ಜಿಜ್ಞಾಸೆ: ಆತ್ಮಸಾಕ್ಷಿ ಮೀರಿ ನಡೆಯುವುದು ಧರ್ಮವೇ...?

Upayuktha
0

ಆತ್ಮಸಾಕ್ಷಿ ಎನ್ನುವುದು ಯಾರಿಗೂ ತಿಳಿಯದಿರುವ ಮತ್ತು ಇಬ್ಬರಿಗೇ ತಿಳಿದಿರುವ ಸತ್ಯ. ಒಬ್ಬ ಆತ್ಮ ಮತ್ತೊಬ್ಬ ಪರಮಾತ್ಮ. ಆದ್ದರಿಂದ ಆತ್ಮಸಾಕ್ಷಿಗೆ ಸರಿಯಾಗಿ ಇರುವುದೆಂದರೆ ಪರಮಾತ್ಮನಿಗೆ ಹತ್ತಿರವಾಗಿದ್ದಂತೆಯೇ. ಇವತ್ತು ಪ್ರವಚನಕಾರರಾಗಲಿ, ಮಠಾಧೀಶರಾಗಲಿ, ಧರ್ಮಾಧಿಕಾರಿಗಳಾಗಿರಲಿ, ಗುರುಗಳಾಗಿರಲಿ, ರಾಜಕಾರಣಿಗಳಿರಲಿ, ಯಾರೇ ಆದರೂ ಇನ್ನೊಬ್ಬರಿಗೆ ಬೋಧನೆ ಮಾಡುವಾಗ ಹೇಳುವಂಥ ಸಾಮಾನ್ಯ ಶಬ್ದವೇ ಆತ್ಮಸಾಕ್ಷಿಗೆ ವಂಚನೆ ಮಾಡಬಾರದು ಎಂದು. ಕೇಳಲೇನೋ ಸುಂದರವಾಗಿದೆ. ಆದರೆ ಇದನ್ನು ಯಾರು ಎಷ್ಟು ಪಾಲಿಸುತ್ತಾರೆ ಎನ್ನುವಲ್ಲಿ ಅದರ ಸಾಫಲ್ಯತೆ ಅಡಗಿದೆ. ಆತ್ಮಸಾಕ್ಷಿ ಎಂದರೇನು? ತನ್ನ ಮನಸ್ಸಿಗೆ ಏನು ಸತ್ಯವೆಂದು ತಿಳಿದಿದೆಯೋ ಅದನ್ನು ಅದೇ ರೀತಿ ಪ್ರಕಟಿಸುವುದೇ ಆತ್ಮಸಾಕ್ಷಿ. ಅಂದರೆ ತನ್ನ ತಿಳಿವಿಗೆ ಬಂದ ವಿಚಾರವನ್ನು ವಿಷಯವನ್ನು ಅಡಗಿಸದೆ, ಸಂದರ್ಭಕ್ಕನುಗುಣವಾಗಿ ತಿರುಚದೆ ಹೇಳಬೇಕಾದ ಸಂದರ್ಭದಲ್ಲಿ ಸತ್ಯವನ್ನೇ ನುಡಿಯುವುದೇ ಆತ್ಮಸಾಕ್ಷಿ. ಆತ್ಮಸಾಕ್ಷಿಗೆ ಸರಿಯಾಗಿ ಬದುಕುವುದೆಂದರೆ ಅದು ಮನುಷ್ಯನನ್ನು ದೈವತ್ವದೆಡೆಗೆ ಕೊಂಡೊಯ್ಯುವುದು. ಆದರೆ ಇದು ಸಾಧ್ಯವೇ?


