ಕಾಸರಗೋಡು: ಕನ್ನಡದ ಆದಿಕವಿ ಪಂಪ ಹಾಗೂ ತೆಲುಗಿನ ಮಹಾಕವಿ ನನ್ನಯರ ಕಾವ್ಯಗಳಲ್ಲಿ ಆಯಾಕಾಲದ ಯುಗಧರ್ಮ ಮತ್ತು ಸಂಸ್ಕೃತಿ ಪ್ರತಿಫಲನಗೊಂಡಿದೆ ಎಂದು ಕುಪ್ಪಂ ದ್ರಾವಿಡ ವಿಶ್ವವಿದ್ಯಾಲಯದ ಕನ್ನಡ ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಂ.ಎಸ್ ದುರ್ಗಾಪ್ರವೀಣ ಅವರು ಅಭಿಪ್ರಾಯಪಟ್ಟರು.
ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗ ಹಾಗೂ ಕಾಸರಗೋಡು ಕನ್ನಡ ಬಳಗದ ಸಹಯೋಗದೊಂದಿಗೆ ನಡೆದ ʼಮಾನಸೋಲ್ಲಾಸ ಸರಣಿ ಜಾಲಗೋಷ್ಟಿ ಉಪನ್ಯಾಸʼ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
“ಪಂಪ ಹಾಗೂ ನನ್ನಯ ಕವಿಗಳು ತಮ್ಮ ಕಾವ್ಯಗಳಿಗೆ ಸಂಸ್ಕೃತದ ವ್ಯಾಸ ಭಾರತವನ್ನು ವಿಕ್ರಮಾರ್ಜುನ ವಿಜಯವಾಗಿ ಬರೆದರೆ, ನನ್ನಯ ವ್ಯಾಸಭಾರತದ ಕೆಲವು ಪರ್ವಗಳನ್ನು ತೆಲುಗಿನಲ್ಲಿ ಬರೆದನು. ಪಂಪನು ವ್ಯಾಸ ಭಾರತವನ್ನು ವಿಕ್ರಮಾರ್ಜುನ ವಿಜಯದ ಮೂಲಕ ತನ್ನ ದೃಷ್ಟಿಕೋನಕ್ಕೆ ಒಗ್ಗಿಸಿಕೊಂಡು ಬರೆದನು. ಸಮಕಾಲೀನವಾದ ಅನೇಕ ಸಂಗತಿಗಳನ್ನು ಕಾವ್ಯದೊಳಗೆ ತಂದನು. ಆದರೆ ನನ್ನಯ ಕವಿಯು ವ್ಯಾಸನಿಗೆ ನಿಷ್ಠನಾಗಿ ತನ್ನ ಕಾವ್ಯವನ್ನು ರಚಿಸಿದ. ಆದರೆ ವೀರ ಪರಿಕಲ್ಪನೆಯ ಹಿನ್ನೆಲೆಯಲ್ಲಿ ನೋಡಿದಾಗ ಇಬ್ಬರು ಕವಿಗಳಲ್ಲಿ ಕೆಲವು ಸನ್ನಿವೇಶಗಳಲ್ಲಿ ಸಾದೃಶ್ಯ ಕಂಡುಬರುತ್ತವೆ ಎಂದು ಅವರು ನುಡಿದರು.
ಡಾ. ರತ್ನಾಕರ ಮಲ್ಲಮೂಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಡಾ.ಶ್ರೀಧರ ಏತಡ್ಕ ಸ್ವಾಗತಿಸಿದರು. ಕು. ಸೌಮ್ಯಾಶ್ರೀ ಪಿ ನಿರೂಪಿಸಿ, ಕು. ಸುಶ್ಮಿತ ಕೆ ವಂದಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