ಕೇಸರಿಬಾತ್ ಎಂದಾಕ್ಷಣ ಯಾರಿಗೆ ತಾನೆ ಪ್ರೀತಿ ಇಲ್ಲ? ಅದರ ಬಣ್ಣ, ಪರಿಮಳ, ರುಚಿ ಎಲ್ಲವೂ ಮನಸ್ಸಿನೊಳಗೆ ಹಾದು ಹೋಗುತ್ತದೆ ಮಾತ್ರವಲ್ಲ ಅದರ ಸವಿಯನ್ನು ಸೇವಿಸಬೇಕೆಂದು ಕೂಡ ಬಯಸುತ್ತದೆ. ಯಾವುದೇ ತಿಂಡಿಗಳಿರಲಿ, ಭಕ್ಷ್ಯಗಳಿರಲಿ ಕೇಸರಿಬಾತಿಗೆ ಅದರದ್ದೇ ಆದ ಒಂದು ವಿಶಿಷ್ಟತೆ ಇದೆ. ಆರೋಗ್ಯ ಹೇಗೇ ಇರಲಿ, ಪ್ರಾಯ ಎಷ್ಟೇ ಇರಲಿ, ವೇಳೆ ಯಾವುದೇ ಇರಲಿ ಕೇಸರಿಬಾತ್ ಒಂದಷ್ಟು ಸೇವಿಸಲು ಯಾರೂ ಬೇಡವೆನ್ನರು. ಕೇಸರಿಬಾತ್ ನಲ್ಲಿ ಅದೇನು ಆಕರ್ಷಣೆ ಇರಬಹುದು ಎಂದಾಗ ಪ್ರಥಮವಾಗಿ ಅದರ ಬಣ್ಣವೇ ನಮ್ಮನ್ನು ಸೆಳೆಯುತ್ತದೆ, ತಿನ್ನುವಂತೆ ಪ್ರಚೋದಿಸುತ್ತದೆ. ಇದನ್ನೊಂದಿಷ್ಟು ಕೆದಕಿ ನೋಡೋಣ.
ಕೇಸರಿಬಾತ್ ಎಂದರೆ ಬರಿದೆ ಕೇಸರಿ ಮಾತ್ರ ವಿಶೇಷವಲ್ಲ. ಅದು ಇಲ್ಲದೆಯೂ ರುಚಿಗೆ ಕೊರತೆ ಬಾರದು. ಆದರೂ ಅದಕ್ಕೆ ಕೇಸರಿಬಾತ್ ಎಂದೇ ಕರೆಯಲು ಕಾರಣ ಕೇಸರಿಯ ಮಹತ್ವವೇ ಆಗಿದೆ. ಇದರಲ್ಲಿ ಅಕ್ಕಿ, ತುಪ್ಪ, ಸಕ್ಕರೆ, ದ್ರಾಕ್ಷಿ, ಗೋಡಂಬಿ, ಏಲಕ್ಕಿ, ಲವಂಗ ಮುಂತಾದ ವಸ್ತುಗಳು ಅದರದ್ದೇ ಆದ ಪ್ರಮಾಣದಲ್ಲಿ ಒಟ್ಟಾಗಿ ಇದ್ದರೂ ಹೆಸರು ಮಾತ್ರ ಕೇಸರಿಗೇ. ಬಹುಶಃ ಕೇಸರಿಯು ಇತರ ವಸ್ತುಗಳಿಗಿಂತ ಹೆಚ್ಚಿನ ಮೌಲ್ಯವುಳ್ಳದ್ದೂ ಎಂಬಂಥ ಕಾರಣವೇ ಇರಬಹುದು. ಹೇಗೆಂದರೆ ಮನುಷ್ಯರಲ್ಲಿ ಯಾವುದೇ ಗುಣಗಳಿರದಿದ್ದರೂ ಧನಿಕನಾದವನಿಗೆ ಎಲ್ಲರೂ ಗೌರವಿಸುವಂತೆ.
