ಆ ಸೂರ್ಯ ಉದಯಿಸುವ
ನಿತ್ಯವೂ ಪೂರ್ವದಲಿ
ಸರಿಯಾದ ವೇಳೆಯಲಿ.
ಆಗಸದಿ ಸಂಚರಿಸಿ
ನಿತ್ಯವೂ ಅಸ್ತಮಿಸುವ
ನಿರ್ದಿಷ್ಟ ವೇಳೆಯಲಿ
ಪಶ್ಚಿಮ ದಿಗಂತದಲಿ.
ಮತ್ತೆ ಗ್ರಹ ತಾರೆ
ಆ ಮುದ್ದು ಚಂದ್ರಮನು
ತನ್ನತನ ಬಿಡದೆಯೇ
ಅನವರತ ಚಲಿಸುತಿವೆ
ಕಾಲದ ಅರಿವಿಂದ
ಕಾಲದ ಪರಿಧಿಯೊಳಗೆ.
ಕಾಲವನು ಮೀರದೆಯೆ.
ಮತ್ಯಾಕೆ ಮಾನವನೆ
ಕಾಲ ಕೆಟ್ಟಿದೆ ಎನುವೆ?
ಯಾವ ಮಾಪನ ನಿನಗೆ
ಕಾಲವನು ಕೆಡಿಸಿದ್ದು?
ವಸುಧೆಯೊಳಗೆ ಇರುವಂಥ
ಮಾನವನ ಹೊರತಾದ
ಜೀವಾತ್ಮರಿಗೆ ಇದರರಿವಿಲ್ಲ.
ಮಳೆಗಾಲ ಚಳಿಗಾಲ
ಮತ್ತೆ ಬೇಸಿಗೆ ಕೂಡ
ಕಾಲಕ್ಕೆ ತಕ್ಕಂತೆ
ಬಂದು ಹೋಗುವುದಿಲ್ಲಿ.
ವ್ಯತ್ಯಾಸವಾದರೆ ಅದು ನೀನು
ಮಾಡಿರುವ ಪ್ರಕೃತಿಯ ಮೇಲಿನ
ದೌರ್ಜನ್ಯದಿಂದಲೇ ತಾನೆ.
ಬೀಜಸ್ವರೂಪದಂತೆಯೇ
ಇಂದೂ ಜೀವ ಹುಟ್ಟುವುದು.
ಹಿಂದಿನಂತೆಯೇ ವಿಕಸಿಸುವುದು
ಮತ್ತೆ ಬದುಕಿ ಕೊನೆ ಸೇರುವುದು.
ಪ್ರಕೃತಿಯ ಜತೆ ಸೇರದೇ
ಸಹಜ ಬದುಕನು ಬದುಕದೇ
ಕಾಲವನು ದೂರದಿರು.
ಕಾಲವದು ಕೆಟ್ಟಿಲ್ಲ.
ಕರ್ತವ್ಯ ಭ್ರಷ್ಟರಿಗೆ,
ಸಹಜತೆಯ ಬಯಸದವರಿಗೆ
ಅನ್ಯ ಜೀವಿಯ ಬದುಕನ್ನು
ಕಸಿವಂಥ ಸ್ವಾರ್ಥ ಗುಣಕೆ
ಕಾಲ ಕೆಟ್ಟಂತೆನಿಸುವುದು.
ಕಾಲ ನಿರ್ದೋಷಿಯು
ಕಾಲ ಕೆಟ್ಟಿಲ್ಲ ಕಾಲ ಕೆಟ್ಟಿಲ್ಲ.
*******
ಸಹಸ್ರಬುಧ್ಯೆ ಮುಂಡಾಜೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