ಕೊಪ್ಪಳ ಜಿಲ್ಲೆಯ ಗಿಣಿಗೆರಾ ಸಮೀಪದ ಪುಟ್ಟ ಗ್ರಾಮ ಹಾಲಳ್ಳಿ. ಸುತ್ತಮುತ್ತ್ಲ ಎಲ್ಲಾ ಗ್ರಾಮಗಳಲ್ಲಿ ತರಕಾರಿ, ಸಜ್ಜೆ, ಮೆಕ್ಕೆಜೋಳ ಪ್ರಮುಖ ಬೆಳೆ. ಹಾಗೇ ದಿಟ್ಟಿಸಿ ನೋಡಿದರೆ ಹಾಲಳ್ಳಿ ಗ್ರಾಮದ ಹೊರಗೆ ಪುಟ್ಟ ಅರಣ್ಯವೊಂದು ಗೋಚರಿಸುತ್ತದೆ. ರಸ್ತೆಯ ಮಗ್ಗುಲಲ್ಲಿ ಇರುವ ಬಾಳೆ ಅಥವ ಟೊಮ್ಯಾಟೊ ಸಾಲುಗಳ ಮಧ್ಯೆ ಶ್ವೇತ ಗಡ್ಡಧಾರಿಯಾಗಿ ಅಚ್ಚ ಬಿಳುಪಿನ ದಿರಿಸಿನೊಂದಿಗೆ ಹಿರಿಯ ವ್ಯಕ್ತಿಯೊಬ್ಬರು ಕಂಡುಬರುತ್ತಾರೆ. ಅವರೇ ಶ್ರೀ ಶಂಕ್ರಪ್ಪ ಚೌಡಿಯವರು.
ಇಪ್ಪತ್ತು ವರ್ಷಗಳ ಹಿಂದೆಯೇ ಅರಣ್ಯೀಕರಣದ ಮಹತ್ವ ಅರಿತು ಆರು ಎಕರೆ ಅರಣ್ಯ ಬೆಳೆಸಿ ನೈಸರ್ಗಿಕವಾಗಿ ಪೋಷಿಸುತ್ತಿರುವ ಅವರ ಮಾದರಿಯೇ ಅಚ್ಚರಿ. ಹೊಲದ ತುಂಬೆಲ್ಲ ನೈಸರ್ಗಿಕವಾಗಿ ಪ್ರಸರಣಗೊಂಡು ಬೆಳೆದಿರುವ ಸ್ರೀಗಂಧ, ಸುಬಾಬುಲ್, ಬಿದಿರು, ಸಾಗುವಾನಿ, ಹುಣಸೆ ಮುಂತಾದ ಮರಗಳು ಬೆಂಗಾಡನ್ನು ಹಸಿರಿನಿಂದ ತುಂಬಿ ಸುತ್ತಲ ಕಾರ್ಖಾನೆಗಳಿಂದ ಹಾಗು ಇಟ್ಟಿಗೆ ಭಟ್ಟಿಗಳಿಂದ ಅಶುದ್ದವಾಗುತ್ತಿರುವ ಗಾಳಿಯನ್ನು ಶುದ್ದೀಕರಿಸುವ ಕಾಯಕದಲ್ಲಿ ತೊಡಗಿವೆ. ಅಸಂಖ್ಯಾತ ಹಕ್ಕಿಪಕ್ಷಿಗಳಿಗೆ ಆಸರೆಯಾಗಿವೆ.
ಇದೆಲ್ಲದರ ಜೊತೆಗೆ ಚೌಡಿಯವರು ಉತ್ತಮ ಕೃಷಿಕರು ಹೌದು. ಹಂಗಾಮಿನ ಯಾವುದೇ ಕೃಷಿ ಬೆಳೆ ಇರಲಿ ಅದರ ಉತ್ಕೃಷ್ಟ ಇಳುವರಿ ಇವರಲ್ಲಿ. ತೋಟಗಾರಿಕೆ ಬೆಳೆಗೂ ಹೆಸರುವಾಸಿಯಾದ ಇವರು ಹಣ್ಣು ಮತ್ತು ತರಕಾರಿ ಬೆಳೆಯುವುದರಲ್ಲೂ ಎತ್ತಿದ ಕೈ. ಭಾಗವಾನರಿಗೂ ಸಡ್ಡು ಹೊದೆದು ದಾಳಿಂಬೆಯನ್ನು ಬೆಂಗಳೂರಿಗೆ ಸ್ವತಃ ಸಾಗಿಸಿ ಉತ್ತಮ ಧಾರಣೆ ಪಡೆದ ಸಾಹಸವನ್ನು ಅವರ ಬಾಯಿಂದಲೇ ಕೇಳಬೇಕು.
