ಬೆಲೆ ಏರಿಕೆ ಮತ್ತು ಜನಸಂಖ್ಯಾ ಏರಿಕೆ: ಒಂದೇ ತಕ್ಕಡಿಯಲ್ಲಿಟ್ಟು ತೂಗುವ ಕಾಲ ಬಂದಿದೆ

Upayuktha
0

ಭಾರತದಲ್ಲಿ ವಸ್ತುಗಳ ದರವನ್ನು ನಿರ್ಧರಿಸುವುದು ಮತ್ತು ಜನಸಂಖ್ಯಾ ನಿಯಂತ್ರಣ-  ಇವೆರಡೂ ತುಂಬಾ ಕ್ಲಿಷ್ಟಕರವಾದ ವಿಷಯಗಳೆಂದು ನಾನು ಓದಿದ ಅರ್ಥಶಾಸ್ತ್ರದಲ್ಲಿ ಹೇಳುತ್ತದೆ. ಯಾವುದೇ ವಸ್ತುವಿನ ದರ ನಿಧ೯ರಿಸುವುದು ಆಯಾಯ ಮಾರುಕಟ್ಟೆಗಳೇ ಆಗಿರುತ್ತದೆ. ವಸ್ತುವಿಗೆ ಬೇಡಿಕೆ ಜಾಸ್ತಿಯಾಗಿ ಸರಬರಾಜು ಕಡಿಮೆ ಆದಾಗ ವಸ್ತುಗಳ ದರ ಸ್ವಾಭಾವಿಕವಾಗಿ ಜಾಸ್ತಿಯಾಗುತ್ತದೆ. ಅದೇ ವಸ್ತುಗಳ ಪೂರೆೈಕೆ ಜಾಸ್ತಿಯಾಗಿ ಬೇಡಿಕೆಗಳು ಕಡಿಮೆಯಾದಾಗ ದರಗಳು ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ. ಇದು ಸಾಮಾನ್ಯವಾಗಿ ಮಾರುಕಟ್ಟೆ ನಿರ್ಧರಿಸುವ ವಸ್ತುಗಳ ದರ ನೀತಿ.


ಜನರ ಆದಾಯವೂ ಜಾಸ್ತಿಯಾದಾಗ ಅವರ ಖರೀದಿಯ ಸಾಮರ್ಥ್ಯವೂ ಹೆಚ್ಚಾಗುತ್ತದೆ. ಅದೇ ಪ್ರಮಾಣದಲ್ಲಿ ವಸ್ತುಗಳು ಪೂರೆೈಕೆ ಇದ್ದಾಗ ಬೆಲೆ ಸಮತೇೂಲನವಾಗಿ ನಿಲ್ಲುತ್ತದೆ. ಇಲ್ಲದೇ ಇದ್ದಲ್ಲಿ ದರಗಳು ಏರು ಪೇರಾಗುವುದು ದರದ ಇನ್ನೊಂದು ಆರ್ಥಿಕ ನೀತಿ.


ವಸ್ತುಗಳ ದರ ಏರುವಿಕೆ ಮತ್ತು ಇಳಿಕೆಗಳು ಸಂದರ್ಭಾನುಸಾರವಾಗಿ ಸುಖ ಕಷ್ಟಗಳನ್ನು ಆಯಾಯ ಫಲಾನುಭವಿಗಳಲ್ಲಿ ಸೃಷ್ಟಿ ಮಾಡುತ್ತದೆ. ಇದಕ್ಕೆ ಉದಾಹರಣೆ ನೀಡುವುದಿದ್ದರೆ- ಕೃಷಿ ವಸ್ತುಗಳಿಗೆ ಬೆಲೆ ಜಾಸ್ತಿಯಾದಾಗ ಅದನ್ನು ಬೆಳೆದ ರೆೈತರಿಗೆ ಖುಶಿ. ಆದರೆ ಅದೇ ವಸ್ತುಗಳನ್ನು ಮಾರುಕಟ್ಟೆಗಳಲ್ಲಿ ಖರೀದಿಸುವ ಗ್ರಾಹಕನಿಗೆ ಬೆಲೆ ಏರಿಕೆ ಅನ್ನುವ ಬಿಸಿ ತಾಗುತ್ತದೆ. ಅಂದರೆ ಈ ಎರಡು ವರ್ಗದ ಖುಶಿ-ಬಿಸಿಗಳನ್ನು ಸಮತೂಗಿಸುವುದು ಹೇಗೆ ಅನ್ನುವುದೇ ಸಾಮಾನ್ಯ ಮಾರುಕಟ್ಟೆಯ ಇನ್ನೊಂದು ಜ್ವಲಂತ ಸಮಸ್ಯೆ. ಹಾಗಾಗಿ ಭಾರತದಂತಹ ಮಿಶ್ರ ಆಥಿ೯ಕ ನೀತಿ ಇರುವ ದೇಶದಲ್ಲಿ ಸರಕಾರವೇ ಎಲ್ಲವನ್ನೂ ಸರಕಾರವೇ ನಿರ್ಧರಿಸಲು ಸಾಧ್ಯವೇ? ಅನ್ನುವುದು ನಮ್ಮ ಮುಂದಿರುವ ಮೂಲಭೂತ ಪ್ರಶ್ನೆ.