ಲೌಕಿಕ ವಿಚಾರಗಳಲ್ಲಿ ವೈರಾಗ್ಯದಿಂದಿರಬೇಕಾದ ಮಠಾಧೀಶರುಗಳೇ, ಧರ್ಮಗುರುಗಳೇ  ವೇದಿಕೆಯಲ್ಲಿ ಆತ್ಮ ಜ್ಞಾನ, ಆತ್ಮ ಸಾಕ್ಷಿ, ಜ್ಞಾನ, ಭಕ್ತಿ, ವೈರಾಗ್ಯ, ಲೌಕಿಕ, ಪಾರಮಾರ್ಥಿಕ ಎಂಬುದಾಗಿ ಗಂಟೆಕಟ್ಟಲೆ ಭಾಷಣವೋ ಪ್ರವಚನವೋ ಆಶೀರ್ವಚನವೋ ನೀಡಿದಾಗ ಅವರು ಆತ್ಮಸಾಕ್ಷಿಗೆ ಸರಿಯಾಗಿ ನಡೆಯಬಹುದೆಂದು ನಾವೆಣಿಸಿದರೆ ಸಾಧ್ಯವೇ? ಏಕೆಂದರೆ ಇಷ್ಟೆಲ್ಲವನ್ನು ಹೇಳಿ ಇವರು ವೇದಿಕೆಯಿಂದಿಳಿದು ಐಷಾರಾಮಿ ಕಾರಿನಲ್ಲಿ ಇನ್ನೊಂದೂರಿಗೆ ಹೊರಟಾಗ ಇವರ ಜ್ಞಾನ ಭಕ್ತಿ ವೈರಾಗ್ಯ ಯಾವುದರಲ್ಲಿ ಎಂದು ಗೊಂದಲವಾಗುವುದು ಸಹಜ ತಾನೆ. ಆದ್ದರಿಂದ ನಮ್ಮಂಥ ಸಾಮಾನ್ಯರಿಗೆ ಆತ್ಮಸಾಕ್ಷಿಗೆ ಸರಿಯಾಗಿ ನಡೆಯುವುದು ಸ್ವಲ್ಪ ಕಷ್ಟ ಸಾಧ್ಯ ಎನಿಸುತ್ತದೆ. ಇನ್ನು ರಾಜಕಾರಣಿಗಳ ವಿಚಾರ ಬಿಡಿ. ಅವರಿಗೆ ಆ ಶಬ್ದವೆಂಬುದೊಂದು ಇದೆ ಎನ್ನುವುದಾದರೂ ಗೊತ್ತಿದೆಯೋ ಇಲ್ಲವೋ. ಹಾಗಾದರೆ ನಾವು ಯಾರನ್ನು ಆದರ್ಶವಾಗಿಟ್ಟುಕೊಳ್ಳಬೇಕೆಂಬ ಪ್ರಶ್ನೆ ಮೂಡದಿರದು. ಇವತ್ತಿನ ಪ್ರಪಂಚದ ವ್ಯವಹಾರ ಹೇಗಿದೆ ಎಂದರೆ ದೇಶ ಕಾಲಕ್ಕನುಗುಣವಾಗಿ ಯಾವುದು ಸೂಕ್ತವೋ ಅಂಥ ಮುಖವಾಡದೊಡನೆ ವ್ಯವಹಾರ ಮಾಡುವವನೇ ಜಾಣನಾಗುತ್ತಾನೆ. ಅದರ ಬದಲು ಸತ್ಯ ಆತ್ಮಸಾಕ್ಷಿ ಎಂದು ನಿಂತರೆ ಆತ ಪೆದ್ದನೇ ಆಗಬಹುದು. ಅಥವಾ ಬದುಕಲು ಕಲಿಯದ ಮೂರ್ಖನಾಗಬಹುದು.   


