ಲಲಿತ ಪ್ರಬಂಧ: ಘಮ ಘಮಾಡಸ್ತಾವ ಮಲ್ಲಿಗಿ.... ಮಲ್ಲಿಗೆಯೊಂದಿಗೆ ಸುಮಸಂಧಾನ

Upayuktha
0

ಮಲ್ಲಿಗೆ ಎಂಬುದು ಮೂರಕ್ಷರದ ಮಹಾಕಾವ್ಯ. ಅದು ಕಬ್ಬಿಗರ ಪಾಲಿನ ಗಾಯತ್ರಿಯದ್ಭುತ ಮಂತ್ರ. ಅದು ವಿರಹಿಗಳ ಪಾಲಿನ ಪರಿಹಾರದ ಮಹಾಸೂತ್ರವೂ ಹೌದು. ಅನುನಯ ದಾಂಪತ್ಯಕ್ಕೆ ಅದೊಂದು ಸಹಜ ಮುನ್ನುಡಿ. ಅದು ರಸಾದ್ರ್ರ ಭಾವದ ಸಂಕೇತ. ಮೈಮನಗಳನ್ನು ಪುಲಕಗೊಳಿಸುವ ಪೂವದು. ಸ್ವಚ್ಛತೆಗೆ, ಪರಿಶುಭ್ರತೆಗೆ ಮಲ್ಲಿಗೆಯ ಮುಂದೆ ಸರಿಸಾಟಿಯಾಗಿ ನಿಲ್ಲಬಲ್ಲವರು ಯಾರಿಹರು? ಅಂತಹ ಅಸಾಮಾನ್ಯ ಪುಷ್ಪವದು.


ನಿರ್ಮಲ ಭಾವದ ಇಂತಹ ಮಲ್ಲಿಗೆಗೆ ಚೆಲುವಿನಲ್ಲಿ ಯಾವ ಸುಮವೂ ಸಮಾನವಲ್ಲ. ಮೂರ್ತಿ ಚಿಕ್ಕದಾದರೂ ಮಲ್ಲಿಗೆಯ ಕೀರ್ತಿ ದೊಡ್ಡದು. ಖ್ಯಾತಿಯಲ್ಲಿ ಗಲಿವರನಷ್ಟು ಎತ್ತರಕ್ಕೆ ಏರಿದರೂ, ಈ ಲಿಲಿಪುಟ್ ಎಂದೂ ಬೀಗದೆ, ಬಳುಕದೆ ಸಂಯಮವನ್ನು ಪಾಲಿಸಿದೆ. ಬಗೆಬಗೆ ಬಣ್ಣಗಳಲ್ಲಿ ಲಭ್ಯವಾಗುವ ಗುಲಾಬಿಯು  ಪ್ರೇಮಿಗಳ ದಿನದಂದು ಮಾತ್ರ ಮೆರೆದು, ಮರೆಯಾಗುವ ‘ಏಕ್ ದಿನ್ ಕಾ ಸುಲ್ತಾನಾ!’ ಆದರೆ ಮಲ್ಲಿಗೆ;  ಸುಮ ಸಾಮ್ರಾಜ್ಯದ ಅನಭಿಷಿಕ್ತ ಸಾಮ್ರಾಜ್ಞಿ. ಅದು ಸದಾಬಹಾರ್. ಇಂದ್ರಚಾಪದ ಏಳೂ ಬಣ್ಣಗಳನ್ನು ಹದವಾಗಿ ಅಡಕಗೊಳಿಸಿಕೊಂಡು ಏಕತ್ರಗೊಂಡಿರುವ ಮಲ್ಲಿಗೆ ಎಂಬ ಶ್ವೇತಸುಂದರಿಯೊಂದಿಗೆ ಮಾರ್ಜಾಲ ಹೆಜ್ಜೆ ಹಾಕಬಲ್ಲ, ಸಹಸ್ಪರ್ಧಿಗಳಿಲ್ಲ. ಹಾಗಾಗಿ 'ಮಲ್ಲಿಗೆ ಬಲಂ ಅಜೇಯಂ'. ಈ ಪುರಾತನ ಪುಷ್ಪ ಇದುವರೆಗೂ ಯಾರಿಂದಲೂ ರಗಳೆ ಎನಿಸಿಕೊಂಡಿಲ್ಲ! ಅದರ ಬಗೆಗೆ ದೂರಿದವರಿಲ್ಲ. ಜಾಸ್ಮಿನ್ ಎಂಬ ಈ ಚಮೇಲಿಯನ್ನು ಜರಿದವರೂ ಇಲ್ಲ. ಅದೊಂದು ಅಜಾತಶತ್ರು. ಪ್ರಕೃತಿದತ್ತವಾದ ತನ್ನ ಮೃದುತ್ವವನ್ನು ಜತನದಿಂದ ಕಾಪಾಡಿಕೊಂಡಿದೆ.  


ಮಲ್ಲಿಗೆಯನ್ನು ಹೆಣ್ಣಿಗೆ, ಹೆಣ್ತನಕ್ಕೆ ಹೋಲಿಸುವುದು ಸಾಮಾನ್ಯ ಸಂಗತಿ. ಇದು ಅಪವಾದಗಳೇ ಇಲ್ಲದ ನಿಯಮ. ಓ ಹೆಣ್ಣೇ, ಓ ಹೆಣ್ಣೇ ಏಳುಸುತ್ತಿನ ದುಂಡುಮಲ್ಲಿಗೆ ಎಂದು ಓರ್ವ ಇನಿಯ ಸಂಬೋಧಿಸಿದರೆ ಮತ್ತೊಬ್ಬ ಕಡುಪ್ರೇಮಿ, ದುಂಡುಮಲ್ಲಿಗೆ ಮಾತಾಡೆಯಾ, ಕೆಂಡಸಂಪಿಗೆ ನೀನಾದೆಯಾ ಎಂದು ಒಲಿಸಲು ತೊಡಗುತ್ತಾನೆ. ಮಗದೊಬ್ಬ, ಮಲ್ಲಿಗೆ ನನ್ನ ಮಲ್ಲಿಗೆ, ಈ ಕೋಪವೇಕೆ ಚಿನ್ನಾ ಎಂದು ರಮಿಸಿ ಉತ್ತರ ಬಯಸುತ್ತಾನೆ. ಅಪರೂಪಕ್ಕೆ ಹಾಡು ಬರೆಯುತ್ತಿದ್ದ ತರಾಸು “ಅರಳು ಮಲ್ಲಿಗೆ ಅರಳು, ಬಿರಿದು ಪರಿಮಳ ಬೀರು” ಎಂದು ಅಹವಾಲು ಮಂಡಿಸಿದರು. ಅರಳಿದ ಬಿಡಿ ಮಲ್ಲಿಗೆಗಳನ್ನು ಶಿವರಂಜನಿ ರಾಗದಲ್ಲಿ  ಆರ್ತವಾಗಿ ಪೋಣಿಸಿದ, ರಾಜನ್-ನಾಗೇಂದ್ರ ಸಹೋದರರು ತಮ್ಮ ರಾಗ ಸಂಯೋಜನೆಗಾಗಿ ತರಾಸು ಅವರಿಂದಲೇ ಸೈ ಎನಿಸಿಕೊಂಡಿದ್ದು ಉಲ್ಲೇಖಾರ್ಹ.


ಅಚ್ಚರಿಯೆಂದರೆ ಅಕ್ಕಮಹಾದೇವಿಯ ವಚನಗಳ ಅಂಕಿತವಾದ  ಚೆನ್ನಮಲ್ಲಿಕಾರ್ಜುನನಲ್ಲಿ ಖ್ಯಾತ ಕವಿ ಡಾ. ಎ.ಕೆ. ರಾಮಾನುಜನ್ ಅವರು ಮಲ್ಲಿಗೆಯನ್ನು ಕಂಡಿರುವ ಪರಿ. ಅವರು ಅಕ್ಕನ ವಚನಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಅಲ್ಲಿ ಚೆನ್ನಮಲ್ಲಿಕಾರ್ಜುನನನ್ನು ‘ದಿ ಲಾರ್ಡ್ ಆಫ್ ಜಾಸ್ಮಿನ್’ (ಮಲ್ಲಿಗೆಯ ಮಹಾದೇವ) ಎಂದು ಕರೆದಿದ್ದಾರೆ! ಅದಕ್ಕೇ ನಮ್ಮ ಜನಪದರು ಚೆಲ್ಲಾಟಗಾರ ಮಾದಪ್ಪನಿಗೆ ಮಲ್ಲಿಗೆಯನ್ನು ಚೆಲ್ಲಿ, ಚೆಲ್ಲಿ ಸಂಭ್ರಮಿಸಿದ್ದಾರೆ. ಮಲ್ಲಿಗೆಯೆಂಬುದು ನಮ್ಮೆಲ್ಲರ ಹೃದಯಗಳ ಸುಂದರ ಹಂದರ.


ಮಲ್ಲಿಗೆಯ ಮಂತ್ರ ಪಠಿಸದ, ಜಪಿಸದ, ಧ್ಯಾನಗೈಯದ ಕವಿಗಳಿಲ್ಲ. ಅದು ಅವರ ‘ಇಜû್ಜತ್ ಕಾ ಸವಾಲ್’. ಮರ್ಯಾದೆಯ, ಅಂತೆಯೇ  ಅಸ್ತಿತ್ವದ ಪ್ರಶ್ನೆಯೂ ಹೌದು. ಹಾಗಾಗಿ ಮಲ್ಲಿಗೆಗೆ ಕನ್ನಡ ಕಬ್ಬಿಗರೆಲ್ಲ ಕೆಂಪುಹಾಸು ಹಾಸಿ ನಡುಬಗ್ಗಿ, ನಜûರುಗಳನ್ನು ಒಪ್ಪಿಸಿ ಅಕ್ಷರ ನೀರಾಜನ ಗೈದಿದ್ದಾರೆ.  


