|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಳಸುವ ಹಾಗೂ ಬೆಳೆವವರಿಬ್ಬರಿಗೂ ಸವಿಯಾಗಲಿ ಮಾವು

ಬಳಸುವ ಹಾಗೂ ಬೆಳೆವವರಿಬ್ಬರಿಗೂ ಸವಿಯಾಗಲಿ ಮಾವು

ರಾಷ್ಟ್ರೀಯ ಮಾವಿನ ದಿನ- ಜುಲೈ 22: 



ಬೆಳಿಗೆದ್ದ ತಕ್ಷಣ ಮಾವಿನ ಎಲೆಯಿಂದ ಹಲ್ಲುಜ್ಜಲು ಯಾಕೆ ನಮ್ಮ ಹಿರಿಯರು ನಮಗೆ ತಾಕೀತು ಮಾಡುತ್ತಿದ್ದರು. ಹಸಿದು ಓಡೋಡಿ ಶಾಲೆಯಿಂದ ಬಂದ ತಕ್ಷಣ ಹೆಚ್ಚಿದ್ದ ಮಾವಿನ ತುಂಡು ತಿನ್ನಲು ಮುಂದಡಿಯಿಟ್ಟಾಗ ಸದಾ ನನ್ನ ಅಪ್ಪ ಉಸುರುತ್ತಿದ್ದರು-ಹಸಿದು ಹಲಸು, ಉಂಡು ಮಾವು ಎಂದು. ಪ್ರಾಸಬದ್ದಕ್ಕಾಗಿ ಹೇಳುತ್ತಿದ್ದರು ಎಂದು ಅಂದು ನಮಗನ್ನಿಸುತ್ತಿತ್ತು. ಶುಭದಿನಗಳಂದು ನಮ್ಮ ಮನೆಯ ಮುಂಬಾಗಿಲು ಮಾವಿನ ಎಲೆಯ ತಳಿರು ತೋರಣಗಳಿಂದ ಕಂಗೊಳಿಸಿದಾಗ ನಮಗನ್ನಿಸಿದ್ದು ಕಡಿಮೆ ಖರ್ಚಿನ ಶೃಂಗಾರ ಎಂದು. ಆದರೆ ಈಗ ತಿಳಿಯುತ್ತಿದೆ ಅದರ ಹಿಂದಿನ ವೈಜ್ಞಾನಿಕ ರಹಸ್ಯ.


ನರಕ ಬೇಡವಾದರೆ ಬೆಳೆಸಿ ಮಾವು: ನಮ್ಮ ಹಿರಿಯರ ನಾಣ್ಣುಡಿಯಲ್ಲಿ ಕೂಡಾ ಮಾವಿನ ಮರದ ಮಹತ್ವದ ಬಗ್ಗೆ ಮಾತು ಬರುತ್ತದೆ. 

“ಅಶ್ವತ್ಥಮೇಕಂ, ಪಿಚಮಂದಮೇಕಂ ನ್ಯಗ್ರೋಧಮೇಕಂ-ದಶತಿಂತ್ರಿಣೀಕಂ-ಕಪಿತ್ಥ ಬಿಲ್ವಾಮಲಕತ್ರಯಂ ಚ ಪಂಚಾಮ್ರರೂಪೀ ನರಕಂ ನ ಯಾತ್ರಿ”


ಅಂದರೆ ಒಂದು ಅಶ್ವತ್ಥ, ಒಂದು ಬೇವಿನ ಮರ, ಒಂದು ಆಲದ ಮರ, ಒಂದು ಹುಣಸೇ ಮರ, ಮೂರು ಬೇಲ, ಬಿಲ್ವ, ನೆಲ್ಲಿ ಮರಗಳು ಮತ್ತು ಐದು ಮಾವಿನ ಗಿಡಗಳನ್ನು ನೆಟ್ಟು ಮರವಾಗಿ ಮಾಡಿದವ ನರಕಕ್ಕೆ ಹೋಗೋದಿಲ್ಲ. ಈ ಮರಗಳೆಲ್ಲ ಔಷಧೀಯ ಗುಣಗಳುಳ್ಳ, ಆಯುರ್ವೇದೀಯ ಮಹತ್ವವುಳ್ಳ ಸಸ್ಯಪ್ರಭೇದಗಳು. ಪೂಜೆಯ ಕಲಶದಲ್ಲಿ ಮಾವಿನ ಎಲೆಗೆ ಪ್ರಾಧಾನ್ಯತೆ. ಮನೆಯ ಮುಂದೆ ತೋರಣವಾಗಿ, ಚಪ್ಪರದಲ್ಲಿಯೂ ಶೋಭಿಸುತ್ತದೆ.