ಅತೀ ಶೀಘ್ರದಲ್ಲಿ ನೇಪಥ್ಯಕ್ಕೆ ಸೇರುವಂಥ ಪದಗಳಲ್ಲಿ ಬಹುಷಃ ಈ ಆತ್ಮಸಾಕ್ಷಿ ಎನ್ನುವಂಥ ಪದವೇ ಮಂಚೂಣಿಯಲ್ಲಿದೆ ಎನಿಸುತ್ತದೆ. ಒಂದು ಆಶಾಕಿರಣವೆಂದರೆ ಈ ಪದವನ್ನು ಹುಡುಕಿಕೊಂಡು ಹೋದರೆ ನಮಗೆ ಹಳ್ಳಿಯ ಕೆಲವು ಮುಗ್ಧ ಜೀವಿಗಳಲ್ಲಿ ಕಾಣಬಹುದು. ಮೋಸ ವಂಚನೆಗಳರಿಯದ ಮನದ ಒಳಗೇನಿದೆಯೋ ಅದನ್ನೇ ಮಾತಾಡುವ ನಾಗರಿಕತೆಯೇ ತಿಳಿಯದ ಕೆಲವಾದರು ಜನರಿದ್ದರೆ ಅವರು ಹಳ್ಳಿಗಳಲ್ಲಿ ಮಾತ್ರ. ಆದರೆ ಇಂದಿಗೂ ಅಂಥವರಿದ್ದಾರೆ ನೇರ ಮಾತು ನೇರ ನಡೆ ಇರುವವರು. ಹಾಗೆಂದು ಪಟ್ಟಣಗಳಲ್ಲೂ ಅಂಥವರಿಲ್ಲವೆಂದಲ್ಲ ಹುಡುಕುವುದು ಕಷ್ಟ.


ಇವತ್ತಿನ ಎಲ್ಲ ವ್ಯವಹಾರಗಳೂ ಆತ್ಮಸಾಕ್ಷಿ ಎಂಬುದನ್ನು ಮರೆತು ಮಾಡುವಂಥವೇ ಆಗಿವೆ. ಮತ್ತೆ ಕೆಲವು ಕಡೆ ಈ ಆತ್ಮಸಾಕ್ಷಿ ವಿರುದ್ಧವಾಗಿ ನಡೆಯುವುದೂ ಧರ್ಮವೇ.  ಹೇಗೆಂದರೆ ಉದಾಹರಣೆಗೆ ರೋಗಿಯೊಬ್ಬನ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲದಿದ್ದಾಗ ನುರಿತ ವೈದ್ಯನಿಗೆ ಆ ರೋಗಿ ಇನ್ನು ಹೆಚ್ಚು ಕಾಲ ಬದಕಿರಲಾರನೆಂದು ತಿಳಿದಿರುತ್ತದೆ. ಹಾಗೆಂದು ಆತ್ಮಸಾಕ್ಷಿಗೆ ಸರಿಯಾಗಿ ಸತ್ಯ ಹೇಳಹೊರಟರೆ ತಪ್ಪಾಗುತ್ತದೆ. ವೈದ್ಯಕೀಯ ಧರ್ಮಕ್ಕೆ ಆ ಕ್ಷಣದಲ್ಲಿ ಆತ್ಮಸಾಕ್ಷಿಯನ್ನು ಮೀರುವುದೇ ಧರ್ಮ. ಇದು ಆಪತ್ಧರ್ಮ. ಹಾಗಾದರೆ ಸಮಾಜಕ್ಕೆ, ಸಾತ್ವಿಕರಿಗೆ ಅಥವಾ ದುರ್ಬಲರಿಗೆ ಒಳ್ಳೆಯದಾಗುವುದಾದರೆ ಆತ್ಮಸಾಕ್ಷಿ ಎಂಬದನ್ನು ಮೀರುವುದೂ ಧರ್ಮವೇ. ಅಪರಾಧಿಗಳನ್ನು ವಿಚಾರಿಸುವಾಗಲೂ ಇದೇ ನ್ಯಾಯ ಅನ್ವಯವಾಗುವುದು.  


ಇನ್ನು ವ್ಯಾಪಾರ ವ್ಯವಹಾರಗಳು ನಡೆಯುವುದೇ ಆತ್ಮಸಾಕ್ಷಿಯ ಹೊರತಾಗಿ ಟಿ.ವಿ.ಯಲ್ಲಿ ಬರುವ ಜಾಹಿರಾತುಗಳಾಗಲಿ, ಧಾರವಾಹಿಗಳಾಗಲಿ, ಎಲ್ಲವೂ ಮಾನವನ ದಿಕ್ಕು ತಪ್ಪಿಸುವಂಥವೇ. ಆದ್ದರಿಂದ ಇವೆಲ್ಲವೂ ಮನೋರಂಜನೆ ಎಂಬ ವಿಚಾರದ ಅಡಿಯಲ್ಲಿ ಆತ್ಮಘಾತಕಗಳೇ. ಇಲ್ಲಿ ಆತ್ಮಸಾಕ್ಷಿಗೆ ಹತ್ತಿರದ ಸ್ಥಾನವೂ ಕಲ್ಪನಾತೀತ. ಆತ್ಮಸಾಕ್ಷಿಗೂ ನಂಬಿಕೆಗೂ ಅವಿನಾಭಾವ ಸಂಬಂಧವಿದೆ. ಯಾರನ್ನು ನಾವು ನಂಬುತ್ತೇವೆಯೋ ಅಲ್ಲಿ ಆತ್ಮಸಾಕ್ಷಿಯ ಬಗ್ಗೆ ಸಂಶಯವಿರಬಾರದು. ಸಂಶಯವಿದ್ದರೆ ಅಲ್ಲಿ ಆತ್ಮಸಾಕ್ಷಿಯನ್ನು ನಿರೂಪಿಸಲಾಗದು. ಮತ್ತೊಂದು ವಿಚಾರವೆಂದರೆ ಇದು ಇನ್ನೊಬ್ಬನಿಗೆ ತೋರಿಸಲಾಗದು ವಿವರಿಸಲಾಗದು. ಬರಿದೆ ನಂಬಿಕೆಯ ವ್ಯವಹಾರವಿದು. ಅದಕ್ಕೆಂದೇ ಇದು ಇಬ್ಬರಿಗೆ ಮಾತ್ರ ತಿಳಿದಿರುವ ವಿಚಾರವಾದ್ದರಿಂದ ವಿಮರ್ಶೆ ಕಷ್ಟ.


ಹಾಗೆ ನೋಡಿದರೆ ಮಹಾಭಾರತ ಕಾಲದಲ್ಲೂ ಶ್ರೀಕೃಷ್ಣ ಇದನ್ನು ಅನೇಕ ಕಡೆಗಳಲ್ಲಿ ತೋರಿಸಿದ್ದಾನೆ. ಕೃಷ್ಣನ ಸಿದ್ಧಾಂತವೆಂದರೆ ಸಜ್ಜನರ ಹಿತಕ್ಕಾಗಿ, ದೇಶದ ಹಿತಕ್ಕಾಗಿ, ರಾಜನ ಹಿತಕ್ಕಾಗಿ ಸುಳ್ಳನ್ನೂ ಹೇಳಬಹುದು, ಆತ್ಮಸಾಕ್ಷಿಯನ್ನೂ ಮೀರಬಹುದು, ನೂರಾರು ಜನರನ್ನೂ ಕೊಲಬಹುದು.. ಇತ್ಯಾದಿ. ಇದೆಲ್ಲವೂ ಆಪತ್ಕಾಲದ ಧರ್ಮವೆಂದು ಕೃಷ್ಣನ ಸಿದ್ಧಾಂತ. ಆದ್ದರಿಂದ ಅದು ನಮಗೂ ಸಹ್ಯ ಮತ್ತು ಅನಿವಾರ್ಯ. ಕೊನೆಯದಾಗಿ ಹೇಳುವುದಾದರೆ ಅನಿವಾರ್ಯದ ಹೊರತಾಗಿ ಆತ್ಮಸಾಕ್ಷಿಗೆ ವಿರೋಧವಾಗದಂತೆ ನಡೆಯುವುದೇ ಧರ್ಮವೆನ್ನೋಣವೇ? ಅಂತೆಯೇ ಎಲ್ಲವನ್ನೂ ಅನಿವಾರ್ಯವೆಂದೇ ಪರಿಗಣಿಸುವುದೂ ಅಧರ್ಮವೇ. ನೆನಪಾಗುವುದು.. ಧರ್ಮೋ ರಕ್ಷತಿ...

***********

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top