ಕೆ.ಎಸ್. ನರಸಿಂಹಸ್ವಾಮಿ ಅವರು ಮಲ್ಲಿಗೆಯ ಕವಿ ಎಂದೇ ಖ್ಯಾತರಾದವರು. ತಮ್ಮ ನವಿರಾದ ದಾಂಪತ್ಯ ಗೀತೆಗಳ ಸಂಕಲನಕ್ಕೆ  ಮೈಸೂರ ಮಲ್ಲಿಗೆ ಎಂದು ಹೆಸರಿಟ್ಟರು. ಈ ಕವನ ಸಂಕಲನವನ್ನು ಆಧರಿಸಿದ ಚಲನಚಿತ್ರವೂ ತೆರೆಕಂಡಿತು. ನರಸಿಂಹಸ್ವಾಮಿ ಅವರು “ಮೈಸೂರೆನ್ನಿ, ಕನ್ನಡವೆನ್ನಿ, ಮಲ್ಲಿಗೆಯೆನ್ನಿ ಒಂದೇ” ಎಂದು ಮೂರನ್ನೂ ಸಮೀಕರಿಸಿದ್ದಾರೆ. ದುಂಡುಮಲ್ಲಿಗೆ ಇವರ ಮತ್ತೊಂದು ಸಂಕಲನ. ಅವರ ಸಮಗ್ರ ಕಾವ್ಯದ ಶೀರ್ಷಿಕೆ ‘ಮಲ್ಲಿಗೆಹಾರ’. ಮಲ್ಲಿಗೆಯಿಂದ ಪ್ರಭಾವಿತಗೊಂಡ ಸಾರಿಗೆ ಸಂಸ್ಥೆ ಬೆಂಗಳೂರು-ಮೈಸೂರು ಮಾರ್ಗದ ಬಸ್ಸುಗಳಿಗೆ ‘ಮೈಸೂರು ಮಲ್ಲಿಗೆ’ ಎಂಬ ಹೆಸರನ್ನೇ ಆಯ್ದುಕೊಂಡಿತು.  


ಬೇಂದ್ರೆ ಮಾಸ್ತರರನ್ನು ಸಹ ಮಲ್ಲಿಗೆಯ ಕಂಪು ಕಾಡದೆ ಬಿಟ್ಟಿಲ್ಲ. “ಗಮ ಗಮಾಡಸ್ತಾವ ಮಲ್ಲಿಗಿ, ನೀ ಹೊರಟ್ಟಿದ್ದೀಗ ಎಲ್ಲಿಗೆ” ಎಂದು ಹಾಡಾಗಿದ್ದಾರೆ. ಬೇಂದ್ರೆಯವರಿಗೆ ಅದು ಮಲ್ಲಿಗಿಯ ಗಮ. ಮಲ್ಲಿಗೆಯ ಘಮವಲ್ಲ! ಇನ್ನೊಂದೆಡೆ ಅವರು “ಆಹಾಹಾ ಮಲ್ಲಿಗೆ ಬರುವೆ ನಾ ನಿನ್ನಲ್ಲಿಗೆ” ಎಂದು ಮೋಹಗೊಂಡಿದ್ದಾರೆ. “ಸೋಜುಗಾದ ಸೂಜುಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡುಮಲ್ಲಿಗೆ” ಎಂಬ ಜನಪ್ರಿಯ ಜಾನಪದ ಗೀತೆ ಕೇಳುಗರ ಮಾಡಿರುವ ಮೋಡಿಯನ್ನು ಮರೆಯಲಾದೀತೆ? ಮಲೆ ಮಾದಪ್ಪ ಸ್ವಾಮಿಗೂ, ಮಲ್ಲಿಗೆಗೂ ಇರುವ ಅವಿನಾ ಸಂಬಂಧವನ್ನು ಅಲ್ಲಗಳೆಯಲಾದೀತೆ? ಗೋಕಾಕರು ಇಲ್ಲೆ ಇರು ಅಲ್ಲೆ ಹೋಗಿ ಮಲ್ಲಿಗೆಯನು ತರುವೆನು. ನೇಹಕೊಂದು, ನಲುಮೆಗೊಂದು ಗುರುತನಿರಿಸಿ ಬರುವೆನು ಎಂದು ಆಲಾಪಿಸಿದ್ದಾರೆ. ಕುವೆಂಪು ಅವರದು ಮಲ್ಲಿಗೆ, ಸಂಪಿಗೆ, ಕೇದಗೆ ಸೊಂಪಿಗೆ ಎಂದು ರಸರೋಮಾಂಚನಗೊಳ್ಳುವ ಕನ್ನಡ ಮನಸ್ಸು. ಅನೇಕ ಕನ್ನಡ ಪುಸ್ತಕಗಳು ತಮ್ಮ ಶೀರ್ಷಿಕೆಯಲ್ಲೇ ಮಲ್ಲಿಗೆಯನ್ನು ಹೊತ್ತು ಮೆರೆದಿವೆ. ಮೈಸೂರು ಮಲ್ಲಿಗೆ, ಪುಟ್ಟಮಲ್ಲಿಗೆ ಹಿಡಿತುಂಬ, ಮಲ್ಲಿಗೆಹಾರ, ದುಂಡುಮಲ್ಲಿಗೆ ಹೀಗೆ ಪಟ್ಟಿ ಬೆಳೆಯುತ್ತದೆ.


ಹಸಿರು ಗಿಡದ ತುಂಬಾ ಮೊಸರು ಚೆಲ್ಲಿದೆ ಎಂಬಂತಹ ಒಗಟುಗಳಷ್ಟೇ ಅಲ್ಲ; ಗಾದೆಗಳು ಸಹ  ಮಲ್ಲಿಗೆಯೊಂದಿಗೆ ನಂಟು ಸ್ಥಾಪಿಸಿಕೊಂಡಿವೆ. ಇಷ್ಟಕ್ಕೂ ಮಲ್ಲಿಗೆಯೊಂದಿಗೆ ಟೂ ಬಿಟ್ಟವರಾರು? ಓಡಿ ಬಂದು ಸಂಗ ಕಟ್ಟುವ ಮುದ್ದು ಹೂವದು. ಗುಲಾಬಿಯ ಹಾಗೆ ಚುಚ್ಚದೆ, ಬಾ ಎಂದಾಗಲೆಲ್ಲ ಕಕ್ಕುಲತೆಯಿಂದ ಬೊಗಸೆ ತುಂಬುವ ಬಂಗಾರದ ಹೂವದು. ಮಲ್ಲಿಗೆಯಂತಹ ಸ್ನೇಹಜೀವಿ ಹೂವು ಇನ್ನೊಂದಿಲ್ಲ. ಬಿಟ್ಟೇನೆಂದರೂ ಬಿಡದ  ಮಾಯೆಯದು. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ, ಜುಟ್ಟಿಗೆ ಮಲ್ಲಿಗೆ ಹೂವು ಎಂಬ ಗಾದೆಯೂ ಮಲ್ಲಿಗೆಯ ಪಾರಂಪರಿಕ  ಪಾರಮ್ಯವನ್ನೇ ಎತ್ತಿ ಹಿಡಿದಿದೆ. ಹಿಂದೆ ಮಲ್ಲಿಗೆ ಮುಡಿಯುವುದು ಪ್ರತಿಷ್ಠಿತ ಸಂಗತಿಯಾಗಿತ್ತು. ಇಂದು ಜಡೆ ಮರೆಯಾದರೂ ಮೊಟಕುಗೊಳಿಸಿದ ಜುಟ್ಟುಗಳಿವೆ. ಆದರೆ ಆ ಶಿಖೆಗಳು ಸುಮರಹಿತವಾಗಿ ಬಿಕೋ ಎನ್ನುತ್ತಿವೆ.


ಲಿಂಗ ಸಮಾನತೆಯ ಹಂಬಲದಲ್ಲಿರುವ ಅಂಗನೆಯರು ಮೊದಲು ಕಿತ್ತೆಸೆದದ್ದು ತಮ್ಮ ತುರುಬಿನ ಮಲ್ಲಿಗೆ ದಂಡೆಯನ್ನು. ಅನಂತರ ಕುಂಕುಮದ ಬೊಟ್ಟನ್ನು. ಮಲ್ಲಿಗೆ ದಂಡೆ ಎಂದ ಕೂಡಲೇ ತಮಿಳು ಹಾಡೊಂದು ನೆನಪಾಗುತ್ತದೆ. ಸರಿ ಸುಮಾರು 45 ವರ್ಷಗಳಿಂದ ಬಿಡದೆ ಕಾಡುತ್ತಿರುವ ಸಿನಿಗೀತೆಯದು. ಕಂಠಕ್ಕೆಲ್ಲ ಜೇನು ಮೆತ್ತಿಕೊಂಡಂತಹ, ಇನಿದನಿಯ ಗಾಯಕಿ ವಾಣಿಜಯರಾಂ ಅವರ 'ಮಲ್ಲಿಗೈ, ಎನ್ ಮಣ್ಣನ್ ಮಯಂಗು'. ತುರುಬಿನ ತುಂಬೆಲ್ಲ ಆಂಬೂರು ಮಲ್ಲಿಗೆ ಮುಡಿದ ನಾಯಕಿ, ನಾಯಕನ ಮೇಲೆ ಬೊಗಸೆ, ಬೊಗಸೆ ಮಲ್ಲಿಗೆ ಚೆಲ್ಲುವ  ಮನೋಹರ ದೃಶ್ಯವಿದೆ. ಅದೊಂದು ದಿವಿನಾದ ಅನುಭವ ನೀಡುವ ಗೀತೆ. ಸುಖ ಎಲ್ಲಿದೆಯೆಂದರೆ, ಬೆರಳ ತುದಿಯಲ್ಲಿ, ಕಣ್ಣ ಮೊನೆಯಲ್ಲಿ, ಎದೆಯ ಬಟ್ಟಲಲಿ, ಕಡೆಯದಾಗಿ ಮಲ್ಲಿಗೆಯ ಪರಿಮಳದಲ್ಲಿ ಎನ್ನಬಹುದು. ಈ ಹಾಡಿನ 30 ವರ್ಷಗಳ ಅನಂತರ ಬಂದ ಜನಪ್ರಿಯ `ಮಲ್ಲಿಗೈ, ಮಲ್ಲಿಗೈ ಪಂದಲಿ' ಎಂಬ ತಮಿಳು ಹಾಡಿನ ಆರಂಭದಲ್ಲೇ ಮಲ್ಲಿಗೆಯುಂಟು. ಆದರೆ ನಾಯಕಿಯ ತುರುಬು ಮಾತ್ರ  ಖಾಲಿ, ಖಾಲಿ.


