ಪ್ರಾಚೀನ ಗ್ರಂಥಗಳ ಅಧ್ಯಯನದಿಂದ ಸಮಾನತೆಯ ಅಪಾರ್ಥ ದೂರ: ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ

Shreya Hegde
0



ಉಡುಪಿ: ಪ್ರಾಚೀನ ಧರ್ಮಗ್ರಂಥಗಳು ಹಾಗೂ ದಾರ್ಶನಿಕರ ಸಂದೇಶಗಳ ಹೃತ್ಪೂರ್ವಕ ಅಧ್ಯಯನ ನಡೆದರೆ ಸಮಾನತೆಯ ಕುರಿತಾದ ಅಪಾರ್ಥಗಳು ಮತ್ತು ಗೊಂದಲಗಳಿಗೆ ಅವಕಾಶವೇ ಇರುವುದಿಲ್ಲ ಎಂದು ಉಡುಪಿ ಶ್ರೀ ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟಿದ್ದಾರೆ.


ಉಡುಪಿ ಜಿಲ್ಲೆಯ ಚೇರ್ಕಾಡಿ ಗ್ರಾಮದ ರಾಷ್ಟ್ರೋತ್ಥಾನ ಶಾಲಾ ಆವರಣದಲ್ಲಿ ಸಾಮರಸ್ಯ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತದ ಸಂಯೋಜನೆಯಲ್ಲಿ ಆಯೋಜಿಸಲಾದ ಎರಡು ದಿನಗಳ ರಾಷ್ಟ್ರೀಯ ಗೋಷ್ಠಿಯ ಅಂಗವಾಗಿ ‘ಹಿಂದವಃ ಸೋದರಾಃ ಸರ್ವೇ’ ಶೀರ್ಷಿಕೆಯ ಚಿಂತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವೇದ, ಉಪನಿಷತ್ತು, ಪುರಾಣ, ಮಹಾಭಾರತ, ಭಗವದ್ಗೀತೆ, ಮನುಸ್ಮೃತಿ ಹಾಗೂ ಆಚಾರ್ಯ ಮಧ್ವರೇ ಮೊದಲಾದ ದಾರ್ಶನಿಕರ ಸಂದೇಶಗಳನ್ನು ಕೆಲವರು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸುತ್ತಿರುವುದರಿಂದ ಸಮಾನತೆಯ ಪರಿಕಲ್ಪನೆಯ ಬಗ್ಗೆ ಅನೇಕ ಗೊಂದಲಗಳು ಉಂಟಾಗಿವೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.


ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳಿದ ‘ಪಂಡಿತಾಃ ಸಮದರ್ಶಿನಃ’ ಎಂಬ ವಾಕ್ಯಕ್ಕೆ ಆಚಾರ್ಯ ಮಧ್ವರು ನೀಡಿರುವ ವ್ಯಾಖ್ಯಾನವನ್ನು ಉಲ್ಲೇಖಿಸಿದ ಅವರು, ಪ್ರಾಜ್ಞರು ಭಿನ್ನ ಸಾಮರ್ಥ್ಯ ಮತ್ತು ಭಿನ್ನ ಯೋಗ್ಯತೆಯ ಎಲ್ಲ ಜೀವಿಗಳಲ್ಲೂ ‘ಸಮ’ ಎಂಬ ಹೆಸರಿನ ಭಗವಂತನನ್ನೇ ಕಾಣುತ್ತಾರೆ; ಅವರವರ ಯೋಗ್ಯತೆಗೆ ತಕ್ಕಂತೆ ಗೌರವಿಸುತ್ತಾರೆಯೇ ಹೊರತು ಯಾರನ್ನೂ ಕೀಳಾಗಿ ಕಾಣುವುದಿಲ್ಲ ಎಂದರು. ಮನೆಯಲ್ಲಿರುವ ಪುಟ್ಟ ಮಗು, ಬಲಿಷ್ಠ ಯುವಕ ಮತ್ತು ವೃದ್ಧರಿಗೆ ತಾಯಿಯು ಅವರವರ ಜೀರ್ಣಶಕ್ತಿಗೆ ಅನುಗುಣವಾಗಿ ಆಹಾರ ನೀಡುವಂತೆ, ಆಚಾರ್ಯ ಮಧ್ವರು ಪ್ರತಿಪಾದಿಸಿದ ಸಮಾನತೆಯೂ ಇದೇ ಆಗಿದೆ ಎಂದು ವಿವರಿಸಿದರು.


