ದಕ್ಷಿಣ ಕನ್ನಡ ಜಿಲ್ಲೆ ಮಿಶ್ರ ಕೃಷಿಯ ಆಡುಂಬೊಲ. ಪ್ರಧಾನ ಕೃಷಿಗಳಾದ ಅಡಿಕೆ, ತೆಂಗಿನ ಜತೆಗೆ ಬಾಳೆ, ಕಾಳುಮೆಣಸು, ಕೊಕ್ಕೊ ಇತ್ಯಾದಿಗಳನ್ನು ಬೆಳೆಯುವುದು ಸರ್ವವೇದ್ಯ. ಆದರೆ ಉಪ ಬೆಳೆಗಳಿಂದ ಕೃಷಿಕರು ಗಳಿಸುವ ಆದಾಯ ಮತ್ತು ಅದರ ಕುರಿತಾದ ಅವರ ಆಸಕ್ತಿ ಭಿನ್ನವಾಗಿದೆ.
ಉದಾಹರಣೆಗೆ; ಜಿಲ್ಲೆಯ ಹೆಚ್ಚಿನ ಅಡಿಕೆ ಕೃಷಿಕರು ಕಾಳುಮೆಣಸಿನ ಕೃಷಿ, ಕೊಯ್ಲು ಮತ್ತು ಅದರಿಂದ ದೊರೆಯುವ ಆದಾಯದ ಬಗ್ಗೆ ಆಸ್ಥೆ ವಹಿಸುತ್ತಾರೆ. ಬಿಟ್ಟರೆ, ನಂತರದ ಆದ್ಯತೆಗಳು ತೆಂಗು ಮತ್ತು ಬಾಳೆ. ಇಷ್ಟೊಂದು ಆಸಕ್ತಿ ಕೊಕ್ಕೊದಂಥ ಉಳಿದ ಉಪ ಬೆಳೆಗಳ ಬಗ್ಗೆ ಅಷ್ಟಾಗಿ ಕಂಡುಬರುವುದಿಲ್ಲ (ಇದಕ್ಕೆ ಕೆಲವು ಅಪವಾದಗಳು ಇರಬಹುದು).
ಅಡಿಕೆ ಮರಗಳ ಸಾಲಿನ ನಡುವೆ ಅಲ್ಲೊಂದು, ಇಲ್ಲೊಂದು ಕಾಣಿಸುವ ಕೊಕ್ಕೊ ಗಿಡಗಳಿಂದ ಸಿಕ್ಕ ಅಷ್ಟಿಷ್ಟು ಕಾಯಿಗಳ ಬೀಜ ತೆಗೆದು ಹಾಗೆಯೇ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಿದೆ. ಇದರಿಂದ ಬಹು ದೊಡ್ಡ ಆದಾಯವೇನೂ ಕೃಷಿಕರಿಗೆ ದೊರೆಯದು. ಆದರೆ, ತುಸು ಹೆಚ್ಚಿನ ಶ್ರಮ ವಹಿಸಿದರೆ, ಕಾಳಜಿ ವಹಿಸಿ ಕೊಕ್ಕೊ ಬೀಜವನ್ನು ಸಂಸ್ಕರಿಸಿ ಮಾರಾಟ ಮಾಡುವ ಮನ ಮಾಡಿದರೆ ಅದರಿಂದಲೂ ಆದಾಯ ವೃದ್ಧಿಸಿಕೊಳ್ಳಬಹುದು.
ಕೊಕ್ಕೊ ಬೀಜಗಳನ್ನು ಸಂಸ್ಕರಿಸುವುದು ಹೇಗೆ? ಅದು ಯಾಕೆ ಬಳಕೆಯಾಗುತ್ತದೆ? ಸಂಸ್ಕರಿಸಿದ ಕೊಕ್ಕೊ ಬೀಜದಿಂದ ಎಷ್ಟು ಆದಾಯ ದೊರೆಯಬಹುದು ಎಂಬ ಕಿರು ಮಾಹಿತಿ ಕಟ್ಟಿಕೊಡಲು ಇಲ್ಲಿ ಯತ್ನಿಸಲಾಗಿದೆ.
