ಟೈಫಾಯಿಡ್ ಜ್ವರ ಒಂದು ಸಾಂಕ್ರಾಮಿಕ ರೋಗ. ಸಾಲ್ಮೊನೆಲ್ಲಾ ಟೈಫಿ ಎಂಬ ಬ್ಯಾಕ್ಟೀರಿಯಾದಿಂದ ಹರಡುವ ಈ ರೋಗವನ್ನು ವಿಷಮ ಜ್ವರ, ವಿಷಮಶೀತ ಜ್ವರ ಮತ್ತು ವಾಯಿದೆ ಜ್ವರ ಎಂದೂ ಕರೆಯುತ್ತಾರೆ. ಈ ಜ್ವರ ಬಂದಾಗ ಸಾಮಾನ್ಯವಾಗಿ 3ರಿಂದ 4 ವಾರಗಳ ಕಾಲ ಕಾಡುವುದರಿಂದ ಈ ರೋಗಕ್ಕೆ ವಾಯಿದೆ ಜ್ವರ ಎಂಬ ಅನ್ವರ್ಥನಾಮ ಬಂದಿದೆ. ಪ್ರಪಂಚದಾದ್ಯಂತ ಕಾಣಿಸಿಕೊಳ್ಳುವ ಈ ರೋಗ, ಸಾರ್ವಜನಿಕ ಮತ್ತು ವೈಯುಕ್ತಿಕ ಶುಚಿತ್ವ ಹಾಗೂ ಸ್ವಚ್ಛತೆ ಕಡಮೆ ಇರುವ ಜನಾಂಗಗಳಲ್ಲಿ ಹೆಚ್ಚಾಗಿ ಕಾಣಿಸಿಗುತ್ತದೆ.
2015ರಲ್ಲಿ 12.5 ಮಿಲಿಯನ್ ಮಂದಿ ಈ ರೋಗದಿಂದ ಬಳಲಿದ್ದಾರೆ. ಭಾರತದಂತಹ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಈ ರೋಗ ಸರ್ವೇಸಾಮಾನ್ಯ. ವರ್ಷದ ಎಲ್ಲಾ ಋತುಗಳಲ್ಲಿ ಕಾಡುವ ಈ ರೋಗ ಬೇಸಗೆಯಲ್ಲಿ ಹೆಚ್ಚಾಗಿ ಕಲುಷಿತ ನೀರು ಕುಡಿಯುವುದರಿಂದ ಮತ್ತು ಕಲುಷಿತ ಆಹಾರದ ಸೇವನೆಯ ಮುಖಾಂತರ ಹರಡುತ್ತದೆ. ಪ್ರತಿ ವರ್ಷ ಭಾರತ ದೇಶವೊಂದರಲ್ಲಿಯೇ 1 ಮಿಲಿಯನ್ ಮಂದಿ ಈ ರೋಗದಿಂದ ಬಳಲುತ್ತಾರೆ. ರೋಗಾಣು ದೇಹಕ್ಕೆ ಸೇರಿದ 6 ದಿನಗಳಿಂದ 30 ದಿನಗಳ ಒಳಗೆ ರೋಗ ಬರುವ ಸಾಧ್ಯತೆ ಇರುತ್ತದೆ. ಮಕ್ಕಳಲ್ಲಿ ಹೆಚ್ಚು ಕಾಣಬರುವ ಈ ರೋಗ, ಆಧುನಿಕತೆ ಮತ್ತು ಮೂಲಸೌಕರ್ಯ ಬೆಳೆದಂತೆಲ್ಲಾ ರೋಗದ ಸಂಖ್ಯೆ ಇಳಿಮುಖವಾಗಿದೆ. 1990ರಲ್ಲಿ 2 ಲಕ್ಷ ಮಂದಿ ಜಾಗತಿಕವಾಗಿ ಸಾವನ್ನಪ್ಪಿದ್ದಾರೆ. 2015ರಲ್ಲಿ 1.5 ಲಕ್ಷ ಮಂದಿ ಮಾತ್ರ ಸಾವನ್ನಪ್ಪಿದ್ದಾರೆ.
ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ 20 ಶೇಕಡಾ ಮಂದಿ ಸಾವನ್ನಪ್ಪುವ ಸಾಧ್ಯತೆ ಇದೆ. ಸೂಕ್ತ ಚಿಕಿತ್ಸೆಯ ಬಳಿಕವೂ 3 ಶೇಕಡಾ ಮಂದಿ ಸಾವನ್ನಪ್ಪುವ ಸಾಧ್ಯತೆಯೂ ಇದೆ. ರೋಗ ಗುಣಮುಖವಾದ ಬಳಿಕವೂ ರೋಗಾಣು ರೋಗಿಯ ಪಿತ್ತಕೋಶದಲ್ಲಿ ಉಳಿಯುವ ಸಾಧ್ಯತೆ ಇರುತ್ತದೆ. 1907ರಲ್ಲಿ ಮೇರಿ ಮಲಾನ್ ಎಂಬಾಕೆ, ಅಮೇರಿಕಾದಲ್ಲಿ ನ್ಯೂಯಾರ್ಕ್ ನಗರದ ಹೋಟೆಲೊಂದರಲ್ಲಿ ಬಾಣಸಿಗಳಾಗಿ ಕೆಲಸ ಮಾಡುತ್ತಾ ಹಲವಾರು ಮಂದಿಗೆ ರೋಗವನ್ನು ಹಂಚಿದ ಕುಖ್ಯಾತಿಗೆ ಒಳಗಾದವಳು. ಆಕೆಯನ್ನು ಟೈಪಾಯಿಡ್ ಮೇರಿ ಎಂದೂ ಕರೆಯಲಾಗಿತ್ತು. ನಂತರ ಆಕೆಯನ್ನು ಕೆಲಸದಿಂದ ತೆಗೆದು ಹಾಕಲಾಯಿತು. ಆ ಬಳಿಕ ಆಕೆ ಹೆಸರು ಬದಲಾಯಿಸಿ ಬೇರೆಡೆ ಕೆಲಸ ಸೇರಿ, ರೋಗ ಹಂಚುತ್ತಾ ಹೋಗಿ ಮಗದೊಮ್ಮೆ ಸಿಕ್ಕಿಬಿದ್ದು, ದೇಶದಿಂದ ಗಡಿಪಾರಾದಳು. ಕೊನೆಗೂ ಆಕೆ ಟೈಪಾಯಿಡ್ ಮತ್ತು ನ್ಯೂಮೊನಿಯಾದಿಂದ 26 ವರ್ಷಗಳ ಬಳಿಕ ಮೃತಳಾದಳು.
ರೋಗದ ಲಕ್ಷಣಗಳು:
1. ರೋಗ ಆರಂಭವಾದ ಮೊದಲ ವಾರದಲ್ಲಿ ದೇಹದ ಉಷ್ಣತೆ ನಿಧಾನವಾಗಿ ಏರುತ್ತದೆ. ಜ್ವರ, ಮೈಕೈ ನೋವು, ಸುಸ್ತು, ದೇಹಾಲಸ್ಯ, ತಲೆನೋವು ಮತ್ತು ಕೆಮ್ಮು ಕಾಣಿಸಿಕೊಳ್ಳುತ್ತದೆ. ಹೃದಯ ಬಡಿತ (ನಾಡಿಮಿಡಿತ) ನಿಧಾನವಾಗುವುದು ಈ ರೋಗದ ಲಕ್ಷಣ. ಸಾಮಾನ್ಯವಾಗಿ ಜ್ವರ ಬಂದಾಗ ಹೃದಯದ ಬಡಿತ ಜೋರಾಗುತ್ತದೆ. ಹೊಟ್ಟೆ ನೋವು ಕೂಡಾ ಇರುತ್ತದೆ. ದೇಹದಲ್ಲಿನ ಬಿಳಿ ರಕ್ತಕಣಗಳ ಸಂಖ್ಯೆ ಇಳಿಮುಖವಾಗುತ್ತದೆ. ರಕ್ತದ ಪರೀಕ್ಷೆ ಮಾಡಿದಲ್ಲಿ ವೈಡಾಲ್ ಟೆಸ್ಟ್ ಮೊದಲವಾರದಲ್ಲಿ ಋಣಾತ್ಮಕ ಫಲಿತಾಂಶ ನೀಡುತ್ತದೆ. ಆದರೆ ರಕ್ತದಲ್ಲಿನ ರೋಗಾಣು ಬೆಳೆಸುವಿಕೆ ಮತ್ತು ಪ್ರತಿಕ್ರಿಯೆ ಪರೀಕ್ಷೆ ಮಾಡಿದಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಕಂಡು ಬರುತ್ತದೆ.
