'ಬಾಕಾಹು' ಅಭಿಯಾನವೀಗ ಇನ್ನೊಂದು ಹೊಸ ಮಜಲನ್ನು ಪ್ರವೇಶಿಸಿದೆ. ಖ್ಯಾತ ಕೃಷಿ ಅಭಿವೃದ್ಧಿ ಪತ್ರಕರ್ತರು ಹಾಗೂ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ವಿಷಯದಲ್ಲಿ ಹಲವು ಅಭಿಯಾನಗಳನ್ನು ಚಾಲನೆಗೊಳಿಸಿ ಭರ್ಜರಿ ಯಶಸ್ಸುಗಳಿಸಿದ ಶ್ರೀಪಡ್ರೆ ಅವರ ಪ್ರೇರಣೆಯಿಂದ ಈಗ 'ಬಾಕಾಹು' (ಬಾಳೆಕಾಯಿ ಹುಡಿ) ಅಭಿಯಾನ ದಿನದಿಂದ ದಿನಕ್ಕೆ ವೇಗ ಮತ್ತು ವ್ಯಾಪಕತೆಯನ್ನು ಪಡೆದುಕೊಳ್ಳುತ್ತಿದೆ.
ಬಾಳೆ ಬೆಳೆವ ಕೃಷಿಕರಿಗೆ ಬಾಳೆಕಾಯಿ / ಬಾಳೆಗೊನೆ ಮಾರಾಟದಲ್ಲಿ ಆಗುವ ವ್ಯಾಪಕ ನಷ್ಟವನ್ನು ತಪ್ಪಿಸುವ ಪ್ರಯತ್ನದ ಚಿಂತನೆಯಲ್ಲಿ ಹೊಳೆದದ್ದೇ ಈ 'ಬಾಕಾಹು' ಅಭಿಯಾನ. ಕಷ್ಟಪಟ್ಟು ಬೆಳೆಸಿದ ಬಾಳೆಗೊನೆಗಳನ್ನು ವ್ಯಾಪಾರಿಗಳು ಮೂರುಕಾಸಿನ ಬೆಲೆಗೆ ಖರೀದಿಸಿ, ಗ್ರಾಹಕರಿಗೆ ಮಾರುವಾಗ ಮೂರುಪಟ್ಟು- ನಾಲ್ಕುಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸುವ ಪ್ರವೃತ್ತಿಯೇ ಎಲ್ಲೆಡೆ ವಿಜೃಂಭಿಸುತ್ತಿರುವಾಗ ಬೆಳೆದ ರೈತನಿಗೆ ನ್ಯಾಯ ದೊರಕಿಸುವುದು ಹೇಗೆ? ಹೀಗೆಂದು ಯೋಚಿಸಿದ ಸದಾ ಅಧ್ಯಯನಶೀಲರಾದ ಶ್ರೀಪಡ್ರೆ ಅವರಿಗೆ ಹೊಳೆದಿದ್ದು ಬಾಳೆಕಾಯಿಯನ್ನು ಒಣಗಿಸಿ ಪುಡಿ ಮಾಡಿ ಏಕೆ ಮಾರಬಾರದು ಎಂಬ ಪ್ರಶ್ನೆ.
ಬಾಳೆಕಾಯಿ ಹುಡಿ ಮಾಡಿ ಮಾರಾಟ ಮಾಡಬಹುದಾದ ಸಾಧ್ಯತೆಗಳನ್ನು ಅಧ್ಯಯನ ನಡೆಸಿದ ಅವರು, ಬರೀ ಪುಡಿ ಮಾಟಿದರೆ ಏನು ಉಪಯೋಗ? ಅದರಿಂದ ಯಾವ್ಯಾವ ಬಗೆಯ ತಿಂಡಿ-ತಿನಿಸುಗಳನ್ನು ತಯಾರಿಸಬಹುದು? ಎಂಬ ಬಗ್ಗೆಯೂ ಯೋಚನೆ ಮಾಡಿ, ಒಂದಷ್ಟು ಮಂದಿ ಪ್ರಗತಿಪರ ಕೃಷಿಕರು ಮತ್ತು ಗೃಹೋದ್ಯಮಿಗಳನ್ನು ಸಂಪರ್ಕಿಸಿ ತಮ್ಮ ಚಿಂತನೆಗಳನ್ನು ಹಂಚಿಕೊಂಡರು.
ತಕ್ಷಣವೇ ಸ್ಪಂದಿಸಿದ ಹಲವು ಕೃಷಿಕರು/ ಗೃಹೋದ್ಯಮಿಗಳು 'ಬಾಕಾಹು' ಪ್ರಯೋಗಕ್ಕೆ ಮುಂದಾದರು. ಹಲವು ಉತ್ಸಾಹಿ ಗೃಹಿಣಿಯರು 'ಬಾಕಾಹು'ವಿನಿಂದ ತಯಾರಿಸಬಹುದಾದ ತಿನಿಸುಗಳ ಬಗ್ಗೆ ಪ್ರಯೋಗಗಳನ್ನು ನಡೆಸಿ ಯಶಸ್ವಿಯಾದರು. ಸಾಮಾಜಿಕ ಜಾಲತಾಣಗಳು ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಈ ಪ್ರಯೋಗಗಳು ಬೆಳಕು ಕಂಡು ವ್ಯಾಪಕ ಪ್ರಚಾರವನ್ನೂ ಪಡೆದವು.
