ಕವನ-ಸ್ಮರಣ: ತವರಿಗೆ ಪಯಣ

Upayuktha
0



ನನ್ನಯ ಮಡದಿಯು 

ತವರಿಗೆ ಹೋದಳು 

ನಿನ್ನೊಡನಿರಲಾರೆಂದೆನುತ 

ಬಿಂಕವ ತೋರದೆ 

ಅಸಹನೆ ಇಲ್ಲದೆ 

ಇನ್ನೆಂದಿಗು ಬರಲಾರೆನುತ 


ಜೀವಕ್ಕಿಂತಲು 

ಪ್ರೀತಿಸುತಿದ್ದೆನು 

ಜಗಳವನೆಂದೂ ಆಡದೆಯೆ

ನೋವುಗಳೆಲ್ಲವ

ನಾನೇ ಸಹಿಸಿದೆ

ಮುನಿಸನು ಎಂದೂ ತೋರದೆಯೆ 


ನನ್ನಯ ಪತಿಯೂ 

ನನ್ನಯ ಮಕ್ಕಳು 

ಎನ್ನುತ ಜೀವವ ತೇದಿಹಳು

ಬಡತನವೆಂಬುದು

ಮನಸಿನ ಭಾವವು 

ಎನ್ನುತ ಸುಖದಲೆ ಬಾಳಿದಳು  


ಕಾಯಕವೊಂದೇ 

ಜೀವನ ಧರ್ಮವು 

ಎನ್ನುವ ಸತ್ಯವ ಕಲಿಸಿದಳು 

ಜೀವಿಗಳೆಲ್ಲಕು 

ಪ್ರೀತಿಯ ತೋರುತ 

ತಾಯ್ತನ ಏನೆಂದರುಹಿದಳು  


ಕಾಯಕ ಮಾಡುತ 

ತನ್ನದೆ ಕಾಯವ

ಕಾಯಲು ಆಗದೆ ಬಳಲಿದಳು 

ಕಾಯುವ ದೇವನು 

ಕಾಯನು ಎನ್ನುವ 

ಸತ್ಯವ ತಿಳಿಯುತ ನಡೆದವಳು 


ಶಂತನು ಪ್ರಶ್ನೆಗೆ

ಗಂಗೆಯು ತವರಿಗೆ

ಹೋದಳು ಅಂದಿನ ಕಾಲದಲಿ 

ರಾಮನುಪೇಕ್ಷೆಗೆ 

ಜಾನಕಿ ತವರಿಗೆ 

ಹೋಗಿಯೆ ಬಿಟ್ಟಳು ಪೂರ್ವದಲಿ 


ಶಂತನು ರಾಮನು 

ನನ್ನೊಳಗಿಲ್ಲದೆ 

ಜಾನಕಿ ಗಂಗೆಯು ಯಾಕಿವಳು 

ಮಂಥನ ಮಾಡಲು 

ಸಮಯವು ಎಲ್ಲಿದೆ 

ತವರಿನ ಆಸರೆ ನಂಬಿಹಳು 


ಪ್ರೀತಿಯ ಗಳಿಸುತ 

ಪ್ರೀತಿಯ ಬೆಳೆಸುತ 

ಪ್ರೀತಿಯ ಹಂಚುತ ಸಾಗಿಹಳು 

ಸ್ವಾರ್ಥವೆ ಇಲ್ಲದ

ಪ್ರೀತಿಯ ಮಡದಿಯು 

ಅಜಾತಶತ್ರುವೆ ಎನಿಸಿಹಳು


ಜಗಳವ ಮಾಡುತ 

ತೌರನು ಸೇರಲು 

ಪ್ರೀತಿಯ ತೋರುತ ಕರೆಬರುವೆ 

ದೇವರೆ ನಿನ್ನನು 

ಕರೆದಿರುವಾಕ್ಷಣ 

ಯಾರಲಿ ಬೇಡಲಿ ಬರಿ ನೋವೆ.


ನೀನಿಲ್ಲದ ಮನೆ

ಮನೆಯಲ್ಲವು ಅದು

ಪಂಜರದಂತೆಯೆ ಕಾಣುವುದು 

ಬಾಗಿಲೆ ಇಲ್ಲದ

ಬಂಧಿಸಲಾಗದ

ಪಂಜರವೂ ಭಣಗುಟ್ಟುವುದು. 


ಬೇಸರ ತೋರದೆ 

ನಿನ್ನಯ ಪಯಣಕೆ 

ಶುಭವನು ಕೋರುವೆ ಅನುದಿನವು  

ನಿನ್ನಯ ತವರಲಿ

ಸುಖವನು ಕಾಣುವೆ 

ಯಾದರೆ ಮರೆವೆನು ಈ ನೋವು. 


-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top