ತೆಲುಗಿನ ಹಾಡೊಂದರಲ್ಲಿ ಕವಿಯೊಬ್ಬ ತನ್ನ ಪ್ರೇಯಸಿಯ ಅಚ್ಚ ಬಿಳುಪಿಗೆ ಮರುಳಾದ ಮಲ್ಲಿಗೆಯೊಂದು ತನಗೆ ತುಸು ಬಿಳುಪನ್ನು ಕಡ ನೀಡೆಂದು ಅವಳನ್ನು ಕೋರಿತೆಂದು ಪ್ರಗಲ್ಭ ಮೆರೆದಿದ್ದಾನೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ ‘ಮಾತಾಡ್ ಮಾತಾಡು ಮಲ್ಲಿಗೆ' ಚಲನಚಿತ್ರ. ಜಾಗತೀಕರಣದ ಸಂದರ್ಭದಲ್ಲಿ ಮಲ್ಲಿಗೆ ಬೆಳೆಗಾರರ ಸಂಕಷ್ಟಗಳನ್ನು ಅನಾವರಣಗೊಳಿಸಿದೆ. ಒಂದೆರಡು ಮೊಳ ಮಲ್ಲಿಗೆ ತಂದು ಚೊಕ್ಕವಾಗಿ, ಸುಬ್ರಾಯ ಚೊಕ್ಕಾಡಿಯವರ; “ಮುನಿಸು ತರವೇ ಮುಗುದೆ, ಹಿತವಾಗಿ ನಗಲೂ ಬಾರದೆ?” ಎಂದು ಗುನುಗಿದೊಡನೆ ನಲ್ಲೆ ನಲ್ಲನೆದೆಗೆ ಒರಗಿ ಮಧ್ಯಮಾವತಿ ಎಂಬ ಮುಲಾಮನ್ನು ಸ್ವತಃ ತಾನೇ ಲೇಪಿಸಿಕೊಂಡು, ಮುನಿಸಿಗೆ ಮಂಗಳ ಹಾಡುವ ಸನ್ನಿವೇಶಗಳನ್ನು ಹಳೆಯ ಕಥೆ,  ಕಾದಂಬರಿಗಳಲ್ಲಿ ಕಾಣುತ್ತಿದ್ದೆ. ಕ್ರಮೇಣ ನಮ್ಮ ಬದುಕಿನೊಂದಿಗಿದ್ದ ಬಂಧವನ್ನು ಅದು ಕಳಚಿಕೊಳ್ಳುತ್ತಿದೆಯೇನೋ ಎಂದೆನಿಸುತ್ತಿದೆ.


ಕರುನಾಡಿನಲ್ಲಷ್ಟೇ ಅಲ್ಲ, ನೆರೆಯ ಆಂಧ್ರಪ್ರದೇಶದ ಬದುಕೂ ಮಲ್ಲಿಗೆಯೊಂದಿಗೆ, ಅದರ ನೆನಪುಗಳೊಂದಿಗೆ ಹೆಣೆದುಕೊಂಡಿದೆ. ಆಂಧ್ರದ ನಾಡಗೀತೆ,  `ಮಾ ತೆಲುಗು ತಲ್ಲಿಕಿ ಮಲ್ಲೆಪೂದಂಡ. ಮಾ ಕನ್ನತಲ್ಲಿಕಿ ಮಂಗಳಾರತುಲು' ಎಂದು ಆರಂಭದಲ್ಲೇ ಮಲ್ಲಿಗೆಯನ್ನು ಸ್ಮರಿಸುತ್ತದೆ. ನಿರ್ದೋಷಿ ಎಂಬ ಚಿತ್ರದಲ್ಲಿ ನಾಯಕ ಪಾತ್ರಧಾರಿ ‘ಮಲ್ಲಿಯಲಾರಾ, ಮಾಲಿಕಲಾರಾ, ಮೌನಮುಗಾ ಉನ್ನಾರಾ, ಮಾ ಕಥಯೇ ವಿನ್ನಾರಾ?’ ಎಂದು ಮಲ್ಲಿಗೆಯ ದಂಡೆ ಹಿಡಿದು ಪ್ರಲಾಪಿಸುತ್ತಾನೆ. ಶಂಕರಾಭರಣಂನಲ್ಲಿ ಹಿಂದೋಳ ರಾಗಾಧಾರಿತ ಮಧುರ ಗೀತೆಯೊಂದರ ಸುಂದರ ಸಾಲು: “ವೇಸವಿ ರೇಯಿಲಾ, ಇಲಾ ನಾ ಎದಲೋ ಮಲ್ಲೆಲು ಚಲ್ಲಗಾ, ಮದಿನಿ ಕೋರಿಕಲು, ಮದನ ಗೀತಿಕಲು.” ಇದು ಬೇಸಗೆಯ ಇರುಳಲ್ಲಿ ಎದೆಯಲ್ಲಿ ಮಲ್ಲಿಗೆ ಉಂಟುಮಾಡುವ ಭಾವನೆಗಳನ್ನು ಬಣ್ಣಿಸಿದೆ. ಭಾವನೆ ಅರಳಲೂ, ಕಾಮನೆ ಕೆರಳಲೂ ಮಲ್ಲಿಗೆ ಕಾರಣವಾಗುತ್ತದೆ. ಬೆಲೆವೆಣ್ಣು ಸಹ, ಬಂದೇ ಇಲ್ಲಿಗೆ ನಾ ಸಂಜೆ ಮಲ್ಲಿಗೆ ಎನ್ನುತ್ತಾಳೆ. ಮತ್ತೋರ್ವಳು ತನ್ನನ್ನು ತಾನು ಮೈಸೂರ ಮಲ್ಲಿಗೆ ಚೆಂದವೊ ಚೆಂದ ಎಂದು ಬಣ್ಣಿಸಿಕೊಳ್ಳುತ್ತಾಳೆ. ತೆಲುಗು ಸಿನಿಮಾದ ಹಾಡೊಂದರಲ್ಲಿ , `ಮಸಕ ಮಸಕ ಚೀಕಟಿಲೋ, ಮಲ್ಲೆತೋಟ ವೆನಕಾಲ ಮಾಪಟೇಲ ಕಲುಸುಕೋ, ನೀ ಮನಸೈನದಿ ದೊರಕುತುಂದಿ' ಎಂದು ಮಿಲನ ತಾಣದ ಸೂಚನೆ ನೀಡಲಾಗಿದೆ.  ಅದು ಮಲ್ಲಿಗೆ ತೋಟದ ಹಿಂದೆ ಎಂದು ಹೇಳಿರುವುದನ್ನು ಗಮನಿಸಬಹುದು. ಸಂಕಟ-ಸಂಭ್ರಮ, ಭಾವನೆ-ಕಾಮನೆ ಹೀಗೆ ಎಲ್ಲ ಸಂದರ್ಭಗಳಲ್ಲೂ ಮಲ್ಲಿಗೆ ಮನುಜನೊಂದಿಗೆ, "ಹಮ್ ಸಾತೋಂ ಜನಮ್ ಕಾ ಸಾಥ್" (ನಮ್ಮದು ಏಳೇಳು ಜನುಮದ ಬಂಧ) ಎನ್ನುತ್ತ ಹೆಜ್ಜೆ ಹಾಕುತ್ತದೆ. ಕಲ್ಯಾಣ, ಸನ್ಮಾನ, ನಿವೃತ್ತಿಯ ಸಂದರ್ಭಗಳಲ್ಲಿ ಮಲ್ಲಿಗೆಹಾರ ಹಾಕಿದರೆ ಅವರ ಘನತೆಯೇ ಮಿಗಿಲು.


ಅತಿಥಿಗಳಿಗೆ, ಗವ್ಯರಿಗೆ, ಅತಿಗಣ್ಯ ವ್ಯಕ್ತಿಗಳಿಗೆ ಕರ್ನಾಟಕದಲ್ಲಿ, ಮಲ್ಲಿಗೆ ಹಾರವೇ ಹಾಕಬೇಕು. ಅದೇ ರೂಢಿ; ಅದೇ ಸಂಪ್ರದಾಯ.  ವಿದೇಶಿ ಗಣ್ಯರು ಇಲ್ಲಿಗೆ ಬಂದಾಗ ಮಲ್ಲಿಗೆ ಮಾಲೆ ತೊಡಿಸಿದರೆ ನಿಮಿಷಕ್ಕೊಮ್ಮೆ ಅವರು ಅದನ್ನು ಎಳೆದೆಳೆದು ಮೂಸುವ ಪರಿ, ನೋಡಲು ಮುದ ನೀಡುತ್ತದೆ. ಉತ್ತರ ಭಾರತದಲ್ಲಿ ತಮ್ಮ ಕೊರಳಿಗೆ ಚೆಂಡು ಹೂವು  ಮತ್ತು  ಕಣಗಲೆ ಹೂವಿನ ಹಾರ ತೊಡಿಸಿದ್ದನ್ನು ವಿಷಾದದಿಂದ ಹೇಳಿ, ಮಲ್ಲಿಗೆಯ ಸಾಂಗತ್ಯದಲ್ಲಿ ಆಮೋದಗೊಳ್ಳುತ್ತಾರೆ. ಉತ್ತರ ಭಾರತದಲ್ಲಿ ನಾಚ್‍ವಾಲಿಯ ಮನೆಗೆ ಭೇಟಿ ನೀಡುವ ವಿಟ, ಆಕೆ ಕುಣಿಯುವಾಗ ಮಣಿಕಟ್ಟಿಗೆ ಕಟ್ಟಿಕೊಂಡ ಮಲ್ಲಿಗೆಯನ್ನು ಮೂಸುತ್ತಾನೆ. ಬೇರೊಂದು ಹೂವು ಕಟ್ಟಿಕೊಂಡಿದ್ದನ್ನು ನಾವು ಯಾರೂ ಕಂಡೇ ಇಲ್ಲ!


