ಕಾಸರಗೋಡು: ಗಮಕ ಮಾಸಾಚರಣೆ- ಆ.15ರಂದು ಉದ್ಘಾಟನೆ

Upayuktha
0

ಸಾಂದರ್ಭಿಕ ಚಿತ್ರ


ಕಾಸರಗೋಡು: ಕರ್ನಾಟಕ ಗಮಕ ಕಲಾ ಪರಿಷತ್ ಬೆಂಗಳೂರು- ಇದರ ಕೇರಳ ಗಡಿನಾಡ ಘಟಕ ಕಾಸರಗೋಡು ಆಶ್ರಯದಲ್ಲಿ  ಆದಿ ಗಮಕಿಗಳಾದ ಕುಶ-ಲವರ ಜನ್ಮ ಮಾಸಾಚರಣೆಯನ್ನು 'ಗಮಕ ಶ್ರಾವಣ' ಹೆಸರಿನಲ್ಲಿ ಆಚರಿಸಲಾಗುತ್ತಿದೆ. ಈಗ ಬಾರಿಯ ಗಮಕ ಶ್ರಾವಣ ಆಗಸ್ಟ್‌ 15ರಂದು  ಉದ್ಘಾಟನೆಗೊಳ್ಳಲಿದೆ.


ಶ್ರೀ ರಾಮಚಂದ್ರನ ಮಕ್ಕಳಾದ ಕುಶ-ಲವರು ಆದಿ ಗಮಕಿಗಳು ಎಂದೇ ಪ್ರಸಿದ್ಧರಾದವರು.  ಕರೆಯಲಾಗುತ್ತದೆ. ಅವರು ಜನಿಸಿದುದು ಶ್ರಾವಣ ಮಾಸದಲ್ಲಿ. ಕಳೆದ 12 ವರ್ಷಗಳಿಂದ ಕರ್ನಾಟಕ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡು ಘಟಕದ ಆಶ್ರಯದಲ್ಲಿ ಕಾಸರಗೋಡು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ 'ಗಮಕ ಶ್ರಾವಣ' ಎಂಬ ಹೆಸರಿನಲ್ಲಿ ಗಮಕ ಮಾಸಾಚರಣೆಯನ್ನು ನಡೆಸಿಕೊಂಡು ಬರಲಾಗಿದೆ. ಈ ಸಂದರ್ಭಗಳಲ್ಲಿ, ಶ್ರೀಮದ್ರಾಮಾಯಣದ ಹಲವು ಭಾಗಗಳ ವಾಚನ ಮತ್ತು ವ್ಯಾಖ್ಯಾನಗಳನ್ನು ವಿದ್ವಾಂಸರಿಂದ ನಡೆಸುವ ವ್ಯವಸ್ಥೆ ಮಾಡಲಾಗಿದೆ.


15-03-2008 ರಂದು ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಉದ್ಘಾಟಿಸಿದ ಸರಣಿ ಇದುವರೆಗೂ ಸಾಂಗವಾಗಿ ನಡೆದುಕೊಂಡು ಬಂದಿದೆ. ಹಲವು ಶಾಲೆ ಕಾಲೇಜುಗಳು, ದೇವಸ್ಥಾನಗಳು ಮತ್ತು ಇತರ ಪ್ರಸಿದ್ಧ ಕೇಂದ್ರಗಳು ಮತ್ತು ಕೆಲವು ಮನೆಗಳಲ್ಲಿ ಆಯೋಜಿಸಲಾಗಿದೆ. ಇಲ್ಲಿಯವರೆಗೆ 13 ತರಬೇತಿ ಶಿಬಿರಗಳು ಸೇರಿದಂತೆ ವಿದ್ವಾಂಸರ ಸಮ್ಮುಖದಲ್ಲಿ 180ಕ್ಕೂ ಅಧಿಕ ಗಮಕ ಕಾರ್ಯಕ್ರಮಗಳು ವಿದ್ವಾಂಸರ ಸಮ್ಮುಖದಲ್ಲಿ ಸಂಪನ್ನಗೊಂಡಿವೆ.