2. ಎರಡನೇ ವಾರದಲ್ಲಿ ವಿಪರೀತವಾದ ಸುಸ್ತು ಮತ್ತು ಜ್ವರ ಇರುತ್ತದೆ. 1040ಈ ವರೆಗೂ ಜ್ವರ ಏರುತ್ತದೆ. ವಿಪರೀತ ಜ್ವರದಿಂದಾಗಿ ನರಳುವಿಕೆ ಮತ್ತು ರೋಗಿ ಕೆರಳುವಿಕೆ ಕೂಡಾ ಇರುತ್ತದೆ. ಮೈಮೇಲೆ ಬೆವರುಸಾಲೆಯಂತಹ ಕೆಲವು ಕಲೆÉಗಳು ಬೆನ್ನಿನ ಮತ್ತು ಹೊಟ್ಟೆಯ ಭಾಗದಲ್ಲಿ ಕಾಣಿಸುತ್ತದೆ. ಇದನ್ನು ರೋಸ್ ಸ್ಪಾಟ್ ಎಂದೂ ಕರೆಯುತ್ತಾರೆ. ದೇಹದ ಬಲ ಕುಗ್ಗುತ್ತದೆ. ಹೊಟ್ಟೆ ಉಬ್ಬರಿಸುವುದು, ಹೊಟ್ಟೆನೋವು, ಪದೇ ಪದೇ ಬೇಧಿ ವಾಂತಿಗಳು ಕಾಣಿಸುತ್ತದೆ. ದಿನಾ 6ರಿಂದ 8 ಬಾರಿ ಹಸಿರು ಬಣ್ಣದ ಬೇಧಿ ಉಂಟಾಗಬಹುದು. ವಿಪರೀತ ವಾಸನೆ ಕೂಡಾ ಇರುತ್ತದೆ. ಯಕೃತ್ ಮತ್ತು ದುಗ್ಧಗ್ರಂಥಿ ದೊಡ್ಡದಾಗುತ್ತದೆ ಮತ್ತು ನೋವಿನಿಂದ ಕೂಡಿರುತ್ತದೆ. ಕೆಲವೊಮ್ಮೆ ಮಲಬದ್ಧತೆಯೂ ಉಂಟಾಗಬಹುದು. ಯಕೃತ್ತಿನ ಕಿಣ್ಣಗಳ ಸಂಖ್ಯೆ ಜಾಸ್ತಿಯಾಗುತ್ತದೆ. 2ನೇ ವಾರದಲ್ಲಿ ವೈಡಾಲ್ ಪರೀಕ್ಷೆ ಧನಾತ್ಮಕ ಫಲಿತಾಂಶವನ್ನೇ ನೀಡುತ್ತದೆ. ಮೊದಲ ಮತ್ತು ಎರಡನೇ ವಾರದಲ್ಲಿ ಮದ್ಯಾಹ್ನದ ಬಳಿಕ ಜ್ವರದ ತೀವ್ರತೆ ಜಾಸ್ತಿಯಾಗುತ್ತದೆ. ಜ್ವರ ಟೈಪಾಯಿಡ್ ರೋಗದ ಪ್ರಮುಖ ಲಕ್ಷಣ. ಜ್ವರವು ರೋಗದ ಮೊದಲಿನ 3-4 ದಿನ ದಿನಂಪ್ರತಿ ಏರುತ್ತಲೇ ಹೋಗುತ್ತದೆ. ಮೊದಲ ವಾರಾಂತ್ಯದಲ್ಲಿ ವಿಪರೀತ ಜ್ವರ ಉಂಟಾಗಿ 2-3-4 ವಾರಗಳಲ್ಲಿ ಎಡೆಬಿಡದೆ ಏರಿಯೇ ಇರುವುದರಿಂದ ವಿಷಮಶೀತ ಜ್ವರ ಎಂದೂ ಕರೆಯುತ್ತಾರೆ.
