ಪುಸ್ತಕ ಮಳಿಗೆಗಳ ಪೈಕಿ ಅತ್ಯಂತ ಜನಪ್ರಿಯ ಹೆಸರು ಸಪ್ನ ಬುಕ್ ಹೌಸ್. ಕನ್ನಡ ಪುಸ್ತಕಗಳ ಪ್ರಕಟನೆಗಳ ಮೂಲಕ ಕನ್ನಡಿಗರ ಮನಗೆದ್ದ ಸ್ವಪ್ನ ಪುಸ್ತಕ ಮಳಿಗೆಯಲ್ಲಿ ದೊರೆಯದ ಪುಸ್ತಕವಿಲ್ಲ. ಹೆಸರಾಂತ ಹಿರಿಯ- ಕಿರಿಯ ಸಾಹಿತಿಗಳ ಪುಸ್ತಕಗಳನ್ನು ಪ್ರಕಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಈ ಸಂಸ್ಥೆಯ ಸ್ಥಾಪಕ ಒಬ್ಬ ಗುಜರಾತಿ ಮೂಲದ ವ್ಯಕ್ತಿ. ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದು ಇಲ್ಲಿಯೇ ತನ್ನ ಸ್ವಂತ ಉದ್ಯಮ ಸ್ಥಾಪಿಸಿದ ಸುರೇಶ್ ಶಾ ಸ್ವಪ್ನ ಬುಕ್ ಹೌಸ್ ಮೂಲಕ ರಾಜ್ಯದ ಜನರ ಪ್ರೀತಿಗೆ ಪಾತ್ರರಾದರು.
ಮುಂಬಯಿಯ ಘಾಟ್ಕೋಪರ್‌ನಲ್ಲಿ ಜನಿಸಿದ ಸುರೇಶ್ ಶಾ ತಂದೆ ಹತ್ತಿ ಬಟ್ಟೆಯ ಗಿರಣಿಯಲ್ಲಿ ಕಾರ್ಮಿಕನಾಗಿದ್ದರು. 1938ರಲ್ಲಿ ಸುರೇಶ್ ಜನಿಸಿದಾಗ ಕುಟುಂಬ ಬಡತನದಲ್ಲಿ ಜೀವನ ನೂಕುತ್ತಿತ್ತು. ಕುಟುಂಬ ನಿರ್ವಹಣೆಗೆ ತಂದೆಯ ಕೆಲಸವೇ ಆಧಾರವಾಗಿತ್ತು. ಆದರೆ ಸಂಸಾರ ಸಾಗಿಸಲು ಅದು ಸಾಕಾಗುತ್ತಿರಲಿಲ್ಲ.10 ವರ್ಷವಾಗುವಾಗಲೇ ಓದಿನ ನಡುವೆಯೇ ಸುರೇಶ್ ತಂದೆ ಜೊತೆ ಕೆಲಸಕ್ಕೆ ನೆರವಾಗುತ್ತಿರುತ್ತಾರೆ. ಮನೆಯಲ್ಲಿ ಅವರೇ ದೊಡ್ಡವರಾದ್ದರಿಂದ ತಂದೆಗೆ ನೆರವಾಗುವುದು ಅನಿವಾರ್ಯವಾಗಿತ್ತು. 10 ನೇ ತರಗತಿಯನ್ನು ಪ್ರಥಮ ದರ್ಜೆಯಲ್ಲಿ ಪಾಸಾದ ಸುರೇಶ್ ಕಾಲೇಜು ಮೆಟ್ಟಿಲು ಹತ್ತುತ್ತಾರೆ. ಆದರೆ ಬಡತನ ಮತ್ತು ತಂದೆಯ ಮರಣ ಅವರನ್ನು ಶಿಕ್ಷಣದಿಂದ ವಿಮುಖರನ್ನಾಗಿಸುತ್ತದೆ. ಕಾಲೇಜು ಬಿಡಬೇಕಾಯಿತು. ಕಾಲೇಜು ಬಿಟ್ಟು ವಿವಿಧ ವಸ್ತುಗಳನ್ನು ಮಾರುತ್ತಾ ಮನೆ ಮನೆಗೆ ಅಲೆದಾಡುತ್ತಾರೆ. ಸಿಗುವ ಅಲ್ಪಕಾಸು ಮನೆ ಖರ್ಚಿಗೆ ಸಾಕಾಗುತ್ತಿತ್ತು. 18ರ ಹರೆಯದಲ್ಲೆ ಕುಟುಂಬದ ಜವಾಬ್ದಾರಿ ಹೊರುತ್ತಾರೆ ಸುರೇಶ್.
