ಬೆಳಕಿನ ಹಬ್ಬದ ಮೇಲೆ ಆಧುನಿಕತೆಯ ನೆರಳು ಈ ದೀಪಾವಳಿ

Shreya Hegde
0



ದೀಪಾವಳಿ ಎಂದರೆ ಕೇವಲ ದೀಪಗಳನ್ನು ಬೆಳಗಿಸುವ ಹಬ್ಬವಲ್ಲ; ಅದು ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ, ನಿರಾಶೆಯಿಂದ ಆಶಾವಾದದ ಕಡೆಗೆ ಸಾಗುವ ಬದುಕಿನ ಸಂಕೇತ. ಮಣ್ಣಿನ ಹಣತೆಯಲ್ಲಿ ಮೂಡುವ ಪುಟ್ಟ ಜ್ಯೋತಿ ಮನುಷ್ಯನ ಅಂತರಂಗದಲ್ಲಿ ಬೆಳಕನ್ನು ತುಂಬುವ ಸಾಂಸ್ಕೃತಿಕ ಪರಂಪರೆಯ ಪ್ರತೀಕ. ಆದರೆ ಕಾಲ ಬದಲಾಗಿದೆ. ಮನುಷ್ಯನ ಜೀವನಶೈಲಿ ಬದಲಾಗಿದೆ. ಹಬ್ಬಗಳ ಆಚರಣೆಯ ವಿಧಾನವೂ ಬದಲಾಗಿದೆ. ಒಂದು ಕಾಲದಲ್ಲಿ ಮನೆಮಂದಿಯೆಲ್ಲ ಒಟ್ಟಾಗಿ ಸೇರಿ ಮಣ್ಣಿನ ಹಣತೆಗಳಿಗೆ ಎಣ್ಣೆ ಹಾಕಿ, ಬತ್ತಿ ಸಿದ್ಧಪಡಿಸಿ, ಮನೆಯ ಅಂಗಳದಲ್ಲಿ ದೀಪಗಳನ್ನು ಹಚ್ಚಿ ಸಂಭ್ರಮಿಸುತ್ತಿದ್ದ ದೀಪಾವಳಿ ಇಂದು ಮಾರುಕಟ್ಟೆ, ಮಾಧ್ಯಮ, ತಂತ್ರಜ್ಞಾನ ಮತ್ತು ಗ್ರಾಹಕ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ಹೊಸ ರೂಪ ಪಡೆದುಕೊಂಡಿದೆ.