ಆರೋಗ್ಯಕ್ಕಾಗಿ ಬಳಸಿ ಮಾವು: ಮಾವಿನ ಮರದ ತೊಗಟು, ಹೂ, ಎಲೆ, ಹಣ್ಣು, ಬೀಜ ಎಲ್ಲವೂ ಔಷಧೀಯ ಗುಣವುಳ್ಳದ್ದು. ಮಾವು ವಿಟಮಿನ್ ಎ, ಸಿ ಜೊತೆಗೆ ಪೊಟ್ಯಾಷಿಯಂನಂತಹ ಅನೇಕ ಖನಿಜಗಳನ್ನು ಹೊಂದಿದೆ. ಇದು ದೇಹಕ್ಕೆ ಸತ್ವವನ್ನು ನೀಡುತ್ತದೆ. ಮಾವಿನ ಕಾಯಿ ಅಥವಾ ಹಣ್ಣಿನಲ್ಲಿರುವ ಗ್ಲೂಟಾಮೈನ್ ಅಸಿಡ ಜ್ಞಾಪಕ ಶಕ್ತುಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಸೌಂದರ್ಯವರ್ಧಕವಾಗಿಯೂ ಮಾವು ಉಪಯೋಗಿ. ಮಾವನ್ನು ಹಣ್ಣು ಮಾಡುವಲ್ಲಿ ವ್ಯಾಪಾರಿಗಳು ಬಳಸುವ ಕ್ಯಾಲ್ಸಿಯಂ ಕಾರ್ಬೈಡ್ ಆರೋಗ್ಯಕ್ಕೆ ಹಾನಿಕರ ಎನ್ನುವ ಎಚ್ಚರವೂ ಇರಬೇಕು. ಹಾನಿಕಾರಕ ಕೀಟನಾಶಕಗಳ ಅಂಶದ ಪರ್ಣಾಮವಾಗಿ ಹಲವು ವರ್ಷ ಭಾರತದ ಮಾವಿನಕಾಯಿಗೆ ಅಮೇರಿಕಾ ನಿಷೇಧ ಹೇರಿರುವುದನ್ನು ಮರೆಯುವಂತಿಲ್ಲ. ಹೊಗೆ ಹಾಕುವ ಮೂಲಕ ಹಣ್ಣು ಮಾಡುವಂತಹ ಸಾಂಪ್ರದಾಯಿಕ ಕ್ರಮಗಳು ಆರೋಗ್ಯಕ್ಕೆ ಹಾನಿಕರವಲ್ಲ.


ಹಿತ-ಮಿತ-ಋತು ಭುಕ್ ಪರಿಕಲ್ಪನೆ ನಮ್ಮಲ್ಲಿದೆ. ಅಂದರೆ ಹಿತಮಿತವಾಗಿ ಹಾಗೂ ಋತುಮಾನಕ್ಕೆ ತಕ್ಕಂತೆ, ಆಯಾ ಕಾಲದಲ್ಲಿ ಬೆಳೆಯವ ತರಕಾರಿ, ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಿತಕರ. ಮಾವಿನ ಹಣ್ಣಿನ ಕಾಲದಲ್ಲಿ ಹಿತಮಿತವಾದ ಮಾವಿನ ಹಣ್ಣಿನ ಸೇವನೆಯೂ ಆರೋಗ್ಯಕರ.


