ಶಿವಮೊಗ್ಗ: ಭದ್ರಾವತಿಯ ಮೂರು ತಿಂಗಳ ಗಂಡು ಮಗುವಿನ ಎರಡೂ ಕಣ್ಣುಗಳಲ್ಲಿ ಕಂಡುಬಂದ ತೀವ್ರ ಜನ್ಮಜಾತ ಪೊರೆಗೆ ಬೆಂಗಳೂರಿನ ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಜನನದಿಂದಲೇ ಮಗುವಿನ ಕಣ್ಣುಗಳಿಗೆ ಬೆಳಕು ಪ್ರವೇಶಿಸುವುದನ್ನು ಈ ಪೊರೆ ತಡೆಯುತ್ತಿತ್ತು. ಇದರಿಂದ ಮಗುವಿನ ದೃಷ್ಟಿ ಬೆಳವಣಿಗೆಗೆ ಅಪಾಯ ಉಂಟಾಗಿತ್ತು. ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಶ್ರೀಗಣೇಶ್ ನೇತೃತ್ವದಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಲಾಯಿತು.
ಪೊರೆಯನ್ನು ತೆಗೆದುಹಾಕಿದ ನಂತರ, ಮಗುವಿನ ದೃಷ್ಟಿ ಬೆಳವಣಿಗೆಗೆ ನೆರವಾಗಲು ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮತ್ತು ದೃಷ್ಟಿ ಪುನರ್ವಸತಿ ಚಿಕಿತ್ಸೆ ನೀಡಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಮಗುವಿನ ಪೋಷಕರು, ಮಗುವಿಗೆ ಎರಡು ತಿಂಗಳಾಗಿದ್ದಾಗ ಎರಡೂ ಕಣ್ಣುಗಳ ಕಪ್ಪು ಭಾಗದಲ್ಲಿ ಹಾಲಿನಂತೆ ಬಿಳಿ ಬಣ್ಣ ಕಾಣಿಸಿಕೊಂಡಿರುವುದನ್ನು ಮೊದಲಿಗೆ ಗಮನಿಸಿ ನೇತ್ರಧಾಮಕ್ಕೆ ಭೇಟಿ ನೀಡಿದರು.
ನೇತ್ರಧಾಮದಲ್ಲಿ ವೈದ್ಯಕೀಯ ತಂಡವು ಮಗುವಿನ ಗರ್ಭಾವಸ್ಥೆಯ ಇತಿಹಾಸ ಸೇರಿದಂತೆ ಸಮಗ್ರ ವೈದ್ಯಕೀಯ ತಪಾಸಣೆ ನಡೆಸಿತು. ಗರ್ಭಾವಸ್ಥೆಯ ಮೂರನೇ ತ್ರೈಮಾಸಿಕದಲ್ಲಿ ತಾಯಿಗೆ ಜ್ವರ ಮತ್ತು ಚರ್ಮದ ಮೇಲೆ ದದ್ದುಗಳು ಕಾಣಿಸಿಕೊಂಡಿದ್ದವು ಎಂದು ತಿಳಿದುಬಂದಿತು. ಜನ್ಮಜಾತ ಸೋಂಕಿನಿಂದ ಎರಡೂ ಕಣ್ಣುಗಳಲ್ಲಿ ಪೊರೆ ಉಂಟಾಗಿರುವುದು ದೃಢಪಟ್ಟ ಬಳಿಕ ಮಗುವಿನ ಅತಿ ಚಿಕ್ಕ ವಯಸ್ಸು ಮತ್ತು ಕಣ್ಣುಗಳ ನಿರಂತರ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಶಸ್ತ್ರಚಿಕಿತ್ಸೆಯ ಯೋಜನೆ ರೂಪಿಸಲಾಯಿತು ಎಂದು ಡಾ. ಶ್ರೀ ಗಣೇಶ್ ಮತ್ತು ನಿರ್ದೇಶಕ ಡಾ. ಸುಮನ್ ಶ್ರೀ ಆರ್ ಹೇಳಿದ್ದಾರೆ.
ಇದಲ್ಲದೆ, 31 ವಾರಗಳಲ್ಲೇ ಅಕಾಲಿಕವಾಗಿ ಜನಿಸಿದ ಮಗುವಿಗೂ ವೈದ್ಯಕೀಯ ತಂಡವು ಶಸ್ತ್ರಚಿಕಿತ್ಸೆ ನಡೆಸಿದೆ. 2024ರಲ್ಲಿ, ಎಂಟು ತಿಂಗಳ ಹೆಣ್ಣು ಮಗುವಿನ ಎರಡೂ ಕಣ್ಣುಗಳಲ್ಲಿ ಕಂಡುಬಂದ ಹಿಂಭಾಗದ ಧ್ರುವೀಯ ಜನ್ಮಜಾತ ಪಪೊರೆಗೆ ಚಿಕಿತ್ಸೆ ನೀಡಲಾಗಿತ್ತು. ವಿಶೇಷವೆಂದರೆ, ಆ ಮಗುವಿನ ತಾಯಿಗೂ ಬಾಲ್ಯದಲ್ಲಿ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು ಎಂದು ಪ್ರಕಟಣೆ ಹೇಳಿದೆ.

