ದುರ್ಯೋಧನ: ಮಾಮಾಶ್ರೀ... ಏನು ನಿಮ್ಮ ಗಾಂಧಾರದಲ್ಲಿ ರಾಜಕೀಯ ಪಲ್ಲಟಗೊಂಡು ವಿಕೋಪ ಪರಿಸ್ಥಿತಿ ಬಂದಿದೆಯಲ್ಲ?
ಶಕುನಿ: ನನ್ನ ಮಗುವೇ, ಆ ವಿಚಾರ ಬಿಡು, ಅದು ಕ್ರಾಂತಿ ಭೂಮಿ, ಸದಾ ವಿಶ್ವದ ಗಮನ ಸೆಳೆಯುವ ವಿಶಿಷ್ಟ ನೆಲ ಅದು. ಗಾಂಧಾರರು ಧರಿಸುವುದು ಕಪ್ಪು ಬಟ್ಟೆ!!! ಅದು ನಮ್ಮ 'ಉಗ್ರ' ಕ್ರಾಂತಿಯ ಸಂಕೇತ ಮಗು!! ಇಡೀ ದೇಹಕ್ಕೆ ಮಾತ್ರ ಅಲ್ಲ, ಕಣ್ಣಿಗೂ ಕಪ್ಪು ಬಟ್ಟೆ ಕಟ್ಟಿದರೂ, 'ಕುರುಡು'ತನದಲ್ಲೇ ಅನುಕಂಪ ಪಡೆದು ಭೂಮಿ ಆಳುವ ಶಕ್ತಿ ಪಡೆಯುತ್ತಾರೆ ಗಾಂಧಾರದವರು!! ಅದರರ್ಥ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿದರೂ ಅಧಿಕಾರ ನೆಡೆಸುವ ತಂತ್ರದ ದೃಷ್ಟಿ ಹೊಂದಿರುತ್ತಾರೆ ಎಂದು!! ಮಗು, ನಿನ್ನಮ್ಮನನ್ನು ಕೇಳು ಏಕೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಿ ಎಂದು!! ಗಾಂಧಾರದ ದಾಳಗಳು ನಿನ್ನಮ್ಮನ ಕರದಲ್ಲೂ ಇದೆ!!
ದುರ್ಯೋಧನ: (ನಗುತ್ತ) ಮಾಮಾಶ್ರೀ, ನಿಮ್ಮ ಮನೋ ಇಂಗಿತವೇ ನಮಗರ್ಥವಾಗುವುದಿಲ್ಲ...!!?
ಶಕುನಿ: ಯಾಕೆ ಮಗು? ಯಾವುದು ನಿನಗರ್ಥವಾಗದಿರುವುದು!!?
ದುರ್ಯೋಧನ: ಅಲ್ಲ ಮಾಮಾಶ್ರೀ, ನಿಮ್ಮ ಗಾಂಧಾರದಲ್ಲಿ ಮಹಿಳೆಯರು ಮೈ ತುಂಬ ಬಟ್ಟೆ ಧರಿಸಬೇಕು, ಮನೆಯ ಒಳಗಿರಬೇಕು ಅನ್ನುತ್ತೀರಿ!! ಅವರಿಗೆ ಅಧಿಕಾರ ನಿಷಿದ್ಧ ಅಂತ ನಿಬಂಧನೆಗಳನ್ನು ಮಾಡಿದ್ದೀರಿ. ಇಲ್ಲಿ... ಅದೇ ಮಹಿಳೆಯರಿಗೆ ಕಣ್ಣಿಗೆ ಬಟ್ಟೆ ಕಟ್ಟುವಂತೆ ಮಾಡುತ್ತೀರಿ, ರಾಜಕಾರಣದ ಮುಂಚೂಣಿಗೆ ಕರೆತರುತ್ತೀರಿ, ರಾಜ ಸಭೆಯಲ್ಲಿ ಮಹಿಳೆಯರ ವಸ್ತ್ರಾಪಹರಣ ಮಾಡಿಸುತ್ತೀರಿ!!?
ಶಕುನಿ: ಹ ಹ ಹ ಹ... ಅದು ಗಾಂಧಾರ ರಾಜಕೀಯ ದಾಳ ಉರುಳಿಸುವ ತಂತ್ರ ಮಗೂ...
ದುರ್ಯೋಧನ: ಇನ್ನೊಂದು ಕೇಳುತ್ತೇನೆ ಮಾಮಾಶ್ರೀ... ತಪ್ಪು ತಿಳಿಯಬಾರದು...
ಶಕುನಿ: ಇಲ್ಲ ಮೇರ ಬೇಟಾ, ಕೇಳು...
ದುರ್ಯೋಧನ: ನೀವು ಗಾಂಧಾರದಲ್ಲಿ ರಾಜ ಕಿರೀಟ ಧರಿಸದೆ, ಸಿಂಹಾಸನ ತೊರೆದು ಇಲ್ಲಿಗೆ ಬಂದಿದ್ದೇಕೆ?