ಮಾವಿನ ನಂಟು: ಮಾವಿನ ನಂಟು ಆರಂಭವಾಗುವುದೇ ಬಾಲ್ಯದಿಂದ. ಹಣ್ಣಿನ ಚಿತ್ರಗಳಿಗೆ ಬಣ್ಣ ತುಂಬಿ ಎಂದು ಕೊಡುವ ಪುಸ್ತಕದಲ್ಲಿ ಮಾವಿನ ಹಣ್ಣಿನ ಚಿತ್ರ ಇಲ್ಲದೆ ಇರಲು ಸಾಧ್ಯವೇ?. ಧರಣಿ ಮಂಡಲ ಪದ್ಯದಲ್ಲಿ ಕೊಳÀನೂದುತ ಗೊಲ್ಲನು ಕುಳಿತುಕೊಳ್ಳುವುದು ಮಾವಿನ ಮರದ ಬುಡದಲ್ಲೇ. ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು. ಹೀಗೆ ಬಾಲ್ಯದಲ್ಲಿ ಶಾಲೆಗಳಲ್ಲಿ ಈ ಪದ್ಯಗಳನ್ನು ಕೇಳುತ್ತಾ, ಹೇಳುತ್ತಾ ಮಾವಿನ ಮರದ ಚಿತ್ರಣ ಹಾಸುಹೊಕ್ಕಾಗಿದೆ.


ಬಸುರಿಯರಿಗೆ ಬಯಕೆ ಹುಟ್ಟಿಸುವ ಎಳೆ ಮಾವಿನ ಕಾಯಿ, ಜಾತ್ರೆಯಲ್ಲಿ ಸವಿಯುವ ಚರುಮುರಿಗೆ ಮಾವಿನ ಕಾಯಿ ಬೇಕೇ ಬೇಕು. ಉಪ್ಪಿನ ಕಾಯಿಯಲ್ಲಿ ಮಾವಿನ ಉಪ್ಪಿನಕಾಯಿಗೆ ಮೊದಲ ಮಣೆ. ಮಾವಿನ ಹಣ್ಣುಗಳು ಪ್ರೀತಿ ಮತ್ತು ಫಲವತ್ತತೆಯ ಸಂಕೇತವೂ ಹೌದು.


ನಮ್ಮ ರಾಷ್ಟ್ರೀಯ ಹಣ್ಣು: ಮಾವಿನ ಹಣ್ಣು ಭಾರತದ ರಾಷ್ಟ್ರೀಯ ಹಣ್ಣು. ಮಾವಿನ ಹಣ್ಣಿನಲ್ಲಿ ಅಲ್ಪೋನ್ಸಾ, ಕೇಸರ್, ಬಾದಾಮಿ, ನೀಲಂ, ಮಲ್ಗೋವಾ, ತೋತಾಪುರಿ, ಅಮ್ರಪಾಲಿ, ರಸ್ಪುರಿ, ಬಂಗನಪಲ್ಲಿ, ಮಲ್ಲಿಕಾ, ಅಪ್ಪೆಮಿಡಿ ಹೀಗೆ ವಿವಿಧ ಗಾತ್ರ, ಆಕಾರ ಮತ್ತು ಬಣ್ಣ, ರುಚಿಗಳ 1000ಕ್ಕೂ ಅಧಿಕ ವಿಧದ ಮಾವುಗಳಿವೆ. ನಮ್ಮ ಮಾವಿನ ಹಣ್ಣಿಗೆ ಬಹಳ ದೊಡ್ಡ ಇತಿಹಾಸವಿದೆ. ಈ ಹಣ್ಣಿನ ಮರ ನಮ್ಮ ದೇಶದಲ್ಲಿದ್ದು ಸುಮಾರು ನಾಲ್ಕು ಸಾವಿರ ವರ್ಷಗಳಾದುವಂತೆ. ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ಅಲೆಗ್ಸಾಂಡರ ನಮ್ಮ ದೇಶಕ್ಕೆ ಬಂದಾಗ ಅವನಿಗೆ ಈ ಹಣ್ಣು ಬಹಳ ಇಷ್ಟವಾಯಿತಂತೆ.


