"ಸೂಪರ್! ನಮಗೆಲ್ಲರಿಗೂ ಇದರ ಬಗ್ಗೆ ನೂರಕ್ಕೆ ನೂರು ಒಳ್ಳೆ ಅಭಿಪ್ರಾಯ ಮೂಡಿದೆ" ಎನ್ನುತ್ತಿರುವ ’ಕಾಡ್ಸ್’ ನಿರ್ದೇಶಕ ಮಂಡಳಿ.
"ನಮ್ಮ ರೆಸ್ಟೋರೆಂಟಿನಿಂದ ಈಗ ಪಾರ್ಸೆಲ್ ಮಾತ್ರ ಒಯ್ಯಲು ಅನುಮತಿ ಇದೆ. ಗ್ರಾಹಕರು ಇಲ್ಲೇ ತಿನ್ನುವಂತಿದ್ದರೆ ಅದರ ಕತೆಯೇ ಬೇರೆ ಆಗುತ್ತಿತ್ತು. ಇಷ್ಟರಲ್ಲೇ ಬಾಳೆಕಾಯಿ ಹುಡಿಯ ಸುದ್ದಿ ಊರಿಗೆಲ್ಲಾ ಹಬ್ಬುತ್ತಿತ್ತು."
ಈ ಮಾತು ಹೇಳುವವರು ಕೆ.ಜಿ. ಆಂಟೊನಿ. ಕೇರಳದ ಇಡುಕ್ಕಿ ಜಿಲ್ಲೆಯ ಕೃಷಿಕಸ್ನೇಹಿ ಮಾರಾಟ ಸಂಸ್ಥೆ ’ಕಾಡ್ಸ್’ನ (ಕೇರಳ ಅಗ್ರಿಕಲ್ಚರ್ ಡೆವಲಪ್ ಮೆಂಟ್ ಸೊಸೈಟಿ) ಅಧ್ಯಕ್ಷರು. ಎರಡು ದಶಕದ ಹಿಂದೆ 15,000 ರೂ. ಬಂಡವಾಳದೊಂದಿಗೆ ತೆಂಗಿನ ಗರಿಯ ಶೆಡ್ಡಿನಲ್ಲಿ ತೊಡಗಿದ ಈ ಸಂಸ್ಥೆಯ ಈಗಿನ ಟರ್ನ್ ಓವರ್ 5 ಕೋಟಿ ರೂ. ತೊಡುಪುಳ ಅಲ್ಲದೆ ಎರ್ನಾಕುಲಂನಲ್ಲೂ ಇವರಿಗೆ ಮಳಿಗೆ ಇದೆ.
ಇವರು ಆರು ತಿಂಗಳು ಹಿಂದೆ ಆರಂಭಿಸಿದ ’ವಿಲೇಜ್ ಸ್ಕ್ವೇರ್’ ದೇಶದಲ್ಲೇ ಅನನ್ಯ ಕೃಷಿಕಪರ ಕೇಂದ್ರ. ಒಂದೇ ಸೂರಿನಡಿ ಕೃಷಿಕರಿಗೆ ಬೇಕಾದ ಸರ್ವಸರಕುಗಳು, ಹಲವು ರೀತಿಯ ಅನನ್ಯ ಸೇವೆಗಳು ಇಲ್ಲಿ ಸಿಗುತ್ತವೆ. ಅವರ ಬೆಳೆಗಳನ್ನು ಖರೀದಿಸುತ್ತಾರೆ. ಸೆಮಿನಾರುಗಳು ನಡೆಯುತ್ತವೆ. ಮರಗೆಣಸು ಹಾಳಾಗುವುದನ್ನು ಗಮನಿಸಿ ಅದನ್ನು ಸಂಸ್ಕರಿಸಿ ಮಾರಾಟ, ಬಳಕೆ ಆರಂಭಿಸಿದ್ದಾರೆ.
