ಸಮಯ ನಿಂತ ನೀರಲ್ಲ... ಕಳೆದರೆ ಮತ್ತೆ ಬಾರದು...

Upayuktha
0


ಯಾರಿಗಾಗಿಯೂ ಕಾಯದೆ ತನ್ನ ಕರ್ತವ್ಯವನ್ನು ಮುಂದುವರಿಸಿಕೊಂಡು ಹೋಗುವ ಜಗತ್ತಿನ ಏಕೈಕ ಪ್ರಾಮಾಣಿಕ ಎಂದರೆ ಅದು ಸಮಯ. ಯಾವ ಶ್ರೀಮಂತನೂ ಖರೀದಿಸಲಾಗದ ಜಗತ್ತಿನ ಅತ್ಯಮೂಲ್ಯ ಸಂಪತ್ತು ಸಮಯ. ಹಿಂದಿರುಗಿ ನೋಡದೆ ಮುಂದಾಗುತ್ತಿರುವ ಈ ಸಮಯ ಎಂಬ ಮೂರಕ್ಷರದ ಸಂಪತ್ತಿನ ಮೌಲ್ಯ ನಮಗೆ ತಿಳಿದರೆ, ನಾವು ನಮ್ಮ ಜೀವನದಲ್ಲಿ ಒಂದೊಂದು ಕ್ಷಣವನ್ನೂ ವ್ಯರ್ಥ ಮಾಡಲು ಬಯಸುವುದಿಲ್ಲ.  


ಟೈಮ್ ಸಾಕಾಗ್ತಿಲ್ಲ ಎಂಬ ಮಾತನ್ನು ನಾವು ಅನೇಕ ಸಲ ಹೇಳುತ್ತಿರುತ್ತೇವೆ. ಅಂದರೆ, ನಮಗಿನ್ನೂ ಸಮಯದ ಮೌಲ್ಯ ಸರಿಯಾಗಿ ತಿಳಿದಿಲ್ಲ ಎಂದರ್ಥ. ಯಾರ ಕೈಗೂ ಸಿಗದೆ, ಯಾರ ಮೇಲೂ ಕರುಣೆ ತೋರಿಸದ ಸಮಯದ ಜೊತೆ ನಮ್ಮ ಜೀವನವನ್ನು ಸಾಗಿಸಲೇ ಬೇಕು. ಸಮಯ ಎಂಬುದು ಒಮ್ಮೆ ಕಳೆದರೆ ಕೋಟಿ ಕೊಟ್ಟರೂ ಹಿಂದಿರುಗದು. ನಾವು ನಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಸದ್ಬಳಕೆ ಮಾಡಿಕೊಂಡಾಗ ಯಶಸ್ಸು ಎಂಬ ಸನ್ಮಾನ ನಮ್ಮನ್ನು ಬೆನ್ನಟ್ಟುತ್ತದೆ.


ಯಾರೂ ಕಲಿಸದ ಜೀವನ ಪಾಠವನ್ನು ಸಮಯ-ಸಂದರ್ಭ ಕಲಿಸುತ್ತದೆ. ಎಲ್ಲರ ಬದುಕಿನಲ್ಲೂ ಸಮಯ ಒಂದೇ ರೀತಿಯಾಗಿ ಇರುವುದಿಲ್ಲ. ಒಳ್ಳೆಯ ಮತ್ತು ಕೆಟ್ಟ ಎರಡೂ ಸಮಯ ಪ್ರತಿಯೊಬ್ಬರ ಜೀವನದಲ್ಲೂ ಮರೆಯಲಾಗದಂತಹ ಪಾಠವನ್ನು ಕಲಿಸುತ್ತದೆ. ಆದರೆ, ಸಿಕ್ಕ ಸಮಯವನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು ನಮ್ಮ ಬುದ್ಧಿವಂತಿಕೆ.  