ಇಷ್ಟಾದರೂ ಮಲ್ಲಿಗೆ ಕರ್ನಾಟಕದ ರಾಜ್ಯಪುಷ್ಪ ಆಗಲೇ ಇಲ್ಲ. ನಮ್ಮ ರಾಜ್ಯಪುಷ್ಪ ತಾವರೆ. ಭಾರತದ ರಾಷ್ಟ್ರೀಯ ಪುಷ್ಪವೂ ಅದೇ. ಮಲ್ಲಿಗೆಯನ್ನು ಕರುನಾಡಿನ ರಾಜ್ಯಸುಮವಾಗಿಸಲು ಅಭಿಯಾನವೊಂದನ್ನು ಆರಂಭಿಸಬೇಕು. ಇತ್ತೀಚೆಗೆ ಆಂಧ್ರಪ್ರದೇಶ ಸರ್ಕಾರ ಮಲ್ಲಿಗೆಯನ್ನು ತನ್ನ ರಾಜ್ಯಪುಷ್ಪವೆಂದು ಅಧಿಕೃತವಾಗಿ ಘೋಷಿಸಿದೆ. ಈ ಹಿಂದೆ ಇದ್ದ ಕುಸುಮವನ್ನು ಬದಲಿಸಿ ಮಲ್ಲಿಗೆಗೆ ಮಣೆಹಾಕಿದೆ. ಕರ್ನಾಟಕ ಸರ್ಕಾರ ಸಹ ಅದೇ ಹಾದಿ ತುಳಿದರೆ ಮಲ್ಲಿಗೆಯ ಉದ್ದಿಮೆ ಮತ್ತೆ ಬೆಳೆದು, ಬೆಳೆಗಾರರ ಆದಾಯ ವೃದ್ಧಿಸುತ್ತದೆ. ರಾಜ್ಯದ ಬೊಕ್ಕಸವೂ ತುಂಬುತ್ತದೆ.  ಆಂಧ್ರದ ವಿಭಜನೆಯಾದ ಅನಂತರ ಅಲ್ಲಿ ಮಲ್ಲಿಗೆಗೆ ಪಟ್ಟಕಟ್ಟಿದ್ದರ ಹಿಂದೆ, ಸಾಂಸ್ಕೃತಿಕ, ಧಾರ್ಮಿಕ ಕಾರಣಗಳಿಗಿಂತ ಅದರ ವರ್ತಮಾನದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಉದ್ದೇಶವಿದೆ.


ಬಗೆ ಬಗೆ ಮಲ್ಲಿಗೆ:

ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನಲ್ಲಿ; ಬಯಲುಸೀಮೆಯಲ್ಲಿ ಕಾಣದ ಅನೇಕ ಬಗೆಯ ಮಲ್ಲಿಗೆಗಳು ಕಾಣಸಿಗುವುದುಂಟು. ಅವುಗಳಲ್ಲಿ ಪರಿಮಳವಿಲ್ಲದ ಮುತ್ತುಮಲ್ಲಿಗೆ ವಿಶೇಷವಾದುದು! ನೇರಳೆ, ಬಿಳಿ ಹೀಗೆ ಎರಡು ಬಣ್ಣಗಳಲ್ಲಿ ದೊರೆಯುವ ಈ ಸುಮವು ಅರಳುವ ಮೊದಲು ಮುತ್ತಿನ ರೀತಿಯಲ್ಲಿ ಇರುವುದರಿಂದ ಇದು ಮುತ್ತುಮಲ್ಲಿಗೆ. ಇನ್ನೊಂದು ವೃಕ್ಷಮಲ್ಲಿಗೆ. ಸಾಮಾನ್ಯವಾಗಿ ಮರಮಲ್ಲಿಗೆ ಎಂದು ಕರೆಯಲಾಗುವ ಇದು ಅಚ್ಚಬಿಳುಪು ಮತ್ತು ಕಂದುಮಿಶ್ರಿತ ಬಿಳಿ ಬಣ್ಣದಲ್ಲಿ ಕಂಡುಬರುವ ಸಾಮಾನ್ಯ ಪರಿಮಳದ ಹೂವು. ಮಗದೊಂದು ಕಾಡುಮಲ್ಲಿಗೆ. ಮರಕ್ಕೆ ಬಳ್ಳಿಯಾಗಿ ಹಬ್ಬಿಕೊಳ್ಳುವ ಚೂಪಾದ ಉದ್ದದ ತೊಟ್ಟನ್ನು ಹೊಂದಿರುತ್ತದೆ. ಇದರದು ಹಿತಮಿತವಾದ ಪರಿಮಳ.


ಕಸ್ತೂರಿ ಮಲ್ಲಿಗೆ, ಉಡುಪಿ ಮಲ್ಲಿಗೆ, ಮಂಗಳೂರು ಮಲ್ಲಿಗೆ, ಶಂಕರಪುರ ಮಲ್ಲಿಗೆಗಳೂ ಉಂಟು. ಮಧುಮಗಳ ಸಿಂಗಾರ ಇದರ ವಿನಾ ಪೂರ್ತಿಯಾಗದು. ಹಾಗಾಗಿ ಬೆಲೆ ಗಗನಕುಸುಮ. ವೈವಿಧ್ಯಮಯ ಮಲ್ಲಿಗೆಗಳ ಕುರಿತ ಮಾಹಿತಿಯನ್ನು ಕೇಳಿದೊಡನೆ ಪಟಪಟನೆ ಉದುರಿಸಿದವರು ಲೇಖಕಿ ಸಹನಾ ಕಾಂತಬೈಲು. ದೀರ್ಘಾಯುವಾದ ಉದಯಮಲ್ಲಿಗೆ ರಾತ್ರಿ ಅರಳದೆ ಸೂರ್ಯೋದಯದ ಅನಂತರ ಅರಳಿ ತನ್ನ ವಿಶಿಷ್ಟತೆ ಮೆರೆಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪರಿಚಿತವಾಗಿರುವ ‘ಮಲ್ಲಿಗೆ ಇಡ್ಲಿ’ ಅದರ ಮೃದುತ್ವಕ್ಕೆ ಹೊಸ ಬಗೆಯ ನಿದರ್ಶನವಾಗಬಲ್ಲದು. ಮಲ್ಲಿಗೆ ಅತ್ಯಂತ ಸಪೂರವಾದ ಹೂವು. ಅದಕ್ಕೇ ಜಾನಪದ ಕತೆಯೊಂದರ ಹೆಸರು ‘ಏಳು ಮಲ್ಲಿಗೆ ತೂಕದ ರಾಜಕುಮಾರಿ!’.


ಮಲ್ಲಿಗೆ ಪೊದೆಜಾತಿಗೆ ಸೇರಿದ ಸಸ್ಯ. ಚಪ್ಪರವಿದ್ದರೂ, ಇಲ್ಲದಿದ್ದರೂ ಮಲ್ಲಿಗೆ ಸಸಿ ಬೆಳೆದೀತು. ಸಸ್ಯಶಾಸ್ತ್ರೀಯವಾಗಿ ಇದರ ಕುಟುಂಬನಾಮ; ಒಲಿಸಿಯೇ. ಕಾಕತಾಳೀಯವೆಂದರೆ ಇದು ಜನರನ್ನು ಒಲಿಸಿಯೇ ತೀರುತ್ತದೆ. ಜಗತ್ತಿನಲ್ಲಿ ಸುಮಾರು 200 ಬಗೆಯ ಮಲ್ಲಿಗೆ ಪ್ರಭೇದಗಳುಂಟು! ಅದಕ್ಕೇ ಇರಬಹುದು ಕವಿ ಬೆರಗಾಗಿ ಜಾಜಿ ಮಲ್ಲಿಗೆ, ಸೂಜಿ ಮಲ್ಲಿಗೆ ಕಂಪು ಬೀರುವುದೆಲ್ಲಿಗೆ ಎಂದು ಹಾಡಿರುವುದು! ಈ ಸರಳ ಮಲ್ಲಿಗೆಯನ್ನು  ಹೊರತುಪಡಿಸಿದರೆ ದುರುಳ ಮಲ್ಲಿಗೆ ಎಂಬ ಜಾತಿಯೂ ಉಂಟು! ಅದರ ಕುಟುಂಬನಾಮವೂ ಬೇರೆ: ಲೋಗನಿಯಾಸಿಯೇ. ಕೆಲವು ವರ್ಷದ ಹಿಂದೆ, ತಮ್ಮದೇ ನೀಲಿಚಿತ್ರವೊಂದಕ್ಕೆ ಮೈಸೂರು ಮಲ್ಲಿಗೆ ಎಂದು ಹೆಸರಿಟ್ಟು ವಿಕೃತಿ ಮೆರೆದ ಪ್ರಣಯಿಗಳೂ ಇದ್ದಾರೆ. ಸಚ್ಚಾರಿತ್ರರ  ಸಹವಾಸ ಎಂದೆಂದೂ ಸಜ್ಜನ ಮಲ್ಲಿಗೆಯೊಂದಿಗೆ ಮಾತ್ರ.


ನಮ್ಮ ಒನಪು-ವೈಯಾರ, ಸಂಭ್ರಮ-ಸಡಗರ ಎಲ್ಲವೂ ಬಿಳಿಮಲ್ಲಿಗೆಯ ಪ್ರಣೀತವೇ. ಹಳದಿ ಬಣ್ಣದ ಮಲ್ಲಿಗೆಯೂ ಉಂಟು. ಅದು ವಿಪರೀತ ವಿಷಕಾರಿ ಹೂವು. ಸರಸ-ವಿರಸ, ಸುರತ-ಸಾಂಗತ್ಯಕ್ಕೆ ಸದಾ  ಶ್ವೇತಮಲ್ಲಿಗೆಯೇ ಇರಲಿ. ಇದರಿಂದಲೇ ತಾನೆ ಅಣುವಣುವಿನಲ್ಲಿ ಘಮ ಅಡರುವ ಅತ್ತರನ್ನು ತಯಾರಿಸುವುದು! ಮಲ್ಲಿಗೆಯ ಸುಗಂಧದ್ರವ್ಯಕ್ಕೆ ಜಾಗತಿಕ ಬೇಡಿಕೆಯುಂಟು. ಕೆಲವರಿಗೆ ಕೆಲವು ವಾಸನೆ ಹಿಡಿಸವು. ಮಲ್ಲಿಗೆಯ ಕಂಪನ್ನು ಒಲ್ಲೆ, ಒಗ್ಗದು ಎನ್ನುವವರನ್ನು ಯಾರೂ ಕಂಡಿಲ್ಲ. ಶ್ವೇತಮಲ್ಲಿಗೆಯ ಔಷಧೀಯ ಗುಣಗಳು ಇಷ್ಟೇ ಎಂದು ಪಟ್ಟಿ ಮಾಡುವುದೂ ಸುಲಭವಲ್ಲ. ಅದರ ವಿಸ್ತಾರ ಹೆಚ್ಚಾದುದು. ಈ ಕಾಲದ ಬಚ್ಚಲುಗಳಲ್ಲಿನ ದುರ್ಗಂಧ ನಿವಾರಿಸಲು ಬಳಸುವ ‘ಓಡೋನಿಲ್’ ಹಲವು ಪರಿಮಳಗಳಲ್ಲಿ ಲಭ್ಯ. ಆದರೆ ಮಲ್ಲಿಗೆ ಪರಿಮಳದ ಓಡೋನಿಲ್ ಜನಪ್ರಿಯತೆಯಲ್ಲಿ ಮುಂದಿದೆ. ಮಲ್ಲಿಗೆ ನಮ್ಮಲ್ಲಿನ ಸಾತ್ತ್ವಿಕ ಶಕ್ತಿಗೊಂದು ಉದಾಹರಣೆ ಅದರ ಘಮದ ಅಮಲಿಗೆ ಪರವಶಗೊಂಡರೂ; ಪರ ವಶವಾಗದೆ ಉಳಿಯುವ ಮೂಲಕ ನಾವು ಇದರಲ್ಲಿ ಗೆಲ್ಲಬೇಕು.


