ರಾಮಾಯಣ ಧಾರಾವಾಹಿಯ 'ಆರ್ಯ ಸುಮಂತ' ಖ್ಯಾತಿಯ ಹಿರಿಯ ನಟ ಚಂದ್ರಶೇಖರ್ ವೈದ್ಯ ಇನ್ನಿಲ್ಲ

Upayuktha
0


ಮುಂಬಯಿ: ರಾಮಾನಂದ ಸಾಗರರ ಅತ್ಯಂತ ಜನಪ್ರಿಯ ರಾಮಾಯಣ ಧಾರಾವಾಹಿಯಲ್ಲಿ 'ಆರ್ಯ ಸುಮಂತ'ನ ಪಾತ್ರ ನಿರ್ವಹಿಸಿದ್ದ ಹಿರಿಯ ನಟ ಚಂದ್ರಶೇಖರ್‌ ವೈದ್ಯ (98) ಅವರು ವಯೋಸಹಜ ಕಾಯಿಲೆಗಳಿಂದ ಬುಧವಾರ ನಿಧನರಾದರು.  ಅವರಿಗೆ ಮೂವರು ಪುತ್ರರಿದ್ದಾರೆ.


ಚಾ ಚಾ ಚಾ ಮತ್ತು ಸುರಾಂಗ್‌ನಂತಹ ಸಿನಿಮಾಗಳಲ್ಲೂ ಅವರು ಪಾತ್ರ ನಿರ್ವಹಿಸಿದ್ದರು. ಬೆಳಗ್ಗೆ 7 ಗಂಟೆಯ ವೇಳೆಗೆ ಅವರು ಕೊನೆಯುಸಿರೆಳೆದರು ಎಂದು ಅವರ ಪುತ್ರ, ನಿರ್ಮಾಪಕ ಅಶೋಕ್‌ ಶೇಖರ್ ಸುದ್ದಿಸಂಸ್ಥೆಗೆ ತಿಳಿಸಿದರು.


ಅವರ ನಿಧನದ ಸುದ್ದಿ ತಿಳಿದು ರಾಮಾಯಣದಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸಿದ್ದ ಅರುಣ್ ಗೋವಿಲ್ ಅವರು ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ. ಜತೆಗೆ ಅವರೊಂದಿಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.


ತಾವು ಬಯಸಿದಂತೆಯೇ ಕುಟುಂಬ ಸದಸ್ಯರೆಲ್ಲರ ಸಮ್ಮುಖದಲ್ಲೇ, ಪ್ರಶಾಂತ ಮನಸ್ಥಿತಿಯೊಂದಿಗೆ ಅವರು ನಿರ್ಗಮಿಸಿದರು. ಅವರಿಗೆ ಹೇಳಿಕೊಳ್ಳುವಂತಹ ಅನಾರೋಗ್ಯವೇನೂ ಇರಲಿಲ್ಲ. ವಯೋಸಹಜವಾದ ಸಣ್ಣಪುಟ್ಟ ತೊಂದರೆಗಳು ಇತ್ತೀಚೆಗೆ ಕಾಣಿಸಿಕೊಂಡಿದ್ದವು. ಅವರು ಸಂತೃಪ್ತವಾದ ಪರಿಪೂರ್ಣ ಬದುಕನ್ನು ಬಾಳಿದ್ದಾರೆ ಎಂದು ಪುತ್ರ ಶೇಖರ್ ತಿಳಿಸಿದರು.


ನಿನ್ನೆ ಸಂಜೆ ಜುಹೂ ನ ಪವನಹಂಸ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು.


ಹೈದರಾಬಾದ್‌ನಲ್ಲಿ ಜನಿಸಿದ್ದ ಚಂದ್ರಶೇಖರ್‌ ವೈದ್ಯ ಅವರು 1950ರ ದಶಕದ ಆರಂಭದಲ್ಲಿ ಜೂನಿಯರ್ ಕಲಾವಿದರಾಗಿ ಚಿತ್ರರಂಗ ಪ್ರವೇಶಿಸಿದ್ದರು. 1954ರಲ್ಲಿ ಅವರು ವಿ ಶಾಂತಾರಾಮ್ ಅವರ 'ಸುರಾಂಗ್‌' ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದರು.


ಕವಿ, ಮಸ್ತಾನಾ, ಬಸಂತ್ ಬಹಾರ್, ಕಾಲಿ ಟೋಪಿ ಲಾಲ್‌ ರುಮಾಲ್‌ ಮತ್ತು ಬರ್ಸಾತ್‌ ಕಿ ರಾತ್‌ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದರು.


1964ರಲ್ಲಿ ಅವರು ತಮ್ಮ ಮೊದಲ ಚಿತ್ರ ಚಾ ಚಾ ಚಾ ವನ್ನು ನಿರ್ಮಾಣ ಹಾಗೂ ನಿರ್ದೇಶನ ಮಾಡಿದರು. ಆ ಚಿತ್ರದಲ್ಲಿ ಹಿರಿಯ ನಟಿ ಹೆಲೆನ್ ಅವರು ಮೊದಲ ಬಾರಿಗೆ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


1987ರಲ್ಲಿ ಚಂದ್ರಶೇಖರ್ ವೈದ್ಯ ಅವರು, ದೂರದರ್ಶನದ ಜಗತ್‌ ಪ್ರಸಿದ್ಧ ರಾಮಾಯಣ ಧಾರಾವಾಹಿಯಲ್ಲಿ ರಾಜಾ ದಶರಥನ ಮಂತ್ರಿ ಸುಮಂತನ ಪಾತ್ರ ನಿರ್ವಹಿಸಿದರು.


1990ರ ದಶಕದ ಆರಂಭದ ವರ್ಷಗಳ ವರೆಗೂ ಸುಮಾರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರು, ಚಿತ್ರ ನಿರ್ಮಾಪಕ ಗುಲ್ಜಾರ್ ಅವರ ಜತೆ 1972ರಿಂದ 76ರ ವರೆಗೆ ಸಹಾಯಕರಾಗಿ ದುಡಿದಿದ್ದರು. ಆಗ ನಿರ್ಮಾಣವಾದ ಪರಿಚಯ್, ಕೋಶಿಶ್‌, ಅಚಾನಕ್‌, ಆನಂದಿ, ಖುಶ್ಬೂ ಮತ್ತು ಮೌಸಮ್ ಚಿತ್ರಗಳಲ್ಲಿ ಅವರ ಪಾತ್ರವೂ ಇತ್ತು.


Key Words: Arya Sumanth, Chandrashekhar Vaidya, Ramayana, ಆರ್ಯ ಸುಮಂತ, ಚಂದ್ರಶೇಖರ್ ವೈದ್ಯ, ರಾಮಾಯಣ


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top