ಇದೇ ಸಮಯ ಮನೆ ಸಮೀಪದ ಘಾಟ್ಕೋಪರ್ ರೈಲ್ವೆ ಸ್ಟೇಷನ್ ಸ್ಟೇಷನ್ ಮಾಸ್ಟರ್ ನ ಪರಿಚಯ ಆಕಸ್ಮಿಕವಾಗಿ ಆಗುತ್ತದೆ. ಸುರೇಶ್ ದುಡಿಮೆ ನೋಡಿದ ಅವರು ಅಲೆಯುವುದಕ್ಕಿಂತ ಸ್ಟೇಷನ್ ನಲ್ಲೆ ಕೆಲಸ ಮಾಡಲು ಹೇಳುತ್ತಾರೆ. ಫುಲ್ ಟೈಮ್ ಪೋರ್ಟರ್ ಆಗಿ ಘಾಟ್ಕೋಪರ್ ರೈಲ್ವೆ ಸ್ಟೇಷನ್ ನಲ್ಲಿ ಸೇರುತ್ತಾರೆ ಸುರೇಶ್. ಇಲ್ಲೂ ಕೂಡ ತನ್ನ ವೃತ್ತಿ ಬದ್ಧತೆ ಮರೆಯುವುದಿಲ್ಲ. ಅವರ ದಕ್ಷತೆ ಅವರನ್ನು ಮುಂಬೈ ಕೂಲಿ ಅಸೋಸಿಯೇಷನ್ ನ ಘಾಟ್ಕೋಪರ್ ವಿಭಾಗದ ಅಧ್ಯಕ್ಷರನ್ನಾಗಿಸುತ್ತದೆ.
ಕೂಲಿ ಮಾಡುತ್ತಿರುವ ಸಂದರ್ಭವೇ ಒಮ್ಮೆ ಅವರಿಗೆ ಉದ್ಯಮಿ ತುಳಸಿ ಶಾ ಪರಿಚಯವಾಗುತ್ತದೆ. ಪಾಕೆಟ್ ನೋಟ್ ಬುಕ್ ಮಾರಾಟ ಮಾಡುವ ಕಂಪನಿಯ ಮಾಲಿಕ ಅವರು. ತುಳಸಿ ಶಾ ಆಹ್ವಾನದ ಮೇರೆಗೆ ಸುರೇಶ್ ಅವರ ಜೊತೆ ಸೇರುತ್ತಾರೆ. ಸಹಾಯಕನಾಗಿ ಕೆಲಸಕ್ಕೆ ಸೇರಿದ ಸುರೇಶ್ ಕೆಲಸ ಕಪಾಟಿನಲ್ಲಿರುವ ಪುಸ್ತಕಗಳನ್ನು ಸರಿಯಾಗಿ ಜೋಡಿಸಿಡುವುದು. ತಿಂಗಳಿಗೆ 75 ರೂಪಾಯಿ ಸಂಬಳಕ್ಕೆ ಕೆಲಸಕ್ಕೆ ಸೇರಿದ ಸುರೇಶ್ ದಿನಕ್ಕೆ 15 ಗಂಟೆ ದುಡಿಯುತ್ತಾರೆ. ಇಷ್ಟಾಗುವಾಗ ಅವರ ಮದುವೆ ಕೂಡ ಆಗುತ್ತದೆ. ಸುರೇಶ್ ನಿಷ್ಠೆ ಮತ್ತು ಕಠಿಣ ದುಡಿಮೆ ಗಮನಿಸಿದ ತುಳಸಿ ಶಾ ಅವರನ್ನು ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಪ್ರಮೋಟ್ ಮಾಡುತ್ತಾರೆ ಮತ್ತು ಬೆಂಗಳೂರು ಬ್ರಾಂಚ್ ಗೆ ಕಳುಹಿಸುತ್ತಾರೆ.
1960 ರ ಸುಮಾರಿಗೆ ಪತ್ನಿ ಭಾನುಮತಿ ಮತ್ತು 2 ವರ್ಷದ ಮಗ ನಿತಿನ್ ಜೊತೆ ಬೆಂಗಳೂರು ಬಂದಿಳಿಯುತ್ತಾರೆ ಸುರೇಶ್ ಶಾ. ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆಯೊಬ್ಬಳಿರುತ್ತಾಳೆ ಎಂಬ ಮಾತಿದೆ. ಬುದ್ದಿವಂತ ಪತ್ನಿ ಭಾನುಮತಿ ಗಂಡನನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾಳೆ. ಸುರೇಶ್ ರ ನಿಷ್ಠೆಯ ದುಡಿಮೆ ಕಂಪೆನಿಯ ಯಶಸ್ಸಿನಲ್ಲಿ ಬಹುಪಾಲು ವಹಿಸಿರುವುದು ಅವಳ ಗಮನಕ್ಕೂ ಬಂದಿರುತ್ತದೆ.ತಮ್ಮದೇ ಆದ ಉದ್ಯಮ ಆರಂಭಿಸುವಂತೆ ಪತಿಗೆ ಸಲಹೆ ನೀಡುತ್ತಾಳೆ ಅವಳು. ಆರಂಭದಲ್ಲಿ ಸುರೇಶ್ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಪತ್ನಿ ಹಠ ಬಿಡುವುದಿಲ್ಲ ಗಂಡನ ಸಾಮರ್ಥ್ಯದ ಮೇಲೆ ಅವಳಿಗೆ ನಂಬಿಕೆ ಇತ್ತು. ಕಡೆಗೂ ಪತ್ನಿಯ ಮಾತಿಗೆ ಬೆಲೆ ಕೊಡುತ್ತಾರೆ. ಸ್ವಲ್ಪ ಸಮಯ ತುಳಸಿ ಶಾ ಜೊತೆ ಕೆಲಸ ಮಾಡಿ ನಂತರ ಕೆಲಸ ಬಿಡುತ್ತಾರೆ.