ಮೊಗ್ಗಿನ ಜಡೆ ಎಂಬ ಸಂಭ್ರಮ :

ಮೊಗ್ಗಿನ ಜಡೆ; ಅದರ ನೆನಪೇ ಮನಸ್ಸನ್ನು ಹೂವಾಗಿಸುತ್ತದೆ; ಹೃದ್ಯವಾಗಿಸುತ್ತದೆ. ಅದು ಮಧುರ ಸ್ಮøತಿಗಳ ಸಾಲುಮೆರೆವಣಿಗೆಯನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತದೆ. ಅದು ನಮ್ಮ ಪರಂಪರೆಯ, ಜೀವನಪ್ರೀತಿಯ ಭಾಗ. ನಮ್ಮ ಗತಸಂಭ್ರಮಗಳ ಒಟ್ಟು ಕಥನ. ಇದೀಗ ಅದರ ಮೆಲುಕು ಸಡಗರವನ್ನೂ, ಯಾತನೆಯನ್ನೂ ಒಟ್ಟೊಟ್ಟಿಗೆ ಕಟ್ಟಿಕೊಡುತ್ತದೆ. ಅದು ಮೆಲ್ಲಗೆ-ಮೆಲ್ಲಗೆ ನಮ್ಮ ಬದುಕಿನಿಂದ ಕಣ್ಮರೆಯಾಗುತ್ತಿದೆ; ದೂರವಾಗುತ್ತಿದೆ. ನಾವು ಭೌತಿಕ ಲೋಲುಪತೆಗಳಲ್ಲೇ ತೇಲಿಹೋಗುತ್ತಿದ್ದೇವೆ; ಕೊಚ್ಚಿಹೋಗುತ್ತಿದ್ದೇವೆ. ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ತುಡಿವುದೆ ಜೀವನ ಎಂಬ ಮೊಗೇರಿ ಗೋಪಾಲಕೃಷ್ಣ ಅಡಿಗರ ಸಾಲನ್ನು ನಮಗೆ ಬೇಕಾದಂತೆ ಅರ್ಥೈಸಿಕೊಂಡಿದ್ದೇವೆ.


ಬೇಸಿಗೆಯಲ್ಲಿ ಮಕ್ಕಳ ತುರುಬಿಗೆ ಮಲ್ಲಿಗೆ ಪೆÇೀಣಿಸಿ, ಕುಚ್ಚುಕಟ್ಟಿ ಊರು-ಕೇರಿ, ಮನೆ-ಮನೆಯನ್ನು ಸುತ್ತಿಸಿ ಇನ್ನಿಲ್ಲದಂತೆ ಸಂಭ್ರಮಿಸಲು ಕಾರಣವಾಗುವ `ಮೊಗ್ಗಿನಜಡೆ' ಎಂಬ ಸಂಪ್ರದಾಯ ಇದೀಗ ಅಪರೂಪವಾಗುತ್ತಿದೆ. ಪ್ರತಿ ಬೇಸಿಗೆಯಲ್ಲೂ ಆವರ್ತನಗೊಳ್ಳುತ್ತಿದ್ದ ಈ ಸಡಗರ, ಇದೀಗ ಬಾಲ್ಯದಲ್ಲಿ ಒಮ್ಮೆ ಮಕ್ಕಳಿಗೆ ಮೊಗ್ಗಿನಜಡೆ  ಹಾಕಿ ಚತುರವಾಣಿಯಲ್ಲಿ ಕ್ಲಿಕ್ಕಿಸಿ, ಛಾಯಾಚಿತ್ರ ತೆಗೆದರೆ ಮುಗಿಯಿತು ಎಂಬಲ್ಲಿಗೆ ಬಂದು ನಿಂತಿದೆ.  ಮುಂದಿನ ವರುಷ ಉಂಟು ಎಂದರೆ ಉಂಟು; ಇಲ್ಲ ಎಂದರೆ ಇಲ್ಲ.


ಕರಗ ಎಂಬ ಶಕ್ತ್ಯುತ್ಸವ:

ಕರಗ ಎಂಬುದು ಒಂದು ಜಾನಪದೀಯ ಶಕ್ತ್ಯುತ್ಸವ. ಅದು ಮಲ್ಲಿಗೆಯೊಂದಿಗೆ ಸಂಬಂಧ ಬೆಸೆದುಕೊಂಡಿರುವ ಆಚರಣೆ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಹೀಗೆ ನಾಡಿನ ಕೆಲವು ಜಿಲ್ಲೆಗಳಲ್ಲಿ ಪ್ರತಿ ಚೈತ್ರದಲ್ಲೂ ಆವರ್ತನಗೊಳ್ಳುವ ಸಂಭ್ರಮ. ಮಲ್ಲಿಗೆಯ ಮಾಲೆಗಳಿಂದ ಸುತ್ತುವರಿದ ಮಡಕೆಗಳನ್ನು ಒಂದರ ಮೇಲೊಂದು ಪೇರಿಸಿಕೊಂಡು ತಲೆಯ ಮೇಲೆ ಹೊತ್ತು ಕುಣಿಯುವ ಕರಗ ಒಂದು ವಿಸ್ಮಯವೂ ಹೌದು.


ಪ್ರಾಚೀನ ಕಾವ್ಯಗಳಲ್ಲಿ ಮಲ್ಲಿಗೆಯ ಪರಿಮಳ:

ನಮ್ಮ ಪ್ರಾಚೀನ ಕವಿಗಳೂ ಮಲ್ಲಿಗೆಯ ಪರಮ ಆರಾಧಕರೇ. ಕನ್ನಡದ ಆದಿಕವಿ ಪಂಪನಿಂದಲೇ ಮಲ್ಲಿಗೆಯ ಸ್ತುತಿ ಆರಂಭವಾಗುತ್ತದೆ. ಪಂಪಭಾರತವೆಂದೇ ಪ್ರಸಿದ್ಧವಾದ ಮಹಾಕಾವ್ಯ ‘ವಿಕ್ರಮಾರ್ಜುನ ವಿಜಯ’ದಲ್ಲಿ “ಬಿರಿದ ಮಲ್ಲಿಗೆ ಗಂಡೊಡಂ... ನೆನೆವುದೆನ್ನ ಮನಂ ವನವಾಸಿ ದೇಶಮಂ” ಎಂದು ಪುಲಕಗೊಳ್ಳುತ್ತಾನೆ. ತನ್ನ ಬನವಾಸಿ ಪ್ರದೇಶದ ಬಗೆಗೆ ಪಂಪನಿಗೆ ಅಪರಿಮಿತ ಪ್ರೀತಿ. ಅರಳಿದ ಮಲ್ಲಿಗೆಯನ್ನು ಕಂಡಾಗಲೆಲ್ಲ ಅದರ ನೆನಪು ಮರುಕಳಿಸುತ್ತದೆ ಎಂದು ಸಂಭ್ರಮಿಸಿ ನುಡಿದಿದ್ದಾನೆ.


ಪಂಪನಿಗೆ ಫಲರಾಜ ಮಾವು ಎಂದರೆ ಇನ್ನಿಲ್ಲದ ಅಕ್ಕರೆ. ಅವನು ಮಲ್ಲಿಗೆಯ ಕಡುಮೋಹಿಯೂ ಹೌದು. ಇವೆರಡನ್ನೂ ಅದೆಷ್ಟು ಬಗ್ಗಿಸಿದರೂ ತಣಿಯದ ಜೀವ ಅವನದು. ಆದಿಪುರಾಣ ಅವನ ಮೊದಲ ಕಾವ್ಯ. ಮಾವು ಮಲ್ಲಿಗೆಗಳ ವಿಸ್ತøತ ವರ್ಣನೆ ಅದರ ಹನ್ನೊಂದನೆಯ ಆಶ್ವಾಸದ 95ನೆಯ ಪದ್ಯದಿಂದ 14 ಪದ್ಯಗಳ ಹರಹಿನಲ್ಲಿ ವರ್ಣಿತವಾಗಿದೆ. ಮಲ್ಲಿಗೆಯ ಬಗೆಗಿನ ಅವನ ಆರಾಧನಾಭಾವ ಬಗೆಬಗೆಯಾಗಿ ಪ್ರಕಟವಾಗಿದೆ. ಅದರಲ್ಲಿ ಒಂದು ಪದ್ಯವನ್ನು ಗಮನಿಸೋಣ:


ಸೊಡರ ಬೆಳಗಿನೊಳ್ ಕೊರಗುವ ಜಾಜಿಯಂ ತುಂಬಿಯೊಳ್ಪಗೆಗೊಂಡ ಸಂಪಿಗೆಯಂ

ಮುಡಿಯೆ ಸೊಗಯಿ(ಸ) ದದಿರ್ಮುತ್ತೆಯಲರಂ ಮಸಿಯೊಳೆ ಸವನಾದ ಗೊಜ್ಜಗೆಯಂ

ನುಡಿಯಲಕ್ಕುಮೆ ಪೂಗಳ ಲೆಕ್ಕಮನೆಂದೆಯ್ದೆ ಕಾಮನೊಡ್ಡೋಲಗದೊಳ್

ಮುಡಿಗೆಯಿಕ್ಕಿಯುಂ ಕೈಯನೆತ್ತಿ ಪೊಗ¿್ದುಂ ತಣಿಯನೆ ಮದನನುಂ ಮಲ್ಲಿಗೆಯಂ

ಪಂಪನಿಗೆ ದೀಪದ ಬೆಳಕಿನಿಂದಲೇ ಬಾಡಿಹೋಗುವ ಜಾಜಿಯನ್ನೂ, ದುಂಬಿಗಳು ದ್ವೇಷಿಸುವ ಸಂಪಿಗೆಯನ್ನೂ, ಮುಡಿಯಲು ಸೂಕ್ತವಲ್ಲದ ಮಾಧವೀಪುಷ್ಪವನ್ನೂ ಕಂಡರೆ ಅಷ್ಟಕ್ಕಷ್ಟೇ! ಕಾಮನ ಒಡ್ಡೋಲಗದಲ್ಲಿ ಕಿರೀಟವಿಟ್ಟು ಕೈಯನೆತ್ತಿ ವಸಂತರಾಜನು ಮಲ್ಲಿಗೆಯನ್ನು ಹೊಗಳಿ, ಹೊಗಳಿ ತಣಿಯಲಾರದವನಾಗಿದ್ದಾನೆ ಎನ್ನುತ್ತಾನೆ.


13ನೆಯ ಶತಮಾನದಲ್ಲಿದ್ದ, ಕವಿಚಕ್ರವರ್ತಿಗಳಲ್ಲಿ ಒಬ್ಬನಾದ ಜನ್ನನು ಸಹ ಮಲ್ಲಿಗೆಗೆ ಮಣಿದವನೇ, ತನ್ನ ಕೃತಿ ‘ಅನಂತನಾಥ ಪುರಾಣ’ದಲ್ಲಿ ಮಲ್ಲಿಗೆಯನ್ನು ಕುರಿತು ನಾಲ್ಕು ಸಾಲಿನ ಪದ್ಯವನ್ನು ಬರೆದು ಕೃತಾರ್ಥನಾಗಿದ್ದಾನೆ. 

ಮುಳಿದು¿õÉದೋಪರಳ್ಳೆರ್ದೆ ಪುಗು¿್ತುರಿವಂತೆ ಕರಂ ಮುಗುಳ್ತು ನಾ|

ಣೊಳಗು ಸಡಿಲ್ವಿನಂ ಪೊರೆ ಸಡಿಲ್ದು ಕದಂಪು ಬೆಳರ್ತು ಬಾಡಿ ಪೊ||

ಟ್ಟಳಿಸಿ ಬೆಳರ್ತ ಮುದ್ರಿಸಿದ ಬಾಯ್ಗಳಲರ್ ಬಿರಿವಂತು ಕಂಪು ಕೆ|

ಯ್ಕೊಳೆ ಬಿರಿದತ್ತು ತುಂಬಿ ನೆ¿õÉವಲ್ಲಿಗೆ ಮಲ್ಲಿಗೆ ಸಂತಿಯಂತೆವೋಲ್

ಜನ್ನನ ಈ ಪದ್ಯ ಮಲ್ಲಿಗೆಯ ಬಳ್ಳಿಯಲ್ಲಿ ಮೊಗ್ಗುಗಳು ಚಿಗುರಿ, ಕ್ರಮವಾಗಿ ಅರಳಿ ಕಂಪು ಸೂಸುವುದನ್ನೂ, ಹಾಗೆ ಸೂಸುವಾಗ ಆ ಪರಿಮಳವನ್ನು ತಮ್ಮದಾಗಿಸಿಕೊಳ್ಳಲು ಅರಳಿದ ಮಲ್ಲಿಗೆಯ ಬಳಿಗೆ ಸಂತೆಯಂತೆ ನೆರೆವ ದುಂಬಿಗಳ ಹಿಂಡನ್ನೂ ವರ್ಣಿಸುತ್ತದೆ ಎನ್ನುತ್ತಾರೆ ವಿದ್ವಾಂಸರಾದ ಡಾ. ತಮಿಳು ಸೆಲ್ವಿ. ಇಲ್ಲಿ ಮಲ್ಲಿಗೆ ಅರಳುವುದನ್ನು ಹೆಣ್ಣಿಗೆ ಹೋಲಿಸಲಾಗಿದೆ.


ಸಾಹಿತ್ಯದಲ್ಲಿ ಸಿಗುವ ಎಲ್ಲ ನಿದರ್ಶನಗಳೂ, ಉಲ್ಲೇಖಗಳೂ ಮಲ್ಲಿಗೆಗೇ ಮಣೆಹಾಕಿ ಮೆರೆಸಿವೆ. ಆದರೆ ಹಿರಿಯ ಸಂಶೋಧಕರಾದ ಡಾ. ವೈ.ಸಿ. ಭಾನುಮತಿ ಅವರ ಸಂಪಾದಿತ ಕೃತಿ ಚಿಕ್ಕಪದ್ಮನ ಸೆಟ್ಟಿ ವಿರಚಿತ ಅನಂತನಾಥ ಚರಿತೆಯಲ್ಲಿ ‘ಚಂಡಶಾಸನ ಪ್ರಸಂಗ’ ಎಂಬ ಉಪಾಖ್ಯಾನವಿದೆ. ಇದನ್ನು ಆ ಕಾವ್ಯದ ರಸಾದ್ರ್ರ ಭಾಗ ಎನ್ನಲಾಗುತ್ತದೆ.


ವಸುಷೇಣ ಎಂಬ ರಾಜನಿದ್ದ. ಅವನ ಪತ್ನಿ ಸುನಂದೆ, ಅತಿಲೋಕ ಸುಂದರಿ. ವಸುಷೇಣನ ಮಿತ್ರ ಚಂಡಶಾಸನ. ಅವನು ಸುನಂದೆಯ ರೂಪಿಗೆ ಮರುಳಾಗುತ್ತಾನೆ, ಮೋಹಗೊಳ್ಳುತ್ತಾನೆ. ಈ ಭುವನಸುಂದರಿಯನ್ನು ಪಡೆಯಬೇಕೆಂಬ ಇಚ್ಛೆ ಅವನಲ್ಲಿ ತೀವ್ರವಾಗುತ್ತದೆ. ಅದನ್ನು ತನ್ನ ಮಿತ್ರ ಸುದರ್ಶನನಿಗೆ ತಿಳಿಸುತ್ತಾನೆ. ಸುನಂದೆಗೂ ನಿನ್ನ ಮೇಲೆ ಒಲವಿದೆ ಎಂದು ಸುದರ್ಶನ ಚಂಡಶಾಸನನಿಗೆ ಸುಳ್ಳು ಹೇಳುತ್ತಾನೆ. 

ಒಮ್ಮೆ ವಸುಷೇಣ ಮತ್ತು ಚಂಡಶಾಸನರು ಬೇಟೆಗೆ ಹೋಗುತ್ತಾರೆ. ಆಗ ಚಂಡಶಾಸನನು ಸಮಯ ಸಾಧಿಸಿ ಸುನಂದೆಯನ್ನು ಅಪಹರಿಸಿ ಮಿತ್ರದ್ರೋಹಿಯಾಗುತ್ತಾನೆ. ಅನಂತರ ಸುನಂದೆಯ ಬಳಿ ಬಂದು ಆಕೆಯ ಬಗೆಗೆ ತನಗಿರುವ ಒಲವನ್ನು ನಿವೇದಿಸಿಕೊಳ್ಳುತ್ತಾನೆ. ಆದರೆ ಸುನಂದೆ ಅವನ ಪ್ರೇಮವನ್ನು ನಿರಾಕರಿಸಿ ಪ್ರಾಣತ್ಯಾಗ ಮಾಡುತ್ತಾಳೆ. ದಿಗ್ಭ್ರಮೆಗೊಂಡ ಚಂಡಶಾಸನ ಸುನಂದೆಯೊಡನೆ ಸಹಗಮನ ಮಾಡುತ್ತಾನೆ. ಪತಿಯ ಮರಣದಿಂದಾಗಿ ಅನಿವಾರ್ಯವಾಗಿ ಸಹಗಮನ ಮಾಡಬೇಕಾಗಿ ಬಂದ ಚಂಡಶಾಸನನ ರಾಣಿಯರಲ್ಲಿ ಒಬ್ಬಳು ಹೀಗೆನ್ನುತ್ತಾಳೆ:


“ನೋಡಕ್ಕ ಮಾವಿಂಗೆ ಮಲ್ಲಿಗೆ ಕೂರ್ತಡೆ ಕೂಡೆ ಮಾವೇನು ಕೂರ್ತಿಹುದೆ”

ಮಲ್ಲಿಗೆ ಮಾವನ್ನು ಪ್ರೀತಿಸಿದರೂ, ಮಾವು ಮಲ್ಲಿಗೆಯನ್ನು ಪ್ರೀತಿಸದು. ಎಲ್ಲ ಕಾವ್ಯಗಳಲ್ಲೂ ಮಲ್ಲಿಗೆಗೆ ನಡೆಮುಡಿ ಹಾಸಿದರೆ 16ನೆಯ ಶತಮಾನದ ಚಿಕ್ಕಪದ್ಮನ ಸೆಟ್ಟಿ ತನ್ನ ಸಾಂಗತ್ಯದಲ್ಲಿ  ಮಾವಿಗೆ ಮಹತ್ತ್ವ ನೀಡಿದ್ದಾನೆ. ಅದು ಮಲ್ಲಿಗೆಯ ಪ್ರೀತಿಯನ್ನು ತಿರಸ್ಕರಿಸಿತು ಎನ್ನುತ್ತಾನೆ! ತನ್ಮೂಲಕ ಮಲ್ಲಿಗೆಯ ಪಾರಮ್ಯವನ್ನು ನಿರಾಕರಿಸಿದ್ದಾನೆ. ಜನ್ನನು ಇದೇ ಪ್ರಸಂಗ ಕುರಿತು ಹೇಳುವಾಗ ಮಾವು ಕೂರ್ತದು ವಸಂತ್ರಶ್ರೀಗೆ ಎಂದಿದ್ದಾನೆ. ಮಾವು ಇಡೀ ನಿಸರ್ಗದಲ್ಲೇ ಚೆಲುವನ್ನೆಲ್ಲ ಎರಕ ಹೊಯ್ದುಕೊಂಡ ವಸಂತನನ್ನು ಪ್ರೀತಿಸುತ್ತದೆ ಎಂದು ನುಡಿದಿದ್ದಾನೆ.


