ಸಿದ್ದಲಿಂಗಯ್ಯ : ಸ್ವೋಪಜ್ಞ ಬರೆಹದ ಸಾಮ್ರಾಟ

Upayuktha
0

 


ಮಾರ್ಚ್‌ನಲ್ಲಿ ಸಾಹಿತ್ಯ ಪರಿಷತ್ತಿಗೆ ಬಂದಾಗ ನನ್ನ ಚೇಂಬರಿಗೆ ಬಂದು ಒಂದು ಗಂಟೆ ಕಳೆದಿದ್ದರು. ಇತ್ತೀಚೆಗೆ ಏನು ಬರೆದಿರಿ ಎಂಬುದು ಅವರ ಎಂದಿನ ಸ್ಥಾಯಿಪ್ರಶ್ನೆ. 'ಮಲ್ಲಿಗೆಯೊಂದಿಗೆ ಸುಮಸಂಧಾನ' ಎಂಬ 12 ಪುಟಗಳ ದೀರ್ಘ ಪ್ರಬಂಧ ಕೊಟ್ಟೆ. ಮೂರು ಪುಟ ಅಲ್ಲಿಯೇ ಓದಿ, ಅದರ ಒಂದು ಪ್ರತಿ ಬೇಕೆಂದರು.  ಪ್ರತಿ ಕೊಟ್ಟೆ. ಅನಂತರ ಏಪ್ರಿಲ್‌ನಲ್ಲಿ ಪರಿಷತ್ತಿಗೆ ಕಾರ್ಯಕ್ರಮವೊಂದಕ್ಕೆ ಬಂದಾಗ, ಮಲ್ಲಿಗೆ ಪ್ರಬಂಧ ಸಮಗ್ರವಾಗಿದೆ. ಭಾಷಾ ಪ್ರಯೋಗ, ನಿರೂಪಣಾ ಶೈಲಿ ಅನನ್ಯ ಎಂದರು. ಇದಾದ ಅನಂತರ ಎರಡೇ ತಿಂಗಳಿಗೆ ಅವರು ಶಾಶ್ವತ ವಿದಾಯ ಹೇಳುತ್ತಾರೆಂಬ ಸುಳಿವು ಸಹ ಇರಲಿಲ್ಲ.  


ನಾನು ಆಯೋಜಿಸಿದ, ಸಂಘಟಿಸಿದ ಕಾರ್ಯಕ್ರಮಗಳಿಗೆ ಕರೆದಾಗ ಎಂದೂ ತಪ್ಪಿಸಿಕೊಂಡಿರಲಿಲ್ಲ. ಅವರು ಅಧ್ಯಕ್ಷರಾಗಿದ್ದ ಶ್ರವಣಬೆಳಗೊಳದಲ್ಲಿ ನಡೆದ 81ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನನಗೆ ಸನ್ಮಾನವಾಯಿತು. ಕೇಂದ್ರ ಸಾಹಿತ್ಯ ಅಕಾಡೆಮಿಯು ನನ್ನ ಪುಸ್ತಕ ಪರಿಚಾರಿಕೆಗಾಗಿ ಸನ್ಮಾನಿಸಿದಾಗ ಕಂಬಾರರ ಅಧ್ಯಕ್ಷತೆ; ಸಿದ್ದಲಿಂಗಯ್ಯನವರು ಮುಖ್ಯ ಅತಿಥಿ. ಹೀಗೆ ಅವರೊಟ್ಟಿಗಿನ ನೆನಪುಗಳು ಒಂದಲ್ಲ, ಎರಡಲ್ಲ ಹತ್ತು-ಹಲವು.  ಹಂಚಿಕೊಂಡ ವೇದಿಕೆಗಳೂ ಹಲವು. ಎಂಬ(√)ತ್ತರ ದಶಕದಲ್ಲಿ ಗೆಳೆಯ-ಲೇಖಕ ಸಿ.ಎಸ್. ದ್ವಾರಕಾನಾಥ್ ಜೊತೆಗೆ ಜ್ಞಾನಭಾರತಿಗೆ ಕೆಲವು ಸಲ, ಅವರನ್ನು ನೋಡಲೆಂದೇ ಹೋಗಿದ್ದುಂಟು. ಅವರ ಸಂಯಮ ಬಹಳ ದೊಡ್ಡದು.  