ಕೇವಲ ಕೃಷಿಯಲ್ಲಷ್ಟೇ ಅಲ್ಲದೇ ಸಾಮಾಜಿಕ ಜನಪರ ಕಾರ್ಯಕ್ರಮಗಳಲ್ಲೂ ಸದಾ ಭಾಗಿ. ಸ್ಥಳೀಯ ಶಾಲೆಗೆ ಅಗತ್ಯ ಪಾಠೋಪಕರಣಗಳನ್ನು ದಾನಿಗಳ ನೆರವಿನಿಂದ ಕೊಡಿಸಿ ಮಾದರಿ ಶಾಲೆಯಾಗಿಸಿರುವ ಕೀರ್ತಿ ಇವರದು. ಮಣ್ಣಿನೊಂದಿಗೆ ಮಾತುಕಥೆ ಕಾರ್ಯಕ್ರಮವನ್ನು ತಮ್ಮ ಹೊಲದಲ್ಲಿ ಏರ್ಪಡಿಸಿ ಕೃಷಿ ಅರಣ್ಯದತ್ತ ಕೃಷಿಕರನ್ನು ಆಕರ್ಷಿಸಿದ ಹೆಮ್ಮೆ ಹಾಗು ಅವರ ಹೊಲದಲ್ಲಿ ಕೃಷಿಕರೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಮಾತ್ರ ಹೆಚ್ಚಿನ ಲಾಭ ಎಂಬ ಕನಸಿಗೆ ಬೀಜ ಬಿದ್ದಿದ್ದು ಅದೇ ಮಾತುಕಥೆ ಕಾರ್ಯಕ್ರಮದಲ್ಲೇ.
ಆ ಕನಸು ನನಸಾಗಿ ಮಾನ್ಯ ಕೃಷಿ ಸಚಿವರಿಂದ ಕೊಪ್ಪಳ ರೈತ ಮಾರುಕಟ್ಟೆ ಉದ್ಘಾಟನೆ ಆಗುವವರೆಗೂ ವಿಶ್ರಮಿಸದೆ ತನ ಮನ ಧನ ಸಹಾಯ ಮಾಡಿ ಅದರ ಯಶಸ್ವಿ ಮುನ್ನಡೆಗೆ ಕಾರಣರಾದವರು ಶ್ರೀ ಶಂಕ್ರಪ್ಪ ಚೌಡಿಯವರು. ಅವರ ಕರೆಗೆ ಓಗೊಟ್ಟು ಸಹಕರಿಸಿದವರು ಕೃಷಿಕ ಸಮಾಜದ ಅಧ್ಯಕ್ಷರಾದ ಶೀ ಶಿವಣ್ಣ ಮೂಲಿಮನಿ, ಜಿಲ್ಲಾ ಪಂಚಾಯತ್ ಅದ್ಯಕ್ಷರಾದ ಶ್ರೀ ರಾಜಶೇಖರ ಹಿಟ್ನಾಳ ಹಾಗೂ ಕುಕ್ಕುಟ ಸಾಕಾಣಿಕೆದಾರರ ಸಂಘದ ಅದ್ಯಕ್ಷರು. ಇವರ ಎಲ್ಲಾ ಕೃಷಿ ಹಾಗೂ ಸಾಮಾಜಿಕ ಚಟುವಟಿಕೆಗಳ ಹಿಂದೆ ನಿಂತು ಸಹಕಾರ ನೀಡುತ್ತಿರುವವರು ಅವರ ಪುತ್ರ ಶ್ರೀ ವಿಜಯಕುಮಾರ ಚೌಡಿ.
ಯಾವುದೇ ರೈತಪರ ಕಾರ್ಯಕ್ರಮವಿರಲಿ ಅಲ್ಲಿ ಎಲ್ಲರಿಗಿಂತ ಮುಂದೆ ನಿಂತು ಅಗತ್ಯ ಸಹಾಯ ಸಹಕಾರ ನೀಡುವುದರಲ್ಲಿ ತಂದೆ ಮಗ ಯಾವಾಗಲೂ ಮುಂದು. ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿಯಾಗಿ ಇವರ ಸೇವೆ ಕೃಷಿ ವಲಯಕ್ಕೆ ಅಪಾರ. ಸಕ್ರಯ ರಾಜಕಾರಣದಲ್ಲಿ ಭಾಗವಹಿಸಿ ರೈತಪರ ಹೋರಾಟಗಳಲ್ಲಿ ಇಡೀ ಕುಟುಂಬ ತೊಡಗಿರುವುದು ಅಭಿನಂದನೀಯ. ಯಾವುದೇ ಘಳಿಗೆಯಲ್ಲಿ ಕರೆ ಮಾಡಿದರೂ ಕೂಡಲೇ ಸಹಾಯಕ್ಕೆ ಧಾವಿಸುವ ಶ್ರೀ ಶಂಕ್ರಪ್ಪ ಅವರನ್ನು ಸಂಪರ್ಕಿಸಲು 9880709635 ಗೆ ಕರೆ ಮಾಡಿ.
-ಡಾ. ಪಿ. ಆರ್ ಬದರಿಪ್ರಸಾದ್
ಸಹಾಯಕ ಪ್ರಾಧ್ಯಾಪಕರು (ಕೀಟಶಾಸ್ತ್ರ)
ಕೃಷಿ ಮಹಾವಿದ್ಯಾಲಯ, ಗಂಗಾವತಿ