ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅವರು ಚಾಲನೆ ನೀಡಿದ 'ಬಾಕಾಹು' ಆಂದೋಲನಕ್ಕೆ ನಾಡಿನೆಲ್ಲೆಡೆಯಿಂದ ವ್ಯಾಪಕ ಬೆಂಬಲ, ಸ್ಪಂದನೆಗಳು ವ್ಯಕ್ತವಾಗುತ್ತಿವೆ. ಬಾಕಾಹು ಪಾಕೇತನಗಳು ವಿಜೃಂಭಿಸುತ್ತಿವೆ. ಇದೀಗ ಬಾಳೆಕಾಯಿ ಹುಡಿಯನ್ನು ಬಳಸಿ ತಯಾರಿಸಿದ ಎರಡು ವಿಶೇಷ ತಿನಿಸುಗಳನ್ನು ಆಶಾ ಶೇಷಾದ್ರಿ ಕನ್ನಂಗಿ ಅವರು ಪರಿಚಯಿಸುತ್ತಿದ್ದಾರೆ. ನೀವೂ ಮಾಡಿನೋಡಿ, ಖುಷಿ ಹಂಚಿಕೊಳ್ಳಿ.
ಸವಿರುಚಿ: ಬಾಕಾಹು ಮೆಂತೆ ಹಿಟ್ಟು
ಪಾಕ: ಆಶಾ ಶೇಷಾದ್ರಿ, ಕನ್ನಂಗಿ
ಸಾಮಗ್ರಿಗಳು: ಬಾಕಾಹು ಒಂದು ಲೋಟ, ಚಿರೋಟಿ ರವೆ ಒಂದು ಲೋಟ, ಹುರಿದು ಹುಡಿ ಮಾಡಿದ ಮೆಂತೆ ಹಿಟ್ಟು ಒಂದು ಲೋಟ, ಬೆಲ್ಲ ಒಂದು ಲೋಟ, ಕೊಬ್ಬರಿ ತುರಿ ಒಂದು ಲೋಟ, ತುಪ್ಪ ಒಂದು ಲೋಟ, ಗೇರುಬೀಜ 15- 20., ನೀರು ನಾಲ್ಕು ಲೋಟ
ವಿಧಾನ: ಮೊದಲು ಬಾಕಾಹು, ಚಿರೋಟಿ ರವೆ ಮತ್ತು ಮೆಂತೆ ಹಿಟ್ಟನ್ನು ಕಲಸಿ ಇಟ್ಟುಕೊಳ್ಳಿ. ನಂತರ ದಪ್ಪ ತಳದ ಪಾತ್ರೆಯಲ್ಲಿ ತುಪ್ಪವನ್ನು ಕಾಯಿಸಿ, ಅದಕ್ಕೆ ತುಂಡು ಮಾಡಿದ ಗೇರುಬೀಜ ಹಾಕಿ, ಕೆಂಪಾದ ನಂತರ ಅದನ್ನು ತೆಗೆದು ಬೇರೆ ತಟ್ಟೆಯಲ್ಲಿ ಇಟ್ಟುಕೊಳ್ಳಿ. ನಂತರ ಅದೇ ತುಪ್ಪವಿರುವ ಪಾತ್ರೆಗೆ ಮೊದಲೇ ಮಾಡಿಟ್ಟ ಮೂರು ಹಿಟ್ಟುಗಳ ಮಿಶ್ರಣ ಹಾಕಿ ಘಂ ಎಂಬ ಪರಿಮಳ ಬರುವ ವರೆಗೂ ಹುರಿದುಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಬೆಲ್ಲ ಮತ್ತು ನೀರನ್ನು ಕುದಿಯಲು ಇಡಿ. ನೀರು ಕುದಿ ಬಂದ ನಂತರ ಹುರಿದ ಹಿಟ್ಟಿಗೆ ಹಾಕಿ ಚೆನ್ನಾಗಿ ಕಲಸಿ ಗಟ್ಟಿಯಾಗುತ್ತಾ ಬಂದಾಗ ತುರಿದ ಕೊಬ್ಬರಿ ಮತ್ತು ಗೇರುಬೀಜ ಹಾಕಿ ತಿರುಗಿಸಿ. ಗಟ್ಟಿಯಾಗಿ ಕೇಸರಿ ಬಾತಿನ ಹದಕ್ಕೆ ಬಂದಾಗ ಇಳಿಸಿ.
****
ಬಾಕಾಹು ಬರ್ಫಿ
ಸಾಮಗ್ರಿಗಳು: ಬಾಕಾಹು ಒಂದು ಲೋಟ, ಕಡ್ಲೆ ಹಿಟ್ಟು ಒಂದು ಲೋಟ, ಕಾಯಿ ತುರಿ ಒಂದು ಲೋಟ, ತುಪ್ಪ ಮುಕ್ಕಾಲು ಲೋಟ, ಹಾಲು ಒಂದೂವರೆ ಲೋಟ, ಸಕ್ಕರೆ ಎರಡು ಲೋಟ, ಏಲಕ್ಕಿ ಒಂದು ಚಿಟಿಕೆ.
ವಿಧಾನ: ತುಪ್ಪವನ್ನು ಸಣ್ಣ ಉರಿಯಲ್ಲಿ ಕಾಯಲು ಇಟ್ಟು ಅದಕ್ಕೆ ಬಾಕಾಹು ಮತ್ತು ಕಡ್ಲೆ ಹಿಟ್ಟು ಹಾಕಿ ಗಂಟುಗಳಾಗದಂತೆ ಕರಗಿಸಿಕೊಳ್ಳಬೇಕು. ನಂತರ ಇದಕ್ಕೆ ಏಲಕ್ಕಿ ಬಿಟ್ಟು ಉಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಮಧ್ಯಮ ಉರಿಯಲ್ಲಿ ತಿರುಗಿಸುತ್ತಿರಬೇಕು. ಗಟ್ಟಿಯಾಗುತ್ತಾ ಬಂದ ಹಾಗೆ ಏಲಕ್ಕಿ ಹಾಕಿ ತಿರುಗಿಸಿ ತುಪ್ಪ ಸವರಿದ ತಟ್ಟೆಗೆ ಹಾಕಿ. ತಣ್ಣಗಾದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ.
(ಕೃತಜ್ಞತೆಗಳು: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)
Key Words: Banana Flour, Banana Powder, Banana Flour Recipes, ಬಾಕಾಹು, ಬಾಕಾಹು ಪಾಕೇತನಗಳು, ಬಾಕಾಹು ರೆಸಿಪಿ, ಬಾಳೆಕಾಯಿ ಹುಡಿ ಆಂದೋಲನ, ಬಾಕಾಹು ಅಭಿಯಾನ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