ಪ್ರಕೃತ 2021ನೇ ವರ್ಷದ ಶ್ರಾವಣ ಮಾಸದ ಗಮಕ ಕಾರ್ಯಕ್ರಮಗಳನ್ನು ಶ್ರೀಮದೆಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯಾಶೀರ್ವಾದಗಳಿಂದ ಆಗಸ್ಟ್‌ 15ರ ಆದಿತ್ಯವಾರ ಸ್ವಾತಂತ್ರ್ಯ ದಿನೋತ್ಸವದ ಅಮೃತ ಮಹೋತ್ಸವದ ಸುಸ೦ದರ್ಭದಲ್ಲಿ ಉದ್ಘಾಟಿಸಲಾಗುವುದು. ಅಂದು ಮಂಜೇಶ್ವರದ ಹೊಸಂಗಡಿಯ ದುರ್ಗಿಪಳ್ಳದಲ್ಲಿರುವ ತುಳು ಅಕಾಡೆಮಿಯ ಸಭಾ ಭವನದಲ್ಲಿ ಬೆಳಗ್ಗೆ 10.00 ಗಂಟೆಗೆ ನಾಡಿನ ಖ್ಯಾತ ವೈದ್ಯರೂ, ಸಾಹಿತಿಗಳೂ, ಯಕ್ಷಗಾನ ಅರ್ಥದಾರಿಗಳೂ ಆಗಿರುವ ಡಾ| ರಮಾನಂದ ಬನಾರಿ ಅವರು ದೀಪ ಪ್ರಜ್ವಲನೆಯೊಂದಿಗೆ ಸಮಾರಂಭವನ್ನು ಉದ್ಘಾಟಿಸಲಿರುವರು. ತುಳು ಅಕಾಡೆಮಿಯ ಅಧ್ಯಕ್ಷ ಶ್ರೀ ಉಮೇಶ ಯಂ. ಸಾಲಿಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಈ ಸಂದರ್ಭದಲ್ಲಿ ತುಳು ಭಾಷೆಯ ಮಂದಾರ ರಾಮಾಯಣದಿಂದ ಆಯ್ದ ಭಾಗವನ್ನು ಶ್ರೀ ಶೇಖರ ಶೆಟ್ಟಿ ಬಾಯಾರು ಅವರು ವಾಚನ ಮಾಡಲಿರುವರು. ಹಿರಿಯ ವಿದ್ವಾಂಸ, ಪತ್ರಕರ್ತ ಶ್ರೀ ಮಲಾರ್ ಜಯರಾಮ ರೈ ಅವರು ವ್ಯಾಖ್ಯಾನ ಮಾಡಲಿರುವರು.


ಎರಡನೇ ಕಾರ್ಯಕ್ರಮವನ್ನು ತಾ. 18-08-2021ರಂದು ಅಪರಾಹ್ನ 4:00 ಗಂಟೆಗೆ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪ್ರಥಮ ಚಾತುರ್ಮಾಸ್ಯ ಸಂದರ್ಭದಲ್ಲಿ ಎಡನೀರು ಮಠದಲ್ಲಿ ಶ್ರೀಗಳ ದಿವ್ಯ ಸನ್ನಿಧಿಯಲ್ಲಿ ನಡೆಸಲಾಗುವುದು. ಹಿರಿಯ ವಿದ್ವಾಂಸರಾದ ವಿದ್ವಾನ್ ನೆತ್ತರಗುಳಿ ತಿಮ್ಮಣ್ಣ ಭಟ್ಟರು ಹಿಂದಿ ಭಾಷೆಯಿಂದ ಹಳಗನ್ನಡಕ್ಕೆ ಅನುವಾದ ಮಾಡಿದ `ಶ್ರೀ ರಾಮಚರಿತ ಮಾನಸ' ಎಂಬ ಬೃಹತ್ ಗ್ರಂಥದಿಂದ ಆಯ್ದ ಭಾಗವನ್ನು ನಾಯರ್ಪಳ್ಳ ಸಹೋದರಿಯರಾದ ಕುಮಾರಿ ಶ್ರದ್ಧಾ ಭಟ್ ಮತ್ತು ಕುಮಾರಿ ಮೇಧಾ ಭಟ್ ವಾಚನ: ಹಾಗೂ ವ್ಯಾಖ್ಯಾನ ಮಾಡಲಿರುವರು. ನಿವೃತ್ತ ಪ್ರಾಂಶುಪಾಲರಾದ ಶ್ರೀ ರಾಜೇಂದ್ರ ಕಲ್ಲೂರಾಯ, ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.


