ಬಾಳಿಗೊಂದು ನಂಬಿಕೆ ಇಟ್ಟುಕೊಂಡು ಬದುಕಿಗೊಂದು ಅರ್ಥ ಬರುವ ನಿಟ್ಟಿನಲ್ಲಿ ಯೋಗ ಹಾಗೂ ನೃತ್ಯ ಕಲೆಯನ್ನು ತನ್ನ ಬದುಕಿನ ಸೆಲೆಯನ್ನಾಗಿಸಿಕೊಂಡು ಕೀರ್ತಿ ಶಿಖರದ ಕಡೆಗೆ ಹೆಜ್ಜೆ ಇಡುತ್ತಿರುವ ಪುಟ್ಟ ಹುಡುಗಿ - ತನುವನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವ ಶಕ್ತಿ ಹೊಂದಿದ ಕೇವಲ 12 ವರ್ಷದ ಎಳೆಯ ಬಾಲಕಿ ತನುಶ್ರೀ ಪಿತ್ರೋಡಿ .
ತನ್ನ ಬಾಲ್ಯದಲ್ಲೇ ಹಿಂದೂ ಸನಾತನ ಧರ್ಮದ, ಭಾರತೀಯರ ಮೂಲ ಆಸ್ತಿ ಈ ಯೋಗ ವಿದ್ಯೆಯ ಮೂಲಕ ಇಡೀ ವಿಶ್ವವೇ ಅಚ್ಚರಿಪಡುವ ಆರು ವಿಶ್ವ ದಾಖಲೆಗಳನ್ನು ಸೃಷ್ಟಿಸಿದ ನಮ್ಮೂರ ಮಿನುಗು ತಾರೆ ಈಕೆ. ಇವಳ ಜೀವನೋತ್ಸಾಹಕ್ಕೆ ಜೀವನೋತ್ಕರ್ಷಕ್ಕೆ ತಲೆಬಾಗಲೇ ಬೇಕು.
ಉಡುಪಿಯ ಸಮೀಪದ ಪಿತ್ರೋಡಿಯ ಸಂಧ್ಯಾ ಉದಯ ಕುಮಾರ್ ದಂಪತಿಗಳ ಮೊದಲ ಕರುಳಿನ ಕುಡಿ ಈ ಬಾಲೆ. ಪ್ರಸ್ತುತ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈಕೆಯ ಸೈಂಟ್ ಸಿಸಿಲಿಸ್ ಶಾಲೆಯ ಎಲ್ಲ ಶಿಕ್ಷಕ ಹಾಗೂ ವಿದ್ಯಾರ್ಥಿಗಳಿಗೂ ಈಕೆ ಎಂದರೆ ಅಚ್ಚು ಮೆಚ್ಚು. ಕಾರಣ ಎಲ್ಲದರಲ್ಲೂ ನಂಬರ್ ವನ್ .. ತನ್ನ 3 ವರ್ಷ ಪ್ರಾಯದಲ್ಲೇ ಮಾಸ್ಟರ್ ಡ್ಯಾನ್ಸ್ ಗ್ರೂಪನ್ನು ಸೇರಿ ನೃತ್ಯ ತರಬೇತಿ ಪಡೆದು ನಾಟ್ಯ ಮಯೂರಿ ಎನಿಸಿಕೊಂಡಳು.
ಉಡುಪಿಯ ನಾಡ ಹಬ್ಬ ಶ್ರೀಕೃಷ್ಣ ಜನ್ಮಾಷ್ಟಮಿಗೆ ಕೃಷ್ಣನ ವೇಷ ಧರಿಸುವುದರ ಮೂಲಕ ಪ್ರತಿ ವರ್ಷವೂ ಪ್ರಶಸ್ತಿಗಳ ಮಹಾಪೂರ. ಜೊತೆಗೆ 2 ವರ್ಷದಿಂದ ಉಡುಪಿ ಯ ಸಾಂಪ್ರದಾಯಿಕ ಕಲೆ ಹುಲಿವೇಷ ಧರಿಸಿ ಕುಣಿದು ಎಲ್ಲರಿಂದ ಸೈ ಎನಿಸಿಕೊಂಡಿದ್ದಾಳೆ. ಈಕೆ ಬಹಳಷ್ಟು ಕಾರ್ಯಕ್ರಮ ನೀಡಿದ ಭರತ ನಾಟ್ಯ ಪ್ರವೀಣೆ. ಜೊತೆಗೆ ಕರಾವಳಿಯ ಗಂಡುಕಲೆ ಯಕ್ಷಗಾನದಲ್ಲಿಯೂ ನಾನು ಯಾರಿಗೇನು ಕಮ್ಮಿಯಿಲ್ಲ ಎಂದು ತೋರಿಸಿ ಕೊಟ್ಟಿದ್ದಾಳೆ. ಕಲರ್ಸ್ ವಾಹಿನಿಯ ಮಜಾ ಟಾಕೀಸ್ ನಲ್ಲಿ ನೃತ್ಯ ಪ್ರದರ್ಶನ , ಪಬ್ಲಿಕ್ ಟಿವಿ ಚ್ಯಾನಲ್ ನ ಪಬ್ಲಿಕ್ ಹೀರೋ ಆಗಿ ಮೆರೆದಿದ್ದಾಳೆ.