ಹಾಗಾದರೆ ನಾವು ಆಚರಿಸುತ್ತಿರುವುದು ಬೆಳಕಿನ ಹಬ್ಬವನ್ನೇ? ಅಥವಾ ಬೆಳಕಿನ ಹೆಸರಿನಲ್ಲಿ ಮಾರುಕಟ್ಟೆ ಸೃಷ್ಟಿಸಿರುವ ವ್ಯಾಪಾರಿಕ ಉತ್ಸವವನ್ನೇ? ಎಂಬುದನ್ನು ಚಿಂತಿಸಬೇಕಿದೆ. ಆಧುನೀಕರಣದ ಬೆಳಕಿನಲ್ಲಿ ಸಾಂಪ್ರದಾಯಿಕ ಹಣತೆಗಳು ಮರೆಯಾಗುತ್ತಿವೆ.ಆಧುನೀಕರಣವು ಮನುಷ್ಯನ ಬದುಕಿಗೆ ಅನೇಕ ಸೌಲಭ್ಯಗಳನ್ನು ಒದಗಿಸಿದೆ. ವಿದ್ಯುತ್ ದೀಪಗಳು, ಎಲ್‌ಇಡಿ ಅಲಂಕಾರಗಳು, ಬಣ್ಣಬಣ್ಣದ ಲೈಟಿಂಗ್ ವ್ಯವಸ್ಥೆಗಳು, ಡಿಜಿಟಲ್ ಶುಭಾಶಯಗಳು, ಆನ್‌ಲೈನ್ ಖರೀದಿ, ಸಾಮಾಜಿಕ ಜಾಲತಾಣಗಳ ಸಂಭ್ರಮ ಹಬ್ಬದ ಆಚರಣೆಗೆ ಹೊಸ ಆಯಾಮವನ್ನು ನೀಡಿವೆ. ಹಿಂದೆ ಒಂದು ಮನೆಯ ಅಂಗಳದಲ್ಲಿ ನೂರಾರು ಮಣ್ಣಿನ ಹಣತೆಗಳು ಬೆಳಗುತ್ತಿದ್ದರೆ, ಇಂದು ಅದೇ ಜಾಗದಲ್ಲಿ ವಿದ್ಯುತ್ ದೀಪಗಳ ಸರಪಳಿಗಳು ಮಿನುಗುತ್ತಿವೆ. ಇದು ತಂತ್ರಜ್ಞಾನದ ಬೆಳವಣಿಗೆಯ ಸಂಕೇತವೇನೋ ಸರಿ. ಆದರೆ ಈ ಬದಲಾವಣೆಯ ನಡುವೆ ನಮ್ಮ ಸ್ಥಳೀಯ ಸಂಸ್ಕೃತಿ, ಗುಡಿಕೈಗಾರಿಕೆಗಳನ್ನು ನಂಬಿದವರ ಬದುಕು, ಮಣ್ಣಿನ ಹಣತೆಯ ಮಹತ್ವ ಮತ್ತು ಸಾಂಪ್ರದಾಯಿಕ ಆಚರಣೆಗಳು ನಿಧಾನವಾಗಿ ಹಿನ್ನೆಲೆಗೆ ಸರಿಯುತ್ತಿವೆಯೇ ಎಂಬ ಪ್ರಶ್ನೆ ಎದುರಾಗುತ್ತದೆ.


ಪಾಶ್ಚಾತ್ಯೀಕರಣದ ಆಕರ್ಷಣೆ, ಆಂತರಿಕತೆಯಲ್ಲಿ ಬದಲಾವಣೆ:

ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ನಮ್ಮ ಹಬ್ಬಗಳ ಆಚರಣೆಯಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿವೆ. ಹಬ್ಬದ ಶುಭಾಶಯಗಳು ವೈಯಕ್ತಿಕ ಭೇಟಿಗಳಿಗಿಂತ ಡಿಜಿಟಲ್ ಸಂದೇಶಗಳ ಮೂಲಕ ತಲುಪುತ್ತಿವೆ. ಕುಟುಂಬದ ಒಗ್ಗಟ್ಟು ಮತ್ತು ಆತ್ಮೀಯತೆಯ ಸಂಭ್ರಮಕ್ಕಿಂತ ಫೋಟೋಗಳು, ವಿಡಿಯೊಗಳು, ಸಾಮಾಜಿಕ ಜಾಲತಾಣಗಳ ಪ್ರದರ್ಶನಕ್ಕೆ ಹೆಚ್ಚಿನ ಮಹತ್ವ ದೊರೆಯುತ್ತಿದೆ. ಹಬ್ಬದ ಸಡಗರವನ್ನು ಅನುಭವಿಸುವುದಕ್ಕಿಂತ ಅದನ್ನು ಇತರರಿಗೆ ಪ್ರದರ್ಶಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಮನೆಯಲ್ಲಿ ಎಷ್ಟು ದೀಪಗಳನ್ನು ಹಚ್ಚಿದ್ದೇವೆ ಎಂಬುದಕ್ಕಿಂತ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟು ಜನ ಮೆಚ್ಚುಗೆ ನೀಡಿದ್ದಾರೆ ಎಂಬುದೇ ಕೆಲವರಿಗೆ ಮುಖ್ಯವಾಗುತ್ತಿದೆ. ಇಲ್ಲಿ ಒಂದು ಸೂಕ್ಷ್ಮವಾದ ವ್ಯತ್ಯಾಸವಿದೆ. ಸಂಸ್ಕೃತಿಯನ್ನು ಆಧುನಿಕಗೊಳಿಸುವುದು ತಪ್ಪಲ್ಲ; ಆದರೆ ಆಧುನಿಕತೆಯ ಹೆಸರಿನಲ್ಲಿ ಸಂಸ್ಕೃತಿಯು ಆತ್ಮವನ್ನೇ ಕಳೆದುಕೊಳ್ಳುವುದು ಅಪಾಯಕಾರಿ.


