ದಾಸರೇ ಗತಿ ಎಮಗೆ- ಹೀಗೊಂದು ದಾಸ ಸಂಕೀರ್ತನ ಕಲಾವಿಸ್ತಾರ

Upayuktha
0


ಸಂಗೀತ ಯಾರಿಗೇ ಇಷ್ಟವಿಲ್ಲ ಹೇಳಿ. ಯಾವುದಾದರೂ ಒಂದು ಪ್ರಕಾರದ ಸಂಗೀತ  ನಮಗೆ ಆಪ್ತವಾಗುತ್ತಾ ಹೋಗುತ್ತದೆ. ಇನ್ನಷ್ಟು ಮನದೊಳಗೆ‌ ಇಳಿಸಿಕೊಂಡರೆ ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ಯುತ್ತದೆ. ಇಂತಹ ಒಂದು ಅನುಭವ ಆಗಿರುವುದು ಇತ್ತೀಚೆಗೆ ಆಲಿಸಿದ, ಅನುಭವಿಸಿದ ದಾಸ ಸಂಕೀರ್ತನೆಯಿಂದ‌.


ಶ್ರೀ ಶ್ರೀ ಕೇಶವಾನಂದ ಭಾರತೀ ಪಾದಂಗಳವರ ಪ್ರಥಮ ಆರಾಧನೋತ್ಸವ ಹಾಗೂ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರ ಪ್ರಥಮ ಚಾತುರ್ಮಾಸ್ಯದ ಅಂಗವಾಗಿ ಎಡನೀರು ಶ್ರೀ ಮಠದಲ್ಲಿ ನಡೆದ "ಹುಸೇನ್ ಸಾಬ್" ಕನಕಗಿರಿ ಮತ್ತವರ ಬಳಗದವರಿಂದ ನಡೆದ ದಾಸ ಸಂಕೀರ್ತನೆ ಅಂತಹ ಅನುಭೂತಿಯನ್ನು ನೀಡಿತು. ಒಬ್ಬ ಕಲಾವಿದ ತನ್ನ ಕಲೆಯೊಂದಿಗೆ, ಪ್ರಸ್ತುತತೆಯ ಅನುಸಂಧಾನವನ್ನು ಹೇಗೆ ನಡೆಸಬೇಕೆಂಬುವುದಕ್ಕೆ ಸಾಕ್ಷಿ ಎನ್ನುವಂತೆ ಮೂಡಿಬಂತು.


ಭಕ್ತಿ ಹಾಗೂ ಧ್ಯಾನ ಎರಡು ಆಧ್ಯಾತ್ಮ ಚಿಂತನೆಗೆ ಪೂರಕವಾದ ಮಾರ್ಗಗಳು ಎಂದು ತಮ್ಮ ಗಾಯನಕ್ಕೆ ವಿವರಣೆಯೊಂದಿಗೆ ಮಾತು ಶುರು ಮಾಡುವ ಹುಸೇನ್ ಸಾಬ್ ರ ಹಾಡಿನ ಆಯ್ಕೆಗಳೂ ಕೂಡಾ ಅಷ್ಟೇ ಪ್ರಸ್ತುತವೆನಿಸುತ್ತವೆ. ಎಂದೋ, ಯಾವತ್ತೋ ದಾಸರು ರಚಿಸಿರುವ ಈ ಕೃತಿಗಳನ್ನು ಇಂದಿನ ಸಾಮಾಜಿಕ ಚಿಂತನೆಯೊಂದಿಗೆ ಸಮೀಕರಿಸುವುದು ಇದೆಯಲ್ಲ ಅದೇ ಕಲಾವಿದನ ಸಾಮರ್ಥ್ಯ ಹಾಗೂ ಸವಾಲು. ಹಾಡನ್ನು ಹಾಡಿ ಬಿಡಬಹುದು ಆದರೆ ಬೌದ್ಧಿಕವಾಗಿ, ಮಾನಸಿಕವಾಗಿ ಜೊತೆಗೆ ವೈಚಾರಿಕವಾಗಿ ಕಲೆಯೊಂದನ್ನು ತನ್ನದಾಗಿಸಿಕೊಂಡರೆ ಆತ ನಿಜವಾದ ಕಲಾವಿದನಾಗಿ ಉಳಿಯುವುದಕ್ಕೂ ಸಾಧ್ಯವಾಗಬಹುದೇನೋ. 