ಭಾರತವು ಮಾವಿನ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದ್ದು, ವಿಶ್ವದ ಒಟ್ಟು ಪೂರೈಕೆಯ ಅರ್ಧದಷ್ಟು ಭಾಗವನ್ನು ಹೊಂದಿದೆ. 2019ರ ಅಂಕಿ ಅಂಶ ಪ್ರಕಾರ ಜಗತ್ತಿನ ಮಾವಿನ ಹಣ್ಣಿನ ಉತ್ಪಾದನೆೆ (55.85 ಮಿಲಿಯನ್ ಟನ್) ಯಲ್ಲಿ ಭಾರತದ ಪಾಲು (21.38 ಮಿ.ಟನ್) 40%. ಭಾರತ ಮಾವಿನ ಹಣ್ಣಿನ ಉತ್ಪಾದನೆಯಲ್ಲಿ ಮೊದಲ ರಾಷ್ಟ್ರವಾದರೂ ರಪ್ತಿನಲ್ಲಿ ಥೈಲಾಂಡ್ (16%) ನಂತರದ ಸ್ಥಾನವನ್ನು ಭಾರತ (10%) ಪಡೆದಿದೆ (55.85 ಮಿಲಿಯನ್ ಮೆಟ್ರಿಕ ಟನ್).


ಆಪಾರ ವಿದೇಶಿ ವಿನಿಮಯ ಸಾಮರ್ಥ್ಯ: ಹಣ್ಣುಗಳ ರಾಜ ಎಂದು ಕಿರೀಟಧಾರಿಯಾಗಿರುವ ಹಾಗೂ ಅನೇಕ ವೈವಿದ್ಯ ಮಾವಿನ ಹಣ್ಣುಗಳನ್ನು ಬೆಳೆಯುವ ಭಾರತಕ್ಕೆ ಅಪಾರ ವಿದೇಶಿ ವಿನಿಮಯ ಗಳಿಸುವ ಸಾಮರ್ಥ್ಯ ಇದೆ. ಮಾವಿನ ಹಣ್ಣುಗಳನ್ನು ಬೆಳೆಸುವ ದೊಡ್ಡ ದೇಶವಾದ ಭಾರತ, ಬೆಳೆದ ಹಣ್ಣುಗಳನ್ನು ಬಳಸುವಲ್ಲಿ ಕೂಡಾ ದೊಡ್ಡ ಮಾರುಕಟ್ಟೆಯೆ. ಆದುದರಿಂದ ಉತ್ತಮ ರಫು್ತ ಶ್ರೇಯಾಂಕವನ್ನು ಪಡೆಯಲು ಸಾಧ್ಯವಾಗಿಲ್ಲ ಎಂಬುದು ಕೂಡಾ ಸತ್ಯವೆ.


ಕನಿಷ್ಠ ಒಂದು ಸಾವಿರ ಪ್ರಭೇದಗಳಿಗೆ ನೆಲೆಯಾಗಿರುವ ಭಾರತದೊಳಗಿನ ಮಾವಿನ ಪ್ರಭೇದಗಳ ಅರಿವಿನ ಕೊರತೆ, ಸರಿಯಾದ ಸಾಗಾಣಿಕ ವ್ಯವಸ್ಥೆ, ಗುಣಮಟ್ಟದ ಹಣ್ಣಿನ ಉತ್ಪಾದನೆ, ಮಾರುಕಟ್ಟೆಯ ಸಮಸ್ಯೆಗಳು ಹೀಗೆ ಅನೇಕ ಕಾರಣಗಳಿಗಾಗಿ ವಾಣಿಜ್ಯ ಬೆಳೆಯಾಗಿ ಮಾವಿನ ಹಣ್ಣು ಮುನ್ನೆಲೆಗೆ ಬಂದಿಲ್ಲ.

ಭೌಗೋಳಿಕ ಗುರುತಿಸುವಿಕೆ (ಜಿಐ) ಟ್ಯಾಗ್ ರಫ್ತುಗಳನ್ನು ಅಪೇಕ್ಷಿತ ವೇಗದಲ್ಲಿ ಹೆಚ್ಚಿಸಲು ವಿಫಲವಾಗಿದೆ. ಕಂಟ್ರೋಲರ್ ಜನರಲ್ ಆಫ್ ಪೇಟೆಂಟ್ ಡಿಸೈನ್ಸ್ ಮತ್ತು ಟ್ರೇಡ್‌ ಮಾರ್ಕ್‌ಗಳ ವರದಿಯ ಪ್ರಕಾರ ಕರ್ನಾಟದಲ್ಲಿ ಅಪ್ಪೆಮಿಡಿ ಮಾತ್ರ ಜಿಐ ಸ್ಥಾನಮಾನ ಪಡೆದಿದೆ.