ಕೈಗಾರಿಕೀಕರಣ ಮತ್ತು ಜಾಗತೀಕರಣ: ದೀಪಾವಳಿ ಒಂದು ಮಾರುಕಟ್ಟೆಯೇ?

ಕೈಗಾರಿಕೀಕರಣ ಮತ್ತು ಜಾಗತೀಕರಣದ ಪರಿಣಾಮವಾಗಿ ದೀಪಾವಳಿ ಇಂದು ಬೃಹತ್ ವ್ಯಾಪಾರಿಕ ಚಟುವಟಿಕೆಯ ಕೇಂದ್ರವಾಗಿದೆ. ಬಟ್ಟೆ, ಚಿನ್ನಾಭರಣ, ಎಲೆಕ್ಟ್ರಾನಿಕ್ ವಸ್ತುಗಳು, ಗೃಹೋಪಯೋಗಿ ಉಪಕರಣಗಳು, ಸಿಹಿತಿಂಡಿಗಳು, ಉಡುಗೊರೆಗಳು, ಅಲಂಕಾರಿಕ ಸಾಮಗ್ರಿಗಳು ಹೀಗೆ ಪ್ರತಿಯೊಂದು ವಸ್ತುವಿಗೂ ಹಬ್ಬದ ಹೆಸರಿನಲ್ಲಿ ವಿಶೇಷ ಮಾರುಕಟ್ಟೆ ಸೃಷ್ಟಿಯಾಗಿದೆ. 'ದೀಪಾವಳಿ ಆಫರ್', 'ಫೆಸ್ಟಿವಲ್ ಸೇಲ್', 'ಮೆಗಾ ಡಿಸ್ಕೌಂಟ್', 'ಬಂಪರ್ ಆಫರ್' ಎಂಬ ಜಾಹೀರಾತುಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಹಿಂದೆ ಹಬ್ಬವೆಂದರೆ ಮನೆಯಲ್ಲಿ ಇರುವುದನ್ನು ಹಂಚಿಕೊಂಡು ತಿನ್ನುವ ಸಂಭ್ರಮವಾಗಿತ್ತು. ಇಂದು ಹೊಸ ವಸ್ತುಗಳನ್ನು ಖರೀದಿಸುವುದೇ ಹಬ್ಬದ ಪ್ರತಿಷ್ಠೆಯ ಸಂಕೇತವಾಗುತ್ತಿರುವುದು ವಿಪರ್ಯಾಸ. ಜಾಗತೀಕರಣವು ಜಗತ್ತಿನ ಮಾರುಕಟ್ಟೆಯನ್ನು ನಮ್ಮ ಮನೆ ಬಾಗಿಲಿಗೆ ತಂದಿದೆ. ಆದರೆ ಅದರೊಂದಿಗೆ ನಮ್ಮ ಸ್ಥಳೀಯ ಉತ್ಪಾದಕರಿಗೆ ಸ್ಪರ್ಧೆಯ ಒತ್ತಡವನ್ನೂ ತಂದಿದೆ. ದೊಡ್ಡ ಕಂಪನಿಗಳ ಉತ್ಪನ್ನಗಳು ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿರುವಾಗ, ಸಣ್ಣ ವ್ಯಾಪಾರಿಗಳು, ಕುಶಲಕರ್ಮಿಗಳು, ಮಣ್ಣಿನ ಹಣತೆ ತಯಾರಕರು ಮತ್ತು ಸಾಂಪ್ರದಾಯಿಕ ಉದ್ಯೋಗಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ.


ಖಾಸಗೀಕರಣ ಮತ್ತು ಉದಾರೀಕರಣ: ದೀಪಾವಳಿ ಸಂಭ್ರಮ ಆರ್ಥಿಕ ಸಾಮರ್ಥ್ಯದ ಅಳತೆಯೇ?

ಉದಾರೀಕರಣ ಮತ್ತು ಖಾಸಗೀಕರಣದ ಆರ್ಥಿಕ ವ್ಯವಸ್ಥೆಯಲ್ಲಿ ಮಾರುಕಟ್ಟೆಯ ವಿಸ್ತರಣೆ ಅನಿವಾರ್ಯವಾಗಿದೆ. ಖಾಸಗಿ ಕಂಪನಿಗಳ ಉತ್ಪನ್ನಗಳು, ಸೇವೆಗಳು ಮತ್ತು ವ್ಯಾಪಾರಿಕ ತಂತ್ರಗಳು ಹಬ್ಬದ ಆಚರಣೆಯ ಮೇಲೂ ಪ್ರಭಾವ ಬೀರುತ್ತಿವೆ. ಹಬ್ಬದ ಸಂದರ್ಭದಲ್ಲಿ ಸಾಲದ ಸೌಲಭ್ಯ, ಕಂತಿನ ಪಾವತಿ, ಕ್ರೆಡಿಟ್ ಕಾರ್ಡ್, ಆನ್‌ಲೈನ್ ಖರೀದಿ ಮುಂತಾದವು ಗ್ರಾಹಕರಿಗೆ ಅನುಕೂಲ ಒದಗಿಸುತ್ತವೆ. ಆದರೆ ಇವುಗಳ ಹಿಂದೆ ಅಗತ್ಯಕ್ಕಿಂತ ಹೆಚ್ಚಿನ ಖರೀದಿ ಮಾಡುವ ಮನೋಭಾವವೂ ಬೆಳೆಯುತ್ತಿದೆ. ಇಂದು ಒಬ್ಬ ವ್ಯಕ್ತಿಯ ಆರ್ಥಿಕ ಸಾಮರ್ಥ್ಯವನ್ನು ಅವನು ಖರೀದಿಸುವ ವಸ್ತುಗಳ ಮೂಲಕ ಅಳೆಯುವ ಪ್ರವೃತ್ತಿ ಕಾಣುತ್ತಿದೆ. ದುಬಾರಿ ಬಟ್ಟೆ, ಬೆಲೆಬಾಳುವ ಉಡುಗೊರೆ, ದೊಡ್ಡ ಪ್ರಮಾಣದ ಪಟಾಕಿ, ಆಕರ್ಷಕ ಅಲಂಕಾರಗಳೇ ಹಬ್ಬದ ಸಂಭ್ರಮದ ಮಾನದಂಡಗಳಾಗಬೇಕೇ? ಎಂದು ನಾವೇ ಯೋಚಿಸಬೇಕಿದೆ. ಹಬ್ಬದ ಸಂತೋಷವು ಹಣವಂತರಿಗೆ ಮಾತ್ರ ಸೀಮಿತವಾಗಬಾರದು. ಬಡವನ ಮನೆಯಲ್ಲಿಯೂ ಒಂದು ಪುಟ್ಟ ಹಣತೆ ಬೆಳಗಿದಾಗಲೇ ದೀಪಾವಳಿಯ ನಿಜವಾದ ಅರ್ಥ ಸಾಕಾರಗೊಳ್ಳುತ್ತದೆ.


ಬೆಲೆ ಏರಿಕೆಯ ಬಿಸಿಯಲ್ಲಿ ಹಬ್ಬದ ಸಂಭ್ರಮ: ಜನಸಾಮಾನ್ಯರ ಗೋಳಾಟ

ಒಂದು ಕಡೆ ಹಬ್ಬದ ಸಡಗರ, ಮತ್ತೊಂದು ಕಡೆ ಬೆಲೆ ಏರಿಕೆಯ ಬಿಸಿ! ದಿನನಿತ್ಯದ ಬದುಕನ್ನೇ ಸಾಗಿಸಲು ಕಷ್ಟಪಡುತ್ತಿರುವ ಸಾಮಾನ್ಯ ಜನರಿಗೆ ಹಬ್ಬದ ಖರ್ಚು ಮತ್ತೊಂದು ಆರ್ಥಿಕ ಸವಾಲಾಗಿದೆ. ಅಕ್ಕಿ, ಬೇಳೆ, ಎಣ್ಣೆ, ಹಾಲು, ಸಕ್ಕರೆ, ತರಕಾರಿ, ಹಣ್ಣು, ಸಿಹಿತಿಂಡಿ, ಬಟ್ಟೆ, ವಿದ್ಯುತ್ ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಹಬ್ಬದ ಸಿದ್ಧತೆ ಮಾಡಿಕೊಳ್ಳುವುದು ಸುಲಭದ ಮಾತಲ್ಲ. ದುಡಿಯುವ ಕೈಗಳಿಗೆ ಆದಾಯ ಹೆಚ್ಚಾಗದಿದ್ದರೂ ಖರ್ಚಿನ ಹೊರೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ಕಡೆ ಮಾರುಕಟ್ಟೆಯಲ್ಲಿ ಹಬ್ಬದ ಆಫರ್‌ಗಳ ಭರಾಟೆ; ಮತ್ತೊಂದು ಕಡೆ ದಿನಗೂಲಿ ಕಾರ್ಮಿಕನ ಮನೆಯಲ್ಲಿ ಮುಂದಿನ ತಿಂಗಳ ಖರ್ಚಿನ ಲೆಕ್ಕಾಚಾರ. ಒಂದು ಕಡೆ ಚಿನ್ನಾಭರಣದ ಮಳಿಗೆಗಳಲ್ಲಿ ಖರೀದಿಯ ಸಂಭ್ರಮ; ಮತ್ತೊಂದು ಕಡೆ ಬಡ ಕುಟುಂಬದಲ್ಲಿ ಮಕ್ಕಳಿಗೆ ಹೊಸ ಬಟ್ಟೆ ಕೊಡಿಸುವುದೇ ದೊಡ್ಡ ಸವಾಲು. ಹಬ್ಬವನ್ನು ಆಚರಿಸಬೇಕೆಂಬ ಆಸೆ ಎಲ್ಲರಿಗೂ ಇದೆ. ಆದರೆ ಆರ್ಥಿಕ ಪರಿಸ್ಥಿತಿ ಎಲ್ಲರಿಗೂ ಒಂದೇ ರೀತಿಯಲ್ಲಿಲ್ಲ. ಹೀಗಾಗಿ ಕೆಲವರ ಪಾಲಿಗೆ ದೀಪಾವಳಿ ಸಂಭ್ರಮದ ಹಬ್ಬವಾದರೆ, ಇನ್ನು ಕೆಲವರ ಪಾಲಿಗೆ ಅದು ಖರ್ಚು ಮತ್ತು ಕಷ್ಟಗಳ ನಡುವಿನ ಅನಿವಾರ್ಯ ಆಚರಣೆಯಾಗಿದೆ. ಆದರೂ ಜನರು ಹಬ್ಬ ಆಚರಿಸುತ್ತಾರೆ. ಏಕೆಂದರೆ ಹಬ್ಬವು ಕೇವಲ ಹಣದ ವ್ಯವಹಾರವಲ್ಲ; ಅದು ಭಾವನೆ, ನಂಬಿಕೆ, ಕುಟುಂಬದ ಪ್ರೀತಿ ಮತ್ತು ಬದುಕಿನ ಭರವಸೆಯ ಸಂಗಮ.


ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಆಧುನಿಕ ದೀಪಾವಳಿ

ವಿಜ್ಞಾನ ಮತ್ತು ತಂತ್ರಜ್ಞಾನವು ಮನುಷ್ಯನ ಬದುಕನ್ನು ಸುಲಭಗೊಳಿಸಿದೆ. ಡಿಜಿಟಲ್ ಪಾವತಿ, ಆನ್‌ಲೈನ್ ಖರೀದಿ, ಕೃತಕ ಬುದ್ಧಿಮತ್ತೆಯ ಮೂಲಕ ಶುಭಾಶಯಗಳ ಸೃಷ್ಟಿ, ವರ್ಚುವಲ್ ಸಂಭ್ರಮ, ಸ್ಮಾರ್ಟ್ ಲೈಟಿಂಗ್ ವ್ಯವಸ್ಥೆ ಹೀಗೆ ದೀಪಾವಳಿ ಆಚರಣೆಯಲ್ಲಿಯೂ ತಂತ್ರಜ್ಞಾನ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ. ಆದರೆ ವಿಜ್ಞಾನವು ನಮಗೆ ಕೇವಲ ಹೊಸ ಸಾಧನಗಳನ್ನು ಬಳಸುವುದನ್ನು ಕಲಿಸಬಾರದು; ಅವುಗಳನ್ನು ವಿವೇಚನೆಯಿಂದ ಬಳಸುವುದನ್ನೂ ಕಲಿಸಬೇಕು. ಪಟಾಕಿಗಳ ಅತಿಯಾದ ಬಳಕೆಯಿಂದ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಉಂಟಾಗುತ್ತದೆ. ಮಕ್ಕಳು, ವೃದ್ಧರು, ಅನಾರೋಗ್ಯದಿಂದ ಬಳಲುತ್ತಿರುವವರು ಹಾಗೂ ಪ್ರಾಣಿಪಕ್ಷಿಗಳು ತೊಂದರೆ ಅನುಭವಿಸುತ್ತವೆ. ಹೀಗಾಗಿ ಪರಿಸರ ಸ್ನೇಹಿ ದೀಪಾವಳಿಯ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ವಿದ್ಯುತ್ ಉಳಿತಾಯ ಮಾಡುವ ದೀಪಗಳನ್ನು ಬಳಸುವುದು, ಮಣ್ಣಿನ ಹಣತೆಗಳಿಗೆ ಆದ್ಯತೆ ನೀಡುವುದು, ಪಟಾಕಿಗಳ ಬಳಕೆಯನ್ನು ಕಡಿಮೆ ಮಾಡುವುದು, ಪ್ಲಾಸ್ಟಿಕ್ ಅಲಂಕಾರಗಳನ್ನು ತ್ಯಜಿಸುವುದು, ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವುದು ಇವೆಲ್ಲವೂ ವೈಜ್ಞಾನಿಕ ಮನೋಭಾವ ಮತ್ತು ಸಾಮಾಜಿಕ ಹೊಣೆಗಾರಿಕೆಯ ಪ್ರತೀಕಗಳಾಗಬೇಕು. ದೀಪಾವಳಿ: ಬೆಳಗಬೇಕಿರುವುದು ಮನೆಗಳನ್ನಷ್ಟೇ ಅಲ್ಲ, ಮನಸ್ಸುಗಳನ್ನೂ! ನಾವು ದೀಪಾವಳಿಯನ್ನು ಹೊಸ ದೃಷ್ಟಿಕೋನದಿಂದ ನೋಡಬೇಕಾದ ಕಾಲ ಬಂದಿದೆ. ಹಬ್ಬದ ಹೆಸರಿನಲ್ಲಿ ಅನಗತ್ಯ ಖರ್ಚು ಮಾಡುವುದಕ್ಕಿಂತ ಅಗತ್ಯವಿರುವವರಿಗೆ ನೆರವಾಗೋಣ. ದುಬಾರಿ ಉಡುಗೊರೆಗಳನ್ನು ನೀಡುವುದಕ್ಕಿಂತ ಪ್ರೀತಿಯ ಮಾತುಗಳನ್ನು ಹಂಚಿಕೊಳ್ಳೋಣ. ಸಾವಿರಾರು ರೂಪಾಯಿ ಮೌಲ್ಯದ ಅಲಂಕಾರಗಳಿಗಿಂತ ಸ್ಥಳೀಯ ಕುಶಲಕರ್ಮಿಗಳ ಕೈಯಲ್ಲಿ ಅರಳಿದ ಮಣ್ಣಿನ ಹಣತೆಯನ್ನು ಖರೀದಿಸೋಣ. ಹಬ್ಬದ ಸಂದರ್ಭದಲ್ಲಿ ಅನಾಥ ಮಕ್ಕಳು, ವೃದ್ಧರು, ನಿರ್ಗತಿಕರು ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳೊಂದಿಗೆ ಸಂತೋಷ ಹಂಚಿಕೊಳ್ಳೋಣ. ನಮ್ಮ ಮನೆಯ ಬೆಳಕಿನ ಜೊತೆಗೆ ಮತ್ತೊಂದು ಮನೆಯ ಕತ್ತಲೆಯನ್ನೂ ದೂರ ಮಾಡುವ ಪ್ರಯತ್ನ ಮಾಡೋಣ. ದೀಪಾವಳಿಯ ನಿಜವಾದ ಅರ್ಥವನ್ನು ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಸಮಾನತೆ, ಪರಿಸರ ಸಂರಕ್ಷಣೆ ಮತ್ತು ಮಾನವೀಯ ಮೌಲ್ಯಗಳೊಂದಿಗೆ ಬೆಸೆಯಬೇಕಾಗಿದೆ. ಬದಲಾಗಬೇಕಿರುವುದು ದೀಪಾವಳಿಯಲ್ಲ, ದೀಪಾವಳಿ ಆಚರಿಸುವ ನಮ್ಮ ಮನೋಭಾವ!


ಆಧುನೀಕರಣವನ್ನು ವಿರೋಧಿಸುವ ಅಗತ್ಯವಿಲ್ಲ. ಪಾಶ್ಚಾತ್ಯೀಕರಣದ ಒಳ್ಳೆಯ ಅಂಶಗಳನ್ನು ಸ್ವೀಕರಿಸಬಾರದೆಂದೂ ಇಲ್ಲ. ಕೈಗಾರಿಕೀಕರಣ, ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣಗಳನ್ನೂ ಸಂಪೂರ್ಣವಾಗಿ ತಿರಸ್ಕರಿಸಲು ಸಾಧ್ಯವಿಲ್ಲ. ಆದರೆ ಇವೆಲ್ಲದರ ನಡುವೆ ನಮ್ಮ ಸಂಸ್ಕೃತಿ, ಪರಂಪರೆ, ಪರಿಸರ ಮತ್ತು ಮಾನವೀಯ ಮೌಲ್ಯಗಳು ನಲುಗದಂತೆ ಎಚ್ಚರ ವಹಿಸಬೇಕಿದೆ. ದೀಪಾವಳಿ ಕೇವಲ ಕತ್ತಲೆಯನ್ನು ಓಡಿಸುವ ಹಬ್ಬವಲ್ಲ; ಮನುಷ್ಯನೊಳಗಿನ ಸ್ವಾರ್ಥ, ಅಹಂಕಾರ, ಅಸೂಯೆ, ದುರಾಸೆ ಮತ್ತು ಭೇದಭಾವಗಳೆಂಬ ಕತ್ತಲೆಯನ್ನು ದೂರ ಮಾಡುವ ಹಬ್ಬವೂ ಹೌದು. ಮಾರುಕಟ್ಟೆಯ ಬೆಳಕಿನಲ್ಲಿ ನಮ್ಮ ಬದುಕಿನ ಮೌಲ್ಯಗಳು ಮಸುಕಾಗಬಾರದು. ವಿದ್ಯುತ್ ದೀಪಗಳ ಪ್ರಖರತೆಯಲ್ಲಿ ಮಣ್ಣಿನ ಹಣತೆಯ ಸೌಂದರ್ಯ ಕಳೆದುಹೋಗಬಾರದು. ಆರ್ಥಿಕ ಅಭಿವೃದ್ಧಿಯ ಓಟದಲ್ಲಿ ಸಾಮಾನ್ಯ ಮನುಷ್ಯನ ಬದುಕು ಹಿಂದೆ ಉಳಿಯಬಾರದು.


ನಮ್ಮ ದೀಪಾವಳಿ ಆಚರಣೆ ಹೀಗಿರಲಿ:

ಖರೀದಿಯ ಸಂಭ್ರಮಕ್ಕಿಂತ ಹಂಚಿಕೊಳ್ಳುವ ಸಂತೋಷ ಹೆಚ್ಚಾಗಲಿ. ಪಟಾಕಿಗಳ ಸದ್ದಿಗಿಂತ ಮಾನವೀಯತೆಯ ಧ್ವನಿ ಮೊಳಗಲಿ. ವಿದ್ಯುತ್ ದೀಪಗಳಿಗಿಂತ ಜ್ಞಾನದ ಬೆಳಕು ಪ್ರಕಾಶಿಸಲಿ. ಆಡಂಬರದ ಅಲಂಕಾರಕ್ಕಿಂತ ಸರಳತೆಯ ಸೌಂದರ್ಯ ಮೆರೆಯಲಿ. ಮಾರುಕಟ್ಟೆಯ ಲಾಭಕ್ಕಿಂತ ಮನುಷ್ಯನ ಬದುಕಿನ ಮೌಲ್ಯ ಮುಖ್ಯವಾಗಲಿ. ಒಂದು ಮನೆಯ ಬೆಳಕಿನ ಜೊತೆಗೆ ಸಮಾಜದ ಪ್ರತಿಯೊಂದು ಮನೆಯಲ್ಲೂ ಸಂತೋಷದ ಬೆಳಕು ಮೂಡಲಿ. ಏಕೆಂದರೆ, ದೀಪಾವಳಿಯ ಯಶಸ್ಸು ನಾವು ಎಷ್ಟು ಹಣ ಖರ್ಚು ಮಾಡಿ ಹಬ್ಬ ಆಚರಿಸಿದ್ದೇವೆ ಎಂಬುದರಲ್ಲಿಲ್ಲ; ನಮ್ಮ ಸಂಭ್ರಮದಿಂದ ಎಷ್ಟು ಜನರ ಬದುಕಿನಲ್ಲಿ ಬೆಳಕು ಮೂಡಿಸಿದ್ದೇವೆ ಎಂಬುದರಲ್ಲಿದೆ. ಮಣ್ಣಿನ ಹಣತೆಯಿಂದ ಆರಂಭವಾದ ದೀಪಾವಳಿ ಮನುಷ್ಯನ ಮನಸ್ಸಿನಲ್ಲಿ ಮಾನವೀಯತೆಯ ಮಹಾದೀಪವಾಗಿ ಬೆಳಗಿದಾಗಲೇ ಅದರ ಆಚರಣೆಗೆ ನಿಜವಾದ ಅರ್ಥ ಬರುತ್ತದೆ. “ಜಾಗತೀಕರಣವು ದೀಪಾವಳಿಯನ್ನು ಜಾಗತಿಕ ಮಾರುಕಟ್ಟೆಯನ್ನಾಗಿ ಮಾಡಿದೆ; ಆದರೆ ದೀಪಾವಳಿಯು ನಮ್ಮನ್ನು ಜಾಗತಿಕ ಮಾನವೀಯತೆಯ ಕಡೆಗೆ ಕರೆದೊಯ್ಯ ಬೇಕಾಗಿದೆ.” ಬೆಳಗಲಿ ಹಣತೆ, ಬೆಳಗಲಿ ಬದುಕು; ಕತ್ತಲೆಯಾಗದಿರಲಿ ಮಾನವೀಯತೆಯ ಮನಸು!


- ಕೆ.ಎನ್. ಚಿದಾನಂದ ಹಾಸನ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top