ಡಾ. ಜಿಕೆ ಭಟ್ ಸಂಕಬಿತ್ಲು ಅವರಿಗೆ 'ಐಎಂಎ ಜೀವಮಾನದ ಸಾಧನೆ ಪ್ರಶಸ್ತಿ-2021' ಗೌರವ

Upayuktha
0

 



ಮಂಗಳೂರು: ಮಂಗಳೂರಿನ ಹಿರಿಯ ವೈದ್ಯ ಡಾ ಜಿ ಕೆ ಭಟ್ ಸಂಕಬಿತ್ಲು ಅವರನ್ನು ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲಿಸಿದ ಅನವರತ ಸೇವೆಗಾಗಿ ವೈದ್ಯರ ದಿನಾಚರಣೆಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ವಲಯದ ವತಿಯಿಂದ IMA LIFE ACHIEVEMENT AWARD 2021 ON DR B C ROY DAY ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಸುಳ್ಯ ತಾಲೂಕಿನ ಅಮರಮುಡ್ನೂರು ಗ್ರಾಮದ ದೊಡ್ಡತೋಟದ ಸಂಕಬಿತ್ಲು ದಿ. ವೆಂಕಟ್ರಮಣ ಭಟ್ ಹಾಗೂ ದಿ. ಸರಸ್ವತಿ ದಂಪತಿಗಳ ಚತುರ್ಥ ಪುತ್ರನಾಗಿ ಜನಿಸಿದ ಡಾ ಜಿ ಕೆ ಭಟ್ ಸಂಕಬಿತ್ಲು ತನ್ನ ಎಂಬಿಬಿಎಸ್ ಪದವಿಯನ್ನು ಕೆಎಂಸಿ ಮಂಗಳೂರಿನಿಂದ ಗಳಿಸಿ ಮಂಗಳೂರಿನ ಪಡೀಲಿನಲ್ಲಿ 1980ರಲ್ಲಿ ಕ್ಲಿನಿಕ್ ಸ್ಥಾಪಿಸಿ ಕುಟುಂಬ ವೈದ್ಯರಾಗಿ ಸೇವೆ ಸಲ್ಲಿಸಲು ಆರಂಭಿಸಿ ಜನಾನುರಾಗಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಡಾ ಜಿ ಕೆ ಭಟ್ ಸಂಕಬಿತ್ಲು ಅವರು ತನ್ನ ವೃತ್ತಿಯ ಬಗ್ಗೆ ಇರುವ ನಿಷ್ಠೆ ಗೌರವ ಶ್ರದ್ಧೆಯಿಂದ ಕರ್ನಾಟಕದ ವೈದ್ಯಲೋಕದಲ್ಲಿ ಚಿರಪರಿಚಿತರು.


ತನ್ನ ನಿಖರ ನಡೆನುಡಿಯಿಂದ ವೈದ್ಯಸಮೂಹದಲ್ಲಿ ಅಪಾರ ಮನ್ನಣೆ ಗಳಿಸಿದ ಅವರು ಭಾರತೀಯ ವೈದ್ಯಕೀಯ ಸಂಘದ ಅನೇಕ ಹುದ್ದೆಗಳಿಗೆ ನ್ಯಾಯ ಸಲ್ಲಿಸಿ, ಪ್ರಸ್ತುತ ರಾಜ್ಯ ಹಿರಿಯ ಉಪಾಧ್ಯಕ್ಷರಾಗಿ, ಕೇಂದ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಕರ್ನಾಟಕ ವೈದ್ಯಕೀಯ ಪರಿಷತ್ತಿನ ಹಿರಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕುಟುಂಬ ವೈದ್ಯರ ಸಂಘದ ಸ್ಥಾಪನೆಯಲ್ಲೂ ಪ್ರಮುಖ ಪಾತ್ರ ವಹಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಕರ್ನಾಟಕ ಖಾಸಗಿ ವೈದ್ಯಕೀಯ ನೋಂದಣಿ ಪ್ರಾಧಿಕಾರದ (ಕೆ.ಪಿ.ಎಂ.ಇ)   ಮಂಗಳೂರು ತಾಲೂಕಿನ ಕ್ಲಿನಿಕ್ ಮತ್ತು ಆಸ್ಪತ್ರೆಗಳ  ತನಿಖಾ ಸಮಿತಿಯ ಸದಸ್ಯರಾಗಿ ಕಳೆದ 8 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.


