇವರಿಗೆ ತುಂಬಾನೇ ಇಷ್ಟ. ಯಕ್ಷಗಾನದಲ್ಲಿ ವೇಷ ಮಾಡುವ ಆಸಕ್ತಿ ಇದೆಯಾ ಅಂತ ಕೇಳಿದಾಗ ಅವರು "ವೇಷ ಮಾಡಲು ಅಷ್ಟೊಂದು ಆಸಕ್ತಿ ಇಲ್ಲ ಆದ್ರೆ ಯಕ್ಷಗಾನ ಭಾಗವತಿಕೆಯಲ್ಲಿ ಒಂದು ಒಳ್ಳೆಯ ಸಾಧನೆ ಮಾಡಬೇಕು ಎಂಬ ಕನಸು ಇದೆ ಎಂದು ಇವರು ಹೇಳುತ್ತಾರೆ.


ಕುರಿಯಜ್ಜ, ಬಲಿಪಜ್ಜ, ಪದ್ಯಾಣ, ಹೊಳ್ಳರು, ಪೂಂಜರು ನೆಚ್ಚಿನ ಭಾಗವತರು ಹಾಗೂ ಈಗಿನ ಭಾಗವತರು ಎಲ್ಲರೂ ಒಂದೊಂದು ರೀತಿಯಲ್ಲಿ ಇಷ್ಟವಾಗುತ್ತಾರೆ. ಯಕ್ಷಗಾನ ಪದ್ಯ ರಚನೆ, ಸಾಹಿತ್ಯದ ಓದುವಿಕೆ ಇವರ ಹವ್ಯಾಸಗಳು. ದೆಹಲಿ, ಮುಂಬಯಿ, ಬೆಂಗಳೂರು ಸಹಿತ ವಿವಿಧ ಕಡೆ ಯಕ್ಷಗಾನ ಕಾರ್ಯಕ್ರಮ ನೀಡಿದ ಅನುಭವ ಇವರಿಗೆ ಇದೆ ಹಾಗೂ ಆಕಾಶವಾಣಿ 'ಬಿ' ಗ್ರೇಡ್ ಕಲಾವಿದೆ ಕೂಡ ಇವರು.


ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತುಳುಭವನದಲ್ಲಿ ನಡೆದ ತುಳು ಯಕ್ಷಸಿರಿಯಲ್ಲಿ ಸನ್ಮಾನ, ದೆಹಲಿ ಕರ್ನಾಟಕ ಸಂಘದಲ್ಲಿ ಸನ್ಮಾನ, ಮುಂಬೈ ಬಂಟರ ಸಂಘದಿಂದ ಸನ್ಮಾನ, ಶ್ರೀ ಒಡಿಯೂರು ಸೇವಾ ಬಳಗ ಮಂಗಳೂರು ವಲಯ ದಶಮಾನೋತ್ಸವದಲ್ಲಿ ಸನ್ಮಾನ, ಕೇದಿಗೆ ಪ್ರತಿಷ್ಠಾನ ದಿಂದ ಲಕ್ಷ್ಮೀ ಭಾಸ್ಕರ ಯಕ್ಷಸೇವಾನಿಷ್ಠ ಪ್ರಶಸ್ತಿ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಂದ ಸನ್ಮಾನ ಸಹಿತ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಪ್ರೋತ್ಸಾಹ ನೀಡಿವೆ ಹಾಗೂ ಇದುವರೆಗೆ ಪ್ರೋತ್ಸಾಹ ನೀಡಿದ ಎಲ್ಲ ಸಂಘ ಸಂಸ್ಥೆಗಳು, ಯಕ್ಷಗಾನ ಅಭಿಮಾನಿಗಳಿಗೆ ನನ್ನ ಕೃತಜ್ಞತೆಗಳು.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-

ಹಿಂದಿಗಿಂತ ಪ್ರೋತ್ಸಾಹ ಸಂಘಟಕರು ಪ್ರದರ್ಶನಗಳು ಹೆಚ್ಚಿವೆ. ಆದರೆ ಹೊಸತನ ಎನ್ನುವ ನೆಪದಲ್ಲಿ ಯಕ್ಷಗಾನೀಯ ಪರಂಪರೆ, ಸಾಂಪ್ರದಾಯಿಕ ಮಟ್ಟುಗಳಿಗೆ, ಛಂದೋಬದ್ಧತೆಗೆ ಆದ್ಯತೆ ದೊರೆಯುತ್ತಿಲ್ಲ. ಯಕ್ಷಗಾನದಲ್ಲಿ ಹೊಸತನ ಎಂಬುದು ಪ್ರೇಕ್ಷಕನಿಗೆ ಹೊಸತಾಗಿ‌ ಕಾಣಿಸುತ್ತಿದೆ. ಆದರೆ ಪರಂಪರೆಯನ್ನು ಬೆಂಬಲಿಸುವ ಮಹತ್ವ ನೀಡುವ  ಪ್ರೇಕ್ಷಕವರ್ಗವೊಂದು ಇದ್ದೇ ಇದೆ ಎಂದು ಹೇಳುತ್ತಾರೆ ಇವರು.


ಯಕ್ಷಗಾನದ ಮುಂದಿನ ಯೋಜನೆಗಳು ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-

ಯಕ್ಷಗಾನ ಕ್ಷೇತ್ರದಲ್ಲಿ ಶಾಶ್ವತವಾಗಿ ಹೆಸರುಳಿಸುವಂಥ ಕೊಡುಗೆ ಏನು ಆದ್ರೂ ನೀಡಬೇಕು ಎಂಬ ತುಂಬಾ ಆಸೆ ಇದೆ ಎಂದು ಇವರು ಹೇಳುತ್ತಾರೆ.


ದಿನಾಂಕ 04.05.2015 ರಂದು ಶ್ರೀಯುತ ಹರೀಶ ಕುಲ್ಕುಂದ ಇವರನ್ನು ಮದುವೆಯಾಗಿ ಅಗಸ್ತ್ಯ ಎಂಬ ಮುದ್ದಾದ ಮಗುವಿನ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ನಾವು ನಂಬಿರುವ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ.


- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post