ಕವನ: ಆಸೆಯ ತಂದವಳು

Upayuktha
0


 


ಮರುಳು ಆದೆನು 

ತರಳೆ ನಿನ್ನಯ 

ಬರಿದೆ ಮಾತಿನ ಮೋಡಿಗೆ 

ಮರೆತೆ ನನ್ನನೆ 

ಮರೆಯಲಡಗುತ

ಬಿರಿದ ಆ ಕುಡಿ ನೋಟಕೆ  


ಇನಿತು ಆದರು

ಮನಕೆ ಚೇತನ 

ನನಗೆ ನೀನೇ ಅಂದಿಗೆ 

ಕನಸು ಕಾಣುತ 

ದಿನವು ಕಳೆದಿಹ

ನೆನಪು ಮಾತ್ರವೆ ಇಂದಿಗೆ 


ಮಳೆಯ ಬರಿಸದ

ಬಿಳಿಯ ಮೋಡವು 

ಅಳಿದು ಹೋಗುವ ತೆರದಲಿ 

ಸುಳಿವೆ ಇಲ್ಲದೆ 

ಉಳಿಸಿ ಹೋಗಿಹೆ

ಗೆಳತಿ ಭಾವವ ಮನದಲಿ


ಎನ್ನ ಹೃದಯಕೆ

ಕನ್ನ ಕೊರೆಯುವ 

ಮುನ್ನ ಯೋಚನೆ ಬೇಡವೇ 

ಚಿನ್ನದಂತಹ 

ಚೆನ್ನ ಮನಸಲಿ 

ಸೊನ್ನೆ ಏತಕೆ ಕಾಣುವೆ  


ಸುಳಿಯ ಗಾಳಿಯು 

ಚಳಿಯ ತರುವುದೆ 

ಬಳಿಯೆ ಸಾಗಲು ಬೆವರದೆ 

ಥಳಕು ಬಳುಕಲಿ

ಬಳಿಯಲಿದ್ದರು 

ಕಳೆದು ಹೋಗಿಹೆ ಕಾಣದೆ 


ಸರಿದು ಹೋದವು 

ಭರದಿ ದಿನಗಳು 

ಹರಿವ ನೀರಿನ ತೆರದಲಿ 

ಕಿರಿಯ ಬಡತನ 

ಹಿರಿಯ ಭಾವಕೆ 

ಸೇರದೆಂದಿಗು ಜಗದಲಿ 

********

-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top