ಮಾರುಕಟ್ಟೆಯಲ್ಲಿ ಲಭ್ಯವಿರುವ ತರಾವಳಿಯ ಚಾಕೊಲೇಟ್‌ಗಳ ಉತ್ಪಾದನೆಯಲ್ಲಿ ಬಳಕೆಯಾಗುವ ಮೂಲ ದ್ರವ್ಯ (ಚಾಕೊಲೇಟ್ ಮಾಸ್) ಲಭಿಸುವುದು ಕೊಕ್ಕೊ ಸಂಸ್ಕರಣೆಯಿಂದ. ಕೊಕ್ಕೊ ಬೀಜದ ಸಂಸ್ಕರಣೆ ಮಾಡಿ ಚಾಕೊಲೇಟ್ ಮಾಸ್ ತೆಗೆಯುತ್ತಾರೆ. ಈ ಮಾಸ್‌ನಿಂದ ಚಾಕೊಲೇಟ್ ತಯಾರಿಸಲಾಗುತ್ತದೆ. ಚಾಕೊಲೇಟ್ ಮಾಸ್ ತಯಾರಿಸಲು ಕೊಕ್ಕೊ ಬೀಜಗಳನ್ನು ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಸ್ಕರಣೆಗೆ ಒಳಪಡಿಸಬೇಕು.
ಪ್ರಾಥಮಿಕ ಹಂತದ ಸಂಸ್ಕರಣೆಯನ್ನು ಕೃಷಿಕರೇ ಮಾಡಬಹುದಾಗಿದ್ದು, ಇದರಿಂದ ಹೆಚ್ಚು ಆದಾಯ ಪಡೆಯಬಹುದು. ದ್ವಿತೀಯ ಹಂತದ ಸಂಸ್ಕರಣೆ ಚಾಕೋಲೇಟ್ ಫ್ಯಾಕ್ಟರಿಗಳಲ್ಲಿ ಅಥವಾ ಸಂಸ್ಕರಣಾ ಘಟಕಗಳಲ್ಲಿ ನಡೆಯುತ್ತದೆ.
ಸಾಮಾನ್ಯವಾಗಿ ಕೊಕ್ಕೊ ಕಾಯಿಗಳನ್ನು ಕೊಯ್ದು ಅದರ ಬೀಜಗಳನ್ನು ಬೇರ್ಪಡಿಸಿ ಹಸಿಯಾಗಿಯೇ ಮಾರಾಟ ಮಾಡಲಾಗುತ್ತದೆ. ಒಂದು ಕೆ.ಜಿ. ಹಸಿ ಬೀಜಕ್ಕೆ ಸುಮಾರು 40-60 ರೂಪಾಯಿ ದೊರೆಯುತ್ತದೆ (ತುಸು ಹೆಚ್ಚು ಕಡಿಮೆ ಇರಬಹುದು). ಆದರೆ, ಹಸಿ ಬೀಜಗಳನ್ನು ಪ್ರಾಥಮಿಕ ಸಂಸ್ಕರಣೆಗೆ ಒಳಪಡಿಸಿ ಮಾರಾಟ ಮಾಡಿದರೆ 1ಕೆ.ಜಿ. ಒಣ ಬೀಜಕ್ಕೆ ಸುಮಾರು 160-180 ರೂಪಾಯಿವರೆಗೆ ಪಡೆಯಬಹುದು. ಆದರೆ, ಗುಣಮಟ್ಟ ಕಾಯ್ದುಕೊಳ್ಳುವುದು ಅಗತ್ಯ.
ಕೊಕ್ಕೊ ಬೀಜದ ಪ್ರಾಥಮಿಕ ಸಂಸ್ಕರಣೆ ಹೇಗೆ?