ಇನ್ನು ನಮಗೆ ಇದರಲ್ಲಿ ಆಸಕ್ತಿ ಉಂಟಾಗಬೇಕಾದರೆ ಮೊದಲಾಗಿ ಇದರ ಪರಿಚಯ ನಮಗಿರಬೇಕು. ಕೇಸರಿಬಾತ್ ಎಂಬ ಶಬ್ದ ಕಿವಿಗೆ ಕೇಳಿಸಬೇಕು, ಕಣ್ಣು ನೋಡಬೇಕು, ಮೂಗು ಪರಿಮಳವ ಅನುಭವಿಸಬೇಕು, ನಾಲಗೆ ದ್ರವ ಸುರಿಸಬೇಕು. ಇದೆಲ್ಲಕ್ಕೂ ಮೊದಲು ಮನಸ್ಸಿಗೆ ಇದರ ಅರಿವು ಮತ್ತು ಆಸಕ್ತಿ ಇರಬೇಕು. ಎಲ್ಲಿ ಮನಸ್ಸು ಬೇರೆ ಕಡೆ ಇರುವುದೋ ಆಗ ಈ ಯಾವ ಇಂದ್ರಿಯಗಳೂ ಕೆಲಸ ಮಾಡದೆ ತಟಸ್ಥವಾಗಿರುತ್ತವೆ. ಯಾವಾಗ ಮನಸ್ಸು ಇಂದ್ರಿಯಗಳಿಗೆ ಪ್ರಚೋದನೆ ಕೊಡುವುದೋ ಆವಾಗಲೇ ಬೇಕು ಬೇಡಗಳು ಉಂಟಾಗುವುದು. ಮನಸ್ಸು, ಇಂದ್ರಿಯಗಳು ಮಕ್ಕಳಿದ್ದಂತೆ. ನೋಡಿದ್ದೆಲ್ಲವೂ ಬೇಕು. ಆದರೆ ಬುದ್ಧಿ, ವಿವೇಕ ಎನ್ನುವುದು ತಂದೆ ತಾಯಿ ಇದ್ದಂತೆ. ವಿಷಯದಲ್ಲಿ ಆಸಕ್ತಿ ಇದ್ದರೂ ಬೇಕು ಬೇಡಗಳನ್ನು ವಿಮರ್ಶೆ ಮಾಡಿ ಪೂರೈಸುವಂತೆ.
ಇನ್ನು ಕೇಸರಿಬಾತ್ ರುಚಿಯನ್ನು ಸವಿಯಬೇಕಾದರೆ ಅದನ್ನು ನೋಡಬೇಕು, ಆಘ್ರಾಣಿಸಬೇಕು, ತಿನ್ನಬೇಕು.. ಕಣ್ಣಿಗೆ ಕಾಣುವ ಶಕ್ತಿ ಬೇಕು. ಮೂಗಿಗೆ ಆಘ್ರಾಣಿಸುವ ಶಕ್ತಿ ಬೇಕು. ನಾಲಗೆಗೆ ರುಚಿಯ ಅನುಭವಿಸುವ ಶಕ್ತಿ ಬೇಕು. ತಿನ್ನುವ ಶಬ್ದ ಕಿವಿಗಳಿಗೆ ಕೇಳಬೇಕು. ತಿಂದದೆಲ್ಲವನ್ನೂ ನುಂಗುವ ಶಕ್ತಿ ಗಂಟಲಿಗೆ ಬೇಕು. ಆಮೇಲೆ ಜೀರ್ಣಾಂಗಗಳು ಸಕ್ರಿಯವಾಗಿರಬೇಕು. ಇಷ್ಟೆಲ್ಲ ಪ್ರಕ್ರಿಯೆಗಳು ಏಕಕಾಲದಲ್ಲಿ ಘಟಿಸಬೇಕು. ಆವಾಗಲೇ ಕೇಸರಿಬಾತ್ ರುಚಿಯನ್ನು ಸವಿಯಬಹುದು, ಆಸ್ವಾದಿಸಬಹುದು... ಕೆಲವು ಸಂದರ್ಭಗಳಲ್ಲಿ ಯಾವುದು ಅನಿವಾರ್ಯವೋ ಅದನ್ನು ಉಪೇಕ್ಷಿಸಿ ಅನಿವಾರ್ಯವಲ್ಲದ್ದನ್ನು ವೈಭವೀಕರಿಸುವ ಪ್ರವೃತ್ತಿ ಮನುಷ್ಯರಲ್ಲಿದ್ದಂತೆ ಕೇಸರಿಬಾತ್ ಎಂಬಲ್ಲಿಯೂ ಕೇಸರಿಯನ್ನು ವೈಭವೀಕರಿಸಿದಂತೆ ಕಾಣುವುದು ಸಹಜವಷ್ಟೆ.
