ಗೋಪಾಲ್ ಗೌಡ- 97431 69508 (ಸಂಜೆ 6 -7)
ಸ್ಯಾಂಪಲ್ ಕೊಟ್ಟು 'ತಿಂದು ನೋಡಿ. ಮೆಚ್ಚುಗೆಯಾದರೆ ನೀವೂ ಮಾಡಿ’ ಎಂದು ಸಹರೈತರಿಗೆ ಹೇಳುವ ಪ್ಲಾನ್ ಇವರದು.
"ಮೈದಾ ಹಿಟ್ಟಿನ ಬದಲು ಇದನ್ನು ಬಳಸಬಹುದು" ಎನ್ನುವುದೇ ಹಾವೇರಿಯ ರೈತ ಗೋಪಾಲ ಗೌಡ ಎಂ. ಬಸನಗೌಡರ್ (40) ಅವರಿಗೆ ದೊಡ್ಡ ಮೆಚ್ಚುಗೆಯ ಅಂಶ. ಪೂರ್ಣಾವಧಿ ಕೃಷಿಕರಾಗಿ ಮಾರ್ಪಾಡಾದ ಈ ನ್ಯಾಯವಾದಿಗೆ ರಟ್ಟೀಹಳ್ಳಿಯ ಮಾವಿನತೋಪಿನಲ್ಲಿ ಮೂರೆಕ್ರೆ ಏಲಕ್ಕಿ ಬಾಳೆಯ ತೋಟವಿದೆ.
"ಫೇಸ್ ಬುಕ್ಕಿನಲ್ಲಿ ಓದುವುದು ಸ್ವಲ್ಪ ಕಾಲ ಆಯಿತು. ಮಾಡಬೇಕು ಎನ್ನುತ್ತಲೇ ದಿನ ಕಳೆಯಿತು. ನಾಲ್ಕು ದಿನದ ಹಿಂದೆ ಮಾಡಿಯೇ ಬಿಟ್ವಿ ನೋಡಿ" ಎನ್ನುತ್ತಾರೆ. ಪತ್ನಿ ಸೌಭಾಗ್ಯ ಪೂರ್ತಿ ಬಾಕಾಹುವಿನಿಂದಲೇ ಚಪಾತಿ ಮಾಡಿದರು. ಮನೆಮಂದಿಗೆಲ್ಲಾ ಇಷ್ಟವಾಯಿತು.
ಪ್ರಯೋಗಶೀಲ ರೈತ ಗೋಪಾಲ ಗೌಡ ಅವರ ಈ ಪ್ರಯೋಗಕ್ಕೆ ಐಸಿಎಆರ್ ತರಳಬಾಳು ಕೇವೀಕೆಯ ವಿಜ್ಞಾನಿ ಸಣ್ಣಗೌಡ್ರ ಪ್ರೇರಣೆಯೂ ಇದೆ. ಚಪಾತಿಯ ನಂತರ ಹೋಳಿಗೆ ಮಾಡಿದರು. ಅದೂ ಕ್ಲಿಕ್. ಮುಂದಿನದು ಬರ್ಫಿ. ಅದೇಕೋ ಗುಲಾಬ್ ಜಾಮೂನ್ ಸರಿಯಾಗಲಿಲ್ಲ. ಇನ್ನೊಮ್ಮೆ ಪ್ರಯತ್ನಿಸಬೇಕು ಎನ್ನುತ್ತಿದ್ದಾರೆ.
ಹೊಸತೇನು ಬಂದರೂ ಅದರ ಪ್ರಯೋಗ ಮಾಡುವುದರಲ್ಲಿ ಗೋಪಾಲ್ ಮುಂದು. ಬಾಕಾಹು ವಿದ್ಯೆ ಫೇಸ್ ಬುಕ್ಕಿನಲ್ಲಿ ಬೆಳಕು ಕಂಡು ಎರಡು ತಿಂಗಳು ಕಳೆಯಿತಷ್ಟೇ. ಬಾಕಾಹು ಮಾಡುವ ದೂರಾಲೋಚನೆಯಿಂದಲೇ ಗೋಪಾಲ್ 300 ಜಿ9 ಬಾಳೆ ಗಿಡ ನೆಟ್ಟು ಆಗಲೇ ಒಂದು ತಿಂಗಳಾಗಿದೆ. ಇದು ಇವರ ನಿರ್ಧಾರ ಮತ್ತು ಅನುಷ್ಠಾನದ ವೇಗದ ಸ್ಯಾಂಪಲ್.
"ಬಾಳೆ ಬೆಳೆಗಾರರಿಗೆ ಇಷ್ಟು ಪ್ರಯೋಜನಕರ ಆದ ಬಾಕಾಹು ತಯಾರಿ ವಿದ್ಯೆ ಹಬ್ಬಿಸಬೇಕು. ಹುಡಿಯ ಕಾಲು ಕಿಲೋ ಸ್ಯಾಂಪಲ್ ಕೊಟ್ಟು 'ತಿಂದು ನೋಡಿ. ಮೆಚ್ಚುಗೆಯಾದರೆ ನೀವೂ ಮಾಡಿ’ ಎಂದು ಸಹರೈತರಿಗೆ ಹೇಳುವ ಪ್ಲಾನ್ ಇವರದು. "ಬರೇ ಬಾಯಿಮಾತಾದರೆ, ಮರೆತು ಹೋಗಬಹುದು. ಹುಡಿಯಿಂದ ತಿಂಡಿ ಮಾಡಿದವ್ರು ಮತ್ತೆ ಮರೆಯೋ ಹಂಗಿಲ್ಲ. ಬಾಕಾಹು ಮಾಡಿಯೇ ಮಾಡ್ತಾರೆ" ಎನ್ನುವುದು ಅವರ ಜಾಣ ಉಪಾಯ.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು