ಓದಿದ್ದು 4ನೆಯ ತರಗತಿ ಅಷ್ಟೇ. ಸಾಧಿಸಿದ್ದು, ಬರೆದದ್ದು ಅಪಾರ. ಗಳಿಸಿದ್ದು ಪಾರವಿರದಷ್ಟು ಜನಪ್ರೀತಿಯನ್ನು. ವೈಚಾರಿಕತೆ, ಅಧ್ಯಾತ್ಮ, ಸಾಹಿತ್ಯಗಳ ನಡುವೆ ಸಮತೋಲನವನ್ನು ಸಾಧಿಸಿದವರು. ವಿಠ್ಠಪ್ಪ ಗೋರಂಟ್ಲಿ ಜನಪರ ಹೋರಾಟವನ್ನೇ ಬದುಕನ್ನಾಗಿಸಿಕೊಂಡವರು. ಕಲ್ಯಾಣ ಕರ್ನಾಟಕದ ಹಿರಿಯ ಜೀವ. ಅದರ ಸಾಂಸ್ಕೃತಿಕ ಚರಿತ್ರೆಯ ಅವಿನಾ ಭಾಗ! ಹೈದರಾಬಾದ್ ಕರ್ನಾಟಕವನ್ನು ಸಬಲೀಕರಿಸಿ ಕಲ್ಯಾಣ ಕರ್ನಾಟಕವನ್ನಾಗಿಸಲು ಹೋರಾಟಕ್ಕಿಳಿದವರು. ಲಂಕೇಶ್ ಪತ್ರಿಕೆಯ ವರದಿಗಾರರಾಗಿ 70, 80, 90ರ ದಶಕಗಳಲ್ಲಿ ದನಿಯಿಲ್ಲದವರಿಗೆ ದನಿ ನೀಡಿದವರು. ಪತ್ರಕರ್ತರಾಗಿ ಅವರದು ಅನುಪಮ ಸೇವೆ. ಸಜ್ಜನ. ಸಾತ್ತ್ವಿಕ. ಅನ್ಯಾಯದ ವಿರುದ್ಧ ಅವರು ಸದಾ ಲೇಖನಿಯನ್ನು ಝಳಪಿಸಿಕೊಂಡೇ ಬಂದವರು.
ಈಗ ಎಂಟು ತಿಂಗಳ ಹಿಂದೆ, 29-11-2020ರಂದು ಪುಸ್ತಕವೊಂದರ ಬಿಡುಗಡೆಗೆಂದು ನಾನು ಕೊಪ್ಪಳಕ್ಕೆ ಹೋದಾಗ ಭೇಟಿಯಾಗಿದ್ದರು. 28 ವರ್ಷಗಳ ಅನಂತರದ ಭೇಟಿಯದು. ಅವರ ನೆನಪು ಮಾಸಿರಲಿಲ್ಲ!
ನಮ್ಮಿಬ್ಬರ ಮೊದಲ ಭೇಟಿ 21-11-1992ರಂದು. ಹಿರಿಯ ಲೇಖಕಿ ಲಲಿತಾ ದೇಮಶೆಟ್ಟಿಯವರ ಮನೆಯಲ್ಲಿ. ಗೋರಂಟ್ಲಿಯವರನ್ನು ಕುರಿತೋದಿದ್ದೆ. ಕಂಡಿದ್ದು ಅಂದೇ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಲುವಾಗಿ ಕಾರ್ಯಕರ್ತರಿಗೆ, ಸ್ವಯಂಸೇವಕರಿಗೆ ಎರಡು ದಿನಗಳ ಕನ್ನಡ ಕಾರ್ಯಕರ್ತರ ಶಿಬಿರ ನಡೆಸಲು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಕೊಪ್ಪಳಕ್ಕೆ ಹೋಗಿದ್ದಾಗ ಪರಿಚಯವಾದವರು. ಮೊದಲ ಭೇಟಿಯಲ್ಲೇ ಪ್ರೀತಿಯನ್ನು ಮೊಗೆಮೊಗೆದು ಕೊಟ್ಟವರು. ಜೊತೆಗೆ ಚಿಂತಿಸಿ ಮೆಲ್ಲಲು, ಮೆಲುಕು ಹಾಕಲು, ಕನ್ನಡ ಮಾಧ್ಯಮ ಕುರಿತಾದ ತಮ್ಮ ಉಪಯುಕ್ತ ಕೃತಿಯನ್ನು ಕೊಟ್ಟು ಔದಾರ್ಯ ಮೆರೆದಿದ್ದರು.
ಅವರು ಇನ್ನಿಲ್ಲ. ಇದ್ದಕ್ಕಿದ್ದಂತೆ ಬಾರದ ಲೋಕಕ್ಕೆ ತೆರಳಿಬಿಟ್ಟರು. ಹೃದಯವನ್ನು ಭಾರವಾಗಿಸಿ ಕಣ್ಣನ್ನು ಕಂಬನಿಯ ಮಡುವಾಗಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರುವೆ.
- ಕೆ. ರಾಜಕುಮಾರ್
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