ಮಂಗಳೂರು: ನವಮಂಗಳೂರು ಬಂದರಿನ ಇತಿಹಾಸದಲ್ಲೇ ಅತಿದೊಡ್ಡ ಕಂಟೈನರ್ ಹಡಗಿನ ನಿರ್ವಹಣೆಯನ್ನು ಇಂದು ನಡೆಸಿದ್ದು, ಮಹತ್ವದ ಮೈಲುಗಲ್ಲು ಸ್ಥಾಪಿಸಿದೆ.
ಕಂಟೈನರ್ ಗಾತ್ರ ಮತ್ತು ಹಡಗಿನ ಗಾತ್ರ ಎರಡರಲ್ಲೂ ಇಂದು ನಡೆಸಿರುವ ನಿರ್ವಹಣೆ ಅತಿ ದೊಡ್ಡ ಕಾರ್ಯಾಚರಣೆಯಾಗಿದೆ ಎಂದು ಎನ್‌ಎಂಪಿಟಿ ಪ್ರಕಟಣೆ ತಿಳಿಸಿದೆ.
260 ಮೀಟರ್ ಉದ್ದದ ಎಲ್‌ಓಎ ಮತ್ತು 32.35 ಮೀಟರ್ ಗಾತ್ರದ ಬೀಮ್ ಹೊಂದಿರುವ ಬೃಹತ್ ಸರಕು ಸಾಗಣೆ ಹಡಗು ಎಂ.ವಿ ಎಸ್‌ಎಸ್‌ಎಲ್ ಬ್ರಹ್ಮಪುತ್ರಾ-ವಿ.084 ಇಂದು ಎನ್‌ಎಂಪಿಟಿ ತಲುಪಿದ್ದು, 50900 ಮೆಟ್ರಿಕ್ ಟನ್ ತೂಕ ಹೊಂದಿದೆ.
ಈ ಬೃಹತ್ ಹಡಗು ಒಟ್ಟು 25864.40 ಮೆ. ಟನ್ ತೂಕದ 1142/1521 ಬಾಕ್ಸ್‌ಗಳಲ್ಲಿ ಕಚ್ಚಾ ಗೇರುಬೀಜದ ಸರಕುಗಳನ್ನು ತಂದಿಳಿಸಿದೆ. ಮೆ. ಶ್ರೇಯಸ್ ಶಿಪ್ಪಿಂಗ್ ಹಡಗಿನ ನಿರ್ವಾಹಕರಾಗಿದ್ದು, ಮೆ. ಅಮೋಘ ಶಿಪ್ಪಿಂಗ್, ಮಂಗಳೂರು- ಸ್ಥಳೀಯವಾಗಿ ಆ ಸಂಸ್ಥೆಯನ್ನು ಪ್ರತಿನಿಧಿಸುತ್ತಿದೆ.
ಎನ್‌ಎಂಪಿಟಿಯಲ್ಲಿ ಕಂಟೈನರ್ ಸಾಗಣೆ ನಿರಂತರವಾಗಿ ಏರುಗತಿಯಲ್ಲಿದೆ. 2000ನೇ ವರ್ಷದಲ್ಲಿ 2000ಕ್ಕಿಂತಲೂ ಕಡಿಮೆ ಟಿಇಯು (Twenty foot equivalent unit) ಸರಕಿನ ನಿರ್ವಹಣೆ ಮಾಡಿದ್ದರೆ, 2020-21ರಲ್ಲಿ ಈ ಪ್ರಮಾಣ 1.5 ಲಕ್ಷ ಟಿಇಯುಗೆ ಏರಿಕೆಯಾಗಿದೆ.
ಇದುವರೆಗೂ ಈ ಕಂಟೈನರ್‌ಗಳನ್ನು ಬಂದರಿನ ಜನರಲ್ ಕಾರ್ಗೋ ಬರ್ತ್‌ಗಳಲ್ಲಿ ನಿರ್ವಹಣೆ ಮಾಡಲಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕಂಟೈನರ್ ಹ್ಯಾಂಡ್ಲಿಂಗ್‌ನಲ್ಲಿ ಆಗಿರುವ ಏರಿಕೆಯನ್ನು ಗಮನಿಸಿ, 14ನೇ ಸಂಖ್ಯೆಯ ಬರ್ತ್ ಅನ್ನು ಕಂಟೈನರ್ ನಿರ್ವಹಣೆಗಾಗಿ ಸಂಪೂರ್ಣವಾಗಿ ಯಾಂತ್ರೀಕರಣ ಮಾಡುವ ಕಾಮಗಾರಿಯನ್ನು ಮಂಗಳೂರು ಕಂಟೈನರ್ ಟರ್ಮಿನಲ್ ಪ್ರೈ.ಲಿ (ಜೆಎಸ್‌ಡಬ್ಲ್ಯು)ಗೆ ಪಿಪಿಪಿ ಆಧಾರದಲ್ಲಿ ವಹಿಸಿಕೊಟ್ಟಿದೆ. ಮುಂದಿನ ವರ್ಷಗಳಲ್ಲಿ ಬಂದರಿನಲ್ಲಿ ಕಂಟೈನರ್ ಟ್ರಾಫಿಕ್ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸಲು ಇದು ನೆರವಾಗಲಿದೆ.
ಇಂತಹ ಅತಿದೊಡ್ಡ ಗಾತ್ರದ ಕಂಟೈನರ್‌ಗಳನ್ನೂ ನಿರ್ವಹಿಸುವ ಸಾಮರ್ಥ್ಯವನ್ನು ನವಮಂಗಳೂರು ಬಂದರು ಗಳಿಸಿದ್ದು, ಈ ನಿರ್ವಹಣೆಗಾಗಿ ಎನ್‌ಎಂಪಿಟಿ ಚೇರ್ಮನ್ ಡಾ. ಎ.ವಿ ರಮಣ ಹರ್ಷ ವ್ಯಕ್ತಪಡಿಸಿದ್ದಾರೆ.
ಆನ್‌ಲೈನ್ ಗೇಟ್ ಅಡ್ಮಿಟೆನ್ಸ್ (ಪ್ರವೇಶ ದ್ವಾರ ನಿರ್ವಹಣೆ), ಸುಧಾರಿತ ದಾಸ್ತಾನು ಸೌಲಭ್ಯಗಳು, ಉತ್ತಮ ಸೇವೆಗಳು ಮತ್ತು ವೆಚ್ಚ ಕಡಿತದ ಕ್ರಮಗಳನ್ನು ಅವರು ಶ್ಲಾಘಿಸಿದ್ದಾರೆ.
Key Words: NMPT, Container Vessel, Mangalore, ನವಮಂಗಳೂರು ಬಂದರು, ಸರಕು ನಿರ್ವಹಣೆ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