ಮೌನಕ್ರಾಂತಿಯ ಹರಿಕಾರನ 106ನೇ ಜನ್ಮದಿನವಿಂದು

Upayuktha
0


ಸಾಮಾಜಿಕ ಸಮಾನತೆ ಹಿತದೃಷ್ಟಿಯಿಂದ ಕಡು ಬಡವರಿಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಬಡವರ ಬದುಕಿನಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿ ಹಿಂದುಳಿದಳಿದ ವರ್ಗಗಳ ಹರಿಕಾರ ಎಂದೇ ಖ್ಯಾತರಾದವರು ಕನಾ೯ಟಕದ ಮಾಜಿ ಮುಖ್ಯಮಂತ್ರಿ  ಡಿ.ದೇವರಾಜ ಅರಸು. ಅಸಾಧ್ಯವಾದ ಸಾಧನೆಗಳನ್ನು ಮೌನವಾಗಿ ಸಾಧಿಸಿದ ಮೌನಕ್ರಾಂತಿಯ ಹರಿಕಾರನ 106ನೇ ಜನ್ಮದಿನವಿಂದು.


ಕರ್ನಾಟಕ ರಾಜ್ಯದಲ್ಲಿ ಎರಡು ಬಾರಿ ಅಧಿಕಾರದ ಚುಕ್ಕಾಣಿ ಹಿಡಿದು ಜನತೆಯ ಅಭಿವೃದ್ಧಿಗೆ ಶ್ರಮ ಪಟ್ಟ ಡಿ ದೇವರಾಜ ಅರಸು ಆಗಸ್ಟ್ 20, 1915ರಂದು ಮೈಸೂರಿನ ಕಲ್ಲಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ದೇವರಾಜ ಅರಸು ಮತ್ತು ತಾಯಿ ದೇವೀರಮ್ಮಣ್ಣಿ.

   

ಸಾಧಕರಾಗಿ ಅರಸು....

ದೇವರಾಜ ಅರಸು ಕನಾ೯ಟಕ ರಾಜಕಾರಣ ಕಂಡ ವಿಶಿಷ್ಟ ರಾಜಕಾರಣಿ. ಭೂ ಸುಧಾರಣೆ ಹಾಗೂ ಹಿಂದುಳಿದ ವರ್ಗಗಳಿಗೆ ಅಧಿಕಾರ ಒದಗಿಸುವ ಮೂಲಕ ಭಾರತದ ರಾಜಕಾರಣದಲ್ಲೂ ಪ್ರಮುಖ ಸ್ಥಾನ ಗಳಿಸಿದ್ದಾರೆ.


1972ರ ಮಾರ್ಚ್ 20 ರಿಂದ 1980 ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ, ಸಾಮಾಜಿಕ ಕ್ರಾಂತಿಯ  ಹರಿಕಾರರಾಗಿ ಇತಿಹಾಸದ  ಪುಟಗಳಲ್ಲಿ ಗುರುತಿಸಲ್ಪಟ್ಟವರು ಅರಸರು. ಉಳುವವನೆ ಹೊಲದೊಡೆಯ ಎಂಬ ಮಂತ್ರದೊಂದಿಗೆ ಅವರು ಜಾರಿಗೆ ತಂದ   ಭೂಸುಧಾರಣ ಕಾಯ್ದೆ, ರಾಜ್ಯದ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ  ಸಮುದಾಯಗಳಿಗೆ ಸೇರಿದ ಅನೇಕರಿಗೆ ಭೂಮಿ ದಕ್ಕುವಂತೆ ಮಾಡಿದಲ್ಲದೆ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅವರುಗಳು ಮುಖ್ಯವಾಹಿನಿಗೆ ಬರಲು ನೇರವಾಯಿತು.


ಮೂಲತಃ ಕೃಷಿ ಮನೆತನದವರಾಗಿದ್ದ ದೇವರಾಜ ಅರಸು ರಾಜಕಾರಣವನ್ನು ಹುಡುಕಿಕೊಂಡು ಹೋದವರಲ್ಲ. ರಾಜಕಾರಣವೇ ಅವರನ್ನು ಹುಡುಕಿಕೊಂಡು ಹೋಯಿತು ಎಂದರೆ ತಪ್ಪಾಗಲಾರದು. ಅಧಿಕಾರಕ್ಕೆ ಬಂದಾಗ ಯಾವುದೇ ರೀತಿಯ ಆಮಿಷಗಳಿಗೆ ಬಲಿಯಾಗದೆ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಸಿದ್ಧರಾದರು.