1967ರಲ್ಲಿ ಬೆಂಗಳೂರಿನ ಹೃದಯ ಭಾಗ ಗಾಂಧಿನಗರದಲ್ಲಿ ಸ್ವಪ್ನ ಪುಸ್ತಕ ಮಳಿಗೆ ಆರಂಭಿಸುತ್ತಾರೆ. ಕೇವಲ 100 ಚದರಡಿ ಜಾಗದ ಆ ಮಳಿಗೆಯಲ್ಲಿ ಸುರೇಶ್ ಶಾ ಮಾರಿದ ಪ್ರಥಮ ಪುಸ್ತಕ "ಲಿಲ್ಲಿಫುಟ್ ಪಾಕೆಟ್ ಡಿಕ್ಷನರಿ". ಆಗ ಸುರೇಶ್ ಡಿಕ್ಷನರಿಗಳನ್ನು ಮಾತ್ರವೇ ಮಾರಿದರು. ಪುಸ್ತಕ ಪ್ರಪಂಚದ ಅನುಭವ ಅವರನ್ನು ಪುಸ್ತಕ ಮಳಿಗೆ ಆರಂಭಿಸಲು ಪ್ರೇರೇಪಿಸಿತು. ಮುಂದಿನ 10 ವರ್ಷಗಳ ಅವಧಿ(1967-77) ಸುರೇಶ್ ಶಾ ಮತ್ತು ಸ್ವಪ್ನ ಪುಸ್ತಕ ಮಳಿಗೆಯ ಪಾಲಿಗೆ ಪರ್ವ ಕಾಲ. ಅತ್ಯಂತ ಯೋಜನಾಬದ್ಧವಾಗಿ ಕಾರ್ಯವನ್ನು ಪ್ರಾರಂಭಿಸಿ, ಕಠಿಣ ಪರಿಶ್ರಮ ವಹಿಸಿ ದುಡಿದರೆ ಯಾವ ಯಶಸ್ಸು ಲಭಿಸುತ್ತದೋ ಆ ಯಶಸ್ಸು ಸುರೇಶ್ ಶಾರಿಗೆ ಲಭಿಸುತ್ತದೆ. ಹಗಲು-ರಾತ್ರಿ ದುಡಿದ ಸುರೇಶ್ ಗ್ರಾಹಕರ ಪ್ರೀತಿ ಗಳಿಸುತ್ತಾರೆ. ಅವಿರತ ದುಡಿಮೆ-ನಿಷ್ಠೆ ಅವರನ್ನು ಮೇಲಕ್ಕೆತ್ತುತ್ತದೆ. ಕನ್ನಡ ಪುಸ್ತಕಗಳ ಪ್ರಕಟನೆ ಆರಂಭಿಸುತ್ತಾರೆ. ಆ ಮೂಲಕ ಕನ್ನಡಿಗರ ಮನಸ್ಸಿಗೆ ಮತ್ತೂ ಹತ್ತಿರವಾಗುತ್ತಾರೆ. ಮಳಿಗೆಯನ್ನು 1200 ಚದರಡಿಗೆ ವಿಸ್ತರಿಸುತ್ತಾರೆ.ಅಲ್ಲಿಂದಾಚೆಗೆ ಸುರೇಶ್ ಶಾ ಹಿಂದಿರುಗಿ ನೋಡುವುದಿಲ್ಲ. ಕನ್ನಡದ ಎಲ್ಲ ಹಿರಿ-ಕಿರಿಯ ಸಾಹಿತಿಗಳ ಪುಸ್ತಕಗಳನ್ನು ಪ್ರಕಟಿಸುತ್ತಾರೆ, ನಿಯಮಿತ ಸೇವೆ ಒದಗಿಸುತ್ತಾರೆ. ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಬಹು ದೊಡ್ಡ ಕೊಡುಗೆ ನೀಡುತ್ತಾರೆ.
