ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಎಸ್‌ಎಸ್‌ಐ ಮಂತ್ರ ಮೂಲಕ ಹೃದಯ ಬಡಿಯುತ್ತಿರುವಾಗಲೇ ಬೈಪಾಸ್
ಮಂಗಳೂರು: ಭಾರತದ ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಸಂಪೂರ್ಣ ದೇಶೀಯ ಎಸ್‌ಎಸ್‌ಐ ಮಂತ್ರ (SSI Mantra) ರೋಬೋಟಿಕ್ ಸಿಸ್ಟಮ್ ಬಳಸಿ, ವಿಶ್ವದಲ್ಲೇ ಮೊದಲ ಬಾರಿಗೆ ಡ್ಯುಯಲ್-ಕನ್ಸೋಲ್ ಮತ್ತು ಐದು-ತೋಳುಗಳ ರೋಬೋಟಿಕ್ ಬೀಟಿಂಗ್-ಹಾರ್ಟ್ ಟೆಕ್ಯಾಬ್ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.
ಭಾರತದಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ ಪಿತಾಮಹ ಡಾ. ಸುಧೀರ್ ಶ್ರೀವಾಸ್ತವ ಅವರ ಮೇಲ್ವಿಚಾರಣೆಯಲ್ಲಿ, ಮೇದಾಂತ ಆಸ್ಪತ್ರೆಯ ಡಾ. ನಿತಿನ್ ಕುಮಾರ್ ರಜಪೂತ್ ಮತ್ತು ಜೈಪುರ ಮಣಿಪಾಲ್ ಆಸ್ಪತ್ರೆಯ ಡಾ. ಲಲಿತ್ ಮಲಿಕ್ ಎರಡು ಪ್ರತ್ಯೇಕ ಕನ್ಸೋಲ್‌ಗಳನ್ನು ಬಳಸಿ ಈ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದರು. ಸಾಂಪ್ರದಾಯಿಕ ಬೈಪಾಸ್‌ನಂತೆ ಎದೆಯನ್ನು ಪೂರ್ಣವಾಗಿ ತೆರೆಯದೆ, ಕೇವಲ ಸಣ್ಣ ರಂಧ್ರಗಳ ಮೂಲಕ ಹಾಗೂ ಹಾರ್ಟ್-ಲಂಗ್ ಯಂತ್ರದ ನೆರವಿಲ್ಲದೆ ಹೃದಯ ಸಹಜವಾಗಿ ಬಡಿಯುತ್ತಿರುವಾಗಲೇ ಈ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಲಾಯಿತು. ಶಸ್ತ್ರಚಿಕಿತ್ಸೆಯ ನಂತರದ 15 ದಿನಗಳಲ್ಲಿ ರೋಗಿಯ ಚೇತರಿಕೆ ಆಶಾದಾಯಕವಾಗಿದೆ.
ಈ ಸಾಧನೆ ಕುರಿತು ಪ್ರತಿಕ್ರಿಯಿಸಿದ ಮೇದಾಂತ ಅಧ್ಯಕ್ಷ ಡಾ. ನರೇಶ್ ಟ್ರೆಹಾನ್, "ರೋಬೋಟಿಕ್ ತಂತ್ರಜ್ಞಾನವು ಸಂಕೀರ್ಣ ಹೃದಯ ಚಿಕಿತ್ಸೆಯನ್ನು ರೋಗಿಗಳಿಗೆ ಎಷ್ಟು ಸುಲಭವಾಗಿಸಬಲ್ಲದು ಎಂಬುದಕ್ಕೆ ಈ ಶಸ್ತ್ರಚಿಕಿತ್ಸೆ ಸಾಕ್ಷಿ. ಭಾರತದ ಹೃದಯ ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ ಇದೊಂದು ಮಹತ್ವದ ಹೆಜ್ಜೆ" ಎಂದರು.
ಎಸ್‌ಎಸ್ ಇನ್ನೋವೇಷನ್ಸ್ ಸಂಸ್ಥಾಪಕ ಮತ್ತು ಸಿಇಒ ಡಾ. ಸುಧೀರ್ ಶ್ರೀವಾಸ್ತವ ಮಾತನಾಡಿ, "ಮೇಕ್ ಇನ್ ಇಂಡಿಯಾ, ಫಾರ್ ದಿ ವರ್ಲ್ಡ್ ದೃಷ್ಟಿಕೋನದಡಿ ವಿಶ್ವದರ್ಜೆಯ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಎಲ್ಲರಿಗೂ ಕೈಗೆಟುಕುವ ದರದಲ್ಲಿ ಒದಗಿಸುವ ನಮ್ಮ ಗುರಿಗೆ ಈ ಮೈಲಿಗಲ್ಲು ಮತ್ತಷ್ಟು ಬಲ ತುಂಬಿದೆ" ಎಂದು ಹರ್ಷ ವ್ಯಕ್ತಪಡಿಸಿದರು.
ಡಾ. ನಿತಿನ್ ಕುಮಾರ್ ರಜಪೂತ್ ಮಾತನಾಡಿ, "ಐದು ರೋಬೋಟಿಕ್ ತೋಳುಗಳು ಮತ್ತು ಎರಡು ಕಂಟ್ರೋಲ್ ಕನ್ಸೋಲ್‌ಗಳನ್ನು ಬಳಸಿ ಬೀಟಿಂಗ್-ಹಾರ್ಟ್ ಬೈಪಾಸ್ ನಡೆಸಲು ಅಪಾರ ನಿಖರತೆ ಮತ್ತು ಸಮನ್ವಯ ಅಗತ್ಯ. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯ ಚೇತರಿಕೆ ಆಶಾದಾಯಕವಾಗಿದ್ದು, ಮಿನಿಮಲಿ ಇನ್ವೇಸಿವ್ ತಂತ್ರಜ್ಞಾನದ ಸಾಮರ್ಥ್ಯವನ್ನು ಇದು ಸಾಬೀತುಪಡಿಸಿದೆ" ಎಂದರು.
ಡಾ. ಲಲಿತ್ ಮಲಿಕ್ ಪ್ರತಿಕ್ರಿಯಿಸಿ, "ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆಯ ವಿಕಸನದಲ್ಲಿ ಇದೊಂದು ಪ್ರಮುಖ ಹೆಜ್ಜೆ. ಡ್ಯುಯಲ್-ಕನ್ಸೋಲ್ ವ್ಯವಸ್ಥೆಯು ಇಬ್ಬರು ಶಸ್ತ್ರಚಿಕಿತ್ಸಕರ ನಡುವೆ ಉತ್ತಮ ಸಮನ್ವಯಕ್ಕೆ ಅವಕಾಶ ನೀಡಿದರೆ, ಐದು-ತೋಳುಗಳ ವಿನ್ಯಾಸವು ತಾಂತ್ರಿಕ ಸವಾಲುಗಳನ್ನು ಸುಲಭಗೊಳಿಸಿತು" ಎಂದು ತಿಳಿಸಿದರು. ಈ ಡ್ಯುಯಲ್-ಕನ್ಸೋಲ್ ತಂತ್ರಜ್ಞಾನವು ಎರಡನೇ ಶಸ್ತ್ರಚಿಕಿತ್ಸಕರಿಗೆ ನೇರವಾಗಿ ತರಬೇತಿ ಪಡೆಯಲು ಅತ್ಯುತ್ತಮ ವೇದಿಕೆಯನ್ನೂ ಒದಗಿಸುತ್ತದೆ.