ಪುಷ್ಪಪ್ರಿಯ ಕವಿ ಹರಿಹರನು ಸಹ ಮಲ್ಲಿಗೆಗೆ ನಡೆಮುಡಿ ಹಾಸಿದವನೇ. ಅವನದು ಆರಾಧನಾಭಾವ; ವಿನಮ್ರವಾದ ನುಡಿ. ಹಂಪೆಯ ವಿರೂಪಾಕ್ಷನನ್ನು ಸಿಂಗರಿಸಿ ಪೂಜಿಸಲು ಅವನು ವಿಧವಿಧ ಸುಮಗಳನ್ನು ಸಂಗ್ರಹಿಸುತ್ತಾನೆ. ಮಲ್ಲಿಗೆ ಎಂಬುದು ಅವನಿಗೆ ಶಿವನಲೀಲೆ! ತನ್ನ ಪುಷ್ಪರಗಳೆಯಲ್ಲಿ ಮಲ್ಲಿಗೆಗೂ ಮಣೆ ಹಾಕಿದ್ದಾನೆ. ಮಲ್ಲಿಗೆ ಕುರಿತಾಗಿ ಪುಷ್ಪರಗಳೆಯಲ್ಲಿನ ಹರಿಹರನ ಮಾತುಗಳನ್ನು ಗಮನಿಸೋಣ:


ಮಲ್ಲಿಗೆಯ ಮುಂದಕ್ಕೆ ಮನವಾರೆ ನಡೆಗೊಂಡು

ಸಲ್ಲೀಲೆವೆರ್ಚಿ ಕಂಪಿನ ನಿಧಿಯಿರಲ್ಕಂಡು

ಪಸುರಳಿದು ಬೆಳ್ಪುಳಿದು ನೆನೆದೋರಿ ಹೊರೆಯೇರಿ

ಹೊಸಪರಿಯ ಬಿರಿಮುಗುಳ್ಗಳಂ ಬೇಡಿ ನಲವೇರಿ

ಮಲ್ಲಿಗೆಯ ಅರಳ್ಗಳಂ ಮನವಾರೆ ತೀವುತಂ 

ಮೆಲ್ಲಮೆಲ್ಲನೆ ನೋಡುತಲ್ಲಲ್ಲಿ ಕುಣಿವುತುಂ 


ಈ ಪುಷ್ಪರಗಳೆ ಕುರಿತು ವಿದ್ವಾಂಸ ಡಾ. ಸಿ.ಎ. ರಮೇಶ್ ಅವರ ಗದ್ಯಾನುವಾದ ಹೀಗಿದೆ :

ಮಲ್ಲಿಗೆಯ ಮುಂದೆ ಬಂದು ಶಿವನ ಲೀಲೆಗೆ ಬೆರಗಾದನು ಕವಿ. ಬಳ್ಳಿಯ ಹಸಿರು ಬಣ್ಣವೂ ಕಾಣದಷ್ಟು ಬಿಳಿ ಹೂವುಗಳಿಂದ ತುಂಬಿಹೋದ ಮತ್ತು ಕಂಪಿನ ನಿಧಿ ಎನಿಸಿದ ಮಲ್ಲಿಗೆಯ ಮೊಗ್ಗುಗಳನ್ನು ಕಂಡು ಮನತುಂಬಿ ಶಿವಪೂಜೆಗಾಗಿ ಬಿಡಿಸಿಕೊಂಡನು. ಒಂದೊಂದು ಹೂವಿಗೂ ಒಂದೊಂದು ವ್ಯಕ್ತಿತ್ವವಿದೆ ಎಂದು ಹರಿಹರನು ಭಾವಿಸುತ್ತಾನೆ.


ಕನ್ನಡದ ಮೇರು ಕವಿಗಳಲ್ಲಿ ಒಬ್ಬ ರತ್ನಾಕರವರ್ಣಿ. ಅವನು ತನ್ನ ‘ಭರತೇಶ ವೈಭವ’ದಲ್ಲಿ ಮಲ್ಲಿಗೆಯನ್ನು ಸ್ಮರಿಸಿದ್ದಾನೆ. ಭರತನಿಗೆ 96000 ರಾಣಿಯರು. ಅವರ ಪೈಕಿ ಒಬ್ಬಳು ಕುಸುಮಾಜಿ. ಭರತನು ಆಕೆಯನ್ನು ಉದ್ಯಾನವನದಲ್ಲಿ ರಮಿಸುವ ಸಂದರ್ಭದಲ್ಲಿ ಮಲ್ಲಿಗೆಯ ವಿಪುಲ ವರ್ಣನೆಯಿದೆ.


ಶಾಸನಗಳಲ್ಲಿ ಮಲ್ಲಿಗೆ:

ಶಾಸನಗಳಲ್ಲೂ ಮಲ್ಲಿಗೆ ತನ್ನ ಉಪಸ್ಥಿತಿಯನ್ನು ಸಾರಿದೆ. ಈ ಕುರಿತು ಗಣ್ಯ ಸಂಶೋಧಕÀ ಸದ್ಯೋಜಾತ ಭಟ್ಟರು ಹಲವು-ಹತ್ತು ಉಲ್ಲೇಖಗಳನ್ನು ನೀಡುತ್ತಾರೆ. ಸುಮಾರು ಎಂಟೂವರೆ ಶತಮಾನಗಳಷ್ಟು ಹಿಂದಿನ ಸಂಸ್ಕøತ ಶಾಸನವೊಂದರಲ್ಲಿ ಮಲ್ಲಿಗೆಯು ಹೂವಾಗಿಯೇ ಪ್ರಸ್ತಾಪಗೊಂಡಿದೆ. ಇದು ಜಾಲಲ್ಲದೇವ ಎಂಬ ಚೇದಿ ದೊರೆಯದ್ದು. ಕಾಲ: ಕ್ರಿಶ 1167-1168. ಇದರ ಒಂದು ಸಾಲು ಹೀಗಿದೆ:

ಧರಾನಾಥ ನಾಗೇಂದ್ರ ತಾಕ್ರ್ಷೋ

ನಮ್ರಾಣಂ ಮಾಲಿ ರತ್ನದ್ಯುತಿ ಭರ

ವಿಲಾಸನ್ ಮಲ್ಲಿಕಾ ಮಾಲ್ಯ ಭಾರೈಃ|

ಮತ್ತಷ್ಟು ಹಿಂದಕ್ಕೆ ಸರಿದರೆ ಐದನೆಯ ಶತಮಾನದ ಶಿವಮೊಗ್ಗ ಜಿಲ್ಲೆಯ ಸೊರಬದ ಕೆಳಗುಂದಿಯ ಕದಂಬ ರವಿವರ್ಮನ ಶಾಸನದಲ್ಲಿ ಮಲ್ಲಿಗೆಯು ವ್ಯಕ್ತಿಯ ಹೆಸರಾಗಿ ಪ್ರಸ್ತಾಪಗೊಂಡಿದೆ.

ಸ್ವಸ್ತಿಶ್ರೀ ರವಿವಮ್ರ್ಮ(ರ್)

ನಾಡಾಳೆ ಮಲ್ಲಿಗೆ ಆ ಅರಸರಾ

ಪೆರಿಯಾ ಅರಸಿ

ಶಾಸನವೊಂದರಲ್ಲಿ ಮಲ್ಲಿಗೆ ಹೆಸರಿನ ಬಾವಿಯ ಪ್ರಸ್ತಾಪವಿದೆ. 962-63ನೆಯ ಇಸವಿಯ ಗಂಗ ಮಾರಸಿಂಹನ ಕೂಡ್ಲೂರು ಶಾಸನದ 186ನೆಯ ಸಾಲಿನಲ್ಲಿ ‘ಮಲ್ಲಿಗೆ ದಾರಿ’ ಎಂಬ ವಿವರಣೆಯಿದೆ.


ರಾಷ್ಟ್ರಕೂಟದ ದೊರೆ ಕೊಟ್ಟಿಗನದೊಂದು ಶಾಸನವಿದೆ. ಅದರ ಕಾಲ: ಕ್ರಿಶ 971-72. ಆ ಶಾಸನದ 17-18ನೆಯ ಸಾಲಿನಲ್ಲಿ ಶ್ರೀಮತ್ ಮಲ್ಲಿಗ ಗಾದಯ್ಯಂ ಮಲ್ಲಿಗೇಶ್ವರಕ್ಕೆ ಕೊಟ್ಟ ದಾನವನ್ನು ಹೇಳಲಾಗಿದೆ. ಮತ್ತೊಂದು ಶಾಸನ ಆಂಧ್ರಪ್ರದೇಶದ ರಾಜಮಂಡ್ರಿಯದು (ಇದರ ಮೊದಲಿನ ಹೆಸರು ರಾಜಮಹೇಂದ್ರ ವರ್ಮಮ್/ ರಾಜಮಹೇಂದ್ರಪುರಂ /ರಾಜಮಹೇಂದ್ರಿ). ರಾಜಮಂಡ್ರಿಯ ರಘುದೇವಪುರದ 1378ರ ರಘುದೇವನ ದಾನ ಶಾಸನವದು. ಅದರ 37ನೆಯ ಸಾಲಿನಲ್ಲಿ ಅಂಗನಾಕುಲ ಮಾತಲ್ಲಿಕಾ ಮಲ್ಲಿಕಾ ಎಂದು ರಘುದೇವನ ತಾಯಿಯ ಹೆಸರು ಉಲ್ಲೇಖಗೊಂಡಿದೆ. ಈಗಲೂ ನಮ್ಮಲ್ಲಿ ಮಲ್ಲಿಗೆ ಹೆಸರಿನ ಮಾನಿನಿಯರು ಅಲ್ಲಲ್ಲಿ ಕಾಣಸಿಗುತ್ತಾರೆ. ಮಲ್ಲಿಕಾ ಘಂಟಿ ಎಂಬುದು ನಮ್ಮ ಹಿರಿಯ ಲೇಖಕಿಯೊಬ್ಬರ ಹೆಸರು. ಮಲ್ಲಿಗೆ ಹೆಸರಿನ ಜನಪ್ರಿಯ ಕನ್ನಡ ಮಾಸಿಕವೊಂದು ಪ್ರಕಟವಾಗುತ್ತಿದ್ದುದನ್ನೂ ನೆನೆಯಬಹುದು.


