ಸವಿರುಚಿ: ಮಳೆಗಾಲದ ಊಟಕ್ಕೆ ಗರಿಗರಿಯಾದ ಬಾಳೆಕಾಯಿ ಹಪ್ಪಳ

Upayuktha
0

 ಖ್ಯಾತ ಲೇಖಕಿ ಸವಿತಾ ಎಸ್ ಭಟ್ ಅಡ್ವಾಯಿ ಅವರು ಬಾಳೆಕಾಯಿ ಹಪ್ಪಳ ತಯಾರಿಸುವ ಎರಡು ವಿಧಾನಗಳನ್ನು ಉಪಯುಕ್ತ ನ್ಯೂಸ್ ಓದುಗರಿಗಾಗಿ ಇಲ್ಲಿ ತಿಳಿಸಿಕೊಟ್ಟಿದ್ದಾರೆ.  ನೀವೂ ಮಾಡಿನೋಡಿ, ಸವಿಯಿರಿ, ಅಭಿಪ್ರಾಯ ತಿಳಿಸಿ.



ಬಾಳೆಕಾಯಿ ಹಪ್ಪಳ-1

ಯಾವುದೇ ಬಾಳೆಕಾಯಿ-2 ಸೇರಿನಷ್ಟು

ಸಾಬಕ್ಕಿ 1 ಕಪ್.

ಕೆಂಪು ಮೆಣಸು- 3-5

ಉಪ್ಪು 2-3 ಚಮಚ.

ಇಂಗು 2 ಕಡಲೆಯಷ್ಟು

ಎಣ್ಣೆ 4-5 ಚಮಚ


ವಿಧಾನ: ಸಾಬಕ್ಕಿಯನ್ನು ತೊಳೆದು 3 ಕಪ್ ನೀರು ಹಾಕಿ ಹಿಂದಿನ ರಾತ್ರಿಯೇ ನೆನೆಹಾಕಿ ಮುಚ್ಚಿ ಇಡಿ.


ಬಾಳೆಕಾಯಿಯನ್ನು ತೊಳೆದು ಮುಳುಗುವಷ್ಟು ನೀರು ಹಾಕಿ ಕುಕ್ಕರಲ್ಲಿ ಹಾಕಿ 5-6 ಸೀಟಿ ಬರುವ ವರೆಗೆ ಬೇಯಿಸಿ, ಸಿಪ್ಪೆ ಸುಲಿದು ಸಣ್ಣಗೆ ಹೆಚ್ಚಿಕೊಳ್ಳಿ.


ಬಾಳೆಕಾಯಿ ಹೋಳು, ನೆನೆದ ಸಾಬಕ್ಕಿಯನ್ನು ಅಗತ್ಯ ವಿರುವಷ್ಟು ನೀರು ಹಾಕಿ ದೋಸೆ ಹಿಟ್ಟಿನಂತೆ ರುಬ್ಬಿಕೊಳ್ಳಿ. ಇದನ್ನು ದಪ್ಪ ತಳದ ಬಾಣಲೆಗೆ ಹಾಕಿ. ಇದಕ್ಕೆ ತರಿತರಿಯಾಗಿ ಪುಡಿಮಾಡಿದ ಕೆಂಪು ಮೆಣಸು, ಉಪ್ಪು, ಇಂಗು ಹಾಕಿ.


ಬಾಣಲೆಯನ್ನು ಒಲೆಯ ಮೇಲಿಟ್ಟು ಹಿಟ್ಟು ಕಾಯಿಸಿ. ತಳ ಹಿಡಿಯದಂತೆ ಮಿಶ್ರಮಾಡುತ್ತಿರಬೇಕು. ಹಿಟ್ಟು ಹಸಿ ಬಣ್ಣ ಹೋಗಿ ತಳದಿಂದ ಎದ್ದು ಬರುತ್ತದೆ.ಈಗ ಉರಿ ಸಣ್ಣದಾಗಿಮಾಡಿ 2 ಚಮಚ ಎಣ್ಣೆ ಹಾಕಿ ಮಿಶ್ರ ಮಾಡಿ 2-3 ನಿಮಿಷ ಮುಚ್ಚಿ ಇಡಿ.

ಮುಚ್ಚಳ ತೆಗೆದು ಚೆನ್ನಾಗಿ ಮಿಶ್ರ ಮಾಡಿ. (ಹಿಟ್ಟು ಕೈಗೆ ಅಂಟಬಾರದು). ಹಿಟ್ಟನ್ನು ಒಲೆಯಿಂದಿಳಿಸಿ ಒಂದು ಅಗಲವಾದ ತಟ್ಟೆಗೆ ಹಾಕಿ.


ಸ್ವಲ್ಪ ಬಿಸಿ ಆರಿದಮೇಲೆ ಕೈಗೆ ಸ್ವಲ್ಪ ಎಣ್ಣೆ ಪಸೆ ಮಾಡಿ ಹಿಟ್ಟನ್ನು ಚಪಾತಿ ಹಿಟ್ಟು ಹದಮಾಡಿದಂತೆ ಹದಮಾಡಿ. ನಿಂಬೆಗಾತ್ರದ  ಉಂಡೆ ಮಾಡಿ ಹಪ್ಪಳ ಒತ್ತಿ. (ತೀರಾ ತೆಳ್ಳಗೆ ಒತ್ತಬಾರದು) ಒಂದು ದಿನ ಹದವಾದ ಬಿಸಿಲಲ್ಲಿ ಅಥವಾ ಫ್ಯಾನ್ ಗಾಳಿಯ ಕೆಳಗೆ ಹಾಕಿ. ಮರುದಿನ ಇತರ ಹಪ್ಪಳಗಳನ್ನು ಒಣಗಿಸುವಂತೆ ಚೆನ್ನಾಗಿ ಒಣಗಿಸಿ.

