ಕಿರು ಸತ್ಯ..95
ಸುಳಿ
**
ನೀರಿನೊಳಗೆ
ಸುಳಿಯು ಇಹುದು
ಸುಳಿಯ ಒಳಗು
ನೀರು ಇಹುದು
ಸುಳಿಯ ಬಲೆಗೆ
ಬೀಳದಂತೆ
ಚತುರನಾಗು ನೀ
*****
ಸಹಸ್ರಬುಧ್ಯೆ ಮುಂಡಾಜೆ
ಕಿರು ಸತ್ಯ..96
ನರ ವಿಷ
****
ಹರನ ವಿಷವ
ತೊಳೆದ ಗಂಗೆ
ಪವಿತ್ರತೆಯ
ಕಾಯ್ದು ಕೊಂಡು
ನರನ ವಿಷವ
ತಡೆಯೆ ಎನುತ
ಶರಧಿ ಪೊಕ್ಕಳು
*****
ಸಹಸ್ರಬುಧ್ಯೆ ಮುಂಡಾಜೆ
ಕಿರು ಸತ್ಯ..97
ಪಯಣ
***
ರವಿಗೆ ಸುತ್ತಿ
ಬರುತಲಿಹೆವು
ಭುವಿಯ ಹತ್ತಿ
ಕುಳಿತುಕೊಂಡು
ಯಾವ ಗುರಿಯ
ಸೇರದಂಥ
ಭಾವವಿಲ್ಲದೆ.
****
ಸಹಸ್ರಬುಧ್ಯೆ ಮುಂಡಾಜೆ
ಕಿರು ಸತ್ಯ... 98
ಚದುರಂಗ
***
ಚದುರಂಗದ
ಆಟದಲ್ಲಿ
ಯಾರು ಚತುರ
ನಾಗಿ ಇಹನೊ
ಬದುಕೆನ್ನುವ
ಆಟದಲ್ಲು
ಗೆಲ್ಲುವನವನು.
*****
ಸಹಸ್ರಬುಧ್ಯೆ ಮುಂಡಾಜೆ
ಕಿರು ಸತ್ಯ...99
ವ್ಯರ್ಥ
***
ವ್ಯರ್ಥವೆಂಬ
ಭಾವಕಿಲ್ಲಿ
ಅರ್ಥವೆಲ್ಲಿ
ಹೇಳು ಮನುಜ
ದೃಷ್ಟಿಕೋನ
ಬದಲುವಾಗ
ಸತ್ಯ ತಿಳಿವುದು.
*****
ಸಹಸ್ರಬುಧ್ಯೆ ಮುಂಡಾಜೆ
ಕಿರು ಸತ್ಯ..100
ಜೀವನ
***
ಜನನ ಮರಣ
ತಿಳಿದೆ ಇಲ್ಲ
ಕರ್ಮ ಬಂಧ
ಬಿಡಲು ಸಲ್ಲ
ವರ್ತಮಾನ
ಮಾತ್ರ ಸಾಕ್ಷಿ
ಪಾಪ ಪುಣ್ಯಕೆ
*****
ಸಹಸ್ರಬುಧ್ಯೆ ಮುಂಡಾಜೆ
ಕಿರು ಸತ್ಯ.. 101
ರಾಜಕಾರಣಿ
****
ಮತದಾರನ
ಭಿಕ್ಷೆ ಉಂಡು
ಮಂತ್ರಿಯಾದೆ
ಸೇವೆಗೆಂದು
ದೇಶ ಲೂಟಿ
ಮಾಡಬಾರ
ದೆಂದು ತಿಳಿದುಕೋ
*****
ಸಹಸ್ರಬುಧ್ಯೆ ಮುಂಡಾಜೆ
ಕಿರು ಸತ್ಯ..102
ನಿಯಮ
****
ದುಂಬಿಗೊಂದು
ಹೂವು ಎನಲು
ಸಹಜ ಧರ್ಮ
ವಾದರಿಲ್ಲಿ
ಹೂವಿಗೊಂದೆ
ದುಂಬಿ ಎನಲು
ಮನುಜ ಧರ್ಮವು.
******.
ಸಹಸ್ರಬುಧ್ಯೆ ಮುಂಡಾಜೆ
ಕಿರು ಸತ್ಯ..103
ವರ್ತಮಾನ
****
ಇಂದು ನಾಳೆ
ಆಗಿಹೋಯ್ತು
ನಾಳೆ ಇಂದು
ಬಂದಾಯಿತು
ಇದರ ನಡುವೆ
ವರ್ತಮಾನ
ಕಳೆದು ಹೋಯಿತು.
*******
ಸಹಸ್ರಬುಧ್ಯೆ ಮುಂಡಾಜೆ
ಕಿರು ಸತ್ಯ..104
ಖಚಿತ
**
ಔಷಧಗಳು
ಹಲವು ಇಹವು
ರಾಮ ಬಾಣ
ದಂಥ ಗುಣವು
ನಾಟಿದೊಡನೆ
ರೋಗ ನಾಶ
ಇಲ್ಲ ರೋಗಿಯು.!!
******
ಸಹಸ್ರಬುಧ್ಯೆ ಮುಂಡಾಜೆ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