ಮೂರನೆಯ ಕಾರ್ಯಕ್ರಮವನ್ನು ತಾ. 26-8-2021ರಂದು ಗುರುವಾದ ಅಪರಾಹ್ನ ಗಂಟೆ 3.30ಕ್ಕೆ, ಮಂಗಲ್ಪಾಡಿಯ ಕೋರ್ತಿಮಾರು ಶ್ರೀ ರಾಮಕಾರಂತರ ಮನೆ, 'ಸಾಕ್ಷಾತ್ಕಾರ'ದಲ್ಲಿ ನಡೆಸಲಾಗುವುದು, ಈ ಸಂದರ್ಭದಲ್ಲಿ ತೊರವೆ ರಾಮಾಯಣದಿಂದ ಆಯ್ದ ಭಾಗವನ್ನು ಶ್ರೀಮತಿ ದಿವ್ಯಾ ಕಾರಂತ ಅವರು ವಾಚನ ಮಾಡಲಿರುವರು. ಖ್ಯಾತ ಗಮಕಿ ಶ್ರೀಮತಿ ಜಯಲಕ್ಷ್ಮಿ ಕಾರಂತ ಅವರು ವ್ಯಾಖ್ಯಾನಗೈಯಲಿರುವರು. ಮುಖ್ಯ ಅತಿಥಿಗಳಾಗಿ ಹಿರಿಯ ವಿದ್ವಾಂಸ ಶ್ರೀ ರಾಮಚಂದ್ರ ಚೆರುಗೋಳಿ ಅವರು ಭಾಗವಹಿಸಲಿರುವರು.


ನಾಲ್ಕನೆಯ ಕಾರ್ಯಕ್ರಮವನ್ನು ತಾರೀಕು 27-08-2021ರಂದು ಶುಕ್ರವಾರ ಅಪರಾಹ್ನ ಗಂಟೆ 4:00ಕ್ಕೆ ಕಾಸರಗೋಡಿನ ವಿದ್ಯಾನಗರದ ಚಿನ್ನಯ ಕಾಲೊನಿಯ ಶ್ರೀಕೃಷ್ಣ ಮಂದಿರದಲ್ಲಿ ವ್ಯವಸ್ಥೆಗೊಳಿಸಲಾಗುವುದು, ತೊರವೆ ರಾಮಾಯಣದಿಂದ ಆಯ್ದ ಭಾಗದ ವಾಚನವನ್ನು ಶಿಕ್ಷಕಿ ಶ್ರೀಮತಿ ಪುಷ್ಪಲತ ವಿ.ಕೆ. ಭಟ್ ನಡೆಸಿಕೊಡಲಿರುವರು. ವ್ಯಾಖ್ಯಾನವನ್ನು ಶ್ರೀ ಶ್ರೀಶಕುಮಾರ ಪಂಜೆತ್ತಡ್ಕ ಅವರು ನಡೆಸಲಿರುವರು. ಮುಖ್ಯ ಅತಿಥಿಗಳಾಗಿ ಕಾಸರಗೋಡು ನಗರ ಸಭಾ ಸದಸ್ಯರಾದ ಶ್ರೀಮತಿ ಸವಿತಾ ಐ. ಭಟ್ ಭಾಗವಹಿಸಲಿರುವರು. ಐದನೆಯ ಕಾರ್ಯಕ್ರಮವನ್ನು ತಾ.3-9-2021ರಂದು ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಸನ್ನಿಧಿಯಲ್ಲಿ ಅಪರಾಹ್ನ 4.00 ಗಂಟೆಗೆ ಸಮಾರೋಪ ಸಮಾರಂಭವನ್ನಾಗಿ ಶ್ರೀಮಠದಲ್ಲಿ ಆಚರಿಸಲಾಗುವುದು.