ಕಾದ ಎಣ್ಣೆಯಲ್ಲಿ ಕರಿದಾಗ ಅರಳಿಕೊಳ್ಳುತ್ತದೆ. ತುಂಬಾ ಮೃದುವಾಗಿರುತ್ತದೆ.




ಬಾಳೆಕಾಯಿ ಹಪ್ಪಳ-2

ಯಾವುದೇ ಬಾಳೆಕಾಯಿ- 2 ಸೇರಿನಷ್ಟು.

ಹದಾ ಗಾತ್ರದ ಆಲೂ ಗಡ್ಡೆ 3-4.

ಸಾಬಕ್ಕಿ -1 ಕಪ್.

ಕೆಂಪು ಮೆಣಸು3-5

ಜೀರಿಗೆ 2 ಚಮಚ

ಉಪ್ಪು 2-3 ಚಮಚ

ಎಣ್ಣೆ 3-4 ಚಮಚ

ಕರಿಬೇವಿನ ಚೂರು 4 ಚಮಚ


ವಿಧಾನ: ಸಾಬಕ್ಕಿಯನ್ನು ಹಿಂದಿನ ದಿನವೇ ತೊಳೆದು 3 ಕಪ್ ನೀರು ಹಾಕಿ ನೆನೆಸಿ ಮುಚ್ಚಿಡಿ.

ಬಾಳೆಕಾಯಿ ತೊಳೆದು. ಅದು ಮುಳುಗುವಷ್ಟು ನೀರು ಹಾಕಿ ಕುಕ್ಕರಲ್ಲಿ ಹಾಕಿ 5-6, ಸೀಟಿ ಬರುವಷ್ಟು ಬೇಯಿಸಿ. ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ.

ಆಲೂ ಗಡ್ಡೆಯನ್ನು ತೊಳೆದು, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ.

ಸಾಬಕ್ಕಿ, ಬಾಳೆಕಾಯಿ ಹೋಳು, ಆಲೂಗಡ್ಡೆ ಹೋಳು ಅಗತ್ಯ ವಿರುವಷ್ಟು ನೀರು ಹಾಕಿ ನುಣ್ಣಗೆ ದೋಸೆ ಹಿಟ್ಟಿನಂತೆ ರುಬ್ಬಿ ಒಂದು ದಪ್ಪ ತಳದ ಬಾಣಲೆಗೆ ಹಾಕಿ.


ಇದಕ್ಕೆ ಉಪ್ಪು, ತರಿ ತರಿಯಾಗಿ ಪುಡಿ ಮಾಡಿದ ಕೆಂಪು ಮೆಣಸು ಹಾಕಿ ಹಿಟ್ಟು ಕಾಯಿಸಿ. ಕೈ ಬಿಡದೆ ಮಗುಚುತ್ತಿರಬೇಕು. ಹಿಟ್ಟು ಮುದ್ದೆಯಾಗಿ ತಳ ಬಿಟ್ಟಾಗ 2 ಚಮಚ ಎಣ್ಣೆ ಹಾಕಿ ಮಿಶ್ರ ಮಾಡಿ ಮುಚ್ಚಿ 2-3 ನಿಮಿಷ ಇಡಿ. ಈಗ ಜೀರಿಗೆ, ಕರಿವ ಬೇವಿನ ಚೂರು ಹಾಕಿ ಮಿಶ್ರ ಮಾಡಿ ಹಿಟ್ಟನ್ನು ಒಂದು ಅಗಲವಾದ ತಟ್ಟೆಗೆ ಹಾಕಿ. ಸ್ವಲ್ಪ ಆರಿದಾಗ ಕೈಗೆ ಎಣ್ಣೆ ಪಸೆ ಮಾಡಿ ಹಿಟ್ಟನ್ನು ಚಪಾತಿ ಹಿಟ್ಟಿನಂತೆ ಹದಮಾಡಿ.

ನಿಂಬೆ ಗಾತ್ರದ ಉಂಡೆ ಮಾಡಿ ಹಪ್ಪಳ ಒತ್ತಿ ಚೆನ್ನಾಗಿ ಒಣಗಿಸಿಡಿ.

ಹದವಾಗಿ ಕಾದ ಎಣ್ಣೆಯಲ್ಲಿ ಕರಿಯಿರಿ.


(ಎರಡೂ ತರಹದ ಹಪ್ಪಳ ಮಾಡುವಾಗ ಒಡೆದ ಬಾಳೆಕಾಯಿಯ ಒಳ್ಳೆಯ ಭಾಗವನ್ನು ಉಪಯೋಗಿಸಿಕೊಳ್ಳಬಹುದು).


-ಸವಿತಾ ಅಡ್ವಾಯಿ

Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top