ಶಕುನಿ: ನನ್ನಂತಹ 'ಧರ್ಮನಿಷ್ಠರಿಗೆ' ಆ ನೆಲದ ಮಣ್ಣು ಹಿಡಿಸುವುದಿಲ್ಲ ಎಂದು ಇಲ್ಲಿಗೆ ಬಂದಿದ್ದಲ್ಲ ಪುತ್ರ. ಅಲ್ಲಿ 'ಅರಾಜಕತೆ' ಉಂಟು ಮಾಡುವುದೂ ಅಲ್ಲ!! ಅಲ್ಲಿ ರಾಜರಿಲ್ಲದಿದ್ದರೂ ರಾಜಕಾರಣ ನಡೆಯುತ್ತದೆ ಬೇಟಾ. ಅಷ್ಟು ಉಗ್ರತರವಾದ ಶಾಸನಗಳು ಅಲ್ಲಿ ಜಾರಿಯಲ್ಲಿವೆ. ಶಾಸನಗಳೇ ಸಿಂಹಾಸನಗಳ ಮೇಲೆ ರಾಜತ್ವವನ್ನು ನೆಡೆಸುತ್ತವೆ. ನನ್ನ ದಾಳಗಳ ಜೊತೆ ರಥವನ್ನೇರಿ ಇಲ್ಲಿಗೆ ಬಂದಿದ್ದಕ್ಕೆ ಕಾರಣ ಬೇರೆ ಉಂಟು ಮಗು.
ದುರ್ಯೋಧನ: ಅದ್ಯಾವ ರಾಜಕೀಯ ದಾಳ ಉರುಳಿಸುವ ತಂತ್ರ ಮಾಮಾ?
ಶಕುನಿ: ಸರಿಯಾದ ಪ್ರಶ್ನೆಯನ್ನು ಸರಿಯಾದ ಸಮಯದಲ್ಲಿ ಕೇಳುತ್ತಿದ್ದಿ. ನನ್ನ ರಾಜ ದಾಳದ ಮಾತುಗಳು ಇಷ್ಟೆ ಮಗು... ಸಮಸ್ತ ವಿಶ್ವವನ್ನು ಗಾಂಧಾರವಾಗಿಸುವುದು!!!. ಆ ವಿಶ್ವ ಗಾಂಧಾರ ಪೃಥ್ವಿಗೆ ಗಾಂಧಾರದ ಗಾಂಧಾರಿಯ ಜೇಷ್ಠ ಪುತ್ರನೇ ಸರ್ವಾಧಿಕಾರಿ!! ಆ ದಿನಗಳು ದೂರವಿಲ್ಲ!! ಕುರುಕ್ಷೇತ್ರ ಯುದ್ದ ಮುಗಿಯಲಿ, ಆಮೇಲೆ ಚಂದ್ರವಂಶ, ಸೂರ್ಯವಂಶ ಯಾವುದೂ ಇಲ್ಲ, ಕೇವಲ ಗಾಂಧಾರ ವಂಶ, ಕೇವಲ ಗಾಂಧಾರ ಧರ್ಮ!! ಹ ಹ ಹ ಹ ಹ ಹ.
ದುರ್ಯೋಧನ: ಅದು ಸರಿ ಮಾಮಾಶ್ರೀ, ಆದರೆ ಒಮ್ಮೊಮ್ಮೆ ಅನಿಸುವುದು... ಪಿತಾಶ್ರೀ ಧೃತರಾಷ್ಟ್ರ ಮಹಾರಾಜರು ಗಾಂಧಾರದ ಕನ್ಯೆಯನ್ನು ಮದುವೆ ಆಗದೆ ಇದ್ದಿದ್ದರೆ, ನನ್ನಂತ 'ಸಮರ್ಥ' ರಾಜಕಾರಣಿಯನ್ನು ಈ ಆರ್ಯಾವರ್ತ ಕಾಣುತ್ತಿರಲಿಲ್ಲವೇನೋ!!? ನೀವು ಇಲ್ಲಿಗೆ ಬರುತ್ತಿರಲಿಲ್ಲವೇನೋ!!? ನೀವು ಬರದೇ ಇದ್ದಿದ್ದರೆ ಸಮಸ್ತ ಭರತಖಂಡವೇ 'ಕುರುಕ್ಷೇತ್ರ' ಯುದ್ದಕ್ಕೆ ತೊಡಗುವಂತೆ ಸನ್ನದ್ದವಾಗುತ್ತಿರಲಿಲ್ಲವೇನೋ?
ಶಕುನಿ: ಶಹಬ್ಬಾಸ್ ಪುತ್ರ, ನೀನು ನಿಧಾನವಾಗಿ ಗಾಂಧಾರ ಮನಸ್ಥಿತಿಗೆ ಬರುತ್ತಿದ್ದಿ!! ಇಡೀ ಆರ್ಯಾವರ್ತದಲ್ಲಿ ರಕ್ತದ ನದಿಗಳೇ ಹರಿಯುವಂತೆ ವರ್ಷಧಾರೆ ಆಗುವ ಯುದ್ದದ ಕಾರ್ಮೋಡ ಕವಿಯುತ್ತಿದೆ. ಸಿದ್ದನಾಗು. ನಾಳೆಯೇ ಹೋಗಿ ಬಲರಾಮ ಕೃಷ್ಣರನ್ನು ಭೇಟಿಮಾಡಿ, ಸಮಸ್ತ ಯಾದವ ಸೈನ್ಯವನ್ನು ನಮ್ಮ ಪಕ್ಷದ ಒಳಗು ಮಾಡಿಕೊಂಡು ಬಾ.
ದುರ್ಯೋಧನ: ಅಪ್ಪಣೆ ಮಾಮಾಶ್ರೀ.
(ಗಾಂಧಾರ- ಅಫ್ಘಾನಿಸ್ತಾನ)
-ಅರವಿಂದ ಸಿಗದಾಳ್, ಮೇಲುಕೊಪ್ಪ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