ಅಂತರರಾಷ್ಟ್ರೀಯ ಮಾರುಕಟ್ಟೆಯಿಂದಲೇ ನಾವು ಖರೀದಿಸಬೇಕಾದ ಕೆಲವೊಂದು ವಸ್ತುಗಳಾದ ಪೆಟ್ರೋಲಿಯಂ ವಸ್ತುಗಳ ಪೂರೆೈಕೆ ದರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅವುಗಳ ಲಭ್ಯತೆ ಹಾಗೂ ಇನ್ನಿತರ ಅಂತರರಾಷ್ಟ್ರೀಯ ನೀತಿ ಮತ್ತು ಸಂಬಂಧಗಳ ನೆಲೆಯಲ್ಲಿ ಇಂತಹ ಪದಾಥ೯ಗಳ ದರ ನಿರ್ಧಾರವಾಗುತ್ತದೆ. ಆದರೆ ಅದನ್ನೇ ಜೀವ ನಾಡಿಯಾಗಿ ಬಳಸುವ ನಮ್ಮಂತಹ ದೇಶಗಳಲ್ಲಿ ಪ್ರತಿ ವಸ್ತು ಮತ್ತು ಬದುಕಿನ ಮೇಲೆ ನೇರವಾಗಿ ಪರಿಣಾಮ ಬೀರುವ ವಸ್ತುಗಳಾದ ಕಾರಣ ನಮ್ಮ ಜನ ಜೀವನದ ಆಥಿ೯ಕ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಅನ್ನುವುದನ್ನು ಸರ್ಕಾರ ಮತ್ತು ಜನಸಾಮಾನ್ಯರ ಅರಿವಿಗೂ ಬಂದಿರುತ್ತದೆ ಮಾತ್ರವಲ್ಲ ಬಂದಿರಬೇಕು.


ಅಂತೂ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಸ್ತುಗಳ ಬೆಲೆ ನಿಧ೯ರಿಸುವುದು ದೊಡ್ಡ ಸವಾಲು ಹೌದು. ಮಿತಿ ಮೀರಿ ಜನ ಸಂಖ್ಯೆ ಏರುತ್ತಿರುವ ನಮ್ಮ ದೇಶದಲ್ಲಿ ಆಥಿ೯ಕ ಸ್ಥಿತಿ ಸುಧಾರಣೆಯಾಗ ಬೇಕಾದರೆ ಅಗತ್ಯ ವಸ್ತುಗಳ ಉತ್ಪಾದನೆ ಹೆಚ್ಚಿಸುವುದು ಒಂದು ಉಪಾಯವಾದರೆ ಇನ್ನೊಂದು ಪ್ರಮುಖವಾದ ಉಪಾಯವೆಂದರೆ ಜನ ಸಂಖ್ಯಾ ನಿಯಂತ್ರಣ ಮಾಡಲೇ ಬೇಕು. ಇದನ್ನು ಹಲವು ವರುಷಗಳಿಂದ ಆರ್ಥಶಾಸ್ತ್ರಜ್ಞರು ಸರಕಾರಕ್ಕೆ ಸಲಹೆ ಮಾಡುತ್ತಾ ಬಂದಿದ್ದರು. ಪ್ರತಿಯೊಂದು ಸರ್ಕಾರ ಕೂಡಾ ಕುಟುಂಬ ಯೇೂಜನಾ ನೀತಿಯನ್ನು ಓಟ್ ಬ್ಯಾಂಕ್ ನೀತಿಯನ್ನಾಗಿ ಮಾಡಿಕೊಂಡ ಕಾರಣ ಇಂದಿನವರೆಗೆ ಕೂಡಾ ಜನಸಂಖ್ಯಾ ನಿಯಂತ್ರಣ ಸಮಪ೯ಕವಾಗಿ ಜಾರಿಗೆ ತರಲು ಸಾಧ್ಯವಾಗದ ಪರಿಸ್ಥಿತಿ ನಮ್ಮದಾಗಿತ್ತು. ಅಂತೂ ಇತ್ತೀಚಿನ ದಿನಗಳಲ್ಲಿ ಕೆಲವೊಂದು ರಾಜ್ಯಗಳು ದಿಟ್ಟ ಹೆಜ್ಜೆ ಮುಂದಿಡಲು ಯೇೂಜನೆ ರೂಪಿಸುತ್ತಿರುವುದು ಶುಭ ಸುದ್ದಿ ಎಂದೇ ಭಾವಿಸ ಬೇಕಾಗಿದೆ. ಬೆಲೆ ಏರಿಕೆ ಅನ್ನುವುದರ ಜೊತೆಗೆ ಜನಸಂಖ್ಯಾ ಏರಿಕೆ ಕುರಿತಾಗಿ ಧ್ವನಿ ಎತ್ತಬೇಕಾದ ಕಾಲ ಕೂಡಿ ಬಂದಿದೆ ಅಲ್ಲವೇ?


- ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

Key Words: Price rise, Population control, Indian Economy, ಜನಸಂಖ್ಯಾ ಏರಿಕೆ, ಬೆಲೆ ಏರಿಕೆ, ಭಾರತದ ಆರ್ಥಿಕತೆ


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top