ಈ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿಯ ಕಾನಳ್ಳಿಯ ಪ್ರಭಾಕರ ಹೆಗಡೆ ಮತ್ತು ವಸುಂಧರಾ ಹೆಗಡೆ ದಂಪತಿಗಳು 'ಬಾಕಾಹು' ತಯಾರಿಸಿ ಆನ್‌ಲೈನ್ ಮೂಲಕ ಗ್ರಾಹಕರಿಂದ ಆರ್ಡರ್ ಪಡೆದುಕೊಂಡು ಕೊರಿಯರ್ ಮೂಲಕ ತಲುಪಿಸುವ ಹೊಸ ಜಾಲವನ್ನು ರೂಪಿಸಿಕೊಳ್ಳುತ್ತಿದ್ದಾರೆ.
ಅವರ ಮನೆಯಿಂದ ಇಂದು ಕೊರಿಯರ್ ಮೂಲಕ ಬಾಕಾಹು ಬೆಂಗಳೂರು, ದಕ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ತಲಪಲಿದೆ. ಸಂಪರ್ಕ - ವಾಟ್ಸಪ್ ಮಾತ್ರ - 99009 27988; ನೇರ ಕರೆಗಾಗಿ: 78991 61434
******
ಮಳೆಯಿಲ್ಲದ ಮಳೆಗಾಲದ ನಡುವೆ ಉತ್ತರ ಕನ್ನಡ ಜಿಲ್ಲೆ ಇನ್ನೊಂದು ರೋಮಾಂಚಕ ಆಂದೋಳನಕ್ಕೆ ಜನ್ಮ ಕೊಟ್ಟಿದೆ. ಕೃಷಿಕರ ಮನೆಮನೆಗಳಲ್ಲೀಗ ಬಾಕಾಹುವಿನದೇ ( ಬಾಳೆಕಾಯಿ ಹುಡಿ/ಹಿಟ್ಟು) ಸುದ್ದಿ!
ಶತಮಾನಗಳಿಂದ ಬೇಗನೆ ಹಾಳಾಗುವ ಬಾಳೆಕಾಯಿ ಮಾತ್ರ ಮಾರಾಟ ಮಾಡಲು ಗೊತ್ತಿದ್ದ ಕೃಷಿಕುಟುಂಬಗಳ ಮಟ್ಟಿಗೆ ಇದೊಂದುಮರೆಯಲಾಗದ ಚಾರಿತ್ರಿಕ ಸಾಧನೆ. ಬಿಸಾಕು ಬೆಲೆಗೆ ಬಾಳೆಕಾಯಿ ಮಾರುವ ಬದಲು ಅದರಿಂದ ಮನೆಯಲ್ಲೇ ಬಹೂಪಯೋಗಿ ಬಾಕಾಹು ತಯಾರಿಸಿ, ಮನೆಯಲ್ಲೇ ಕುಳಿತು ಬಿಕರಿ. ಅದೂ ಒಂದಿಷ್ಟೂ ಗಂಟಲ ಪಸೆ ಆರಿಸದೆ! ಕನಿಷ್ಠ ಆರು ತಿಂಗಳ ತಾಳಿಕೆ ಇರುವ ಕಾರಣ ಆತಂಕಕ್ಕೆ ಕಾರಣವಿಲ್ಲ. ಯಾವ ಬಾಳೆಕಾಯಿಯಿಂದಲೂ ಸುಲಭವಾಗಿ ಬಾಕಾಹು ತಯಾರಿಸಬಹುದು.
ಈ ದಂಪತಿ ಕಳೆದ ವರ್ಷ ಕೊರೋನಾ ನಂತರವಷ್ಟೇ ಸುಕೇಳಿ, ಒಣ ಹಲಸಿನಹಣ್ಣು, ಹಲಸಿನ ಬೀಜದ ಹಿಟ್ಟು (ಹಬೀಹಿಟ್ಟು), ಹಲಸಿನ ಬೀಜದ ಚಿಪ್ಸ್ ಇತ್ಯಾದಿ ಮಾರುಕಟ್ಟೆ ಮಾಡಲು ಆರಂಭಿಸಿದವರು. ಫೇಸ್ ಬುಕ್ಕಿನ ’ಮಹಿಳಾ ಮಾರುಕಟ್ಟೆ’ಯ ಮೂಲಕ ಬಿಸಿನೆಸ್. ಇವರ ಗೃಹೋದ್ಯಮದ ಹೆಸರು ’ಮಂಜುಶ್ರೀ ಹೋಮ್ ಪ್ರಾಡಕ್ಟ್ಸ್’.