ಡಾ.ಶಿವರಾಮ ಕಾರಂತ, ಡಾ.ನಿಸಾರ್ ಅಹಮದ್ ಮುಂತಾದ ಪ್ರಸಿದ್ಧ ಸಾಹಿತಿಗಳ ಸಮಗ್ರ ಪುಸ್ತಕಗಳನ್ನು ಸಪ್ನ ಬುಕ್ ಹೌಸ್ ಮೊದಲ ಬಾರಿಗೆ ಪ್ರಕಟಿಸುತ್ತದೆ.
2011ರಲ್ಲಿ 55ನೇ ಕನ್ನಡ ರಾಜ್ಯೋತ್ಸವದ ಸಂದರ್ಭ 55 ಕನ್ನಡ ಪುಸ್ತಕಗಳನ್ನು ಬಿಡುಗಡೆ ಮಾಡಿ ದಾಖಲೆ ಮಾಡುತ್ತದೆ.
ಕನ್ನಡ ಪುಸ್ತಕ ಮಳಿಗೆ ಎಂದರೆ "ಸಪ್ನ ಬುಕ್ ಹೌಸ್" ಎಂದೇ ಜನರ ಬಾಯಲ್ಲಿ ನಲಿವಂತೆ ಜನಪ್ರಿಯವಾಗಿರುವ ಸಂಸ್ಥೆಯ 19 ಶಾಖೆಗಳು ಈಗ ಕಾರ್ಯಾಚರಿಸುತ್ತವೆ. ದಿನಗೂಲಿ ನೌಕರನಾಗಿ ಬದುಕು ಆರಂಭಿಸಿದ ವ್ಯಕ್ತಿ ಈಗ ನೂರಾರು ಜನರಿಗೆ ತನ್ನ ಉದ್ಯಮದ ಮೂಲಕ ಕೆಲಸ ನೀಡಿದ್ದಾರೆ.
ಇಂದು ಸ್ವಪ್ನ ಬುಕ್ ಹೌಸ್‌ನಲ್ಲಿ ಲಕ್ಷಕ್ಕೂ ಮಿಗಿಲಾದ ಟೈಟಲ್‌ನ ಪುಸ್ತಕಗಳು ಲಭ್ಯವಿವೆ. ಬುಕ್ ಹೌಸ್ ವಿಸ್ತರಿಸಿ ಸ್ಟೇಷನರಿ ಮತ್ತು ಗಿಫ್ಟ್ ಐಟಮ್‌ಗಳ ಮಾರಾಟ ಕೂಡ ಆರಂಭಿಸಿದೆ.
ಗುಜರಾತಿ ಮೂಲದ, ಮುಂಬಯಿಯಲ್ಲಿ ಹುಟ್ಟಿ ಬೆಳೆದ, ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡ ಸುರೇಶ್ ಶಾ ಪುಸ್ತಕ ಪ್ರಪಂಚದ ದೊರೆಯಾಗಿ ಮೆರೆದರು. ಪತ್ನಿಯ ಸಲಹೆಗೆ ಕಿವಿಗೊಟ್ಟು ಉದ್ಯಮ ರಂಗಕ್ಕಿಳಿದ ವ್ಯಕ್ತಿ ದೇಶದ ಯಶಸ್ವಿ ಉದ್ಯಮಿಗಳ ಸಾಲಿಗೆ ಸೇರಿದ್ದಾರೆ. ಅವರ ನಿಷ್ಠಾವಂತ ದುಡಿಮೆ-ಬದ್ಧತೆಯೇ ಅವರಿಗೆ ಯಶಸ್ಸು ತಂದು ಕೊಟ್ಟಿತು. ಇಂದು ಅವರಿಲ್ಲದಿದ್ದರೂ ಸಪ್ನ ಬುಕ್ ಹೌಸ್ ಕನ್ನಡ ಸೇವೆ ಮುಂದುವರಿಸುತ್ತಿದೆ. ಕನ್ನಡಿಗರೇ ಆದ ಅವರ ಪುಸ್ತಕ ಪ್ರೀತಿ ಅವರನ್ನು ಮಾತ್ರ ಯಶಸ್ವಿ ಉದ್ಯಮಿಯಾಗಿಸಲಿಲ್ಲ,ಜೊತೆಗೆ ಕನ್ನಡ ಸಾಹಿತ್ಯ ಪ್ರಪಂಚವನ್ನು ಕೂಡ ಶ್ರೀಮಂತಗೊಳಿಸಿತು. ಸುರೇಶ್ ಶಾ ಕನ್ನಡ ಪ್ರೀತಿ ನಮಗೆ ಮಾದರಿಯಾಗಬಾರದೇ...?
-ತೇಜಸ್ವಿ ಕೆ, ಪೈಲಾರು, ಸುಳ್ಯ