|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಲ್ಲುಜ್ಜಲು ಮರೆತರೆ ಆಲ್‍ಝೈಮರ್ಸ್ ಬಂದೀತು ಜೋಕೆ...!!!

ಹಲ್ಲುಜ್ಜಲು ಮರೆತರೆ ಆಲ್‍ಝೈಮರ್ಸ್ ಬಂದೀತು ಜೋಕೆ...!!!



ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳುವರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚುತ್ತದೆ ಎಂಬುದು ನಮಗೆಲ್ಲಾ ತಿಳಿದಿದೆ. ಹಲ್ಲು ಶುಚಿಯಾಗಿದ್ದಲ್ಲಿ ವಸಡಿನ ಆರೋಗ್ಯ ವೃದ್ಧಿಯಾಗಿ ಹಲ್ಲುಗಳು ಗಟ್ಟಿಯಾಗಿ, ನಾವು ತಿಂದ ಆಹಾರ ಸರಿಯಾಗಿ ಪಚನಗೊಂಡು ದೈಹಿಕ ಆರೋಗ್ಯ ವೃದ್ಧಿಸುತ್ತದೆ ಮತ್ತು ಅದರಿಂದ ವ್ಯಕ್ತಿಯ ಮಾನಸಿಕ ವ್ಯಕ್ತಿತ್ವಕ್ಕೆ ಹೊಸ ಮೆರುಗು ನೀಡುತ್ತದೆ. ಹಲ್ಲಿನ ಸ್ವಚ್ಛತೆ ಕಾಪಾಡಿಕೊಳ್ಳದಿದ್ದಲ್ಲಿ ವಸಡಿನ ರೋಗಕ್ಕೆ ನಾಂದಿ ಹಾಡುತ್ತದೆ. ಹಲ್ಲಿನ ಸುತ್ತ ಪಾಚಿ ಕಟ್ಟಿಕೊಂಡು, ಆ ಬಳಿಕ ಅದೇ ದಂತ ಪಾಚಿ ಗಟ್ಟಿಯಾಗಿ ದಂತ ಗಾರೆಯಾಗಿ ಪರಿವರ್ತನೆಯಾಗುತ್ತದೆ. ಈ ದಂತಗಾರೆಯಲ್ಲಿ ಲಕ್ಷಾಂತರ ಬ್ಯಾಕ್ಟೀರಿಯಾಗಳು ಮನೆ ಮಾಡಿ ವಂಶಾಭಿವೃದ್ಧಿ ಮಾಡಿಕೊಂಡು ವಸಡಿನ ಆರೋಗ್ಯ ಹಾಳು ಮಾಡಿ, ಹಲ್ಲಿನ ಸುತ್ತ ಇರುವ ದಂತ ಪೊರೆಯ ರೋಗಕ್ಕೆ ಕಾರಣವಾಗುತ್ತದೆ.


ಕಾಲ ಕಾಲಕ್ಕೆ ಹಲ್ಲನ್ನು ದಂತ ವೈದ್ಯರ ಬಳಿ ಶುಚಿಗೊಳಿಸದಿದ್ದಲ್ಲಿ ಈ ಬ್ಯಾಕ್ಟೀರಿಯಾಗಳು ವಸಡಿನಲ್ಲಿ ಕೀವು ತುಂಬಿಕೊಳ್ಳುವಂತೆ ಮಾಡಿ ‘ಪಯೋರಿಯಾ’ ಎಂಬ ರೋಗಕ್ಕೂ ಕಾರಣವಾಗುತ್ತದೆ ಮತ್ತು ವಿಪರೀತ ಬಾಯಿ ವಾಸನೆ ಬರುವಂತೆ ಮಾಡಿ ವ್ಯಕ್ತಿಯ ಆತ್ಮ ವಿಶ್ವಾಸಕ್ಕೂ ಧಕ್ಕೆ ಬರುವಂತೆ ಮಾಡುತ್ತದೆ. ವಸಡಿನ ಆರೋಗ್ಯ ಹದಗೆಟ್ಟು, ಹಲ್ಲುಗಳು ಅಲುಗಾಡಲು ಆರಂಭವಾಗಿ ಕ್ರಮೇಣ ಹಲ್ಲುಗಳು ತನ್ನಿಂತಾನೇ ಉದುರಿ ಹೋಗುವ ಸಾಧ್ಯತೆಯೂ ಇರುತ್ತದೆ. ಇದರ ಜೊತೆಗೆ ಈ ಬ್ಯಾಕ್ಟೀರಿಯಾದಿಂದ ಬಿಡುಗಡೆಗೊಳ್ಳುವ ವಿಷಕಾರಕ ವಸ್ತುಗಳು ರಕ್ತಕ್ಕೆ ಸೇರಿ, ಚರ್ಮದಲ್ಲಿ ತುರಿಕೆ ಮತ್ತು ಹೃದಯ ಸಂಬಂಧಿ ರೋಗಕ್ಕೆ ಕಾರಣವಾಗುತ್ತದೆ. ಈ ಬಗ್ಗೆ ಹಲವಾರು ಸಂಶೋಧನೆಗಳು ನಡೆದು, ಹಲ್ಲಿನ ಶುಚಿತ್ವ ಕಾಲ ಕಾಲಕ್ಕೆ ದಂತ ವೈದ್ಯರ ಬಳಿ ಮಾಡಿಸಿಕೊಂಡಲ್ಲಿ, ಚರ್ಮ ರೋಗ ಮತ್ತು ಹೃದಯ ಸಂಬಂಧಿ ರೋಗಗಳನ್ನು ತಡೆಗಟ್ಟಬಹುದು ಎಂದು ಸಾಬೀತಾಗಿದೆ.


