'ಶರೀರಮಾದ್ಯಂ ಖಲು ಧರ್ಮಸಾಧನಂ' ಮಹಾಕವಿ ಕಾಳಿದಾಸನ ಈ ಮಾತು ಪ್ರತಿಯೊಬ್ಬರಿಗೂ ಅನುಭವಸಿದ್ಧವಾದುದು. ಜೀವನ ಸಾರ್ಥಕ್ಯವನ್ನು ಪಡೆಯುವ ಸಲುವಾಗಿ ನಡೆಸಬೇಕಾದ ಧರ್ಮಾಚರಣೆಗೆ ಮೊದಲ ಸಾಧನವೇ ಶರೀರ. ಸ್ವಸ್ಥ ಶರೀರ ಸಾರ್ಥಕ ಬದುಕಿನ ಮೂಲಾಧಾರ. ಶರೀರದ ಸ್ವಾಸ್ಥ್ಯಕ್ಕೆ ಬೇಕಾಗಿರುವುದು ಉತ್ತಮ ಜೀವನ ವಿಧಾನ.
ಆದರೂ ಕೆಲವೊಮ್ಮೆ ರೋಗರುಜಿನಗಳು ಶರೀರವನ್ನು ಬಾಧಿಸುತ್ತವೆ. ಅಂತಹ ರೋಗಗಳ ಬಾಧೆಯನ್ನು ದೂರಗೊಳಿಸಿ ಬದುಕನ್ನು ಸ್ವಸ್ಥಗೊಳಿಸುವವರೇ ವೈದ್ಯರು. ಎಷ್ಟೇ ಸಂಪತ್ತುಗಳಿರಲಿ, ಏನೇ ವೈಭೋಗಗಳಿರಲಿ ಎಲ್ಲವನ್ನೂ ಅನುಭವಿಸಬೇಕಾದರೆ ಮೊದಲಿಗೆ ಬೇಕಾಗಿರುವುದು ಶರೀರಸ್ವಾಸ್ಥ್ಯ. ಶರೀರಸ್ವಾಸ್ಥ್ಯವನ್ನು ದೊರಕಿಸಿಕೊಡುವವರು ವೈದ್ಯರು. ಸ್ವಸ್ಥ ಜೀವನಕ್ಕಾಗಿ ನಡೆಸಬೇಕಾದ ಕ್ರಮಬದ್ಧ ಜೀವನಕ್ರಮವನ್ನು ನಾವು ಬಿಟ್ಟು ಅದೆಷ್ಟೋ ಕಾಲವಾಯಿತು. ಇಂದು ಅಂತಹ ಸ್ವಸ್ಥಜೀವನಕ್ಕೆ ನಮಗೆ ದಾರಿ ತೋರುವವರು ವೈದ್ಯರು. ಅಂತಹ ಜೀವನವನ್ನು ದೊರಕಿಸಿಕೊಡುವವರು ವೈದ್ಯರು.
'ಅನ್ನದಾತ, ಜಲದಾತ, ಹಾಗೂ ಆರೋಗ್ಯದಾತ - ಈ ಮೂವರೂ ಯಾವುದೇ ಯಜ್ಞ, ತಪಸ್ಸು ಮೊದಲಾದವುಗಳನ್ನು ಮಾಡದೆಯೇ ಸ್ವರ್ಗವನ್ನು ಹೊಂದುತ್ತಾರೆ' ಎಂದು ಹೇಳುವ ಮಹಾಭಾರತ ವೈದ್ಯವೃತ್ತಿ ಎಷ್ಟೊಂದು ಪವಿತ್ರವಾದುದು ಎಂಬುದನ್ನು ವಿವರಿಸುತ್ತದೆ. ವಿದ್ಯಾದಾನ, ಅಭಯದಾನ, ಅನ್ನದಾನ, ಔಷಧಿದಾನ ಇವೆಲ್ಲವೂ ಇಹಪರಗಳೆರಡರಲ್ಲೂ ಸುಖವನ್ನು ಕೊಡಬಲ್ಲ ಕರ್ಮಗಳು ಎಂಬುದು ನಮ್ಮ ಸನಾತನ ನಂಬಿಕೆ.
ಉತ್ತಮ ವೈದ್ಯರ ಲಕ್ಷಣಗಳನ್ನು ನಮ್ಮ ಪ್ರಾಚೀನರು ಈ ರೀತಿ ವಿವರಿಸುತ್ತಾರೆ.