ಸಮತ್ವದ ವಿಷಯದಲ್ಲಿ ವಿಷಮತ್ವ ಮತ್ತು ವಿಷಮತ್ವದ ವಿಷಯದಲ್ಲಿ ಸಮತ್ವ—ಈ ಎರಡೂ ಸರಿಯಲ್ಲ ಎಂದು ತಿಳಿಸಿದ ಶ್ರೀಗಳು, ಪರಿಶ್ರಮದಿಂದ ಉತ್ತಮ ಅಂಕ ಗಳಿಸಿದವರು ಗುಮಾಸ್ತರಾಗಿ, ಶ್ರಮವಿಲ್ಲದೆ ಕಡಿಮೆ ಅಂಕ ಪಡೆದವರು ಉನ್ನತ ಅಧಿಕಾರಿಗಳಾದರೆ ಅದು ಸಮಾನತೆಯಾಗುವುದಿಲ್ಲ; ಇದರಿಂದ ಸಮಾಜದಲ್ಲಿ ಅನರ್ಥವೇ ಹೆಚ್ಚು ಸಂಭವಿಸುತ್ತದೆ ಎಂದರು. ವಿದ್ಯೆ, ಅನ್ನ, ವಸತಿ ಮುಂತಾದ ಮೂಲಸೌಕರ್ಯಗಳು ಎಲ್ಲರಿಗೂ ಯಥಾಯೋಗ್ಯವಾಗಿ ದೊರೆಯುವಂತೆ ನೋಡಿಕೊಳ್ಳುವುದೇ ಸಮಾನತೆಯನ್ನು ಸಾಧಿಸುವ ಮೆಟ್ಟಿಲು ಎಂದು ಅವರು ಪ್ರತಿಪಾದಿಸಿದರು.


ಸಮಾರಂಭದಲ್ಲಿ ಪ್ರಸ್ತಾಪಿಸಿದ ಪ್ರಮುಖ ವಿಚಾರಗಳು ಹೀಗಿವೆ:

ಕನಕದಾಸರ ಕೀರ್ತನೆ: ‘ಕುಲ ಕುಲ ಕುಲವೆಂದು ಹೊಡೆದಾಡದಿರು’ ಕೀರ್ತನೆಯ ಮೊದಲ ಸಾಲನ್ನು ಮಾತ್ರ ಉದ್ಧರಿಸಿ ಮಾತನಾಡುವ ಅನೇಕರು, ಕೊನೆಯಲ್ಲಿ ಬರುವ ‘ಆದಿಕೇಶವನ ಚರಣಸೇವಕನೇ ಕುಲಜ’ ಎಂಬ ಶುದ್ಧ ಹರಿಭಕ್ತಿಯ ಸಾಲನ್ನು ಬುದ್ಧಿಪೂರ್ವಕವಾಗಿ ಮರೆಮಾಚುತ್ತಾರೆ ಅಥವಾ ಓದುವ ಪ್ರಯತ್ನವನ್ನೇ ಮಾಡುವುದಿಲ್ಲ.