3. ಮೂರನೇ ವಾರದಲ್ಲಿ ಕರುಳಿನಲ್ಲಿ ಹುಣ್ಣಾಗುವ ಸಾಧ್ಯತೆ ಹೆಚ್ಚು. ಈ ಕರುಳಿನ ಹುಣ್ಣುಗಳು ಒಡೆದು ರಕ್ತಸ್ರಾವವಾಗುತ್ತದೆ. ಕೆಲವೊಮ್ಮೆ ಕರುಳು ತೂತಾಗಿ ರಕ್ತಕ್ಕೆ ಸೋಂಕು ಹರಡುವ ಸಾಧ್ಯತೆಯೂ ಇರುತ್ತದೆ. ರಕ್ತಕ್ಕೆ ಹರಡಿದ ಸೋಂಕಿನಿಂದಾಗಿ, ಮೆದುಳಿನ ಉರಿಯೂತ, ನ್ಯೂಮೋನಿಯಾ ಮತ್ತು ಶ್ವಾಶಕೋಶದ ಸೋಂಕು ಉಂಟಾಗುವ ಸಾಧ್ಯತೆಯೂ ಇರುತ್ತದೆ. ರಕ್ತ ತಟ್ಟೆಗಳ ಸಂಖ್ಯೆ ಕಡಮೆಯಾಗಿ ಆಂತರಿಕ ರಕ್ತಸ್ರಾವವಾಗುವ ಸಾಧ್ಯತೆಯೂ ಇದೆ. ವಿಪರೀತ ಜ್ವರದಿಂದ ನಿರ್ಜಲೀಕರಣವಾಗುವ ಸಾಧ್ಯತೆಯೂ ಇರುತ್ತದೆ. ಮೂರನೇ ವಾರದ ಬಳಿಕ ಜ್ವರ ಇಳಿಮುಖವಾಗುತ್ತದೆ.
ಹೇಗೆ ಹರಡುತ್ತದೆ?:
1. ಕಲುಷಿತಗೊಂಡ ನೀರು ಮತ್ತು ಕಲುಷಿತಗೊಂಡ ಆಹಾರದ ಮುಖಾಂತರ ರೋಗ ಬೇಗನೆ ಹರಡುತ್ತದೆ. ಸಾಲ್ಮೋನೆಲ್ಲಾ ಟೈಫಿ ಎಂಬ ರೋಗಾಣು ರೋಗಿಯ ಮಲ ಮೂತ್ರ ಮತ್ತು ವಾಂತಿಗಳಲ್ಲಿ ಲಕ್ಷಗಟ್ಟಲೆ ಇರುತ್ತದೆ. ಈ ರೋಗಾಣುವಿನಿಂದ ಮಿಶ್ರವಾದ ನೀರು, ಆಹಾರ ಪಾನೀಯ ಸೇವನೆಯಿಂದ ರೋಗ, ಆರೋಗ್ಯವಂತ ವ್ಯಕ್ತಿಯ ದೇಹದ ಅನ್ನಕೋಶವನ್ನು ಸೇರಿ ಕರುಳಿನ ಮುಖಾಂತರ ದೇಹಗತವಾಗುತ್ತದೆ. ಕೆಲವೊಮ್ಮೆ ರೋಗದಿಂದ ಗುಣವಾದ ಬಳಿಕವೂ, ರೋಗಾಣು ಪಿತ್ತಕೋಶದಲ್ಲಿ ಮನೆ ಮಾಡಿಕೊಂಡು, ನಿರ್ಭೀತಿಯಿಂದ ಇರುತ್ತದೆ. ಆ ವ್ಯಕ್ತಿಯ ಮಲದ ಮುಖಾಂತರ ಇತರರಿಗೆ ಸುಲಭವಾಗಿ ಹರಡುತ್ತದೆ.
2. ಟೈಫಾಯಿಡ್ ರೋಗಾಣುವಿನಿಂದ ಕಲುಷಿತವಾದ ಪ್ರಾಣಿಗಳ ಮಾಂಸಹಾರ ಸೇವನೆಯಿಂದಲೂ ರೋಗ ಹರಡುತ್ತದೆ. ಕರುಳಿನ ಮುಖಾಂತರ ದೇಹವನ್ನು ಸೇರಿ ಬಳಿಕ ರಕ್ತಕ್ಕೆ ಸೇರಿಕೊಂಡು ತನ್ನ ನಿಜವಾದ ರೂಪವನ್ನು ತೋರಿ ವಿಷಮ ಶೀತ ಜ್ವರಕ್ಕೆ ಕಾರಣವಾಗುತ್ತದೆ.