'ಗುರೋರಧೀತಾಖಿಲವೈದ್ಯವಿದ್ಯಃ
ಪೀಯೂಷಪಾಣಿಃ ಕುಶಲಃ ಕ್ರಿಯಾಸು |
ಗತಸ್ಪೃಹೋ ಧೈರ್ಯಧರಃ ಕೃಪಾಲುಃ
ಶುದ್ಧೋSಧಿಕಾರೀ ಭಿಷಗೀದೃಶಃ ಸ್ಯಾತ್ ||'
ಗುರೋರಧೀತಾಖಿಲವೈದ್ಯವಿದ್ಯಃ
ಉತ್ತಮ ವೈದ್ಯರು ಗುರುವಿನ ಮೂಲಕ ಸಂಪೂರ್ಣ ವೈದ್ಯಕೀಯ ಶಾಸ್ತ್ರವನ್ನು ಅಧ್ಯಯನ ಮಾಡಿರುತ್ತಾರೆ. ಯಾವುದೇ ವಿದ್ಯೆಯಲ್ಲಿ ಪಾಂಡಿತ್ಯ ಬರಬೇಕಾದರೆ ಅದರ ಸಂಪೂರ್ಣ ಅಧ್ಯಯನ ನಮ್ಮದಾಗಬೇಕು. ವೈದ್ಯವಿದ್ಯೆಯೂ ಇದಕ್ಕೆ ಹೊರತಲ್ಲ. ಶರೀರಾವಯವಗಳಲ್ಲಿ ಪರಸ್ಪರ ಸಂಬಂಧವಿರುವುದರಿಂದ, ಶಾರೀರ-ಮಾನಸ ವ್ಯಾಧಿಗಳು ಪರಸ್ಪರ ಸಂಬದ್ಧವಾಗಿರುವುದರಿಂದ ಒಬ್ಬ ಶ್ರೇಷ್ಠ ವೈದ್ಯನಿಗೆ ಅಷ್ಟಾಂಗಗಳಿಂದ ಕೂಡಿರುವ ವೈದ್ಯಕೀಯ ಶಾಸ್ತ್ರದ ಸಂಪೂರ್ಣ ಜ್ಞಾನವಿರಬೇಕೆಂದು ಹಿಂದಿನವರು ತಿಳಿದಿದ್ದರು.
ಪೀಯೂಷಪಾಣಿಃ
ಇಂತಹ ವೈದ್ಯರು ಕೈಯಲ್ಲಿ ಅಮೃತವನ್ನು ಧರಿಸಿರುತ್ತಾರೆ ಎಂದು ವೈದ್ಯರ ಎರಡನೆಯ ಲಕ್ಷಣವನ್ನು ಈ ಶ್ಲೋಕದಲ್ಲಿ ಹೇಳಲಾಗಿದೆ. ನಮ್ಮ ರೋಗಗಳನ್ನು ದೂರಮಾಡಿ ನಮಗೆ ನವ ಚೈತನ್ಯವನ್ನು ಪುಷ್ಟಿಯನ್ನು ನೀಡುವ ಔಷಧವು ಆಮೃತವಲ್ಲದೆ ಮತ್ತೇನು?
ಕುಶಲಃ ಕ್ರಿಯಾಸು
ಇವರು ಚಿಕಿತ್ಸೆಯನ್ನು ನೀಡುವುದರಲ್ಲಿ ಕುಶಲರು. ರೋಗಗಳು ಮಾನಸವಿರಬಹುದು, ಶಾರೀರಿಕವಿರಬಹುದು. ಕೆಲವೊಮ್ಮೆ ಮಾನಸ ವ್ಯಾಧಿಯೇ ಶಾರೀರಿಕ ಸಮಸ್ಯೆಗಳನ್ನು ಹುಟ್ಟಿಸಬಹುದು. ಕೆಲವೊಮ್ಮೆ ಶಾರೀರಿಕ ವ್ಯಾಧಿಗಳು ಮಾನಸಿಕ ಕ್ಲೇಶಗಳನ್ನು ತಂದೊಡ್ಡಬಹುದು. ಇವನ್ನೆಲ್ಲ ಚೆನ್ನಾಗಿ ಅರಿತು ಯುಕ್ತವಾದ ಚಿಕಿತ್ಸೆ ನೀಡುವ ವೈದ್ಯರು ಸರ್ವಜ್ಞನಾದ ಭಗವಂತನ ಸ್ವರೂಪವೇ ಅಲ್ಲವೇ?