ವಿಶ್ವದಲ್ಲಿಯೇ ಭಾರತವು ಮಾವಿನ ಹಣ್ಣಿನ ಅತೀ ದೊಡ್ಡ ಉತ್ಪಾದಕ ಹಾಗೂ ರಪು್ತ ಮಾಡುವ ದೇಶ. ಆದಾಗ್ಯೂ ಹೊಸ ಮಾರುಕಟ್ಟೆಗಳಿಗೆ ವಿಸ್ತರಿಸಲು ಗುಣಮಟ್ಟದ ಬಗ್ಗೆ ಹೆಚ್ಚಿನ ಗಮನ ºರಿಸಬೇಕಾಗಿದೆ. 

ಮಾವಿನ ಹಣ್ಣಿನ ಪೂರೈಕೆ ಸರಪಳಿಯ ಅಭಿವೃದ್ಧಿ ಕಳಪೆಯಾಗಿರಲು ಕಾರಣ ಸ್ಥಳೀಯ ರೈತರು ಹಾಗೂ ಉದ್ಯಮ ಅಸಂಘಟಿತವಾಗಿರುವುದು ಹಾಗೂ ಹಣ್ಣಿನ ಶೆಲ್ಫ್ ಜೀವನವನ್ನು ಹೆಚ್ಚಿಸುವ ಆಹಾರ ಸಂಸ್ಕರಣೆಯಲ್ಲಿನ ಹೊಸತನದ ಅಭಾವವೂ ಮುಖ್ಯವಾಗಿದೆ.


ರಾಷ್ಟ್ರೀಯ ಮಾವಿನ ದಿನ (ಜುಲೈ 22): ಮಾವಿನ ಹಣ್ಣಿನ ಬೆಳೆ ಹಾಗೂ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಮಾವಿನ ದಿನವನ್ನು ಆಚರಿಸಲಾಗುತ್ತದೆ. ಮಾವಿನ ವಿವಿಧ ಪ್ರಯೋಜನ, ವಿವಿಧ ಉತ್ಪನ್ನಗಳ ಬಗ್ಗೆ ತಿಳಿದುಕೊಂಡು ಮಾವಿನ ಗಿಡ ನೆಟ್ಟು ಪೋಷಿಸುವ ಮೂಲಕ ಪರಿಸರ ಸಂವರ್ಧನೆಯೊಂದಿಗೆ ಮಾವಿನ ಮಾರುಕಟ್ಟೆಯ ಬೆಳವಣಿಗೆಯಲ್ಲಿ ಕೈಜೋಡಿಸೋಣ.


ಗುಣಮಟ್ಟದ ಮಾವಿನಹಣ್ಣುಗಳ ಬೆಳೆ, ವೈಜ್ಞಾನಿಕ ಸಂಸ್ಕರಣೆ ಮತ್ತು ಗೋದಾಮು ವ್ಯವಸ್ಥೆ, ಮೌಲ್ಯವರ್ಧನೆ, ಬೆಳೆಗಾರರ ಸಂಘಟನೆ, ವಿವಿಧ ತಳಿಗಳ ಸಂವರ್ಧನೆ ಹಾಗೂ ಮಾರುಕಟ್ಟೆ ಸ್ಥಿರೀಕರಣ ಮೊದಲಾದ ಪ್ರೋತ್ಸಾಹಕ ಕ್ರಮಗಳಿಂದ ಬೆಳೆಗಾರ ಹಾಗೂ ಬಳಕೆದಾರರಿಬ್ಬರಲ್ಲೂ ನೆಮ್ಮದಿಯ ಮಂದಹಾಸ ಮೂಡಲಿ.



Key Words: National Mango day, Mango, National Mango day july 22, ರಾಷ್ಟ್ರೀಯ ಮಾವು ದಿನ, ಮಾವಿನ ಹಣ್ಣು, ಭಾರತದ ರಾಷ್ಟ್ರೀಯ ಹಣ್ಣು, ಹಣ್ಣುಗಳ ರಾಜ ಮಾವು

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post