ರಾತ್ರಿಯೂಟಕ್ಕೆ ಬಾಕಾಹು ರೊಟ್ಟಿಯೇ ಖಾಯಂ

Upayuktha
0

 



"ಕಳೆದೊಂದು ತಿಂಗಳಿಂದ ರಾತ್ರಿ ಊಟಕ್ಕೆ ನಮಗೆ ಬಾಕಾಹುವಿನದೇ ರೊಟ್ಟಿ. ರುಚಿಯಲ್ಲೂ ಚೆನ್ನಾಗಿದೆ. ಹೊಟ್ಟೆಯ ಕಡೆಯಿಂದಲೂ ಏನೂ ದೂರು ಇಲ್ಲ" ಎನ್ನುತ್ತಾರೆ ಶಿರಸಿ ತಾಲೂಕಿನ ಸುರಿಮನೆ ವಿ.ಜಿ. ಹೆಗಡೆ ಅವರು.


ವಿ.ಜಿ. ಹೆಗಡೆ ಅವರಿಗೆ ಸಕ್ಕರೆ ಕಾಯಿಲೆ ಇದೆ. ಹೃದಯಸಂಬಂಧಿ ಸಮಸ್ಯೆಯೂ ಇದೆ.  ರಾತ್ರಿ ಜೋಳದ ರೊಟ್ಟಿ ತಿನ್ನುತ್ತಿದ್ದರು. ಈಗ ಅರ್ಧ ಭಾಗ ಬಾಕಾಹು ಸೇರಿಸಿದ ರೊಟ್ಟಿ. ಐದು ರೊಟ್ಟಿ ಇದ್ದರೆ ಗಂಡ ಹೆಂಡಿರು ಖುಷ್. ಅದುವೇ ರಾತ್ರಿಯೂಟ.


ಇವರು ಡ್ರೈಯರ್ ಕೊಂಡುಕೊಂಡಿದ್ದೂ ಈಚೆಗೇನೇ. ಹುಳಗೋಳ ಸೊಸೈಟಿಯ ಮೂಲಕ. 45,000 ರೂ. ಬೆಲೆಯ ಎಲೆಕ್ಟ್ರಿಕ್ ಡ್ರೈಯರ್. ಬಾಳೆಗೊನೆ ಕೊಯ್ಲು ಮಾಡುವಾಗ ಮೆಟ್ಲಿ ಜಾತಿಯದರಲ್ಲಿ ಹಲವು ಕಾಯಿಗಳು ಒಡೆದಿರುತ್ತವೆ. ಅದರಿಂದಲೇ ಬಾಕಾಹು ಮಾಡಿಕೊಂಡಿದ್ದಾರೆ.


"ಬಾಕಾಹು ತಯಾರಿ ತುಂಬ ರೈತಪರ ಕೆಲಸ", ಹೆಗಡೆ ಆತ್ಮವಿಶ್ವಾಸದಿಂದ ಹೇಳುತ್ತಾ ಅದರ ವಿಶ್ಲೇಷಣೆಯನ್ನೂ ಮಾಡುತ್ತಾರೆ. "ಕರಿ ಬಾಳೆಗೆ ಜುಲೈಯಿಂದ ಅಕ್ಟೋಬರ್ ವರೆಗೆ. ಒಳ್ಳೆ ಬೆಲೆ ಅಂದರೆ ಕಿಲೋಗೆ 14- 18 ರೂಪಾಯಿ ಸಿಗುತ್ತದೆ. ಮಾರ್ಚ್ ನಂತರ ಮಾವಿನಹಣ್ಣು ಬರತೊಡಗಿತೋ, ಬೆಲೆ ಇಳಿಯುತ್ತದೆ. ಆರೆಂಟು ರೂಪಾಯಿ ಸಿಗುತ್ತದಷ್ಟೇ. ಅಂತೂ ಇಂತೂ ’ಅಡ್ಡಿಯಿಲ್ಲ’ ಎನ್ನುವ ಬೆಲೆ ಸಿಗುವುದು ವರ್ಷಾರ್ಧ ಮಾತ್ರ. ಉಳಿದ ಅರ್ಧ ವರ್ಷ ಇಳಿಬೆಲೆಯೇ."


"ಅಂಥ ಕಡಿಮೆ ಬೆಲೆಗೆ ಕೊಡೋದಕ್ಕಿಂತ ಹಿಟ್ಟು ಮಾಡೋದೇ ಉತ್ತಮ. ಒಳ್ಳೆ ಮಾರುಕಟ್ಟೆ ಇದ್ದಾಗಲೂ ಹಾಪ್ ಕಾಮ್ಸಿನಲ್ಲಿ ಸಿಪ್ಪೆ ಕಪ್ಪಾದ ಗೊನೆಯನ್ನು ಸೆಕೆಂಡ್ಸ್ ಮಾಡಿ ಅರ್ಧ ದರ ಕೊಡುತ್ತಾರೆ. ಇಂಥವನ್ನು ಹಿಟ್ಟು ಮಾಡಲು ಏನೇನೂ ಅಡ್ಡಿಯಿಲ್ಲ.  ನಮಗಿಬ್ಬರಿಗೂ ಬಾಕಾಹು ರೊಟ್ಟಿಯಿಂದಾಗಿ ಅಜೀರ್ಣವೂ ಆಗಿಲ್ಲ. ಮೋಶನ್ ಕೂಡಾ ಸಲೀಸಾಗಿಯೇ ಆಗುತ್ತೆ. ನಮಗೆ ಹಿಟ್ಟು ಮಾಡಿ ಮಾರುವ ಉದ್ದೇಶ ಇಲ್ಲ. ಆದರೆ ಮನೆಮಟ್ಟಿಗೆ ಇನ್ನು ಸದಾ ಮಾಡಿಕೊಳ್ತೇವೆ "ಎನ್ನುತ್ತಾರೆ.

-ವಿ.ಜಿ.ಹೆಗಡೆ- 94821 13265 (ರಾತ್ರಿ 7- 8)


-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top