ಗತಸ್ಪೃಹಃ
ನಿಸ್ಪೃಹತೆ ವೈದ್ಯರ ಬಹುದೊಡ್ಡ ಗುಣ. ಸ್ಪೃಹಾ ಎಂದರೆ ಆಸೆ. ವೈದ್ಯರು ತಮ್ಮೆಲ್ಲ ಅಸೆಗಳನ್ನು, ಬಯಕೆಗಳನ್ನು ಕಟ್ಟಿಟ್ಟು ದಿನದ ಬಹುಪಾಲು ಸಮಯವನ್ನು ರೋಗಿಗಳ ಉಪಚಾರಕ್ಕಾಗಿಯೇ ಮೀಸಲಿಡುತ್ತಾರೆ. ಹೆಂಡತಿಯ ಹುಟ್ಟುಹಬ್ಬ, ಮಗಳ ಶಾಲೆಯ ವಾರ್ಷಿಕೋತ್ಸವ, ಅಣ್ಣನ ಮಗಳ ಮದುವೆ, ಅಕ್ಕನ ಮಗಳ ಸೀಮಂತ, ಗೆಳೆಯನ ಹೊಸಮನೆಯ ಪ್ರವೇಶೋತ್ಸವ - ಹೀಗೆ ಇವೆಲ್ಲವನ್ನೂ ಕೇಳಿ ಮಾತ್ರ ಆನಂದಿಸಬೇಕಾಗುತ್ತದೆ. ಪ್ರತ್ಯಕ್ಷವಾಗಿ ಹೋಗಿ ಭಾಗವಹಿಸುವುದಕ್ಕೆ ಕರ್ತವ್ಯಬದ್ಧತೆ ಅಡ್ಡಬರುತ್ತದೆ. ಹಲವು ಬಾರಿ ಹಗಲು ರಾತ್ರಿಗಳ ವ್ಯತ್ಯಾಸವನ್ನು ತಿಳಿಯದಷ್ಟೂ ಕಾರ್ಯದೊತ್ತಡವಿರುತ್ತದೆ. ಕೋವಿಡ್ ನಂತಹ ಈ ಮಹಾಮಾರಿಯ ದಾಳಿಯ ಸಮಯದಲ್ಲಿ ತಮ್ಮ ಜೀವವನ್ನೂ ಲೆಕ್ಕಿಸದೆ ಚಿಕಿತ್ಸೆಯನ್ನು ನೀಡುತ್ತಿರುವ ವೈದ್ಯರಿಗೆ ಆಸೆಯನ್ನು ಪೂರೈಸುವುದು ಬಿಡಿ, ಯಾವುದನ್ನಾದರೂ ಆಸೆಪಡಲಾದರೂ ಸಮಯವಿದ್ದೀತೇ?
ಧೈರ್ಯಧರಃ
ಅನೇಕ ಬಾರಿ ನಾವು ಸೋಲುಣ್ಣುವುದು ಭಯದಿಂದ. ವೈದ್ಯರು ನೀಡುವ ಚಿಕಿತ್ಸೆಯಲ್ಲಿ ಮೊದಲು ನೀಡುವ ಔಷಧವೇ ಧೈರ್ಯ. ಮುಂದಿನ ಗಳಿಗೆ ರೋಗಿ ಸಾಯುತ್ತಾನೆಂದು ತಿಳಿದಿದ್ದರೂ 'ನಿಮಗೇನೂ ಆಗುವುದಿಲ್ಲ. ಒಂದು ವಾರದಲ್ಲಿ ನೀವು ಮೊದಲಿನಂತಾಗುತ್ತೀರಿ' ಎಂದು ಧೈರ್ಯ ತುಂಬುವ ವೈದ್ಯರ ಮಾತು ನಮಗೆ ಆಪ್ತವೆನಿಸುತ್ತದೆ. ಅನೇಕ ಬಾರಿ ನಮಗೆ ನಮ್ಮ ವೈದ್ಯರು ಔಷಧಿ ಕೊಡಬೇಕಾಗಿಲ್ಲ. ಒಮ್ಮೆ ಪರೀಕ್ಷಿಸಿ ನೋಡಿದರೆ ಸಾಕು, ನಮ್ಮ ಅರ್ಧ ಕಾಯಿಲೆ ವಾಸಿಯಾಗುತ್ತದೆ. ಮನೆಯಲ್ಲಿ ವಯಸ್ಸಾದ ಹಿರಿಯರಿದ್ದರೆ ಈ ಅನುಭವ ಎಲ್ಲರಿಗೂ ಆಗಿರಬಹುದು. ವೈದ್ಯರಾದರೂ ಅಷ್ಟೆ ದಿನವೂ ಹೊಸ ಹೊಸ ಬಗೆಯ ರೋಗಗಳನ್ನು ನೋಡುತ್ತಿರುತ್ತಾರೆ. ಹೊಸ ಬಗೆಯ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಗಳನ್ನೂ ನೆರವೇರಿಸಬೇಕಾಗುತ್ತದೆ. ಇಲ್ಲೆಲ್ಲ ಅವರ ಜ್ಞಾನಕ್ಕೆ, ಅನುಭವಕ್ಕೆ ಸಹಕಾರಿಯಾಗುವುದು ಅವರ ಧೈರ್ಯ.