3. ಕೆಲವೊಮ್ಮೆ ಮೂತ್ರಗಳಿಂದ, ನೊಣಗಳ ಮುಖಾಂತರವೂ ಆಹಾರ ಕಲುಷಿತಗೊಂಡು ರೋಗ ಹರಡುತ್ತದೆ. ದೇಹಭಾದೆ ತೀರಿಸಿದÀ ಬಳಿಕ ಸರಿಯಾಗಿ ಸೋಪಿನ ದ್ರಾವಣ ಹಚ್ಚದಿದ್ದಲ್ಲಿ ರೋಗ ಹರಡುವ ಸಾಧ್ಯತೆ ಇರುತ್ತದೆ.
ಪತ್ತೆ ಹಚ್ಚುವುದು ಹೇಗೆ?
ರಕ್ತ ಪರೀಕ್ಷೆ, ಮಲ ಪರೀಕ್ಷೆ, ಅಸ್ತಿಮಜ್ಜೆ ಪರೀಕ್ಷೆ ಮುಖಾಂತರ ರೋಗ ಪತ್ತೆ ಹಚ್ಚಲಾಗುತ್ತದೆ. ವೈಡಾಲ್ ಪರೀಕ್ಷೆ ಮೊದಲ ವಾರದಲ್ಲಿ ಋಣಾತ್ಮಕ ಫಲಿತಾಂಶ ನೀಡುವ ಸಾಧ್ಯತೆ ಇದೆ. ಆದರೆ ಟೈಪಿಡಾಟ್ ಎಂಬ ಪರೀಕ್ಷೆ ರೋಗಿಯ ದೇಹಕ್ಕೆ ಸೇರಿದ 2-3 ದಿನದೊಳಗೆ ಪತ್ತೆ ಹಚ್ಚಲಾಗುತ್ತದೆ. Igಉ ಮತ್ತು Igಒ ಆಂಟಿಬಾಡಿಗಳನ್ನು ಸಾಲ್ಮೊನೆಲ್ಲಾ ರೋಗಾಣುವಿನ ವಿರುದ್ಧ ಇಐIZಂ ಪರೀಕ್ಷೆ ಮುಖಾಂತರ ಪತ್ತೆ ಹಚ್ಚಲಾಗುತ್ತದೆ. ಹಿಂದಿನ ಕಾಲದಲ್ಲಿ ರಕ್ತ ಪರೀಕ್ಷೆ ಮಲಪರೀಕ್ಷೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿತ್ತು. ಆದರೆ ಇದಕ್ಕೆ ಬಹಳ ಸಮಯ ತಗಲುತ್ತದೆ. ಈಗ ತಂತ್ರಜ್ಞಾನ ಮುಂದುವರಿದುದರಿಂದ ‘ಟೈಫಿಡಾಟ್’ ಪರೀಕ್ಷೆ ಹೆಚ್ಚು ಜನಪ್ರಿಯವಾಗಿದೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ರೋಗಿಯ ರೋಗದ ಲಕ್ಷಣಗಳನ್ನು ಕೂಲಂಕÀುಷವಾಗಿ ಅಧ್ಯಯನ ಮಾಡಿ, ರೋಗದ ಲಕ್ಷಣಗಳು, ರೋಗದ ತೀವ್ರತೆ ಮತ್ತು ರೋಗದ ಹಿಂದಿನ ಚರಿತ್ರೆಯನ್ನು ವೈದ್ಯರು ಕೂಲಂಕುಷವಾಗಿ ಮನನ ಮಾಡಿದ ಬಳಿಕ, ಬೇರೆ ಪರೀಕ್ಷೆಗಳನ್ನು ಸೂಚಿಸುತ್ತಾರೆ. ರೋಗದ ಲಕ್ಷಣ ಮತ್ತು ರಕ್ತ ಪರೀಕ್ಷೆಗಳ ಫಲಿತಾಂಶಗಳನ್ನು ತಾಳೆ ನೋಡಿ ವೈದ್ಯರು ರೋಗವನ್ನು ಪತ್ತೆ ಹಚ್ಚುತ್ತಾರೆ.