ಮನುಸ್ಮೃತಿ ಮತ್ತು ಟೀಕೆ: ಕ್ಷತ್ರಿಯನಾದ ಮನು ಚಕ್ರವರ್ತಿ ರಚಿಸಿದ ಮನುಸ್ಮೃತಿಯಲ್ಲಿ ಎಲ್ಲರಿಗಿಂತ ಹೆಚ್ಚು ನಿರ್ಬಂಧಗಳನ್ನು ಬ್ರಾಹ್ಮಣರಿಗೇ ವಿಧಿಸಲಾಗಿದೆ; ಆದರೂ ‘ಮನುವಾದಿಗಳು’ ಎಂದು ಟೀಕೆ ಮತ್ತು ಆಕ್ರೋಶಕ್ಕೆ ಗುರಿಯಾಗುತ್ತಿರುವವರು ಯಾರು ಎಂಬುದನ್ನು ಗಮನಿಸಬೇಕು.


ರಾಮಾಯಣದ ಪ್ರಸಂಗ: ಶಂಭೂಕನನ್ನು ಸಂಹರಿಸಿದ ರಾಮನೇ ಶಬರಿಯನ್ನೂ ಉದ್ಧರಿಸಿದ್ದಾನೆ; ಇಬ್ಬರೂ ಇಂದಿನ ಪರಿಭಾಷೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರೂ ರಾಮ ಹೀಗೆ ವರ್ತಿಸಿದ್ದೇಕೆ, ವಾಲ್ಮೀಕಿ ಹೀಗೆ ಚಿತ್ರಿಸಿದ್ದೇಕೆ ಎಂಬುದರ ಹಿಂದೆ ಆಳವಾದ ಅರ್ಥವಿದೆ.


ಪ್ರಜಾತಾಂತ್ರಿಕ ಪ್ರೊಟೋಕಾಲ್: ಪ್ರಧಾನಿ, ಮುಖ್ಯಮಂತ್ರಿ, ಸಚಿವರು ಮುಂತಾದ ಪ್ರಜಾತಾಂತ್ರಿಕ ಪ್ರೊಟೋಕಾಲ್ ವ್ಯವಸ್ಥೆಯ ಗ್ರೇಡಿಂಗ್ ಅನ್ನು ಕೆಳಮೇಲು ಮಾಡಲು ಸಾಧ್ಯವಿದೆಯೇ, ಹಾಗೆ ಮಾಡಿದರೆ ಏನಾಗಬಹುದು ಎಂಬುದನ್ನೂ ಯೋಚಿಸಬೇಕು.


‘ತಾರತಮ್ಯ’ ಎಂಬ ಪದವೂ ಹೆಚ್ಚಾಗಿ ಅಪದ್ಧ ವ್ಯಾಖ್ಯಾನಕ್ಕೆ ಒಳಗಾಗುತ್ತಿದೆ ಎಂದು ಹೇಳಿದ ಶ್ರೀ ಈಶಪ್ರಿಯ ತೀರ್ಥರು, ಹೊಸ ತಲೆಮಾರಿನ ಯುವಕರಿಗೆ ಸಂಸ್ಕೃತ ಭಾಷೆಯ ಶಿಕ್ಷಣ ಹಾಗೂ ಭಾರತೀಯ ಅಧ್ಯಾತ್ಮ ಗ್ರಂಥಗಳು ಮತ್ತು ದಾರ್ಶನಿಕರ ಸಂದೇಶಗಳ ಹೃತ್ಪೂರ್ವಕ ಅಧ್ಯಯನಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಬೇಕು ಎಂದರು. ಇದರಿಂದ ಕನಿಷ್ಠ ಒಂದೆರಡು ದಶಕಗಳ ನಂತರವಾದರೂ ಸಮಾನತೆಯ ನೈಜ ವ್ಯಾಖ್ಯಾನದ ಸಹ್ಯ ವಾತಾವರಣ ಸಮಾಜದಲ್ಲಿ ನಿರ್ಮಾಣವಾಗಿ ದೇಶಕ್ಕೆ ಒಳಿತಾಗಲಿದೆ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಡಾ. ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಉಪಸ್ಥಿತರಿದ್ದು ಪ್ರಧಾನ ಉಪನ್ಯಾಸ ಮಂಡಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top