ಮಲ್ಲಿಗೆ: ಗಝಲ್-ಶಾಯರಿ-ರಂಗಗೀತೆ

ಗಜûಲ್ ಎಂದರೇನೆ ಹಾಗೆ. ಅದು ಅತ್ಯಂತ ಆಪ್ತ, ಆದ್ರ್ರ, ಆರ್ತವೂ ಹೌದು. ಅದು ಮಲ್ಲಿಗೆಯಂತೆ ನವಿರು, ನವಿರು. ಅಷ್ಟೇ ಮೃದು. ಮಲ್ಲಿಗೆ ಮತ್ತು ಗಝಲ್ ಇವೆರಡೂ ಮಧುರಾಲಾಪಗಳೇ. ಬಹುತೇಕ ಸಂದರ್ಭಗಳಲ್ಲಿ ಗಜûಲ್ ಪ್ರೀತಿ-ಪ್ರೇಮದ ಮೊರೆ ಅಥವಾ ಯಾಚನೆ ಎಂಬುದು ದಿಟ. ಗಝಲ್ ಎಂಬುದು ಒಂದು ಭಾವಜೀವಯಾನ. ಇಂತಹ ವಿಶಿಷ್ಟ ಕಾವ್ಯಪ್ರಕಾರವೂ ಮಲ್ಲಿಗೆಯನ್ನು ಮರೆತಿಲ್ಲ. ಕನ್ನಡದ ಖ್ಯಾತ ಗಝಲ್ ಕವಿ ಡಾ. ವೋವಿಂದ ಹೆಗಡೆ ಅವರು ಮಲ್ಲಿಗೆ ಕುರಿತು ಬರೆದ ಗಝಲ್ ಒಂದನ್ನು ಗಮನಿಸೋಣ:


ಹಸುರಿನ ಹÉೂದರಿನಲಿ ಅರಳುವಳು ನೀನು

ತುಟಿಗಳನು ಅರೆಬಿರಿದು ನಗುವವಳು ನೀನು

‘ಮಲ್ಲಿಗೆಬಿಳುಪು’ ಎಂದೇ ಹೇಳುವುದು ಲೋಕ

ಬಿಳಿಯೆ ಮೈಪಡೆದಂತೆ ಬೆಳಗುವಳು ನೀನು

ನೀಲಿ ನಭದೊಡಲಲ್ಲಿ ಹೇಗೆ ಮಿನುಗಿವೆ ಚುಕ್ಕಿ!

ಬನದ ಹಸುರಿನಲಂತೆ ತೊಳಗುವಳು ನೀನು

ಕಾಡು ಮಲ್ಲಿಗೆಯೆನಿಸಿ ಏನೆಲ್ಲ ಕಲಿಸುವೆ

ಮನ್ನಣೆಗೆ ಬಾಯ್ಬಿಡದೆ ಸರಿಯುವಳು ನೀನು

ಅಕಲಂಕ ಮನಸಿಗೆ ಬೇರೇನಿದೆ ಹೋಲಿಕೆ

ಬಾಳ ಪರಿಮಳವಾಗಿ ಉಳಿಯುವಳು ನೀನು

ಒಲವಿನುಯ್ಯಾಲೆಯನು ಸಿಂಗರಿಸುವವಳು

ಮೊದಲ ಮಿಲನಕೆ ಸಾಕ್ಷಿಯಾಗುವಳು ನೀನು

ನರುಗಂಪು ಕÉೂೀಮಲತೆ ನಿನ್ನ ಆಭರಣ

‘ಜಂಗಮ’ನ ಎದೆಯನ್ನು ತುಂಬುವಳು ನೀನು.

ಗಜûಲನ್ನು ದಾಟಿ ಮಲ್ಲಿಗೆ ಶಾಯರಿಯಲ್ಲೂ ತನ್ನ ಇರುವನ್ನು ಪ್ರಕಟಿಸಿದೆ. ಲೇಖಕ ಡಾ. ಹನಿಯೂರು ಚಂದ್ರೇಗೌಡರ ಮಲ್ಲಿಗೆ ಕುರಿತ ಜನಪ್ರಿಯ ಶಾಯರಿ ಅದರ ತ್ಯಾಗವನ್ನು ತೆರೆದಿಟ್ಟಿರುವುದು ಹೀಗೆ:

ಕೇಳಿದನೊಬ್ಬ ಮಲ್ಲಿಗೆ ಹೂವನು

“ನೀಡಿದೆ ನೀ ಪರಿಮಳವ

ಸಿಕ್ಕಿದ್ದೇನು ನಿನಗದರಿಂದ?!”



ಹೇಳಿತು ಮೆಲ್ಲಗೆ ಮಲ್ಲಿಗೆ

“ನೀಡುವ ಬದಲು ಪಡೆವುದು ವ್ಯಾಪಾರ

ಕೊಟ್ಟರೂ ತಾನೇನನೂ ಪಡೆಯದಿರುವುದೇ ಪ್ರೀತಿ”.


ರಂಗಗೀತೆಗಳಲ್ಲೂ ಮಲ್ಲಿಗೆ ಯಥೇಚ್ಛವಾಗಿ ಉಲ್ಲೇಖಗೊಂಡಿದೆ ಎನ್ನುತ್ತಾರೆ ಮೈಸೂರಿನ ರಂಗಪ್ರಿಯರಾದ ಗೋವಿಂದೇಗೌಡರು. ನಿದರ್ಶನಕ್ಕಾಗಿ ‘ಮನ್ಮಥವಿಜಯ’ ನಾಟಕದಲ್ಲಿನ ಗೀತೆಯನ್ನು ಹಾಡಿ ಹಾಡಿ ತಣಿಯುತ್ತಾರೆ!


ಮಲ್ಲೆ ಮಲ್ಲಿಗೆ ಜಾಜಿ ಬಳ್ಳಿಗಳೆಲ್ಲಿಯುಂ

ಫುಲ್ಲ ಪುಷ್ಪವ ಚೆಲ್ಲಿರೆ ಎಲ್ಲಿ ನೋಡಲು ಶೋಭಿಕುಂ ಅಲ್ಲಲ್ಲಿ ||

ಇದಿಷ್ಟು ಮಲ್ಲಿಗೆಯೊಂದಿಗಿನ ಸುಮಸಂಧಾನ. ಮಲ್ಲಿಗೆಯ ಜೊತೆ ಸುಮಸಂಧಾನದ ಹೊರತು ಶರಸಂಧಾನ ಸಾಧ್ಯವಿಲ್ಲ. ಮಲ್ಲಿಗೆಯೆಂಬುದು ಸಂಘರ್ಷದ ಸರಕಲ್ಲ. ಅದರೊಂದಿಗೆ ಅನುಸಂಧಾನವಷ್ಟೇ ಸಾಧ್ಯ. ಮಲ್ಲಿಗೆ ಸಮಸ್ಯೆಯ ಭಾಗವಲ್ಲ; ಪರಿಹಾರದ ಭಾಗ. ಅದು ಸಂಕಟಮೋಚಕ.


ಯಾವುದೋ ಹಪಾಹಪಿಯಲ್ಲಿ ಸಹಜ ಜೀವನ ಶೈಲಿಯಿಂದ ದೂರವಾಗಿದ್ದೇವೆ. ಭಿನ್ನ ಮನೋಧರ್ಮದಿಂದಾಗಿ ಕಳೆದುಕೊಂಡಿದ್ದೇ ಹೆಚ್ಚು. ಮಲ್ಲಿಗೆಯು ಕೊಡವಿಕೊಂಡ ಐಸಿರಿಗೆ, ಇಂದಿನ ಭಾರವಾದ ನಿಟ್ಟುಸಿರಿಗೆ, ರೂಪಕವಾಗಿ ನಿಲ್ಲುತ್ತದೆ. ಮಲ್ಲಿಗೆಯನ್ನು ಬದುಕಿನ ಪರಿಧಿಯಿಂದ ದೂರವಾಗಿಸುವುದೆಂದರೆ ಸಹಜ ಜೀವನ ವಿಧಾನವನ್ನು ನಿರಾಕರಿಸಿದಂತೆ. ನಮ್ಮ ಚಲನಶೀಲ ಪರಂಪರೆಯು ಶತಶತಮಾನಗಳಿಂದ ಉದಾರವಾಗಿ ದಯಪಾಲಿಸಿದ್ದನ್ನು ಉಳಿಸಿಕೊಳ್ಳದೆ ಸಂಬಂಧಗಳ ಕೊಂಡಿಗಳನ್ನು ಕಳಚಿ ಬಿಸಾಡಿದಂತೆ. ಮಲ್ಲಿಗೆ ಅತೀವ ನಂಬಿಕೆ ಮತ್ತು ವಿಶ್ವಾಸದ ಸಂಕೇತ. ಅದೊಂದು ಸಮ್ಯಕ್ ಕೃತಿ. ಅದೊಂದು ಸದಾಚರಣೆ. ಯಾವುದೋ ಪ್ರಲೋಭನೆ, ನಮ್ಮ ಸಹಜ ಸಂತೋಷವನ್ನು ಬಲವಂತವಾಗಿ ಕಸಿಯುತ್ತಿದೆ. ಹಾಗಾಗದಿರಲಿ. ವಿವೇಕ ನಮ್ಮನ್ನು ಮುನ್ನಡೆಸಲಿ ಮಲ್ಲಿಗೆ ನಮ್ಮ ದಿನನಿತ್ಯದ ಹಾಡಾಗಲಿ, ಪಾಡಾಗಲಿ. ಮಲ್ಲಿಗೆಯಂತಹ ಸ್ವಚ್ಛ ಬದುಕು ನಮ್ಮದಾಗಲಿ.


 - ಕೆ. ರಾಜಕುಮಾರ್ 



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top