ಸಮಯದ ಮಹತ್ವದ ಕುರಿತು ತಜ್ಞರೊಬ್ಬರು, "ಒಂದು ವರ್ಷದ ಮಹತ್ವ ತಿಳಿಯಲು ಫೇಲಾದ ಒಬ್ಬ ವಿದ್ಯಾರ್ಥಿಯನ್ನು ಕೇಳು, ಒಂದು ತಿಂಗಳ ಮಹತ್ವ ತಿಳಿಯಲು ಅಪೂರ್ಣ ಅವಧಿಯಲ್ಲಿ ಜನ್ಮ ನೀಡಿದ ತಾಯಿಯನ್ನು ಕೇಳು, ಒಂದು ವಾರದ ಮಹತ್ವ ತಿಳಿಯಲು ವಾರ ಪತ್ರಿಕೆಯ ಸಂಪಾದಕರನ್ನು ಕೇಳು, ಒಂದು ದಿನದ ಮಹತ್ವ ತಿಳಿಯಲು ದಿನಗೂಲಿ ನಂಬಿರುವ ಕೂಲಿ ಕಾರ್ಮಿಕನನ್ನು ಕೇಳು, ಒಂದು ಗಂಟೆಯ ಮಹತ್ವ ತಿಳಿಯಲು ಆಪ್ತರಿಗಾಗಿ ಕಾಯುವವರನ್ನು ಕೇಳು, ಒಂದು ನಿಮಿಷದ ಮಹತ್ವ ತಿಳಿಯಲು ರೈಲು ತಪ್ಪಿಸಿಕೊಂಡ ಪ್ರಯಾಣಿಕನನ್ನು ಕೇಳು, ಒಂದು ಸೆಕೆಂಡಿನ ಮಹತ್ವ ತಿಳಿಯಲು ಅಪಘಾತದಿಂದ ತಪ್ಪಿಸಿಕೊಂಡವರನ್ನು ಕೇಳು, ಒಂದು ಮಿಲಿ ಸೆಕೆಂಡಿನ ಮಹತ್ವ ತಿಳಿಯಲು ಒಲಿಂಪಿಕ್ ಕ್ರೀಡೆಯಲ್ಲಿ ಬೆಳ್ಳಿ ಪದಕ ಪಡೆದ ಕ್ರೀಷಡಾಪಟುವನ್ನು ಕೇಳು" ಎಂದಿದ್ದಾರೆ. ಇದು ನಮ್ಮ ಜೀವನದಲ್ಲಿ ಸಮಯದ ಮಹತ್ವ ತಿಳಿಸಲು ಅತ್ಯುತ್ತಮ ಉದಾಹರಣೆ.  


"ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು" ಎಂಬ ಮಾತಿನಂತೆ, ಒಂದು ಬಾರಿ ಹೋದ ಸಮಯ ಮತ್ತೆಂದಿಗೂ ನಮ್ಮ ಜೀವನದಲ್ಲಿ ಹಿಂದಿರುಗಿ ಬಾರದು. ಸಮಯವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದರೆ, ನಾವು ಯಶಸ್ಸನ್ನು ಪಡೆಯಲು ಸಾಧ್ಯ. ಸಮಯವನ್ನು ಗಡಿಯಾರದ ಮುಳ್ಳುಗಳೇ ತೋರಿಸುತ್ತವೆ. ಯಾಕೆಂದರೆ, ಗುಲಾಬಿ ಗಿಡದ ಹೂವನ್ನು ಕೀಳಲು ಹೋದಾಗ, ಅದರಲ್ಲಿರುವ ಮುಳ್ಳುಗಳು ನಮ್ಮನ್ನು ಎಚ್ಚರಿಸುತ್ತವೆ. ಹಾಗೆಯೇ, ಓಡುವ ಸಮಯವನ್ನು ವ್ಯರ್ಥ ಮಾಡದೆ, ಸದುಪಯೋಗಪಡಿಸಿಕೊಳ್ಳಿ ಎಂದು ಗಡಿಯಾರದ ಮುಳ್ಳುಗಳು ಎಚ್ಚರಿಸುತ್ತವೆ. ಮುಂದೆ ಎಷ್ಟೇ ಸಮಯ ಬಂದರೂ, ಹಿಂದಿನ ಸಮಯದಲ್ಲಿದ್ದ ಅವಕಾಶಗಳನ್ನು ಮತ್ತೆ ತಾರದು. ಬಾಲ್ಯದ ತುಂಟಾಟ ಯೌವ್ವನದಲ್ಲಿ ಬಾರದು, ಯೌವ್ವನದ ಹೋರಾಟ ಮುಪ್ಪಿನಲ್ಲಿ ತಟಸ್ಥವಾಗುವುದು. ಇಂದಿನ ಸಮಯದ ಮಹತ್ವ ಅರಿತು ಸದ್ಬಳಕೆ ಮಾಡಿಕೊಳ್ಳುವುದೇ ಜಾಣತನ.

    

-ಸರೋಜ ಪಿ ಜೆ ದೋಳ್ಪಾಡಿ

ದ್ವಿತೀಯ ಬಿ ಎ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಪದವಿ ಕಾಲೇಜು ಪುತ್ತೂರು.

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top