ಸಮಾರೋಪ ಸಮಾರಂಭದಲ್ಲಿ ತೊರವೆ ರಾಮಾಯಣದ ಆಯ್ದಭಾಗವನ್ನು ಕುಮಾರಿ ಅನುಷಾ ಯಸ್. ಮಯ್ಯ ವಾಚನ ಮಾಡುವರು ಹಾಗೂ  ಶ್ರೀ ವಿ.ಬಿ.ಕುಳಮರ್ವ ವ್ಯಾಖ್ಯಾನ ಮಾಡುವರು. ಕಾಸರಗೋಡಿನ ಕರ್ನಾಟಕ ಸಮಿತಿಯ ಅಧ್ಯಕ್ಷರಾದ ಶ್ರೀ ಮುರಳೀಧರ ಬಳ್ಳಕ್ಕುರಾಯ ಅವರು ಸಮಾರೋಪ ಭಾಷಣ ಮಾಡಲಿರುವರು. ಶ್ರೀ ಶ್ರೀಗಳು ಆಶೀರ್ವಚನ ನೀಡಲಿರುವರು.


ಎಲ್ಲಾ ಸಮಾರಂಭಗಳಲ್ಲಿಯೂ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕ ಅಧ್ಯಕ್ಷ ಶ್ರೀ ತಕ್ಕಕೆರೆ ಶಂಕರನಾರಾಯಣ ಭಟ್ಟರು ಅಧ್ಯಕ್ಷತೆ ವಹಿಸಲಿರುವರು.


ಅಚ್ಚಕನ್ನಡದ ಗಮಕ ಕಲೆಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತಾರಗೊಳಿಸುವ ಉದ್ದೇಶದಿಂದ ಸಂಸ್ಕೃತ ಮಲೆಯಾಳ, ತುಳು ಮೊದಲಾದ ಭಾಷೆಗಳಲ್ಲಿಯೂ ಆಯ್ದ ಭಾಗಗಳ ವಾಚನ-ವ್ಯಾಖ್ಯಾನಗಳನ್ನು ಹಮ್ಮಿಕೊಳ್ಳಲಾಗಿದೆ.


ಕರ್ನಾಟಕ ಗಮಕ ಕಲಾಪರಿಷತ್ತಿನ ಕೇರಳ ಗಡಿನಾಡ ಘಟಕ ಹಾಗೂ ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕದ ಸಹಯೋಗದಲ್ಲಿ ನಡೆಯಲಿರುವ ಎಲ್ಲಾ ಸಮಾರಂಭಗಳಲ್ಲಿಯೂ ಗಮಕ ಕಲಾಸಕ್ತರೆಲ್ಲರೂ ಭಾಗವಹಿಸಿ ಗಮಕ ಮಾಸಾಚರಣೆಯನ್ನು ಚಂದಗಾಣಿಸಿಕೊಡಬೇಕೆಂದು ಅಧ್ಯಕ್ಷ ಶ್ರೀ ತೆಕ್ಕಕೆರೆ ಶಂಕರನಾರಾಯಣ ಭಟ್ ಮತ್ತು ಪ್ರಧಾನ ಕಾರ್ಯದರ್ಶಿ ಹಾಗೂ ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಶ್ರೀ ವಿ.ಬಿ. ಕುಳಮರ್ವ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top