ಕರ್ನಾಟಕ ಹವ್ಯಕ ಸಂಘವು 2015ರಲ್ಲಿ ಅತ್ಯುತ್ತಮ ವೈದ್ಯ ಪ್ರಶಸ್ತಿ ನೀಡಿ ಗೌರವಿಸಿತು. ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ 2017-18ರಲ್ಲಿ ಪ್ರೆಸಿಡೆಂಟ್ಸ್ ಅಪ್ರಿಸಿಯೇಶನ್ಸ್ ಪ್ರಶಸ್ತಿಯನ್ನು ಹಾಗೂ ಭಾರತೀಯ ವೈದ್ಯಕೀಯ ಸಂಘ ಮಂಗಳೂರು ವಲಯವು 2018ರಲ್ಲಿ ಡಾ ಬಿ ಸಿ ರಾಯ್ ಪ್ರಶಸ್ತಿಯನ್ನು ನೀಡಿ ಶ್ರೀಯುತರು ವೈದ್ಯಕೀಯ ಲೋಕಕ್ಕೆ ಸಲ್ಲಿಸಿದ ಸೇವೆಯನ್ನು ಗೌರವಿಸಿತು. 2019-20ರಲ್ಲಿ ಭಾರತೀಯ ವೈದ್ಯಕೀಯ ಸಂಘದ ಸುಳ್ಯ ವಲಯವು ಇವರನ್ನು ಗೌರವಿಸಿತು.


ವೈದ್ಯರಾಗಿ, ಅನೇಕ ಹುದ್ದೆಗಳಲ್ಲಿ ಕಾರ್ಯನಿರತರಾಗಿ ತನ್ನ ಬಿಡುವಿಲ್ಲದ ಸಮಯದಲ್ಲಿಯೂ ತನ್ನ ಆಸಕ್ತಿಯ ಕ್ಷೇತ್ರವಾದ ಯಕ್ಷಗಾನಕ್ಕೂ ಸಮಯವನ್ನೂ ನೀಡುತ್ತಿದ್ದಾರೆ.


ಇವರ ಪತ್ನಿ ಡಾ ಉಷಾ ಜಿ ಕೆ ಭಟ್ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆಯಾಗಿ ಮಂಗಳೂರಿನಲ್ಲಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪುತ್ರಿ ಡಾ ಶಿಲ್ಪಾ ಜಿ ಕೆ ಭಟ್ ಎಂಬಿಬಿಎಸ್ಎಂಡಿ (ಅನಸ್ತೇಶಿಯಾ) ಯೇನಪೋಯಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿ ಹಾಗೂ ಅರಿವಳಿಕೆ ತಜ್ಞೆಯಾಗಿ  ಸೇವೆಯಲ್ಲಿದ್ದಾರೆ.


ಅಳಿಯ ಡಾ ಗೋವಿಂದರಾಜ್ ಎಂಬಿಬಿಎಸ್ಎಂಡಿ (ಅನಸ್ತೇಶಿಯಾ) ಕೆ ಎಸ್ ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಹಾಗೂ ಅರಿವಳಿಕೆ ತಜ್ಞರಾಗಿ  ಸೇವೆಯಲ್ಲಿದ್ದಾರೆ.


ಡಾ ಜಿ ಕೆ ಭಟ್ ಸಂಕಬಿತ್ಲು ದಂಪತಿಗಳ ಪುತ್ರ ಡಾ. ವಿಕ್ರಮ್ ಜಿ ಕೆ ಭಟ್ ಎಂಬಿಬಿಎಸ್ ಪದವೀಧರರಾಗಿ ಪ್ರಸ್ತುತ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಎಂ ಎಸ್ (ಆರ್ಥೋಪಿಡಿಕ್ಸ್) ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top