ಎಲ್ಲಿವರೆಗೆ ಎಂದರೆ ಕೇಸರಿ ಹಾಕಿದರೆ ಕೇಸರಿಬಾತ್ ಎಂದರೆ ಸಹಿಸಬಹುದು. ಆದರೆ ಚಿಟಿಕೆ ರಂಗಿನ ಹುಡಿ ಹಾಕಿದರೂ ಕೇಸರಿಬಾತ್ ಎಂದಾಗ ಸಹಿಸಲು ಸಾಧ್ಯವೇ. ಹಾಗಾದರೆ ಬರಿದೆ ಬಣ್ಣಕ್ಕೆ ಮರುಳಾಗಿ, ಬಿಳಿ ತೊಗಲಿದ್ದರೆ ಸಾಕು ಆತನೋ ಆಕೆಯೋ ಬಹಳ ಸೌಂದರ್ಯವಂತರು ಎಂದು ಹೇಳಿದಂತೆ ತಾನೆ. ಏನೇ ಇರಲಿ ಗುಣಕ್ಕಿಂತಲೂ ಬಣ್ಣಕ್ಕೆ ಮಹತ್ವ ಕೊಟ್ಟಾಗ ಈ ರೀತಿ ಆಗುವುದು ಸಹಜ. ಆರೋಗ್ಯದ ದೃಷ್ಟಿಯಿಂದ ನೋಡಿದಾಗ ಕೇಸರಿಬಾತಿನಲ್ಲಿ ಬಲವರ್ಧನೆ ಜೊತೆಗೆ ರುಚಿ ಹಾಗೂ ಪರಿಮಳ ಕೊಡುವುದು ತುಪ್ಪವೇ. ಆದರೆ ಇಲ್ಲಿ ತುಪ್ಪವನ್ನೂ ಬದಿಗೊತ್ತಿ ಒಂದು ಯಃಕ್ಕಶ್ಚಿತ್ ಬಣ್ಣ ಶ್ರೇಷ್ಠತೆಯನ್ನು ಪಡೆಯುವುದಾದರೆ ನಾವು ಆಂಗ್ಲರ ಆಕ್ರಮಣದಿಂದ ಬಣ್ಣಕ್ಕೆ ಅದೆಷ್ಟು ದಾಸರಾಗಿದ್ದೇವೆ ಎನ್ನುವುದಕ್ಕೆ ಬೇರೆ ಉದಾಹರಣೆ ಬೇಕಿಲ್ಲ. ಆಂಗ್ಲರನ್ನು ಓಡಿಸಿದರೂ ಬಣ್ಣದ ಹಿರಿಮೆ ನಮ್ಮಲ್ಲಿ ಉಳಿಸಿಕೊಂಡಂತೆ ರಂಗಿನ ಹುಡಿಗೂ ಕೇಸರಿ ಎಂದು ಒಪ್ಪಿಕೊಂಡು ಕೇಸರಿಬಾತ್ ಎನ್ನುವುದು ನಮ್ಮ ಹಿರಿಮೆಯೆಂದು ನನಗನಿಸದು. ಏನಂತೀರಿ..??
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