ಕೃಪಾಲುಃ ಶುದ್ಧಃ
ಕರುಣಾಳುವಾದ ಭಗವಂತ ನಮಗೆಂದೂ ಕಣ್ಣಿಗೆ ಕಾಣಲಾರ. ಆದರೆ ಕೃಪಾಳುಗಳಾದ ವೈದ್ಯರೇ ಸದಾ ನಮ್ಮ ಕಣ್ಣ ಮುಂದಿರುವ ಭಗವಂತ ಎಂದರೆ ತಪ್ಪಾಗಲಾರದು. ಇವರು ನಮ್ಮ ಮೇಲೆ ತೋರುವ ಕಾಳಜಿ, ಪ್ರೀತಿ ಇವರ ಶುದ್ಧ ಅಂತರಂಗದ ದ್ಯೋತಕ. ಮನಸ್ಸು, ಹೃದಯ ಶುದ್ಧವಾಗಿರುವುದರಿಂದಲೇ 'ವೈದ್ಯೋ ನಾರಾಯಣೋ ಹರಿಃ' ಎಂದು ನಮ್ಮ ಪರಂಪರೆಯಲ್ಲಿ ವೈದ್ಯರಿಗೆ ಭಗವಂತನ ಸ್ಥಾನವನ್ನು ನೀಡಲಾಗಿದೆ.
ಅಧಿಕಾರೀ
ತನ್ನ ರೋಗಿಯ ಮೇಲೆ ಸಂಪೂರ್ಣ ಅಧಿಕಾರ ಇರುವುದು ಚಿಕಿತ್ಸಕರಾದ ವೈದ್ಯರಿಗೆ. ಚಿಕಿತ್ಸೆ, ಔಷಧೋಪಚಾರ ಫಲಪ್ರದವಾಗಬೇಕಾದರೆ ರೋಗಿಯು ವೈದ್ಯರೆಂದಂತೆ ಕೇಳಲೇಬೇಕು. ಆಹಾರ, ಅನ್ನ-ಪಾನ, ಪಥ್ಯ, ವಿರಾಮ, ಔಷಧ ಸ್ವೀಕಾರ, ವ್ಯಾಯಾಮ - ಇವೆಲ್ಲ ವೈದ್ಯರೆಂದಂತೆಯೇ ನಡೆಯಬೇಕು. ಅದಲ್ಲದಿದ್ದರೆ ಚಿಕಿತ್ಸೆ ಫಲಪ್ರದವಾಗಲಾರದು. ಹೀಗೆ ಇವೆಲ್ಲ ಉತ್ತಮ ವೈದ್ಯರ ಲಕ್ಷಣ ಎಂದು ನಮ್ಮ ಪ್ರಾಚೀನರು ತಿಳಿಸಿದ್ದಾರೆ.
ವೈದ್ಯರು ನಮಗೆ ಪ್ರಾಣ ನೀಡುವ ತಂದೆಯೂ ಹೌದು, ಪ್ರೀತಿ ತೋರುವ ಮಗನೂ ಹೌದು, ಕಾಳಜಿ ತೋರುವ ಬಂಧುವೂ ಹೌದು, ಧೈರ್ಯತುಂಬುವ ಗೆಳೆಯನೂ ಹೌದು. ನಮ್ಮವರು, ಹೆಚ್ಚೇನು, ನಾವೇ ನಮ್ಮ ಬದುಕಿನ ಬಗ್ಗೆ ಭರವಸೆ ಕಳಕೊಂಡು ಮನಸ್ಸೆಲ್ಲ ಕತ್ತಲಾವರಿಸಿರುವಾಗ ಧೈರ್ಯತುಂಬಿ ನಮಗೆ ಭರವಸೆಯ ಬೆಳಕನ್ನು ತೋರುವವರು ವೈದ್ಯರು.