"ಬಾಕಾಹು ತಯಾರಿಸುವ ವಿದ್ಯೆ ಗೊತ್ತಾದದ್ದು ತುಂಬ ಅನುಕೂಲವಾಗಿದೆ. ಬೇಡಿಕೆ ಇದ್ದರೆ ವರ್ಷವಿಡೀ ಬಾಕಾಹು ಪೂರೈಸಬಲ್ಲೆವು" ಎನ್ನುತ್ತಾರೆ ಪ್ರಭಾಕರ ಹೆಗಡೆ. ಇವರು ಒಂದು ಕಿಲೋ ಬಾಕಾಹುಗೆ ರೂ 200 ಮತ್ತು ಶಿಪ್ಪಿಂಗ್ ಶುಲ್ಕ ಚಾರ್ಜ್ ಮಾಡುತ್ತಿದ್ದಾರೆ. ಬಾಕಾಹುವಿಗೆ ಬದಲು ಬಾಳೆಕಾಯಿಯ ಒಣ ಚಿಪ್ಸ್ ಬೇಕೆನ್ನುವವರಿಗೆ ಅದೂ ಲಭ್ಯ. ಇದೇ ಬೆಲೆ. ಇದನ್ನು ಬೇಕಾದಾಗ ಐದು ನಿಮಿಷದಲ್ಲಿ ಮಿಕ್ಸಿಯಲ್ಲಿ ಹುಡಿ ಮಾಡಿಕೊಳ್ಳಬಹುದು.
ಕಾನಳ್ಳಿಯ ಈ ಕಠಿಣಶ್ರಮಿ ದಂಪತಿಗಳ ಈ ಸಾಧನೆ ಕರ್ನಾಟಕದ, ಅದರಲ್ಲೂ ಉತ್ತರ ಕನ್ನಡದ ಕೃಷಿಕರಿಗೆ ದೊಡ್ಡ ಮೇಲ್ಪಂಕ್ತಿಯಾಗಿದೆ."ಬೇಡಿಕೆ ಇದ್ದರೆ ನಾವೂ ವರ್ಷಪೂರ್ತಿ ತಯಾರಿಸಿ ಪೂರೈಸಬಲ್ಲೆವು" ಎಂದು ಈಗ ಉಕ ಜಿಲ್ಲೆಯ ಇನ್ನೂ ಐದಾರು ಕುಟುಂಬಗಳು ಮುಂದೆ ಬಂದಿವೆ.
ಬಾಕಾಹುವಿನಿಂದ ಮಾಲ್ಟ್, ತಾಲಿಪಿಟ್ಟು, ತೆಳ್ಳೇವು, ಡ್ರೈ ಜಾಮೂನು, ರೊಟ್ಟಿ, ಪಕೋಡಾ, ಕಡುಬು - ಇನ್ನೂ ಅನೇಕ ಪಾಕಗಳನ್ನು ತಯಾರಿಸಬಹುದು. ’ರೆಸಿಸ್ಟೆಂಟ್ ಸ್ಟಾರ್ಚ್’ ಇರುವ ಕಾರಣ ಮಧುಮೇಹಿಗಳಿಗೆ ಸೂಕ್ತ. ಕಬ್ಬಿಣ, ಪೊಟ್ಯಾಸಿಯಂ, ಮೆಗ್ನೀಶಿಯಂ, ವಿಟಾಮಿನ್ನುಗಳಿಂದ ಸೃದ್ಧ. ಶಿಶು ಆಹಾರವಾಗಿಯೂ ಓಕೆ. ಮೈದಾ, ಗೋಧಿ ಹಿಟ್ಟುಗಳಿಗೆ ಆರೋಗ್ಯಕರ ಪರ್ಯಾಯ. ಜಮೈಕಾ, ಆಫ್ರಿಕಾಗಳಲ್ಲಿ ಇದು ಗೋಧಿ ಹುಡಿ, ಮೈದಾಗಳಿಗೆ ಸ್ಥಳೀಯ ಪರ್ಯಾಯ ಉತ್ಪನ್ನವಾಗಿ ಗೆದ್ದಿದೆ. ಗ್ಲುಟೆನ್ ಮುಕ್ತವಾದ ಕಾರಣ ಸೆಲಿಯಾಕ್ ಕಾಯಿಲೆ ಇರುವವರೂ ಬಳಸಬಹುದು.
(ಕೃತಜ್ಞತೆಗಳು: ಶ್ರೀಪಡ್ರೆ)
Key Words: Banana Powder, Banana Flour, Banana Recipes, ಬಾಕಾಹು, ಬಾಳೆಕಾಯಿ ಹುಡಿ, ಬಾಕಾಹು ಆಂದೋಲನ, ಆನ್‌ಲೈನ್‌ನಲ್ಲಿ ಬಾಕಾಹು,
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