ಕನಾ೯ಟಕದಲ್ಲಿ ಹಾಸ್ಟೆಲ್ ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಿ ಬಡ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಮೇಲ್ಪಂಕ್ತಿ ಹಾಕಿದ ಮೇಧಾವಿ ಮುಖ್ಯಮಂತ್ರಿಯಾಗಿ ಗುರುತಿಸಿಕೊಂಡವರು ದೇವರಾಜ ಅರಸು. ಕನಾ೯ಟಕ ರಾಜ್ಯದ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ನಿಮಿ೯ಸಿದ ವಸತಿ ನಿಲಯಗಳಲ್ಲಿ ಇಂದಿಗೂ ಹಲವಾರು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಂದುವರಿಸಿಕೊಂಡು, ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ತಯಾರಾಗುತ್ತಿದ್ದಾರೆ.


ಇವರ ಸಾಧನೆಯ ಗರಿಗೆದರಿದ ಇನ್ನೊಂದು ಮಹತ್ವದ ಘಟ್ಟ ಎಂದರೆ ವಿಶಾಲ ಮೈಸೂರ್ ರಾಜ್ಯ ಎಂದು ಹೆಸರರಾಗಿದ್ದ ರಾಜ್ಯವನ್ನು ಕರ್ನಾಟಕ ಎಂದು ಮರು ನಾಮಕರಣ  ಮಾಡಿದ್ದು. ಎಲ್ಲರಿಗೂ ಒಪ್ಪಿಗೆಯಾಗುವ ಹೆಸರನ್ನೇ ಸೂಚಿಸಿ, ಕನ್ನಡಿಗರನ್ನು ಒಂದುಗೂಡಿಸಲು ಅರಸುರವರು ಪಟ್ಟ ಶ್ರಮ ಅಮೋಘವಾಗಿದೆ.

     

ನಮ್ಮ ನಾಡಿನ ಸಾಮಾಜಿಕ, ಶಿಕ್ಷಣ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಪರಿವರ್ತನೆಯ ಬಯಕೆಯನ್ನು ಪ್ರಜ್ಞಾಪೂರ್ವಕವಾಗಿ ಸೃಷ್ಟಿಸಿದವರು  ಡಿ. ದೇವರಾಜು ಅರಸು  ಅವರು. ಕನ್ನಡನಾಡಿನ ಜನಜೀವನದ ಮೇಲೆ ಅವರು ಬೀರಿದ ಪ್ರಭಾವ ನಿರಂತರ ಸ್ಮರಣಯೋಗ್ಯ. ಎಂಟು ವರ್ಷಗಳ ಸುದೀರ್ಘ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಅರಸು ಇಟ್ಟ ದಿಟ್ಟ ಹೆಜ್ಜೆಗಳು ಭವಿಷ್ಯದ ಜನಾಂಗವನ್ನೇ  ಬದಲಾಯಿಸಲು ನಾಂದಿಯಾದವು. ದುರ್ಬಲ ವರ್ಗದವರಲ್ಲಿ ಸ್ವಾಭಿಮಾನ ಹುಟ್ಟಿಸಿ ಅವರಿಗೆ ಆರ್ಥಿಕ ಸ್ವಾವಲಂಬನೆ ಒದಗಿಸಿದ ಅರಸು ಯುಗಪುರುಷರೆಂದೆನಿಸಿದ್ದಾರೆ. ಈ ನಾಡಿನ ಮಹಾನ್ ಚೇತನರಲ್ಲಿ ಅರಸರ  ವ್ಯಕ್ತಿತ್ವ ವಿಶಿಷ್ಟವಾದದ್ದು. ಅವರಲ್ಲಿ ರೈತರ ಆತ್ಮಭಿಮಾನವಿತ್ತು, ಶತ್ರುವನ್ನೂ ಪ್ರೀತಿಸುವ ಮಾನವ ಪ್ರೇಮವಿತ್ತು, ಎಡವಿದ್ದನ್ನು ಎದುರಿಸಿ ಮುಂಬರುವ ಗುಣವಿತ್ತು, ಅವರು ದುಡಿದು ತಿಂದವರು, ಕೊಟ್ಟು ಬಾಳಿದವರು, ಸಾಧಿಸಿ ಶ್ರೇಯಸ್ಸು ಗಳಿಸಿದವರು, ದನಿ ಇಲ್ಲದವರ ಬದುಕಿಗೆ ದನಿಯಾದವರು, ಪರಿವರ್ತನೆಯ ಹರಿಕಾರರಾಗಿ ಯಶಸ್ಸು ಕಂಡ ಧೀಮಂತ ನಾಯಕನಿಗೆ ಗೌರವದ ನಮನಗಳು.


-ಸರೋಜ ಪಿ ಜೆ ದೋಳ್ಪಾಡಿ

ದ್ವಿತೀಯ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಪದವಿ ಕಾಲೇಜು ಪುತ್ತೂರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top