'ಮಸ್ತೆ ದುಃಸಹವೇದನಾಕಲಿತೇ ಮಗ್ನೇ ಸ್ವರೇ ಅಂತರ್ಗಲಂ
ತಪ್ತಾಯಾಂ ಜ್ವರಪಾವಕೇನ ಚ ತನೌ ತಾಂತೇ ಹೃಷೀಕವ್ರಜೇ |
ದೂನೇ ಬಂಧುಜನೇ ಕೃತಪ್ರಲಪನೇ ಧೈರ್ಯಂ ವಿಧಾತುಂ ಪುನಃ
ಕಃ ಶಕ್ತಃ ಕಲಿತಾಮಯಪ್ರಶಮನೋ ವೈದ್ಯಾತ್ ಪರೋ ವಿದ್ಯತೇ ||'
ತಲೆ ತುಂಬ ಸಹಿಸಲಸಾಧ್ಯವಾದ ವೇದನೆ. ಸ್ವರ ಉಡುಗಿ ಗಂಟಲೊಳಗೆ ಹೂತು ಹೋಗಿದೆ. ಶರೀರವೆಲ್ಲ ಜ್ವರವೆಂಬ ಅಗ್ನಿಯಿಂದ ಬೆಂದು ಹೋಗಿದೆ. ಕಣ್ಣು, ಕಿವಿ ಮೊದಲಾದ ಇಂದ್ರಿಯಗಳ ಶಕ್ತಿ ಕುಂದಿದೆ. ಬಂಧುಜನರೆಲ್ಲ ದುಃಖದಿಂದ ಗೋಳಾಡುತ್ತಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಆ ರೋಗವನ್ನು ದೂರಮಾಡಿ ನಮಗೆ ನೆಮ್ಮದಿಯನ್ನು ಒದಗಿಸಲು ವೈದ್ಯನ ಹೊರತಾಗಿ ಬೇರೆ ಯಾರು ತಾನೇ ಸಮರ್ಥರು?
ತಂದೆ, ತಾಯಿ, ಅಣ್ಣ, ಮಾವ ಮೊದಲಾದ ಸಂಬಂಧಗಳು ಹುಟ್ಟಿನಿಂದ ರಕ್ತಸಂಬಂಧದಿಂದ ಒದಗಿಬರುತ್ತವೆ. ರಕ್ತಸಂಬಂಧವಿರದೆಯೂ ವೈದ್ಯರು ನಮಗೆ ಬಂಧುವಾಗಿ ಒದಗಿಬರುತ್ತಾರೆ.
ದ್ವಂದ್ವಾತ್ಮಕವಾದ ಈ ಜಗತ್ತಿನಲ್ಲಿ ಒಳ್ಳೆಯದರ ಜೊತೆಗೆ ಕೆಟ್ಟದ್ದೂ ಇರುವುದು ಸಹಜ. ಒಬ್ಬ ವೈದ್ಯ ತಪ್ಪನ್ನೆಸಗಿದರೆ ಇಡೀ ವೈದ್ಯಸಮೂಹವನ್ನೇ ಖಳರೆಂದು ಬಿಂಬಿಸುವುದು ತಪ್ಪಾಗುತ್ತದೆ. ಚಿಕಿತ್ಸೆಯ ಮೂಲಕ, ಔಷಧೋಪಚಾರಗಳ ಮೂಲಕ, ಸಾಂತ್ವನದ ಮಾತಿನ ಮೂಲಕ ನಮಗೆ ಆರೋಗ್ಯಭಾಗ್ಯವನ್ನು ನೀಡಿ ಸಂತೋಷವನ್ನು ಉಣಬಡಿಸುವ ವೈದ್ಯರ ಮುಖದಲ್ಲಿ ಸದಾ ನಗು ಹೊಮ್ಮುತ್ತಿರಲಿ. ಅವರ ಬಾಳು ಬಂಗಾರವಾಗಲಿ ಎಂದು ವಿಶ್ವವೈದ್ಯರ ದಿನಾಚರಣೆಯ ಈ ಶುಭಾವಸರದಲ್ಲಿ ನಾವೆಲ್ಲ ಹಾರೈಸೋಣ.
-ಡಾ. ವಿಜಯಲಕ್ಷ್ಮಿ ಎಂ
ಸಂಸ್ಕೃತ ಉಪನ್ಯಾಸಕಿ
ಎಂ ಜಿ ಎಂ ಕಾಲೇಜು
ಉಡುಪಿ
E-mail - vijayaamrutha@gmail
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