ಕವನ: ಬಂಧನ

Upayuktha
0

ಹರಿಯುತಿದ್ದೆ ಸಹಜವಾಗಿ 

ಶರಧಿ ಸೇರಬೇಕು ಎಂದು 

ಎತ್ತರಕ್ಕೆ ಕಟ್ಟೆ ಕಟ್ಟಿ 

ತಡೆದು ಬಿಟ್ಟೆಯಾ 

ಚಲನೆ ನನ್ನ ಸಹಜ ಗುಣವು 

ನಿಂತರಲ್ಲಿ ಬಹಳ ನೋವು 

ಗಮ್ಯವಿಹುದು ಭಾರಿ ದೂರ 

ಸೇರಬೇಕಿದೆ 


ಹುಟ್ಟಿನಿಂದ ನಡೆದು ಕುಣಿದು 

ಓಡುತಿದ್ದೆ ದಣಿವು ಇರದೆ 

ಕೃತಕ ಗೋಡೆಯೊಳಗೆ ನನ್ನ

ನೂಕಿ ಬಿಟ್ಟೆಯಾ 

ಗಟ್ಟಿಯಾಗಿ ನಿಲ್ಲಲಾರೆ 

ಕೆಟ್ಟು ಹೋಗಿ ಬಾಳಲಾರೆ

ಬಿಟ್ಟು ಬಿಡಲೆ ಬೇಕು ನೀನು 

ಎಂದಿಗಾದರೂ 


ಬೆಟ್ಟ ಗುಡ್ಡ ಬಯಲಿನಂಥ

ದಾರಿಗಳನು ಬಳಸಿಕೊಂಡು 

ಕಷ್ಟ ಸುಖವ ತಾಳಿಕೊಂಡು 

ಸಾಗುತಿದ್ದೆನು 

ಶರಧಿ ಬಿಟ್ಟು ಬದುಕಲಾರೆ

ಇದನು ನೀನು ಅರಿಯಲಾರೆ 

ನನಗೆ ಎಂದೆ ಕಾಯುತಿಹುದು 

ಜೀವ ಕೋಟಿಯು 


ನಾನು ಯಾರ ಸ್ವಂತ ಅಲ್ಲ

ನನಗೆ ಸ್ವಂತ ಬದುಕೆ ಇಲ್ಲ

ಎಲ್ಲ ಜೀವ ರಾಶಿಯನ್ನು 

ಸಲಹಬೇಕಿದೆ 

ಮಾತೆ ನಾನು ಜೀವ ಕುಲಕೆ 

ಏರು ಕಟ್ಟೆಯೊಳಗಿನಿಂದ

ಬಂಧಮುಕ್ತ ಮಾಡಬೇಕು 

ಇದುವೆ ಧರ್ಮವು


ಪಂಚ ಭೂತಗಳನು ತಡೆದು 

ವಂಚಿಸದಿರು ಸಹಜತೆಯನು 

ಹೊಂಚು ಹಾಕುತಿಹುದು  ಕಾಲ 

ತಕ್ಕ ಸಮಯಕೆ 

ಕೊಂಚ ಕೂಡ ಸುಳಿವು ಇರದೆ 

ಪಂಜರಕ್ಕೆ ಕೆಡವುದಕ್ಕು 

ಮುಂಚೆ ಸತ್ಯ ತಿಳಿದುಕೊಂಡು  

ಜಾಣನಾಗು ನೀ

********

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top