ಧ್ಯಾನಸ್ಥ ಸ್ಥಿತಿಯಿಂದ ಒಂದು ಕಲೆಯನ್ನು ಒಲಿಸಿಕೊಂಡಲ್ಲಿ ಅದು ಯಾವ ಮತ ಭೇದಗಳನ್ನು ಬದಿಗಟ್ಟಬಹುದು. ಎಲ್ಲದರಲ್ಲೂ, ಎಲ್ಲರಲ್ಲೂ ಪ್ರೀತಿ ಪ್ರೇಮವನ್ನು ಕಾಣುವುದು ಭಕ್ತಿ, ಅದೇ ಭಗವಂತ ಎನ್ನುವುದನ್ನು ಹೇಳುವ ದಾಸರ ಹಾಡುಗಳನ್ನು ಅರ್ಥೈಸಿಕೊಂಡಲ್ಲಿ ‌ಎಷ್ಟು ಸರಳವಾಗಿದೆ ಬದುಕು ಅನ್ನಿಸಲೂ ಬಹುದು.


ಈ ದೇವರನಾಮಗಳಲ್ಲಿ ಆಧ್ಯಾತ್ಮಿಕ ಚಿಂತನೆಗಳು ಒಂದೆಡೆಯಾದರೆ, ಸಮಕಾಲೀನ ಸ್ಥಿತಿಗತಿಗಳ  ವಿಚಾರಗಳೂ ಅಷ್ಟೇ ಗಟ್ಟಿಯಾಗಿವೆ. ಅವುಗಳ ಸೂಕ್ಷ್ಮತೆಗಳನ್ನು ಸರಳವಾಗಿ ಅವಲೋಕಿಸುತ್ತಾ ತನ್ನ ಗಾಂಭೀರ್ಯವಾದ, ಮಾಧುರ್ಯವಾದ ಕಂಠದಿಂದ ದಾಟಿಸಿದ ಪರಿ ನಿಜಕ್ಕೂ ಅನನ್ಯ. ಸಾಹಿತ್ಯ ಸ್ಪಷ್ಟ ಹಾಡುಗಾರಿಗೆ, ಸಾಹಿತ್ಯಕ್ಕೆ ಹೊಂದುವ ರಾಗದ ನಿರೂಪಣೆ  ದಾಸಸಾಹಿತ್ಯವನ್ನು ಇನ್ನಷ್ಟು ಆಪ್ತವಾಗಿಸಿತು. ದಾಸರೇ ಗತಿಯು ನಮಗೆ, ನಮ್ಮಮ್ಮ ಶಾರದೆ, ಆದಿಗುರು ಶಂಕರ, ಏನು ಧನ್ಯಳೋ ಲಕುಮಿ, ಸತ್ಯವಂತರ ಸಂಗವಿರಲು.. ಹೀಗೇ ಎಲ್ಲಾ ಪ್ರಸ್ತುತಿಗಳೂ ಕೂಡಾ ಹೆಚ್ಚು ಅರ್ಥಪೂರ್ಣವೆನಿಸಿದ್ದು, ಕೇಳಲು ಹಿತವೆನಿಸಿದ್ದು ಅವರ ಗಾಯನ ವೈಖರಿಯಿಂದ, ಒಳಾರ್ಥದ ವಿಶ್ಲೇಷಣೆಯಿಂದ. 


ನಾವು ಕಲೆಯೊಂದನ್ನು ನೋಡಬೇಕು, ಸಂಗೀತವನ್ನು ಕೇಳಬೇಕು‌. ಹೌದು ಯಾಕೇ ಎಂಬ ಪ್ರಶ್ನೆ ಬಂದರೆ ಮನೋರಂಜನೆಗಾಗಿ, ಖುಷಿಗಾಗಿ, ಒಂದು ಕಲೆಯಾಗಿ, ನನಗಿಷ್ಟ, ಮಾನಸಿಕ ನೆಮ್ಮದಿಗಾಗಿ, ನಾನೂ ಸಂಗೀತ ಕಲಿಯುತ್ತಿದ್ದೇನೆ ಹೀಗೆ ಅನೇಕ ತೆರನಾದ ಉತ್ತರಗಳು ಸಿಗಬಹುದು ಆದರೆ ನಿಜಾರ್ಥದಲ್ಲಿ ಇದು ಬದುಕ ತೆರದು ತೋರುವ ಒಂದು ಮಾಧ್ಯಮವೂ ಹೌದು.  