ಒಟ್ಟಿನಲ್ಲಿ ಪತ್ರಿದಿನ ನಾವು ನಮ್ಮ ಹಲ್ಲುಗಳನ್ನು ಉಜ್ಜುವುದರ ಜೊತೆಗೆ ಪ್ರತಿ ಆರು ತಿಂಗಳಿಗೊಮ್ಮೆ ದಂತ ವೈದ್ಯರ ಬಳಿ ಹೋಗಿ ದಂತ ಶುಚಿತ್ವ ಮಾಡಿಸಿಕೊಂಡಲ್ಲಿ ಹೆಚ್ಚಿನ ಎಲ್ಲಾ ರೋಗಗಳನ್ನು ತಡೆಯಬಹದು ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. 

ಇತ್ತೀಚೆಗೆ ನಡೆದ ಒಂದು ಸಂಶೋಧನೆಯ ಪ್ರಕಾರ ಹಲ್ಲು ಶುಚಿಗೊಳಿಸದಿದ್ದಲ್ಲಿ ಉಂಟಾಗುವ ದಂತ ಪಾಚಿ ಮತ್ತು ದಂತ ಗಾರೆಗಳಲ್ಲಿ ಹೆಚ್ಚು ಕಂಡು ಬರುವ ಪೊರ್‍ಫೈರೋಮೋನಾಸ್ ಜಿಂಜಿವಾಲಿಸ್ ಎಂಬ ಬ್ಯಾಕ್ಟೀರಿಯಕ್ಕೂ, ಆಲ್‍ಝೈಮರ್ಸ್ ರೋಗಕ್ಕೂ ಹತ್ತಿರದ ಸಂಬಂಧವಿದೆ ಎಂದು ತಿಳಿದು ಬಂದಿದೆ.


ಹೆಚ್ಚಿನ ಎಲ್ಲಾ ವಸಡು ಸಂಬಂಧಿ ರೋಗಗಳಲ್ಲಿ ಈ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಕಂಡು ಬರುತ್ತದೆ. ಈ ಬ್ಯಾಕ್ಟೀರಿಯಾದಿಂದ ಬಿಡುಗಡೆಗೊಳ್ಳುವ ಜಿಂಜಿಫೈನ್ಸ್ ಎಂಬ ವಿಷಕಾರಿ ವಸ್ತು ಆಲ್‍ಝೈಮರ್ಸ್ ರೋಗಿಗಳ ಮೆದುಳಿನಲ್ಲಿ ಪತ್ತೆಯಾಗಿದೆ. ಅಲ್‍ಝೈಮರ್ಸ್ ರೋಗದಿಂದ ಸತ್ತ 53 ಮಂದಿ ರೋಗಿಗಳ ಮೆದುಳನ್ನು ಅಟೋಪ್ಸಿ ಮಾಡಿದಾಗ 51 ಮಂದಿಯಲ್ಲಿ ಈ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಬ್ಯಾಕ್ಟೀರಿಯಾದಿಂದ ಬಿಡುಗಡೆಯಾದ ಜಿಂಜಿಫೈನ್ ಎಂಬ ಪ್ರೋಟಿನ್, ರಕ್ತಕ್ಕೆ ಸೇರಿಕೊಂಡು ಬಳಿಕ ಮೆದುಳಿಗೆ ರವಾನೆಯಾಗುತ್ತದೆ. ಈ ಜಿಂಜಿಫೈನ್ ಎಂಬ ವಿಷಕಾರಕ ಪ್ರೋಟಿನ್, ಮೆದುಳಿನ ಮೂಲಭೂತ ಜೀವಕೋಶಗಳಾದ ನ್ಯೂರೋನ್ ಜೀವಕೋಶಗಳನ್ನು ಹಾನಿ ಮಾಡಿ ಅಲ್‍ಝೈಮರ್ಸ್ ರೋಗಕ್ಕೆ ಮುನ್ನುಡಿ ಬರೆಯುತ್ತದೆ.