”ಅಡಿಕೆ ಪತ್ರಿಕೆ’ ಬಾಕಾಹು (ಬಾಳೆಕಾಯಿ ಹುಡಿ / ಹಿಟ್ಟು) ಬಗ್ಗೆ ಕಾಡ್ಸ್ ಸಂಸ್ಥೆಯ ಗಮನ ಸೆಳೆದದ್ದು ವಾರದ ಹಿಂದೆ. ಇಷ್ಟರಲ್ಲಿ ಅವರು ಎರಡು ಬಾರಿ ಬಾಕಾಹು ತಯಾರಿಸಿದ್ದಾರೆ. ಮೊದಲ ಬಾರಿ ನೇಂದ್ರನದು. ಅದಕ್ಕೆ ಉತ್ಪಾದನೇ ವೆಚ್ಚ ಹೆಚ್ಚಾಗುತ್ತಿದೆ ಎಂದು ಈ ಸಲ ರೋಬಸ್ಟಾ ಬಾಳೆಯದು.
"ನಾವು ಇಲ್ಲೇ ಶಿಶು ಆಹಾರಕ್ಕಾಗಿ ನೇಂದ್ರ ಬಾಳೆಯ ಹುಡಿಯನ್ನು ಕಿಲೋಗೆ 750 ರೂ.ಗೆ ಮಾರುತ್ತಿದ್ದೇವೆ." ಆಂಟೊನಿ ತಿಳಿಸುತ್ತಾರೆ,"26 ಕಿಲೋ ರೋಬಸ್ಟಾ ಬಾಳೆಕಾಯಿಯಲ್ಲಿ ಸಿಪ್ಪೆ ತೆಗೆದಾಗ 22 ಕಿಲೋ ಸಿಕ್ಕಿದೆ. ಅದರಲ್ಲಿ 4.5 ಕಿಲೋ ಹುಡಿ ತಯಾರಾಗಿದೆ. "
ಸಂಸ್ಥೆ ನಡೆಸುವ ರೆಸ್ಟೋರೆಂಟಿನಲ್ಲಿ ಬಾಕಾಹುವಿನ ಅಡ, ದೋಸೆ, ಇಡಿಯಪ್ಪಮ್ (ಶ್ಯಾವಿಗೆ) ತಯಾರಿಸಿ ನಿರ್ದೇಶಕ ಮಂಡಳಿಯ ಎಲ್ಲರೂ ಸವಿದಿದ್ದಾರೆ. "ಸೂಪರ್! ನಮಗೆಲ್ಲರಿಗೂ ಇದರ ಬಗ್ಗೆ ನೂರಕ್ಕೆ ನೂರು ಒಳ್ಳೆ ಅಭಿಪ್ರಾಯ ಮೂಡಿದೆ. ಮುಂದೆ ಇದನ್ನು ಹೇಗೆ ಜನ ಸಮುದಾಯಕ್ಕೆ ಪರಿಚಯಿಸಬೇಕು ಎಂಬ ಬಗ್ಗೆ, ಇದರ ಆರ್ಥಿಕತೆಯ ಬಗ್ಗೆ ಬೇಗನೆ ಪ್ಲಾನ್ ಮಾಡುತ್ತೇವೆ" ಎನ್ನುತ್ತಾರೆ ಆಂಟೊನಿ.
ಆಗಸ್ಟ್ 17ಕ್ಕೆ ಆರಂಭವಾಗುವ ಇವರ ’ಸ್ವದೇಶಿ ಸೂಪರ್ ಮಾರ್ಕೆಟಿನಲ್ಲಿ ’ಇನ್ ಹೌಸ್ ಬನಾನಾ ಫ್ಲೋರ್’ ಅನ್ನು ದೊಡ್ಡದಾಗಿ ಪರಿಚಯಿಸುವ ಪ್ಲಾನ್ ಇದೆ. ಇವರ ರೆಸ್ಟೋರೆಂತಿನ ಹೆಸರು ’ಕಪ್ಪ, ಚಕ್ಕ ರೆಸ್ಟೋರೆಂಟ್’ (ಮರಗೆಣಸು, ಹಲಸಿನ ರೆಸ್ಟೋರೆಂಟ್) ಎಂದು. ಅದರ ಹೆಸರಿಗೆ ಬಾಳೆಕಾಯಿಯನ್ನೂ ಸೇರಿಸುವ ಯೋಚನೆಯೂ ಇದೆ.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
Key words: Banana Flour, Banana Powder, Kerala, Bakahu, ಬಾಕಾಹು, ಬಾಳೆ ಕಾಯಿ ಹುಡಿ, ಕೇರಳ, ಬಾಕಾಹು ಆಂದೋಲನ,
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