ತಡೆಗಟ್ಟುವುದು ಹೇಗೆ?:
ಸ್ವಚ್ಛತೆ ಮತ್ತು ವಾತಾವರಣ ಕಲುಷಿತಗೊಳ್ಳದಂತೆ ನೋಡಿಕೊಂಡಲ್ಲಿ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಪ್ರಾಣಿಗಳಿಗೆ ಈ ವಿಷಮ ಜ್ವರ ಭಾದಿಸುವುದಿಲ್ಲ, ಕೇವಲ ಮಾನವನಿಗೆ ಮಾತ್ರ ಬಾಧಿಸುತ್ತದೆ. ರೋಗಾಣುವಿನಿಂದ ಕಲುಷಿತಗೊಂಡು ಮಲಮೂತ್ರ, ನಮ್ಮ ಆಹಾರ ಮತ್ತು ಪಾನೀಯಗಳ ಸಂಪರ್ಕಕ್ಕೆ ಬರದಂತೆ ಮುಂಜಾಗರೂಕತೆ ವಹಿಸಬೇಕು. ಆಹಾರ ಸೇವಿಸುವಾಗ ಚೆನ್ನಾಗಿ ಕೈತೊಳೆದು ಸ್ವಚ್ಛಗೊಳಿಸಿದಲ್ಲಿ ರೋಗ ಬರದಂತೆ ತಡೆಯಬಹುದು. 1908ರಲ್ಲಿ ಆರಂಭಿಸಲಾದ ನೀರಿನ ಕ್ಲೋರಿನ್‍ಕರಣದಿಂದಾಗಿ ಸಾಕಷ್ಟು ಟೈಪಾಯಿಡ್ ಸಂಖ್ಯೆ ಇಳಿಮುಖಗೊಂಡಿತು. 1942ರಲ್ಲಿ ಆಂಟಿಬಯೋಟಿಕ್‍ಗಳ ಬಳಕೆಯಿಂದ ಮತ್ತಷ್ಟು ಇಳಿಮುಖಗೊಂಡಿತು. ಮೂಲಭೂತ ಸೌಕರ್ಯಗಳಾದ ಶುದ್ಧಗಾಳಿ, ಶುದ್ಧನೀರು, ಬೆಳಕು ನೀಡಿದ್ದಲ್ಲಿ ರೋಗವನ್ನು ತಡೆಗಟ್ಟಬಹುದು.
ಸಕ್ರಮವಾದ ಮಲಮೂತ್ರ ವಿಸರ್ಜನೆ, ಶುದ್ಧ ಕುಡಿಯುವ ನೀರಿನ ಸೌಕರ್ಯಗಳು, ಶುಚಿ ಅಭ್ಯಾಸಗಳಾದ ಕುದಿಸಿ ಆರಿಸಿದ ಪಾನೀಯಗಳು ಮತ್ತು ಬೇಯಿಸಿದ ಆಹಾರದ ಸೇವನೆಗಳಿಂದ ಟೈಫಾಯಿಡ್ ರೋಗವನ್ನು ತಡೆಯಬಹುದು. ರಸ್ತೆ ಬದಿಯ ಮತ್ತು ತೆರೆದ ಅಂಗಡಿಗಳಲ್ಲಿ ತೆರೆದಿಟ್ಟ ಪಾನೀಯ, ಸಿಹಿ ತಿಂಡಿಗಳನ್ನು ವರ್ಜಿಸಬೇಕು. ಸರ್ಕಾರ ಮತ್ತು ನಗರಪಾಲಿಕೆಗಳು ಜನರಿಗೆ ಶುದ್ಧ ಕುಡಿಯುವ ನೀರಿನ ಸೌಕರ್ಯ ನೀಡಿದಲ್ಲಿ ರೋಗ ಬರದಂತೆ ಮಾಡಬಹುದು. ಟೈಫಾಯಿಡ್ ರೋಗ ತಡೆಯಲು ಪರಿಣಾಮಕಾರಿ ಲಸಿಕೆ ಮತ್ತು ಚುಚ್ಚು ಮದ್ದು ಲಭ್ಯವಿದೆ. 1990ರಲ್ಲಿ ವಿಶ್ವ ಸಂಸ್ಥೆ ಚುಚ್ಚುಮದ್ದು ಮತ್ತು ಬಾಯಿಯ ಮುಖಾಂತರ ತೆಗೆದುಕೊಳ್ಳುವ ಲಸಿಕೆಯನ್ನು ಜಾರಿಗೆ ತಂದರು. 