ಪ್ರಾಥಮಿಕ ಸಂಸ್ಕರಣೆಯಲ್ಲಿ ಎರಡು ಭಾಗಗಳು. ಮೊದಲಿಗೆ ಹುಳಿ ಬರಿಸುವಿಕೆ, ನಂತರ ಒಣಗಿಸುವಿಕೆ. ಕೊಕ್ಕೊ ಸಂಸ್ಕರಣೆಯಲ್ಲಿ ಹುಳಿ ಬರಿಸುವಿಕೆ ಬಹು ಮುಖ್ಯವಾದ ಭಾಗ. ಹುಳಿ ಬರಿಸುವಿಕೆಯು ಚಾಕೊಲೇಟ್‌ನ ಸುವಾಸನೆ, ರುಚಿ ಮುಂತಾದ ಗುಣಲಕ್ಷಣಗಳನ್ನು ಹೆಚ್ಚಿಸುತ್ತದೆ.
ಹಸಿ ಕೊಕ್ಕೊ ಬೀಜಗಳು ಬಿಳಿ ಬಣ್ಣದ ಲೋಳೆ ಪದರದಿಂದ ಕೂಡಿರುತ್ತವೆ. ಹುಳಿ ಬರಿಸುವಿಕೆಯ ಸಂದರ್ಭದಲ್ಲಿ ಜೈವಿಕ ಹಾಗೂ ರಾಸಾಯನಿಕ ಕ್ರಿಯೆಯಿಂದ ಈ ಲೋಳೆ ಪದರ ಮಾಸಿ ಹೋಗುತ್ತದೆ.
ಹಸಿ ಬೀಜಗಳನ್ನು ಸಡಿಲವಾಗಿ ಗೋಣಿ ಚೀಲದಲ್ಲಿ ಅಥವಾ ಬಟ್ಟೆಯಲ್ಲಿ ಕಟ್ಟಿ ಎತ್ತರದ ಜಾಗದಲ್ಲಿ ಇರಿಸಬೇಕು. ಮೊದಲ ದಿನ ರಸ ಹರಿದು ಹೋಗಲು ಅನುವು ಮಾಡಿಕೊಡಬೇಕು. ಮೂರನೆಯ ಮತ್ತು ಐದನೆಯ ದಿನ ತೆಗೆದು ಚೆನ್ನಾಗಿ ಮಿಶ್ರಣ ಮಾಡಿ ಪುನಃ ಅದೇ ಸ್ಥಿತಿಯಲ್ಲಿ ಇಡಬೇಕು. ಸಂಪೂರ್ಣವಾಗಿ ಹುಳಿಯಾಗಲು 4-6 ದಿನಗಳು ಬೇಕಾಗುತ್ತವೆ. ಏಳನೆಯ ದಿನ ಬೀಜಗಳನ್ನು ಹೊರತೆಗೆದು ಒಣಗಿಸಬೇಕು. ಸಾಮಾನ್ಯವಾಗಿ ಬಿಸಿಲಿನಲ್ಲಿ 7-10 ದಿನಗಳಲ್ಲಿ ಕೊಕ್ಕೊ ಬೀಜಗಳು ಒಣಗುತ್ತವೆ. ಚೆನ್ನಾಗಿ ಒಣಗಿದ ಬೀಜಗಳನ್ನು ಮುಷ್ಟಿಯಲ್ಲಿ ಹಿಡಿದು ಅಮುಕಿದಾಗ ಬಿರಿಯುವಂತೆ ಶಬ್ದ ಕೇಳಿಸಿದರೆ ಬೀಜಗಳು ಒಣಗಿವೆ ಎಂದು ಅರ್ಥ.
ಹುಳಿ ಬರಿಸುವಿಕೆಯ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ಬೀಜಗಳನ್ನು ಬಳಸುವುದರಿಂದ ಗುಣಮಟ್ಟದ ಸಂಸ್ಕರಿತ ಕೊಕ್ಕೊ ಬೀಜಗಳನ್ನು ಪಡೆಯಬಹುದು. ಕಡಿಮೆ ಬೀಜಗಳಿದ್ದರೆ ನಿರೀಕ್ಷಿತ ಪ್ರಮಾಣದಲ್ಲಿ ಗುಣಮಟ್ಟ ದೊರೆಯದೇ ಇರುವ ಸಾಧ್ಯತೆ ಇದೆ.
- ದೀಕ್ಷಾ ಪಿ.ಎಂ.
ಕೃಷಿ ಮಹಾವಿದ್ಯಾಲಯ, ಹಾಸನ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