ಪ್ರಾತಿನಿಧಿಕ ಚಿತ್ರ
ಜಗತ್ತಿನ ಜೀವಿಗಳಲ್ಲಿ ಗೋವುಗಳನ್ನು ಬಿಟ್ಟರೆ, ಸಾಧು ಪ್ರಾಣಿಗಳೆಂದರೆ ಬಹುಷಃ ಬ್ರಾಹ್ಮಣರೇ ಇರಬೇಕು. ಅದಕ್ಕೆಂದೇ ಗೋ ಬ್ರಾಹ್ಮಣರು ಅನಾದಿ ಕಾಲದಿಂದಲೂ ಶೋಷಣೆಗೆ ಒಳಗಾಗುವುದು. ಹಿಂದೆ ರಾಮಾಯಣ ಮಹಾಭಾರತ ಕಾಲದಲ್ಲೂ ಗೋವುಗಳನ್ನು, ಬ್ರಾಹ್ಮಣರನ್ನು ಅವಮಾನಿಸಿ, ಹಿಂಸಿಸಿದಾಗಲೇ ರಾಕ್ಷಸರ ಸ್ವಭಾವ ಪ್ರಕಟವಾಗುವುದು. ಆದರೆ ಆಗಿನ ಕಾಲದಲ್ಲಿ ರಾಜ ಮಹಾರಾಜರು ಗೋ ಬ್ರಾಹ್ಮಣರಿಗೆ ರಕ್ಷಣೆ ಒದಗಿಸುತ್ತಿದ್ದುದರಿಂದ ನಿರ್ಣಾಯಕ ಹಂತದಲ್ಲಿ ನಾಶವಾಗದೇ ಉಳಿದಿರುವುದು ಸತ್ಯ. ಅದೇ ಗೋವುಗಳು, ಅದೇ ಬ್ರಾಹ್ಮಣರು ಇಂದಿಗೂ ಇದ್ದಾರೆ. ಅದೇ ರಾಜ ಮಹಾರಾಜರೂ ಮಂತ್ರಿಗಳ ರೂಪದಲ್ಲಿದ್ದಾರೆ. ಅದೇ ರಾಕ್ಷಸರು ಕಾಯದ ಹೊರತಾಗಿ ಸ್ವಭಾವವನ್ನು ಪಡೆದು ಇಂದು ಬ್ರಹ್ಮ ನಿಂದೆಯನ್ನು ಮಾಡುತ್ತಲೇ ಇದ್ದಾರೆ. ಇಲ್ಲಿ ಬ್ರಹ್ಮ ನಿಂದೆ ಎಂದರೆ ಬರಿದೆ ಬ್ರಾಹ್ಮಣ ಜಾತಿಯನ್ನು ಅವಹೇಳನ ಮಾಡುವುದಲ್ಲ, ಬದಲಾಗಿ ಬ್ರಾಹ್ಮಣ ಸ್ವಭಾವವನ್ನೇ ಮೆಟ್ಟಿ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾರೆಂದರೆ ಇದು ಸಮಾಜದ ಅಧಃಪತನದ ಮೊದಲ ಹೆಜ್ಜೆ.
ಯಾವುದೇ ಒಂದು ಸಮಾಜ ಆರೋಗ್ಯದಿಂದಿರಬೇಕಾದರೆ ನಾಲ್ಕು ವರ್ಣಗಳ ಅವಶ್ಯಕತೆ ಸಾರ್ವಕಾಲಿಕವಾಗಿ ಇರುತ್ತದೆ. ಇದರಲ್ಲಿ ಯಾವುದೇ ಒಂದರ ಕೊರತೆ ಆದರೂ ಸ್ವಸ್ಥ ಸಮಾಜಕ್ಕೆ ತೊಂದರೆಯೇ. ಮೇಲು ಕೀಳೆಂಬ ಪ್ರಶ್ನೆಯೇ ಇಲ್ಲಿ ಉದ್ಭವಿಸದು. ಮನುಷ್ಯನ ಆರೋಗ್ಯಕ್ಕೆ ಹೇಗೆ ಮೆದುಳು, ಹೃದಯ, ಪಿತ್ತಕೋಶ, ಮೂತ್ರಪಿಂಡ ಹಾಗೆಯೇ ಪಂಚೇಂದ್ರಿಯ, ಕೈ ಕಾಲುಗಳು ಮುಖ್ಯವೋ, ಹೇಗೆ ಅದರದೇ ಆದಂಥ ಮಹತ್ವ ಆಯಾ ಅಂಗಗಳಿಗಿದೆಯೋ, ಹೇಗೆ ಒಂದರ ಕಾರ್ಯವನ್ನು ಇನ್ನೊಂದು ಅಂಗ ಮಾಡಲಾಗದೋ ಅದೇರೀತಿ ಒಂದು ಸಮಾಜದ ಆರೋಗ್ಯಕ್ಕೆ ನಾಲ್ಕು ವರ್ಣಗಳೂ ಅವಶ್ಯಕವೇ. ಜ್ಞಾನವಿಲ್ಲದೆ ಮನುಷ್ಯ ಅಪೂರ್ಣ. ತೋಳ್ಬಲವಿಲ್ಲದಿದ್ದರೆ ಮಾನವ ಅಪ್ರಯೋಜಕ. ತನ್ನ ತನ್ನ ಉದರ ಪೋಷಣೆಗೆ ಬೇಕಾದ ಆಹಾರ ಧಾನ್ಯ ಸಂಪಾದಿಸದಿದ್ದರೆ ಮನುಜ ಬದುಕಲಾರ. ದೃಢವಾದ ಕಾಲುಗಳಿಲ್ಲದಿದ್ದರೆ ಬಾಕಿ ಎಲ್ಲ ಇದ್ದರೂ ಅಪ್ರಯೋಜಕ. ಇಲ್ಲಿ ಯಾವುದೇ ಒಂದು ನ್ಯೂನತೆಯೂ ಅನಾರೋಗ್ಯದ ಸಂಕೇತವೇ.
ಹೀಗಿರುವಾಗ ಬ್ರಹ್ಮ ನಿಂದೆಯಿಂದ ಏನನ್ನು ಸಾಧಿಸಿದಂತಾಗುವುದೋ ಆ ಪರಮಾತ್ಮನೇ ಬಲ್ಲ. ಯಾರು ತಲೆಯೊಳಗೆ ತುಂಬಿರುವ ಜ್ಞಾನವನ್ನು ಕಾಲಿನಡಿ ಹಾಕಿಕೊಳ್ಳುವನೋ ಅವನನ್ನು ಜಾಣನೆಂದು ಯಾರೂ ಹೇಳಲಾರರು. ತಲೆಯ ಕೆಲಸ ತಲೆಯೇ ಮಾಡಬೇಕು ಕಾಲಿನ ಕೆಲಸ ಕಾಲೇ ಮಾಡಬೇಕು. ಆದರೊಂದು ವಿಚಾರವಿದೆ. ಈ ಕಾಲಿನಿಂದ ಒದೆವ ಸಂಸ್ಕೃತಿ ಇರುವವನೂ ತನ್ನ ಕಾಲನ್ನು ನೆಲದಲ್ಲೇ ಊರಬೇಕು ತಲೆಯನ್ನು ಆ ಕಾಲೇ ಹೊರಬೇಕು. ತಾನೊಂದು ಅಸಾಮಾನ್ಯ ಚೇತನವೆಂದುಕೊಂಡು ತಲೆಕೆಳಗೆ ಮಾಡಿ ವ್ಯವಹರಿಸಲಾಗದಷ್ಟೆ. ಬ್ರಹ್ಮನಿಂದೆ ಎಂದರೆ ಜ್ಞಾನವನ್ನು ತಿರಸ್ಕರಿಸಿದಂತೆಯೇ ತಾನೆ. ಯಾರು ತನಗೆ ಜ್ಞಾನದ ಅವಶ್ಯಕತೆ ಇಲ್ಲವೆನ್ನುವರೋ ಆ ವ್ಯಕ್ತಿ ಸಹಜವಾಗಿಯೇ ಅಧಃಪಾತಕ್ಕೆ ಇಳಿದಂತೆಯೇ. ಯಾರು ತನಗೆ ಜ್ಞಾನದ ಬೇಕೆನ್ನುವರೋ ಅವರೆಂದಿಗೂ ಇಂತಹ ನೀಚ ಕೆಲಸಕ್ಕೆ ಕೈ ಹಾಕಲಾರರು.
ಆದರೆ ಇವತ್ತು ಏನಾಗಿದೆ ಎಂದರೆ ಯಾರು ಬ್ರಾಹ್ಮಣರನ್ನು ದೂಷಣೆ ಮಾಡುತ್ತಾನೋ, ಯಾರು ಬ್ರಾಹ್ಮಣರು ಮಾಡುವ ಪೂಜೆ ಹೋಮ ಹವನಗಳನ್ನು ಕೀಳಾಗಿ ಕಾಣುತ್ತಾನೋ, ಯಾರು ಬ್ರಾಹ್ಮಣರೊಡನೆ ಹಿಂದೂ ಧರ್ಮವನ್ನೇ ಗೇಲಿ ಮಾಡುತ್ತಾನೋ ಅವನಿಗೆ ವಿಚಾರವಾದಿ ಎಂಬ ಪಟ್ಟವನ್ನು ಕೊಟ್ಟು ಜ್ಞಾನ ಪೀಠವನ್ನೂ ಕೊಡುತ್ತಾರೆ ಎಂದರೆ ಮುಂದೆ ಬರುವ ಯಾವುದೋ ಗಂಡಾಂತರದ ಪ್ರಾಥಮಿಕ ಸೂಚನೆಯೇ ಆಗಿದೆ. ಇನ್ನು ಕೆಲವರು ಹೇಳಬಹುದು ಇಂತಹ ನೀಚ ಕೆಲಸಗಳಿಗೆ ಬ್ರಹ್ಮಶಾಪ ತಟ್ಟದೇ ಇರದು ಎಂದು. ಯಾಕೆಂದರೆ ಇವತ್ತು ಬೆರಳೆಣಿಕೆಯ ಕೆಲವರನ್ನು ಬಿಟ್ಟರೆ ಹೆಚ್ಚಿನವರು ಬ್ರಾಹ್ಮಣರಿಗೆ ಗೌರವ ಕೊಡುವುದಾದರೆ ಎಲ್ಲಿ ಬ್ರಹ್ಮಶಾಪ ತಗಲುವುದೋ ಎಂಬ ಭೀತಿಯಿಂದ ಹೊರತು ಪ್ರೀತಿಯಿಂದ ಅಥವಾ ಅಭಿಮಾನದಿಂದ ಖಂಡಿತ ಅಲ್ಲ.
ಏನೇ ಇರಲಿ ಎಲ್ಲಿವರೆಗೆ ಬ್ರಹ್ಮನಿಂದೆ ಅಂದರೆ ಜ್ಞಾನದ ಅವಗಣನೆಯಾಗುತ್ತಿರುವುದೋ ಅಲ್ಲಿವರೆಗೆ ಖಂಡಿತ ಯಾವ ಸಮಾಜವೂ ಉದ್ಧಾರವಾಗದು. ಅಷ್ಟು ಮಾತ್ರವಲ್ಲ ಬ್ರಹ್ಮಂನಿಂದೆಯಂತೆಯೇ ಇತರ ವರ್ಣದವರನ್ನು ಉಪೇಕ್ಷಿಸಿದರೂ ಅಥವಾ ಕೀಳಾಗಿ ಕಂಡರೂ ಸಮಾಜದ ಅಧಃಪತನವಂತು ಖಂಡಿತ. ಆದ್ದರಿಂದ ಯಾವುದೇ ವರ್ಣದವರನ್ನು ನೋಯಿಸುವ, ನಿಂದಿಸುವ, ತಮಾಷೆ ಮಾಡುವ ಪ್ರವೃತ್ತಿ ಸಲ್ಲದು. ನಿಮಗೆ ಪ್ರಚಾರಕ್ಕೆ ಬೇಕಾದಷ್ಟು ದಾರಿಗಳಿವೆ. ಅದು ಬಿಟ್ಟು ವಿಷಯ ದಾರಿದ್ರ್ಯತೆಗೊಳಗಾದವರಂತೆ ಇಷ್ಟು ಕೀಳು ಮಟ್ಟಕ್ಕೆ ಇಳಿದರೆ ಶಾಪವಾಗದೆ ವರವಾದೀತೇ..??
***********
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ
Key Words: Brahmin Community, Brahmins, ಬ್ರಾಹ್ಮಣ ಸಮುದಾಯ, ಬ್ರಾಹ್ಮಣ ನಿಂದನೆ, ಸಾಮಾಜಿಕ ಅಧಃಪತನ
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