2 ವರ್ಷದ ಕೆಳಗಿನವರಿಗೆ 1ರಿಂದ 2 ಬಾರಿ ಈ ಚುಚ್ಚು ಮದ್ದು ನೀಡಲಾಗುತ್ತದೆ. 2 ವರ್ಷದ ಬಳಿಕ ಮಗದೊಮ್ಮೆ ಬೂಸ್ಟರ್ ಡೋಸ್ ನೀಡಬೇಕು. ಟೈಫಾಯಿಡ್ ಗುಳಿಗೆ ಲಸಿಕೆಯನ್ನು 5 ವರ್ಷದ ಮೇಲ್ಪಟ್ಟವರಿಗೆ ನೀಡಲಾಗುತ್ತದೆ. ಇದು 5 ರಿಂದ 7 ವರ್ಷಗಳ ವರೆಗೆ ರಕ್ಷಣೆ ಮಾಡುತ್ತದೆ. ಆ ಬಳಿಕ ಪುನಃ ಬೂಸ್ಟ್‍ರ್ ಡೋಸ್ ನೀಡಬೇಕು. ಎರಡೂ ಲಸಿಕೆಗಳು ಪರಿಣಾಮಕಾರಿ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಇದೀಗ ಹೆಪಟೈಟಿನ್ ‘A’ಯ ಜೊತೆಗಿರುವ ಟೈಪಾಯಿಡ್ ಲಸಿಕೆ ಲಭ್ಯವಿದೆ.
ಚಿಕಿತ್ಸೆ ಹೇಗೆ?:
ಟೈಫಾಯಿಡ್ ರೋಗ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತದೆ. ನಿರ್ಜಲೀಕರಣವಾದಾಗ ಸಾಕಷ್ಟು ನೀರಿನ ಸೇವನೆ ಅಗತ್ಯ. ಆಂಟಿಬಯೋಟಿಕ್‍ಗಳ ಬಳಕೆಯಿಂದಾಗಿ ರೋಗದಿಂದಾಗುವ ಸಾವು ನೋವಿನ ಪರಿಣಾಮ ಗಣನೀಯವಾಗಿ ಕುಗ್ಗಿದೆ. ಆಂಫಿಸಿಲಿನ್, ಕ್ಲೋರಾಮ್‍ಫೆನಿಕಾಲ್, ಅಮಾಕ್ಸಿಸಿಲಿನ್, ಸಿಪ್ರೊಪ್ಲಾಕ್ಸಿಸಿಲಿನ್ ಮುಂತಾದ ಔಷಧಿಗಳು ರೋಗವನ್ನು ತಹಬದಿಗೆ ತರಬಲ್ಲದು. ಚಿಕಿತ್ಸೆ ನೀಡದಿದ್ದಲ್ಲಿ 20ರಿಂದ 30 ಶೇಕಡಾ ಮಂದಿಗೆ ಸಾವು ನಿಶ್ಚಿತ. ಚಿಕಿತ್ಸೆ ನೀಡಿದ ಬಳಿಕವೂ ಶೇಕಡಾ 1 ರಿಂದ 4ರಷ್ಟು ಮಂದಿ ಸಾವಿಗೀಡಾಗುವ ಸಾಧ್ಯತೆಯೂ ಇರುತ್ತದೆ. ಹೆಚ್ಚಾಗಿ ಔಷಧಿಗೆ ಬಗ್ಗುವ ಈ ರೋಗ, ವಿಷಮ ಸ್ಥಿತಿಗೆ ತಲುಪಿದ ಬಳಿಕ ಶಸ್ತ್ರ ಚಿಕಿತ್ಸೆಯ ಅಗತ್ಯವೂ ಬರಬಹುದು. ಅಗತ್ಯಕ್ಕನುಗುಣವಾಗಿ ವೈದ್ಯರು ಸೂಕ್ತ ಚಿಕಿತ್ಸೆಯನ್ನು ನಿರ್ಧರಿಸಿ ಗುಣಪಡಿಸುತ್ತಾರೆ.
ಕೊನೆಮಾತು:
ವಿಷಮಶೀತ ಜ್ವರ ಎಂದು ಕರೆಯಲ್ಪಡುವ ಈ ಟೈಫಾಯಿಡ್ ಜ್ವರ ಬಹಳ ಪುರಾತನ ಖಾಯಿಲೆಯಾಗಿದೆ. ಆಧುನಿಕರಣ, ಕೈಗಾರಿಕೀಕರಣ ಮತ್ತು ಮೂಲ ಸೌಲಭ್ಯಗಳಾದ ಶುದ್ಧ ನೀರು, ಗಾಳಿ, ಬೆಳಕು, ಆಹಾರದ ಲಭ್ಯತೆಯಿಂದಾಗಿ ಈ ರೋಗ ಭೂಮಂಡಲದಿಂದ ನಿಧಾನವಾಗಿ ಗತಿಸಿಹೋಗುತ್ತಿರುವುದು ಸಂತಸದ ವಿಚಾರ. ಅರ್ನಾಲ್ಡ್ ಬೆನೆಟ್ ಎಂಬ ಖ್ಯಾತ ಇಂಗ್ಲೀಷ್ ಕಾದಂಬರಿಕಾರ (1934), ಹಕಾರು ಹಾಜಿ ಮಟೋ ಎಂಬ ಜಪಾನಿನ ವಿಜ್ಞಾನಿ (1934), ಅಬ್ರಹಾಂ ಲಿಂಕನ್‍ನ ಮಗ ವಿಲಿಯಮ್ ಲಿಂಕನ್ (1862) ಗೆರಾರ್ಡ್ ಹಾಪ್‍ಕಿನ್ಸ್ ಎಂಬ ಇಂಗ್ಲೀಷ್ ಕವಿ (1889) ಮುಂತಾದ ಖ್ಯಾತನಾಮರನ್ನು ಇನ್ನಿಲ್ಲದಂತೆ ಕಾಡಿ ಆಪೋಷನ ತೆಗೆದುಕೊಂಡ 19ರ ಶತಮಾನದ ಈ ಮಹಾಮಾರಿ ವಿಷಮಶೀತ ಜ್ವರ ಆಗೊಮ್ಮೆ ಈಗೊಮ್ಮೆ ಬಡತನ ರೇಖೆಯ ಕೆಳಗಿರುವ ಕೊಳವೆ ಪ್ರದೇಶಗಳು ಧುತ್ತೆಂದು ಬಂದು ಮನುಕುಲನ್ನೂ ಈಗಲೂ ಕಾಡುತ್ತಿರುವುದು ಸೋಜಿಗದ ಸಂಗತಿ.
2005ರಲ್ಲಿ ರಿಪಬ್ಲಿಕ್ ಆಫ್ ಕಾಂಗೋ ದೇಶದಲ್ಲಿ 50000 ಮಂದಿಯನ್ನು ಕಾಡಿ 250 ಮಂದಿಯನ್ನು ಬಲಿ ತೆಗೆದ ಚಿತ್ರಣ ನಮ್ಮ ಮುಂದೆ ಇನ್ನೂ ಇದೆ. ಸಾಕಷ್ಟು ಮುಂಜಾಗರೂಕತೆ ವಹಿಸಿ ನಮ್ಮ ಪರಿಸರ ಗಾಳಿ, ನೀರು ಮಣ್ಣುಗಳನ್ನು ಶುಚಿಯಾಗಿರಿಸಿಕೊಂಡಲ್ಲಿ ರೋಗವನ್ನು ಖಂಡಿತವಾಗಿಯೂ ಬರದಂತೆ ಮಾಡಬಹುದು. ಅದರಲ್ಲಿಯೇ ಮನುಕುಲದ ಉನ್ನತಿ ಮತ್ತು ವಿಶ್ವಶಾಂತಿ ಅಡಗಿದೆ.
-ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ – 671 323
ಮೊ : 09845135787
Key Words: Monsoon, Health care, Typhoid, ಮಳೆಗಾಲದ ಕಾಯಿಲೆಗಳು, ಟೈಫಾಯಿಡ್, ವಿಷಮಶೀತ ಜ್ವರ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