ನಿರಾಲಾಂಭ ಪೂರ್ಣ ಚಕ್ರಾಸನ, ಧನುರಾಸನ ಭಂಗಿಯಲ್ಲಿ ನಿಮಿಷಕ್ಕೆ 61 ಬಾರಿ 1.40 ನಿಮಿಷಕ್ಕೆ 96 ಸುತ್ತು ಕ್ರಮಿಸುವುದರ ಮೂಲಕ ಮತ್ತು ಚಕ್ರಾಸನ ರೇಸ್ ಹೀಗೆ ದಾಖಲೆಗಳ ಮೇಲೆ ದಾಖಲೆ ಬರೆದ ಆಕೆಯ ಬಗ್ಗೆ ಹೆತ್ತವರಿಗಲ್ಲದೆ ನಮಗೂ ಅತಿ ಹೆಮ್ಮೆಯ ವಿಷಯ. ಈ ನಿಟ್ಟಿನಲ್ಲಿ ಆಕೆಯ ಯೋಗ ಗುರು ಶ್ರೀ ಹರಿರಾಜ್ ಕಿನ್ನಿಗೋಳಿಯವರಿಗೊಂದು ನಮನ. ಇಟೆಲಿಯ ರೋಮ್ ನಗರ ದಲ್ಲಿ ದಾಖಲೆಯ ಸಾಧಕರೆದುರು ಯೋಗ ಪ್ರದರ್ಶನ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತದ್ದು ತುಂಬು ತೃಪ್ತಿ ತಂದಿದೆಯಂತೆ ಆಕೆಗೆ. ಧರ್ಮಸ್ಥಳ ಹೆಗ್ಗಡೆಯವರು ನೀಡಿದ ಯುವ ರತ್ನ ಪುರಸ್ಕಾರ ಹೀಗೆ ಈ ಎಲ್ಲಾ ಪ್ರಶಸ್ತಿ ಪುರಸ್ಕಾರಗಳ ಸರಮಾಲೆಯನ್ನೇ ಧರಿಸಿದ ಈಕೆಯ ಪ್ರಶಸ್ತಿಗಳ ಕೊಠಡಿ ತುಂಬಿ ತುಳುಕುತ್ತಿದೆ. ಒಟ್ಟಾರೆ ಈ ಎಳೆಯ ಬಾಲೆ ತನುಶ್ರೀ ನಮ್ಮೂರಿನ ಹೆಮ್ಮೆಯ ಅನರ್ಘ್ಯ ರತ್ನ ಎನ್ನುವುದಕ್ಕೆ ಎರಡು ಮಾತಿಲ್ಲ.
ಈ ಬಾಲ ಪ್ರತಿಭೆಯ ಮಹಾನ್ ಸಾಧನೆಗೆ ಕೈಮುಗಿದು ಸಂಸ್ಕೃತಿ ವಿಶ್ವಪ್ರತಿಷ್ಠಾನ ಮತ್ತು ಇ-ಸಮುದಾಯ, ಇವಳನ್ನು ಗುರುತಿಸಿ ಈಕೆಯ ಜೊತೆ ಮುಕ್ತ ಸಂವಾದ ಗೈಯುವುದರ ಮೂಲಕ ಗೌರವಪೂರ್ಣವಾಗಿ ಅಭಿನಂದಿಸುತ್ತದೆ.
ಇದೇ ಬರುವ ದಿನಾಂಕ 20 ರಂದು ಸಂಜೆ 6 ಗಂಟೆಗೆ samskruthi vishwa you tube ಚ್ಯಾನಲ್ ನಲ್ಲಿ ವಿಶ್ವ ಕಲಾ ಸಂಭ್ರಮದಡಿಯಲ್ಲಿ ತನುಶ್ರೀ ಪಿತ್ರೋಡಿಯ ಪ್ರೌಢಿಮೆಯನ್ನು ವೀಕ್ಷಿಸಲು ಮರೆಯ ಬೇಡಿ.
-ರಾಜೇಶ್ ಭಟ್ ಪಣಿಯಾಡಿ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