ಸುರಕ್ಷಿತ ಬಾಲ್ಯಕ್ಕೆ ಶಾಲಾ ಹಂತದಲ್ಲೇ ಮಕ್ಕಳಿಗೆ ಕಾನೂನಿನ ಅರಿವು ಅಗತ್ಯ

Upayuktha
0



ಹಾಸನ: ಸುರಕ್ಷಿತ ಬಾಲ್ಯವೇ ಸಮೃದ್ಧ ದೇಶಕ್ಕೆ ಭದ್ರ ಬುನಾದಿ. ಶಾಲಾ ಹಂತದಲ್ಲೇ ಮಕ್ಕಳಿಗೆ ಕಾನೂನಿನ ಅರಿವು ನೀಡುವುದರಿಂದ ಅವರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮಕ್ಕಳು ತಮ್ಮ ಸುತ್ತಮುತ್ತಲಿನ ವಾತಾವರಣದ ಬಗ್ಗೆ, ಅಪರಿಚಿತರ ನಡವಳಿಕೆ ಬಗ್ಗೆ ಹಾಗೂ ತಮ್ಮ ಸುರಕ್ಷತೆಯ ಬಗ್ಗೆ ಸ್ವಯಂ ಜಾಗೃತರಾಗಿರಬೇಕು ಎಂದು ಉಪಪ್ರಾಂಶುಪಾಲರಾದ ಮಂಜುನಾಥ್ ರವರು ಹೇಳಿದರು.


ನಗರದ ಆರ್.ಸಿ.ರಸ್ತೆಯ ಜಿ.ಜಿ.ಜಿ.ಸಿ(ಪ್ರಧಾನ), ಪ್ರೌಢಶಾಲಾ ವಿಭಾಗದಲ್ಲಿ ಏರ್ಪಾಟಾಗಿದ್ದ ಪ್ಯಾನ್ ಇಂಡಿಯಾ ಅರಿವು ನೆರವು ಮೊದಲ ಹಂತದಲ್ಲಿ ಆಯೋಜಿಸಿದ್ದ ಮಕ್ಕಳಿಗಾಗಿ ಕಾನೂನು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಕ್ಕಳು ತಮ್ಮ ಮೇಲಾಗುವ ಯಾವುದೇ ರೀತಿಯ ದೌರ್ಜನ್ಯ, ತಾರತಮ್ಯ ಅಥವಾ ತೊಂದರೆಗಳ ಬಗ್ಗೆ ಮೌನವಾಗಿರದೆ, ಮುಕ್ತವಾಗಿ ಮಾತನಾಡಲು ಕಲಿಯಬೇಕು. ತಮಗಾಗುವ ಸಮಸ್ಯೆಗಳನ್ನು ತಂದೆ-ತಾಯಿ, ಶಿಕ್ಷಕರು ಅಥವಾ ನಂಬಿಕಸ್ಥ ಹಿರಿಯರಿಗೆ ತಕ್ಷಣ ತಿಳಿಸಬೇಕು. ಪ್ರತಿಯೊಬ್ಬ ಮಗುವೂ ತನ್ನ ಸ್ವಂತ ಸುರಕ್ಷತೆಯ ಜೊತೆಗೆ ತನ್ನ ಸುತ್ತಮುತ್ತಲಿನ ಇತರ ಮಕ್ಕಳ ಹಕ್ಕುಗಳನ್ನು ಗೌರವಿಸಿ ರಕ್ಷಿಸುವ ಹೊಣೆ ಹೊಂದಿರಬೇಕು ಎಂದರು.


ಕಾರ್ಯಕ್ರಮದ ಸಂಚಾಲಕರು ಮತ್ತು ಸಮಾಜ ವಿಜ್ಞಾನ ವಿಷಯ ಶಿಕ್ಷಕರಾದ ಕೆ.ಎನ್. ಚಿದಾನಂದ ಮಾತನಾಡಿ ಮಕ್ಕಳು ದೇಶದ ಆಶಾಕಿರಣ ಹಾಗೂ ನಾಳಿನ ಸಶಕ್ತ ಭಾರತದ ಶಿಲ್ಪಿಗಳು. ಪ್ರತಿಯೊಂದು ಮಗುವಿಗೂ ಸುರಕ್ಷಿತ, ಆರೋಗ್ಯಕರ ಹಾಗೂ ಭಯರಹಿತ ವಾತಾವರಣದಲ್ಲಿ ಬೆಳೆಯುವ ಹಕ್ಕಿದೆ. ಆದರೆ, ಮಕ್ಕಳ ಮೇಲಿನ ಶೋಷಣೆ ಮತ್ತು ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಅವರಿಗೆ ತಮ್ಮ ಮೂಲಭೂತ ಹಕ್ಕುಗಳ ಹಾಗೂ ಕಾನೂನಿನ ಅರಿವು ಇರುವುದು ಅತ್ಯಂತ ಅವಶ್ಯಕ. ಈ ದಿಸೆಯಲ್ಲಿ ಮಕ್ಕಳ ರಕ್ಷಣೆ ಹಾಗೂ ಕಾನೂನಾತ್ಮಕ ಜಾಗೃತಿ ಮೂಡಿಸುವ ಮಹತ್ತರ ಉದ್ದೇಶದಿಂದ "ಪ್ಯಾನ್ ಇಂಡಿಯಾ- ಮಕ್ಕಳ ಹಕ್ಕುಗಳು- ಕಾನೂನು ಅರಿತು ನೆರವು ಕಾರ್ಯಕ್ರಮ"ವನ್ನು ಶಾಲೆಯಲ್ಲಿ ಅತ್ಯಂತ ಅರ್ಥಪೂರ್ಣವಾಗಿದೆ. ಈ ಕಾರ್ಯಕ್ರಮವು "ಎಚ್ಚರಿಕೆಯ ಬಾಲ್ಯ- ಸಶಕ್ತ ಭಾರತ" ಎಂಬ ಪ್ರೇರಣಾದಾಯಿ ಧ್ಯೇಯ ವಾಕ್ಯದೊಂದಿಗೆ ಜಾಗೃತಿಯ ಹೊಸ ಸಂಚಲನವನ್ನು ಮೂಡಿಸುತ್ತದೆ ಎಂದರು. ಪ್ಯಾನ್ ಇಂಡಿಯಾ  ಅಭಿಯಾನದ ಮೂಲಕ ಪ್ರತಿಯೊಂದು ಮಗುವಿಗೂ ತನ್ನ ಹಕ್ಕುಗಳ ಅರಿವನ್ನು ತಲುಪಿಸುವುದು ಇವರ ಮುಖ್ಯ ಉದ್ದೇಶವಾಗಿದೆ. ಪ್ರತಿಯೊಂದು ಮಗುವೂ ಶೋಷಣೆ ಮುಕ್ತ ವಾತಾವರಣದಲ್ಲಿ ಬೆಳೆಯಬೇಕು ಎಂದರು.


ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಕನ್ನಡ ಭಾಷಾ ವಿಷಯ ಶಿಕ್ಷಕರಾದ ರುದ್ರೇಶ್ ಅವರು ಮಾತನಾಡಿ ಮಕ್ಕಳ ರಕ್ಷಣೆಗಾಗಿ ದೇಶದಲ್ಲಿ ಹಲವು ಬಲವಾದ ಕಾನೂನುಗಳಿವೆ. ಪೊಕ್ಸೋ ಕಾಯ್ದೆ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು  ಕಾಯ್ದೆ ಹಾಗೂ ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆಗಳ ಬಗ್ಗೆ ಮಕ್ಕಳು ತಿಳಿದುಕೊಳ್ಳಬೇಕು. ಯಾವುದೇ ತೊಂದರೆ ಅಥವಾ ಅಪಾಯ ಎದುರಾದಾಗ ತಕ್ಷಣವೇ 1098 ಉಚಿತ ತುರ್ತು ಸಹಾಯವಾಣಿಯನ್ನು ಸಂಪರ್ಕಿಸಬಹುದು" ಎಂದು ತಿಳಿಸಿದರು. ಪ್ರತಿಯೊಂದು ಮಗುವೂ ತನ್ನ ಹಕ್ಕುಗಳನ್ನು ತಿಳಿದುಕೊಳ್ಳಬೇಕು. ಪ್ರತಿಯೊಬ್ಬ ಪೋಷಕರೂ ಮಕ್ಕಳ ಸುರಕ್ಷತೆಯ ಬಗ್ಗೆ ಜಾಗೃತರಾಗಬೇಕು. ಪ್ರತಿಯೊಬ್ಬ ಶಿಕ್ಷಕರೂ ಮಕ್ಕಳಿಗೆ ಭಯರಹಿತ ಕಲಿಕಾ ವಾತಾವರಣ ಕಲ್ಪಿಸಬೇಕು. ಪ್ರತಿಯೊಬ್ಬ ನಾಗರಿಕನೂ ಮಕ್ಕಳ ಹಕ್ಕುಗಳನ್ನು ಉಲ್ಲಂಘನೆ ಮಾಡಿದಂತೆ ಕಟ್ಟುನಿಟ್ಟಿನ ಎಚ್ಚರಿಕೆವಹಿಸಬೇಕು. ಆಗ ಮಾತ್ರ ಎಚ್ಚರಿಕೆಯ ಬಾಲ್ಯ ಸಶಕ್ತ ಭಾರತದ ನಿರ್ಮಾಣ ಸಾಧ್ಯ ಎಂದರು.


ಶಿಕ್ಷಕರಾದ ತೈಬಾ ಕೌಸರ್ ಮತ್ತು ಎ.ವಿ. ಗೀತಾರಾಣಿ ಅವರು ದಿನನಿತ್ಯದ ಶಾಲಾ ಜೀವನದಲ್ಲಿ ವಿದ್ಯಾರ್ಥಿಗಳು ವಹಿಸಬೇಕಾದ ಮುನ್ನೆಚ್ಚರಿಕೆಗಳನ್ನು ವಿವರಿಸಿ, ಯಾವುದೇ ತೊಂದರೆಯಿದ್ದರೂ ಶಿಕ್ಷಕರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಜಾಗೃತಿ ಸಂವಾದ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ತಮ್ಮ ಶಂಕೆಗಳನ್ನು ಕೇಳಿ ಸೂಕ್ತ ಕಾನೂನು ಮಾಹಿತಿಯನ್ನು ಪಡೆದುಕೊಂಡರು. "ಎಚ್ಚರಿಕೆಯ ಬಾಲ್ಯ- ಸಶಕ್ತ ಭಾರತ" ಎಂಬ ಆಶಯದೊಂದಿಗೆ, ಮಕ್ಕಳ ಸುರಕ್ಷತೆಗೆ ಪ್ರತಿಯೊಬ್ಬರೂ ಬದ್ಧರಾಗಿರಬೇಕೆಂಬ ಪ್ರತಿಜ್ಞೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top