ಸುರತ್ಕಲ್: "ಭಾರತೀಯ ಶಾಸ್ತ್ರೀಯ ಕಲೆಗಳು ದೇವತಾರಾಧನೆಯ ಆಶಯವನ್ನು ಹೊಂದಿವೆ. ಹಿರಿಯ ಕಲಾವಿದರನ್ನು ಸಮ್ಮಾನಿಸುವ ಮೂಲಕ ಹಿರಿದಾದ ಅನುಭವವನ್ನು ಕಿರಿಯರು ತಮ್ಮದಾಗಿಸಿಕೊಳ್ಳಲು ಸಾಧ್ಯ. ಯುವ ಕಲಾವಿದರನ್ನು ಸಮ್ಮಾನಿಸುವುದರಿಂದ ಅವರ ಪ್ರತಿಭೆಯ ವಿಸ್ತರಣೆ ಸಾಧ್ಯವಾಗುತ್ತದೆ" ಎಂದು ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು.
ಸುರತ್ಕಲ್‌ನ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ವತಿಯಿಂದ ಸುರತ್ಕಲ್ ಅನುಪಲ್ಲವಿಯ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ಆಯೋಜಿಸಲಾದ 'ರಾಗ ಸುಧಾರಸ-2026' ಯಕ್ಷ ಸಂಗೀತ ನೃತ್ಯೋತ್ಸವದ 'ಯುವ ಕಲಾಮಣಿ' ಪ್ರಶಸ್ತಿ ಪ್ರದಾನ ಮತ್ತು ಹಿರಿಯ ಸಾಧಕರ ಸಮ್ಮಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ, ಸಂಗೀತದ ಆರಾಧನೆ ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೂಡುಬಿದಿರೆಯ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, "ಜಿಲ್ಲೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಬಗ್ಗೆ ಉತ್ತಮ ಅರಿವು ಮೂಡಿದ್ದು, ಪ್ರತಿಭಾವಂತ ಯುವ ಕಲಾವಿದರು ರೂಪುಗೊಳ್ಳುತ್ತಿದ್ದಾರೆ. ಹಿರಿಯ ಹಾಗೂ ಕಿರಿಯ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ನಿರಂತರವಾಗಿ ನಡೆಯಬೇಕಾಗಿದೆ" ಎಂದರು.
ಪ್ರಶಸ್ತಿ ಪ್ರದಾನ ಹಾಗೂ ಸಮ್ಮಾನ:
ಈ ಸಂದರ್ಭದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಹಿರಿಯ ಗುರುಗಳು ಮತ್ತು ವಾಗ್ಗೇಯಕಾರ ವಿದ್ವಾನ್ ಎಂ. ನಾರಾಯಣ ಹಾಗೂ ಹಿರಿಯ ಯಕ್ಷಗಾನ ಕಲಾವಿದ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ ಅವರಿಗೆ 'ಹಿರಿಯ ಸಾಧಕ ಸಮ್ಮಾನ' ನೀಡಿ ಗೌರವಿಸಲಾಯಿತು. ವಿದ್ವಾನ್ ಸುನಾದ ಕೃಷ್ಣ ಅಮೈ ಅವರಿಗೆ 'ಯುವ ಕಲಾಮಣಿ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮತ್ತು ಅಧ್ಯಕ್ಷ ಗಣೇಶ್ ಕಾರ್ಣಿಕ್ ಶುಭ ಹಾರೈಸಿದರು. ವೇದಿಕೆಯಲ್ಲಿ ರಾಗ ಸುಧಾರಸ ಸಲಹಾ ಸಮಿತಿಯ ಚಂದ್ರಶೇಖರ ಶೆಟ್ಟಿ, ಗೀತಾ ಸರಳಾಯ, ಉಮಾ ಶಂಕರಿ ಹಾಗೂ ಕೋಶಾಧಿಕಾರಿ ವಿಭು ರಾವ್ ಉಪಸ್ಥಿತರಿದ್ದರು. ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಸ್ವಾಗತಿಸಿ, ವಂದಿಸಿದರು. ಚಿನ್ಮಯಿ ಭಟ್ ಕಾರ್ಯಕ್ರಮ ನಿರೂಪಿಸಿದರು.
ಸಂಗೀತ ಕಛೇರಿ:
ಸಭಾ ಕಾರ್ಯಕ್ರಮದ ಬಳಿಕ ನಡೆದ ಮೊದಲ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಪ್ರಾರ್ಥನಾ ಬಿ. ಹಾಡುಗಾರಿಕೆ ನಡೆಸಿಕೊಟ್ಟರು. ಇವರಿಗೆ ವಿಜೇತ ಸುಬ್ರಹ್ಮಣ್ಯ ಕಬೇಕಾಡು (ವಯಲಿನ್) ಮತ್ತು ಅವಿನಾಶ್ ಬಿ. (ಮೃದಂಗ) ಸಹಕರಿಸಿದರು. ದ್ವಿತೀಯ ಸಂಗೀತ ಕಛೇರಿಯಲ್ಲಿ ನಿರಂಜನ ದಿಂಡೋಡಿ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನಕ್ಕೆ ಹೊಸಳ್ಳಿ ವಿ. ರಘುರಾಮ್ (ವಯಲಿನ್), ಸುನಾದ ಕೃಷ್ಣ ಅಮೈ (ಮೃದಂಗ) ಹಾಗೂ ಬೆಂಗಳೂರಿನ ಸ್ಕಂದ ಮಂಜುನಾಥ್ (ಘಟಂ) ಪಕ್ಕವಾದ್ಯದಲ್ಲಿ ಸಾಥ್ ನೀಡಿದರು.

