ಗಡಿನಾಡಾದ ಕಾಸರಗೋಡಿನವರಿಗೆ ಇಂದು ತ್ರಿಶಂಕು ಸ್ಥಿತಿ. ತಮ್ಮ ಯಾವುದೇ ಅಗತ್ಯಗಳಿಗೂ ಕರ್ನಾಟಕವನ್ನು ಅವಲಂಬಿಸಿರುವ ಗಡಿನಾಡ ಜನತೆಯ ಇಂದಿನ ಪರಿಸ್ಥಿತಿ ತುಂಬಾ ಕಠಿಣವಾಗಿದೆ. ವೈದ್ಯಕೀಯ ಸೌಲಭ್ಯ, ಶೈಕ್ಷಣಿಕ ಸೌಲಭ್ಯಗಳ ಕೊರತೆಯನ್ನು ಅನುಭವಿಸುತ್ತಿರುವ ಕಾಸರಗೋಡಿನ ಜನತೆಗೆ ಕರ್ನಾಟಕವಲ್ಲದೆ ಅನ್ಯ ಪರಿಹಾರವಿಲ್ಲ.
ಗಡಿ ದಾಟಬೇಕೆಂದರೆ ಎಪ್ಪತ್ತೆರಡು ಗಂಟೆ ಒಳಗಿನ ಕೋವಿಡ್ ಪರೀಕ್ಷೆಯ ವರದಿ ಕಡ್ಡಾಯ. ಆದರೆ ಇಲ್ಲಿ ಟೆಸ್ಟ್ ಗೆಂದು ಹೋದರೆ ವರದಿ ಬರುವುದು ಮೂರು ದಿನದ ನಂತರ. ಅಷ್ಟರಲ್ಲಿ ಅದರ ಅವಧಿ ಮುಗಿದಿರುತ್ತದೆ. ಅಗತ್ಯ ಸಂದರ್ಭದಲ್ಲಿ ಬರದ ವರದಿಯಿಂದಾಗಿ ಎಷ್ಟೋ ಅವಕಾಶಗಳು ಕೈ ತಪ್ಪಿ ಹೋಗುತ್ತಿದೆ. ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸಿದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಾಗದೆ ನಿರಾಸೆ ಪಡುವಂತಾಗಿದೆ.
ಹಾಗೂ ಹೀಗೂ ಎಲ್ಲಾ ನಿಯಮಗಳನ್ನು ಪಾಲಿಸಿ ಪರೀಕ್ಷಾ ಕೇಂದ್ರವನ್ನು ತಲುಪಿದರೂ ಕೇರಳದವರೆಂಬ ಕಾರಣಕ್ಕೆ ಅವಕಾಶ ನಿರಾಕರಿಸಲಾಗುತ್ತಿದೆ. ಕೇರಳದಿಂದ ಹೋಗಿ ಒಂದು ವಾರಗಳ ಕಾಲ ಕ್ವಾರನ್ಟೈನ್ ಮಾಡಿ ಪರೀಕ್ಷೆಗೆ ಹಾಜರಾಗಬೇಕೆಂಬ ನಿಯಮ. ಆದರೆ ಹಾಸ್ಟೆಲ್ನಲ್ಲಿ ನಿಲ್ಲುವಂತಿಲ್ಲ. ಕೊರೋನಾ ಭಯದಿಂದ ಕರ್ನಾಟಕ ದಲ್ಲಿ ನೆಂಟರಮನೆಗೆ ಹೋಗುವಂತಿಲ್ಲ. ಕ್ವಾರಂಟೆೃನ್ ಮಾಡುವುದು ಎಲ್ಲಿ ಎಂಬುದಕ್ಕೆ ಉತ್ತರವಿಲ್ಲ. ಒಟ್ಟಾರೆಯಾಗಿ ವಿದ್ಯಾರ್ಥಿಗಳ ಭವಿಷ್ಯ ಈಗ ಕತ್ತಲಲ್ಲಿ.
ಎರಡು ವ್ಯಾಕ್ಸಿನ್ ಆದರೂ ಕರ್ನಾಟಕಕ್ಕೆ ಪ್ರವೇಶವಿಲ್ಲ ಎಂದಾದಲ್ಲಿ ವ್ಯಾಕ್ಸಿನ್ ಪಡೆದುಕೊಳ್ಳುವ ಅಗತ್ಯವೇನು ಎಂಬ ಪ್ರಶ್ನೆ ಜನಸಾಮಾನ್ಯರ ಮನದಲ್ಲಿ ಮೂಡಿದರೂ ತಪ್ಪಿಲ್ಲ ಎನಿಸುತ್ತದೆ. ಕೊರೋನಾ ಮಾಹಾಮಾರಿಯ ಹೆಸರಿನಲ್ಲಿ ಜನರ ಹಕ್ಕುಗಳನ್ನು ಕಸಿದುಕೊಳ್ಳುವುದು ಎಷ್ಟು ಸರಿ? ನಿಯಮಗಳನ್ನು ಪಾಲನೆಮಾಡಿಕೊಂಡು ಬರುವಂತಹ ಗಡಿನಾಡ ಜನತೆಯ ಪಾಡನ್ನು ಗಮನಿಸುವವರು ಯಾರಾದರೂ ಇರುವರೋ ಎಂದು ಕಾದು ನೋಡಬೇಕಾಗಿದೆ.
-ಗಾಯತ್ರಿ ಪಳ್ಳತ್ತಡ್ಕ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