ಒಂದು ಹಾಡು ಕೌಟುಂಬಿಕ ಸಂಬಂಧದ‌ ನೆಲೆಗಟ್ಟಿನಲ್ಲೇ ಕಟ್ಟಲ್ಪಟ್ಟಿದೆ ಎಂದೆನಿಸಿದರೂ ಅದು ಶಕ್ತಿಯ ಪ್ರತೀಕ, ಅಮ್ಮ ಎನ್ನುವುದು ಕೇವಲ ಬರಿಯ ನನ್ನದಲ್ಲಾ ನಮ್ಮದು, ವಿಶ್ವಕ್ಕೇ ಸೂಚಿತವಾಗಿರುವುದು ಎಂಬ ಅರ್ಥ ವ್ಯಾಪ್ತಿಯನ್ನು ಕೊಡುವುದಿದೆಯಲ್ಲಾ ಇದು ದಾಸ ಸಾಹಿತ್ಯದ ಶ್ರೇಷ್ಠತೆ. ಇದು ನಮ್ಮಮ್ಮ ಶಾರದೆ ಹಾಡನ್ನು ಕೇಳುವಾಗ ಆಗುವ ಸಾರ್ಥಕತೆ.


ಸಾಮಾಜಿಕ ಬದುಕು ಎಂದರೆ ಅದು ಸಾಂಘಿಕವಾದುದು. ಇಂದಿನ ದಿನಮಾನದಲ್ಲಿ ನಾವು ಸಾಮರಸ್ಯ ಬದುಕು ನಡೆಸಬೇಕಾದುದು ತೀರಾ ಅಗತ್ಯವೂ ಹೌದು. ಅದಕ್ಕೇ ಒಂದು ರೂಪಕವಾಗಿ ಕಂಡು‌ಬರುವ ಹಾಡು ಕುಂದಣದ ಆಶ್ರಯವು ನವರತ್ನಗಳಿಗೆಲ್ಲಾ. ವಿಧವಿಧದ ರತ್ನಗಳಿಗೆ ಹೇಗೆ ಬಂಗಾರದ ಕಟ್ಟಿನ‌ ಅಗತ್ಯವಿರಬೇಕೇ ಹಾಗೇ ನಮ್ಮ ಬದುಕಿಗೂ ಒಂದು ಚೌಕಟ್ಟು ರೂಪಿಸಬೇಕು. ಎಲ್ಲೋ‌ ಎಲ್ಲೆಮೀರಿ ‌ನಾವು ಬದುಕು ಸಾಗಿಸುವಂತಿಲ್ಲ. ಮನುಷ್ಯ ಏನೆಲ್ಲಾ ಸಾಹಸ, ಸಾಧನೆ ಮಾಡಿದರೂ ಮುಖ್ಯವೆನಿಸುವುದು ಬದುಕು ಅಷ್ಟೇ. ಪ್ರಕೃತಿಯ ನಿಯಮವೇನಿದೆ ಅದು ಸರ್ವವಿಧಿತವಾದುದು. ಕಲೆಯ ವಿಸ್ತಾರ ಎಂದರೆ ಇದೇ ಇರಬಹುದೇನೋ. ಅಧ್ಯಯನ ಮಾಡಿದ್ದಷ್ಟು ಇನ್ನಷ್ಟು ಮತ್ತಷ್ಟು ಸೂಕ್ಷ್ಮಗಳು ತೆರೆದುಕೊಳ್ಳುತ್ತವೆ. ಕಲಾವಿದ ಅದನ್ನು ದಾಟಿಸುವ ಮಾಧ್ಯಮದಂತೆ ‌ಕಂಡುಬರುತ್ತಾನೆ.  


ನನಗಂತೂ ಕಲೆಯ ಬಗ್ಗೆ ಇನ್ನಷ್ಟು ಯೋಚನೆಗೆ ಒಳಪಡಿಸುವಂತೆ ಮಾಡಿದ ಈ ‌ಗಾಯನ ‌ಕಾರ್ಯಕ್ರಮ ವಿಶೇಷವಾಗಿ ಕಂಡುಬಂತು. ಕಲಾವಿದರ ಸಂಗೀತದ ಮೇಲಿನ ಹಿಡಿತ, ಸಾಹಿತ್ಯದ ಬಗೆಗಿನ‌ ಅರಿವು, ಸಾಮಾಜಿಕ ಕಾಳಜಿ ನಿಜಕ್ಕೂ ಶ್ಲಾಘನೀಯ. 


ಇಂತಹ ಕಾರ್ಯಕ್ರಮವನ್ನು ‌ಶ್ರೀ ಮಠದಲ್ಲಿ ಆಯೋಜನೆ ಮಾಡಿದ ಎಡನೀರು ಶ್ರೀಗಳ ಯೋಜನೆ, ಯೋಚನೆ ನಿಜಕ್ಕೂ ಸ್ತುತ್ಯರ್ಹ.

-ಮಂಜುಳಾ ಸುಬ್ರಹ್ಮಣ್ಯ

ನಾಟ್ಯರಂಗ, ಪುತ್ತೂರು



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top