ನ. 14: ಸುರತ್ಕಲ್ ಎನ್‌ಐಟಿಕೆಯ 24ನೇ ವಾರ್ಷಿಕ ಘಟಿಕೋತ್ಸವ; 1,986 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

Upayuktha
0



ಸುರತ್ಕಲ್: ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ), ಸುರತ್ಕಲ್‌ನ 24ನೇ ವಾರ್ಷಿಕ ಘಟಿಕೋತ್ಸವವು ನವೆಂಬರ್ 14ರಂದು ಸಂಸ್ಥೆಯ ಸಿಲ್ವರ್ ಜುಬಿಲಿ ಸಭಾಂಗಣದಲ್ಲಿ ನಡೆಯಲಿದೆ. ಈ ಬಾರಿಯ ಘಟಿಕೋತ್ಸವವನ್ನು ಎರಡು ಅವಧಿಗಳಲ್ಲಿ ಆಯೋಜಿಸಲಾಗಿದ್ದು, ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ಸ್ನಾತಕೋತ್ತರ ಮತ್ತು ಪಿಎಚ್‌.ಡಿ. ವಿದ್ಯಾರ್ಥಿಗಳಿಗೆ ಹಾಗೂ ಮಧ್ಯಾಹ್ನ 2.00ರಿಂದ ಸಂಜೆ 5.00ರವರೆಗೆ ಪದವಿಪೂರ್ವ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು.


ಸಮಾರಂಭದ ಎರಡೂ ಅವಧಿಗಳಿಗೆ ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ (ಐಎನ್‌ಎಇ) ಅಧ್ಯಕ್ಷ ಜೆ. ಡಿ. ಪಾಟೀಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಎನ್‌ಐಟಿಕೆ ಆಡಳಿತ ಮಂಡಳಿಯ ಅಧ್ಯಕ್ಷ ಎಂ. ಎಂ. ಮುರುಗಪ್ಪನ್ ಅಧ್ಯಕ್ಷತೆ ವಹಿಸಲಿದ್ದಾರೆ.


ಈ ವರ್ಷದ ಘಟಿಕೋತ್ಸವದಲ್ಲಿ ಒಟ್ಟು 1986 ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಇದರಲ್ಲಿ 967 ಬಿ.ಟೆಕ್., 680 ಎಂ.ಟೆಕ್., 12 ಎಂ.ಟೆಕ್. (ಸಂಶೋಧನಾ), 66 ಎಂಸಿಎ, 74 ಎಂಬಿಎ, 68 ಎಂ.ಎಸ್‌ಸಿ. ಹಾಗೂ 119 ಪಿಎಚ್‌.ಡಿ. ಪದವಿಗಳು ಸೇರಿವೆ. ಅತಿ ಹೆಚ್ಚು ಸಿಜಿಪಿಎ ಗಳಿಸಿದ 11 ಬಿ.ಟೆಕ್. ಹಾಗೂ 35 ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 46 ಸಾಧಕರಿಗೆ ಚಿನ್ನದ ಪದಕಗಳು ಮತ್ತು ವಿವಿಧ ಸಂಸ್ಥೆಗಳು ಪ್ರಾಯೋಜಿಸಿದ ಪದಕಗಳನ್ನು ನೀಡಿ ಗೌರವಿಸಲಾಗುವುದು.


1960ರಲ್ಲಿ ಕರ್ನಾಟಕ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜು (ಕೆಆರ್‌ಇಸಿ) ಆಗಿ ಸ್ಥಾಪನೆಯಾಗಿ 66 ವರ್ಷಗಳನ್ನು ಪೂರೈಸಿರುವ ಈ ಸಂಸ್ಥೆಯು, ಎನ್‌ಐಟಿಕೆ ಎಂದು ಮರುನಾಮಕರಣಗೊಂಡು 24 ವರ್ಷಗಳನ್ನು ಪೂರ್ಣಗೊಳಿಸಿದೆ. ಸುಮಾರು 300 ಎಕರೆಗಳ ಹಸಿರು ಆವರಣ ಹಾಗೂ ಸ್ವಂತ ಕಡಲತೀರ ಹೊಂದಿರುವ ಸಂಸ್ಥೆಯ 15 ವಿಭಾಗಗಳ 45ಕ್ಕೂ ಹೆಚ್ಚು ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಪ್ರಸ್ತುತ 7000ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸಂಸ್ಥೆಯಲ್ಲಿ ಪ್ರತಿ ನಾಲ್ವರು ವಿದ್ಯಾರ್ಥಿಗಳಲ್ಲಿ ಒಬ್ಬರು ವಿದ್ಯಾರ್ಥಿನಿಯಾಗಿರುವುದು ವಿಶೇಷವಾಗಿದ್ದು, 2025ರ ಎನ್‌ಐಆರ್‌ಎಫ್ ಶ್ರೇಯಾಂಕದಲ್ಲಿ ಎನ್‌ಐಟಿಕೆ ಸುರತ್ಕಲ್ ದೇಶದ ಅಗ್ರ 20 ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಹಾಗೂ ಒಟ್ಟಾರೆ ಅಗ್ರ 50 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾನ ಪಡೆದಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top