ಸಾಮಾನ್ಯವಾಗಿ ಆಲ್‍ಝೈಮರ್ಸ್ ರೋಗಿಗಳಲ್ಲಿ ಮೆದುಳಿನ ಜೀವಕೋಶಗಳು ನಾಶವಾದ ಬಳಿಕ ಆ ಜಾಗದಲ್ಲಿ ಅಮೈಲಾಯ್ಡು ಎಂಬ ಪ್ರೋಟಿನ್ ಶೇಖರಣೆಯಾಗುತ್ತದೆ. ಮೆದುಳಿನಲ್ಲಿ ನ್ಯೂರೋನ್‍ಗಳ ಬದಲಾಗಿ ಅಮೈಲಾಯ್ಡು ಪ್ರೋಟಿನ್ ಶೇಖರಣೆಯಾದಾಗ ಮರೆತನ ರೋಗ ಅಥವಾ ಅಲ್‍ಝೈಮರ್ಸ್ ರೋಗ ಬರುವ ಸಾಧ್ಯತೆ ಹೆಚ್ಚಾಗುತ್ತದೆ. ವಸಡು ರೋಗಿಗಳಲ್ಲಿ ಕಂಡು ಬರುವ ಪೋರ್‍ಫೈರಿಮೋನಸ್ ಜಿಂಜಿವಾಲಿಸ್ ಎಂಬ ಬ್ಯಾಕ್ಟೀರಿಯಾ ಅಮೈಲಾಯ್ಡು ಬೀಟಾ, ಎಂಬ ಪ್ರೊಟೀನ್ ಉತ್ಪತ್ತಿಯಾಗಲು ಪ್ರಚೋದಿಸುತ್ತದೆ. ಈ ಅಮೈಲಯ್ಡು ಜೀಟಾ ಪ್ರೋಟಿನ್ ನ್ಯೂರೋನ್‍ಗಳ ಬದಲಾಗಿ ಮೆದುಳಿನಲ್ಲಿ ಶೇಖರಣೆಯಾಗಿ ಅಲ್‍ಝೈಮರ್ಸ್ ರೋಗಕ್ಕೆ ನಾಂದಿ ಹಾಡುತ್ತದೆ. ಈ ಕಾರಣದಿಂದಲೇ ವಿಜ್ಞಾನಿಗಳು ಹಲ್ಲಿನ ಸ್ವಚ್ಛತೆ ಕಾಪಾಡಿಕೊಳ್ಳದಿದ್ದಲ್ಲಿ ಈ ಬ್ಯಾಕ್ಟೀರಿಯಾಗಳ ಸಂಖ್ಯೆ ವೃದ್ಧಿಸಿ ಅಲ್‍ಝೈಮರ್ಸ್ ರೋಗಕ್ಕೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.


ಕೊನೆ ಮಾತು:

ಅಲ್‍ಝೈಮರ್ಸ್ ಎಂಬ ಮರೆಗುಳಿ ರೋಗ ವೈದ್ಯ ವಿಜ್ಞಾನಕ್ಕೆ ಕಬ್ಬಿಣದ ಕಡಲೆಯಾಗಿ ಶತಮಾನಗಳಿಂದ ಕಾಡುತ್ತಿದೆ. ಯಾಕಾಗಿ ಈ ರೋಗ ಬರುತ್ತದೆ ಎಂಬುದು ಇನ್ನೂ ಬ್ರಹ್ಮ ರಹಸ್ಯವಾಗಿಯೇ ಉಳಿದಿದೆ. ವಯಸ್ಸಾದಂತೆ ಎಲ್ಲರೂ ಮರೆಗುಳಿತನಕ್ಕೆ ಜಾರುತ್ತಾರೆ ಮತ್ತು 70 ಶೇಕಡಾ ಮಂದಿ ಅಲ್‍ಝೈಮರ್ಸ್‍ನಿಂದ ಬಳಲುತ್ತಾರೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಇದೊಂದು ಚಿಕಿತ್ಸೆಯಿಂದ ಗುಣಪಡಿಸಲಾಗದ ಮತ್ತು ಪರಿವರ್ತಿಸಲಾಗದ ಖಾಯಿಲೆಯಾಗಿದ್ದು ಈ ರೋಗ ಚಿಕಿತ್ಸೆ ಬಗ್ಗೆ ಹಲವಾರು ವರ್ಷಗಳಿಂದ ಬಹಳಷ್ಟು ಸಂಶೋಧನೆಗಳು ನಡೆಯುತ್ತಾ ಇದೆ. ಈ ನಿಟ್ಟಿನಲ್ಲಿ ಬಾಯಿಯಲ್ಲಿ ಕಂಡು ಬರುವ ವಸಡು ರೋಗಕ್ಕೆ ಕಾರಣವಾಗುವ ಪೋರ್‍ಫೈರಿಮೋನಸ್ ಜಿಂಜಿವಾಲಿಸ್ ಎಂಬ ಬ್ಯಾಕ್ಟೀರಿಯಾಕ್ಕೂ ಈ ಆಲ್‍ಝೈಮರ್ಸ್ ರೋಗಕ್ಕೆ ಸಂಬಂಧ ಇದೆ ಎಂದು ಸಂಶೋಧನೆ ವೈದ್ಯ ಲೋಕದಲ್ಲಿ ಸಂಚಲನವನ್ನೇ ಮೂಡಿಸಿದೆ. ಸರಿಯಾಗಿ ದಿನಕ್ಕೆರಡು ಬಾರಿ ಹಲ್ಲುಜ್ಜಿಕೊಂಡು ಮತ್ತು ಪತ್ರಿ 6 ತಿಂಗಳಿಗೊಮ್ಮೆ ದಂತ ವೈದ್ಯರ ಬಳಿ ಹಲ್ಲು ಶುಚಿತ್ವ ಮಾಡಿಕೊಂಡಲ್ಲಿ ವಸಡು ರೋಗವನ್ನು ಪರಿಣಾಮಕಾರಿಯಾಗಿ ತಡೆಯಬಹದು ಎಂಬ ಸತ್ಯ ಎಲ್ಲರಿಗೂ ತಿಳಿದಿದೆ.


ಒಟ್ಟಿನಲ್ಲಿ ನೀವು ಹಲ್ಲುಜ್ಜುವುದು ಮತ್ತು ಹಲ್ಲು ಶುಚಿಗೊಳಿಸುವುದನ್ನು ಮರೆತರೆ ನೀವು ಮರೆಗುಳಿತನ ರೋಗಕ್ಕೆ ತುತ್ತಾಗಬಹುದು ಎಂಬ ಕಹಿ ಸತ್ಯ ಇತ್ತೀಚಿನ ಸಂಶೋಧನೆಗಳಿಂದ ಸಾಬೀತಾಗಿದೆ. ಅದೇನೇ ಇರಲಿ ಹಲ್ಲುಜ್ಜುವುದು ಮತ್ತು ಹಲ್ಲು ಶುಚಿಗೊಳಿಸುವುದನ್ನು ಕ್ರಮಬದ್ಧವಾಗಿ ಪಾಲಿಸಿದಲ್ಲಿ ಹೆಚ್ಚು ಎಲ್ಲಾ ಹೃದಯ ಸಂಬಂಧಿ, ಚರ್ಮ ಸಂಬಂಧಿ ಮತ್ತು ಮೆದುಳು ಸಂಬಂಧಿ ರೋಗಗಳನ್ನು ತಡೆಗಟ್ಟಬಹುದು ಎಂಬ ಸುದ್ದಿ ಜನರಲ್ಲಿ ಹೊಸ ಆಶಾ ಭಾವನೆಯನ್ನು ಮೂಡಿಸಿದಂತೂ ನಿಜವಾದ ಮಾತು. ಹಾಗಾಗಿ ನಿಮ್ಮ ದಂತ ವೈದ್ಯರು ಹಲ್ಲು ಶುಚಿಗೊಳಿಸಲು ಹೇಳಿದಾಗ ಸುಮ್ಮನೆ ಬಾಯಿ ತೆರದು ಹಲ್ಲು ಶುಚಿಗೊಳಿಸುದರಲ್ಲಿಯೇ ಜಾಣತನ ಅಡಗಿದೆ. ಇಲ್ಲವಾದಲ್ಲಿ ನಿಮಗೂ ವಯಾಸ್ಸಾದಾಗ ಅಲ್‍ಝೈಮರ್ಸ್ ಬರಬಹುದು ಜೋಕೆ!!


-ಡಾ|| ಮುರಲೀ ಮೋಹನ್ ಚೂಂತಾರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم