ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ 'ಜಾಗೃತಿ ಅರಿವು ಸಪ್ತಾಹ- 2026' ಕಾರ್ಯಕ್ರಮ

Upayuktha
0

ಅರಿವೆಂಬ ಅಸ್ತ್ರದಿಂದ ಭ್ರಷ್ಟಚಾರ ಮುಕ್ತ ಸಮಾಜದ ನಿರ್ಮಾಣ ಸಾಧ್ಯ: ಪ್ರಮೋದ್ ಕುಮಾರ್ ಬಿ.




ಪುತ್ತೂರು: ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ (ಎನ್.ಎಸ್.ಎಸ್.) ಘಟಕದ ವತಿಯಿಂದ ಭ್ರಷ್ಟಾಚಾರ ವಿರೋಧಿ 'ಜಾಗೃತಿ ಅರಿವು ಸಪ್ತಾಹ'ದ ಪ್ರಯುಕ್ತ ವಿಶೇಷ ಉಪನ್ಯಾಸ ಹಾಗೂ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ಜರುಗಿತು.


ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪುತ್ತೂರು ವಿಭಾಗದ ಉಪ ಪೊಲೀಸ್ ಆಧ್ಯಕ್ಷರಾದ ಪ್ರಮೋದ್ ಕುಮಾರ್ ಬಿ. ಅವರು ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸಿ, 'ಆಡಳಿತದಲ್ಲಿ ಭ್ರಷ್ಟಾಚಾರ ತಡೆ ನಿಯಮಗಳು' ಕುರಿತು ಉಪನ್ಯಾಸ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಭ್ರಷ್ಟಾಚಾರವೆಂದರೆ ಕೇವಲ ಹಣದ ವಹಿವಾಟು ಅಥವಾ ಲಂಚ ಪಡೆಯುವುದಲ್ಲ; ಸಮಾಜದ ವ್ಯವಸ್ಥೆಯನ್ನೇ ಬುಡಮೇಲು ಮಾಡುವುದು. ರೈತರು ದಾಖಲೆಗಳಿಗಾಗಿ, ವೃದ್ಧರು ಪಿಂಚಣಿಗಾಗಿ ಕಚೇರಿಗಳಿಗೆ ಅಲೆದಾಡುವುದು ಅವರ ಸಮಯ ಮತ್ತು ಆತ್ಮಗೌರವವನ್ನು ಕಸಿದುಕೊಳ್ಳುತ್ತದೆ. ಯುವಕರು ಲಂಚ ಅಥವಾ ಶಿಫಾರಸ್ಸಿನಿಂದ ಅವಕಾಶಗಳನ್ನು ಕಳೆದುಕೊಂಡರೆ ಅವರ ಭವಿಷ್ಯವೇ ಕತ್ತಲಾಗುತ್ತದೆ. ಇಂತಹ ಆಡಳಿತಾತ್ಮಕ ಲೋಪಗಳಿಂದ ಸಾರ್ವಜನಿಕರಿಗೆ ಸರ್ಕಾರದ ಮೇಲಿನ ನಂಬಿಕೆ ಹೊರಟುಹೋಗುತ್ತದೆ" ಎಂದರು.


ಮುಂದುವರಿದು, ಭ್ರಷ್ಟಾಚಾರ ನಡೆದ ಬಳಿಕ ಕ್ರಮ ಕೈಗೊಳ್ಳುವುದಕ್ಕಿಂತ ಅದು ಸಂಭವಿಸದಂತೆ ವ್ಯವಸ್ಥೆಯನ್ನು ಬಲಪಡಿಸುವುದು ಮುಖ್ಯ. ಅಧಿಕಾರಿಗಳು ಸ್ವಯಂಪ್ರೇರಿತರಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು. ಜಾಗೃತಿ ಸಪ್ತಾಹದ ಆಚರಣೆಯಷ್ಟೇ ಅಲ್ಲದೆ, ವರ್ಷಪೂರ್ತಿ ಜಾಗರೂಕರಾಗಿ ದೇಶದ ಬೆಳವಣಿಗೆಗೆ ಶ್ರಮಿಸಬೇಕು ಹಾಗೂ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ ಎಂದು ತಿಳಿಸಿ, ವಿವಿಧ ಭ್ರಷ್ಟಾಚಾರ ವಿರೋಧಿ ಕಾನೂನುಗಳನ್ನು ವಿವರಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಯಶೋಧರ್ ಜೈನ್ ಮಾತನಾಡಿ, "ಪ್ರಾಮಾಣಿಕತೆ ಎಂಬುದು ನಮ್ಮ ವ್ಯಕ್ತಿತ್ವದ ಅಡಿಪಾಯ ಮತ್ತು ನೈತಿಕ ಮೌಲ್ಯಗಳ ದಿಕ್ಸೂಚಿ. ಸರ್ಕಾರಿ ನೌಕರರು ಸಿಕ್ಕ ಸೀಮಿತ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿ ಜನಸಾಮಾನ್ಯರ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸಿದಾಗ ಭ್ರಷ್ಟಾಚಾರ ಕೊನೆಗೊಳ್ಳುತ್ತದೆ" ಎಂದು ಕರೆ ನೀಡಿದರು.


ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಕ್ಷತಾ ಎ. ಪಿ. ಹಾಗೂ ಕಾನೂನು ಸಹಾಯಕ ಪ್ರಾಧ್ಯಾಪಕಿ ಮತ್ತು ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಮಾಳವಿಕ ಎಚ್.ವಿ. ಉಪಸ್ಥಿತರಿದ್ದರು.


ಎನ್.ಎಸ್.ಎಸ್. ವಿದ್ಯಾರ್ಥಿ ನಾಯಕ ರೋಶಿನ್ ಸ್ವಾಗತಿಸಿ, ವಿದ್ಯಾರ್ಥಿನಿ ಪ್ರಣಾಮ್ಯ ಕಾಮತ್ ವಂದಿಸಿದರು. ಕೀರ್ತಿ ಕೆ. ಆರ್. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರು, ವಕೀಲರು, ಶಿಕ್ಷಕ-ರಕ್ಷಕ ಸಂಘ, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top