ಅಜ್ಜಪ್ಪ ಕುಲಗೋಡು ಬೆಳಗಾವಿ ಜಿಲ್ಲೆಯ ಯುವ ಸಾವಯವ ಕೃಷಿಕರು.ಕೊರೋನಾ ಸಂಕಟದ ನಡುವೆ ಬಾಳೆಕಾಯಿ ಕೊಳ್ಳುವವರೇ ಇಲ್ಲದಾಯಿತು. ಆಗ ಇವರು ತಲೆ ಓಡಿಸಿದರು. ಮಾವಿನಕಾಯಿಯನ್ನು ಮಾಡೋ ಹಾಗೆ ಇದನ್ನೂ ಪುಡಿ ಮಾಡಿದರೆ?
ಗೆಳೆಯರು ಕೊಟ್ಟ ಬಾಳೆಗೊನೆಗಳಿಂದ ಆರಂಭವಾಯಿತು ಪ್ರಯೋಗ. ಕಳೆದ ಒಂದು ವರ್ಷಗಳಲ್ಲಿ ಈ ಕುಟುಂಬ ಹಲವು ಸುತ್ತಿನ ಬಾಕಾಹು (ಬಾಳೆಕಾಯಿ ಹುಡಿ / ಹಿಟ್ಟು) ತಯಾರು ಮಾಡಿದೆ.
ಡ್ರೈಯರ್ ಇಲ್ಲ. ದೊಡ್ಡ ಪ್ರಮಾಣದ ಪುಡಿ ಮಾಡುವ ಯಂತ್ರ ಇಲ್ಲ. ತಾರಸಿಯ ಬಿಸಿಲಲ್ಲಿ ಒಣಗಿಸಿ, ಗಿರಣಿಗೊಯ್ದು ಹುಡಿ ಮಾಡಿಸಿ ತಂದು ಮಾರುತ್ತಿದ್ದಾರೆ. ಕೊರೋನಾ ಕಾರಣದಿಂದ ಒಳ್ಳೆ ಮಾರಾಟಾವಕಾಶವಿದ್ದ ಸಾವಯವ ಸಂತೆಯೂ ನಡೆಯುತ್ತಿಲ್ಲ.
ಮನೆಮಂದಿ ಬೆಳೆದ ಸಾವಯವ ತರಕಾರಿಯ ಮಾರಾಟದ ಜವಾಬ್ದಾರಿ ತಾಯಿ ಪಾರ್ವತವ್ವನದು. ನೇಕಾರರ ಪೇಟೆಯಲ್ಲಿ ಇವರು ಬುಟ್ಟಿ ಇಟ್ಟುಕೊಂಡು ಮಾರಾಟ ಮಾಡುತ್ತಾರೆ. ವಾರದ ಒಂದೆರಡು ದಿನ ನಿಶ್ಚಿತ ಖಾಯಂ ಗ್ರಾಹಕರ ಮನೆ ಬಾಗಿಲಿಗೆ ಪೂರೈಕೆಯೂ ಇದೆ. ಹೀಗೆ ಹೋಗುವಾಗಲೆಲ್ಲಾ ತರಕಾರಿ ಜತೆ ಬಾಕಾಹು ಪ್ಯಾಕೆಟ್ಟುಗಳೂ ಇರುತ್ತವೆ ಬುಟ್ಟಿಯಲ್ಲಿ. ಹಿಂದೆಲ್ಲಾ ನಡೆದೇ ಹೋಗುತ್ತಿದ್ದರು! ಈಗ ಮಗಂದಿರು ಬೈಕಿನ ಮೇಲೆ ಬೇಕಾದಲ್ಲಿಗೆ ಡ್ರಾಪ್ ಮಾಡುತ್ತಾರೆ.
"ನಮ್ಮ ಬಳಿ ಅರಿಶಿನ ಹುಡಿಯಂತಹ ಇನ್ನೂ ಹಲವು ಸಾವಯವ ಉತ್ಪನ್ನಗಳಿವೆ. ಬಾಕಾಹು ಅಥವಾ ಇತರ ಉತ್ಪನ್ನ ಆದೇಶದ ಮೇರೆಗೆ ಲಾರಿ / ಕೊರಿಯರುಗಳ ಮೂಲಕವೂ ಕಳಿಸಬಹುದು" ಎನ್ನುತ್ತಾರೆ ಅಜ್ಜಪ್ಪ ಕುಲಗೋಡು.
ಈ ಕುಟುಂಬ ಈ ವರೆಗೆ ಮನೆಯಲ್ಲೇ ಉತ್ಪಾದಿಸಿ ಮಾರಿದ ಬಾಳೆಕಾಯಿ ಹುಡಿ ಹತ್ತಿರ ಹತ್ತಿರ ಅರ್ಧ ಟನ್! ಆಗಸ್ಟ್ ತಿಂಗಳ ಅಡಿಕೆ ಪತ್ರಿಕೆ ಅಜ್ಜಪ್ಪ ಕುಟುಂಬದ ಬಾಕಾಹು ಉಪ ಉದ್ದಿಮೆಯ ಬಗ್ಗೆ ಸವಿವರವಾದ ಮುಖಪುಟ ಲೇಖನ ಪ್ರಕಟಿಸಿದೆ.
ಅಜ್ಜಪ್ಪ ಕುಲಗೋಡು - 90089 77319
- ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
ನೇರ ಅಡಿಕೆ ಪತ್ರಿಕೆ ಚಂದಾ ಮಾಡಲು- www.adikepatrike.com ;
ಇನ್ನಿತರ ಚಂದಾ ವಿಧಾನ ವಿವರಗಳಿಗೆ ವಾಟ್ಸಪ್ (80731 40917) ಮಾಡಿ.
Key Words: Banana Flour, Banana Powder, Bakahu, Plantain- Flour, ಬಾಕಾಹು, ಬಾಳೆಕಾಯಿ ಹುಡಿ, ಬಾಕಾಹು ಆಂದೋಲನ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