ಸುರತ್ಕಲ್: ಶಿಕ್ಷಣ ಬದುಕಿಗೆ ಆತ್ಮ ವಿಶ್ವಾಸ ನೀಡುವ ಅನನ್ಯ ಶಕ್ತಿಯಾಗಿದೆ. ನಾನು ಕಲಿಯುತ್ತೇನೆ, ನಾನು ಬೆಳೆಯುತ್ತೇನೆ ಮತ್ತು ನಾನು ಸಾಧಿಸುತ್ತೇನೆ ಎಂಬ ಗುರಿ ವಿದ್ಯಾರ್ಥಿಗಳಲ್ಲಿ ಇರಬೇಕು. ಸ್ವಂತ ವ್ಯಕ್ತಿತ್ವದ ರೂಪಿಸುವಿಕೆ, ತಂದೆ ತಾಯಿ ಗುರುಗಳು ಮತ್ತು ಕಲಿತ ಶಾಲೆಯ ಬಗ್ಗೆ ಗೌರವ, ನಿರಂತರ ಕಲಿಕೆ ಮತ್ತು ಉತ್ತಮ ವ್ಯಕ್ತಿತ್ವದ ರೂಪಿಸುವಿಕೆ ಯಶಸ್ಸಿನ ಹಾದಿಗಳು ಎಂದು ದುಬಾಯಿಯ ಸಿಎನ್ಎಸ್ ಎಲ್ಎಲ್ ಸಿ ಸಂಸ್ಥೆಯ ಹಿರಿಯ ಅಧಿಕಾರಿ ಯೋಗಿತಾ ಕೆ. ನುಡಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಫಿಶರೀಶ್ ಚಿತ್ರಾಪುರ ಕುಳಾಯಿ ಮತ್ತು ಸುರತ್ಕಲ್ ರೋಟರಿ ಕ್ಲಬ್ ಸಹಯೋಗದಲ್ಲಿ ನಡೆದ ವಿದ್ಯಾರ್ಥಿಗಳಿಗೆ ಕಲಿಕಾ ಪ್ರೇರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ್ ಟಿ. ಎನ್. ಅವರು ಪ್ರತಿಯೊಬ್ಬ ವಿದ್ಯಾರ್ಥಿಯೂ ಎಳವೆಯಲ್ಲಿ ಕಲಿಕೆಯ ಬಗ್ಗೆ ಸ್ಪಷ್ಟ ಗುರಿ ಇರಿಸಿಕೊಳ್ಳ ಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ, ಸೃಜನ ಶೀಲ ವ್ಯಕ್ತಿತ್ವದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗುತ್ತಿದೆ ಎಂದರು. ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ದೇವದಾಸ ಕುಳಾಯಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಶಶಿಕಲಾ, ಶಿಕ್ಷಕಿಯರಾದ ಸಿಂತಿಯ, ರೂಪ, ವಿದ್ಯಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶೋಭಾ ಸ್ವಾಗತಿಸಿದರು. ಸುಕೇಶಿನಿ ವಂದಿಸಿದರು.