ನವ್ಯ, ನವ್ಯೋತ್ತರಗಳ ನಡುವೆ ನಲುಗಿದ್ದ ಕನ್ನಡ ಕಾವ್ಯಕ್ಕೆ ಸರಳತೆಯ ದೀಕ್ಷೆ ತೊಡಿಸಿ, ಸ್ವಾನುಭವದ ಕಂಕಣ ಕಟ್ಟಿ ಅದಕ್ಕೆ ಹೊಸ ದನಿ, ಹೊಸ ಬನಿ ಪ್ರದಾನಿಸಿ ತನಿ ತನಿಯಾಗಿಸಿದವರು.  ಹಾಗಾಗಿ ಅವರ ಕಾವ್ಯಕ್ಕೆ ಸ್ವಂತಿಕೆಯ ಮೊಹರಿದೆ; ಸ್ವೋಪಜ್ಞತೆಯ ಛಾಪಿದೆ. ಮುಂದೆ ಕನ್ನಡ ಸಾಹಿತ್ಯ ಚಳವಳಿಯ ಭಾಗವಾದ ಬಂಡಾಯ ಸಾಹಿತ್ಯಕ್ಕೆ ಅವರೇ ಮುನ್ನುಡಿ ಬರೆದಂತಾಯಿತು. ಅವರು ಕವಿ;  ದಲಿತಕವಿಯಲ್ಲ.  


ಮುಂದಿನ ಸಾಹಿತ್ಯಯಾನ ಕುರಿತು ಕೇಳಿದಾಗ ತಮ್ಮ ಆತ್ಮಕಥನ 'ಊರು-ಕೇರಿ'ಯ ನಾಲ್ಕನೆಯ ಭಾಗ ಬರಲಿದೆ ಎಂದರು. ಮತ್ತೆ ಕಾವ್ಯಕ್ಕೆ ಹೊರಳುವ ಮಾತನ್ನಾಡಿದರು. ಕಣ್ಣಮುಂದೆ ನವಿಲು ಕುಣಿದಂತಾಗಿತ್ತು‌. ಆರಂಭದ ರೋಷ-ದ್ವೇಷ, ಸಿಟ್ಟು-ಸೆಡವುಗಳಿಂದ ಹೊರತಾದ ಮಾಗಿದ ಕಾವ್ಯವನ್ನು ಓದುವ ತವಕವಿತ್ತು. ಅವರ ವ್ಯಕ್ತಿತ್ವ ಕ್ರಮೇಣ ಕಸು, ಹೀಚು ದೋರೆಗಾಯಿ ಎಂಬ ವಿವಿಧ ಅವಸ್ಥೆಗಳನ್ನು ದಾಟಿ ಕಡೆಗೆ ಮಾಗಿತ್ತು, ಫಲವಾಗಿತ್ತು. ಸಂಘರ್ಷದ ಉಷ್ಣವಳಿದು ಅನುಸಂಧಾನದ ಮಾರ್ಗ ಅರಸಿತ್ತು. ಅಂತಹ ಪಕ್ವತೆ ಅವರ ಕಾವ್ಯದಲ್ಲಿ ಪಡಿಮೂಡುವುದನ್ನು ಕಾಣಬೇಕೆಂಬ ಇರಾದೆಯಿತ್ತು. ಆದರೆ ನಡುವೆಯೇ ತೊರೆದು ಹೊರಟು  ಜೋಗಿ ಜಂಗಮನಾದರು. ಸಂತಸದ ಝರಿಯಾಗಿದ್ದ ಮನಸ್ಸು ಅವರ ಅನಿರೀಕ್ಷಿತ ಅಗಲಿಕೆಯಿಂದ ಮಾಲಂಗಿ ಮಡುವಾಗಿದೆ. ಅವರು ಈ ನೆಲದ ಮರೆಯ ನಿದಾನ. 

(ನಿದಾನ √= ನಿಧಾನ √ = ಸಂಪತ್ತು.)

- ಕೆ. ರಾಜಕುಮಾರ್

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top